ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಕವಿತಾಳ | ಗ್ರಾಹಕರ ಜೇಬಿಗೆ ಹೊರೆಯಾದ ಬೆಳ್ಳುಳ್ಳಿ

Published 18 ಜನವರಿ 2024, 5:12 IST
Last Updated 18 ಜನವರಿ 2024, 5:12 IST
ಅಕ್ಷರ ಗಾತ್ರ

ಕವಿತಾಳ: ಈರುಳ್ಳಿ ದರ ಇಳಿಕೆಯಾದ ಬೆನ್ನಲ್ಲೆ ಬೆಳ್ಳುಳ್ಳಿ ದರ ಏರಿಕೆಯಾಗಿದ್ದು ಗ್ರಾಹಕರ ಜೇಬಿಗೆ ಹೊರೆಯಾಗಿದೆ. ಅಡುಗೆ ಮನೆಯಲ್ಲಿ ಬೆಳ್ಳುಳ್ಳಿ ಘಾಟು ಕಡಿಮೆಯಾಗಿದೆ. ಅರಿಸಿಣ, ಜೀರಿಗೆ ಬೆಲೆಯೂ ಹೆಚ್ಚಾಗಿದೆ.

ಪಟ್ಟಣದಲ್ಲಿ ಬುಧವಾರ ನಡೆದ ವಾರದ ಸಂತೆಯಲ್ಲಿ ಬೆಳ್ಳುಳ್ಳಿ ಕೆ.ಜಿ ಗೆ ₹280ಕ್ಕೆ ಏರಿಕೆಯಾಗಿದ್ದು ಗ್ರಾಹಕರು ಖರೀದಿಗೆ ಹಿಂದೇಟು ಹಾಕುತ್ತಿರುವುದು ಕಂಡು ಬಂತು. ನವಂಬರ್‌ನಲ್ಲಿ ₹140 ರಿಂದ ₹160 ಇದ್ದ ಬೆಳ್ಳುಳ್ಳಿ ದರ ಏರಿಕೆಯಾಗುತ್ತಲೇ ಇದೆ.

ವರ್ಷಪೂರ್ತಿ ₹140 ರಂತೆ ಮಾರಾಟವಾದ ಅರಿಸಿಣ ಕೊಂಬುಗಳ ಬೆಲೆ ಸದ್ಯ ₹180 ರಿಂದ ₹200 ಇದೆ. ಕೆ.ಜಿ ಗೆ ₹250 ರಿಂದ ₹350 ಇದ್ದ ಜೀರಿಗೆ ಕಳೆದ ತಿಂಗಳು ₹700ಕ್ಕೆ ಜಿಗಿದು ಸದ್ಯ ₹600 ರಂತೆ ಮಾರಾಟವಾಗುತ್ತಿದೆ.

‘ಫೆಬ್ರವರಿ ಬಳಿಕ ಮಾರುಕಟ್ಟೆಗೆ ಹೊಸದಾಗಿ ಬೆಳ್ಳುಳ್ಳಿ ಬರುತ್ತದೆ ಹೀಗಾಗಿ ಪ್ರತಿವರ್ಷ ನವಂಬರ್‌, ಡಿಸೆಂಬರ್‌, ಜನವರಿ ತಿಂಗಳಲ್ಲಿ ಬೆಳ್ಳುಳ್ಳಿ ದರ ಏರಿಕೆ ಸಾಮಾನ್ಯ. ಆದರೆ ಈ ವರ್ಷ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ಏರಿಕೆಯಾಗಿರುವುದು ಗ್ರಾಹಕರಿಗೆ ಹೊರೆಯಾಗಿದೆ, ಬೆಳ್ಳುಳ್ಳಿಯನ್ನು ನೆರಳಿನಲ್ಲಿ ಮತ್ತು ಉತ್ತಮ ಗಾಳಿಯಾಡುವ ಪ್ರದೇಶದಲ್ಲಿ ದಾಸ್ತಾನು ಮಾಡಬೇಕು ದಿನಕಳೆದಂತೆ ಒಣಗುವುದರಿಂದ ತೂಕ ಕಡಿಮೆಯಾಗುತ್ತದೆ, ಹೊಸದಾಗಿ ಬೆಳೆ ಬರವವರೆಗೆ ದರ ಏರಿಕೆ ಸಹಿಸಿಕೊಳ್ಳುವುದು ಅನಿವಾರ್ಯ’ ಎಂದು ವರ್ತಕ ಲಕ್ಷ್ಮೀಕಾಂತ ಇಲೂರು ಮಾಹಿತಿ ನೀಡಿದರು.

‘ಸಂಪ್ರದಾಯದಂತೆ ಸಂಕ್ರಾಂತಿ ಹಬ್ಬದಲ್ಲಿ ಹುಣಸೆ ಚಟ್ನಿ ಹಾಕುವುದು ವಾಡಿಕೆ, ಹುಣಸೆ ಚಟ್ನಿಗೆ ಅಗತ್ಯವಾಗಿ ಬೇಕಾದ ಬೆಳ್ಳುಳ್ಳಿ, ಅರಿಸಿಣ ಮತ್ತು ಜೀರಿಗೆ ಬೆಲೆ ಏರಿಕೆಯಿಂದ ತೊಂದರೆಯಾಗುತ್ತಿದೆ ಆದರೆ ವರ್ಷಪೂರ್ತಿ ಹುಣಸೆಚಟ್ಟಿ ಬಳಸುವುದರಿಂದ ಅನಿವಾರ್ಯವಾಗಿ ಖರೀದಿಸಬೇಕಿದೆ’ ಎಂದು ಮಹಿಳೆಯರು ಹೇಳಿದರು.

‘ಬೇಡಿಕೆಗೆ ತಕ್ಕಂತೆ ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ಸಿಗುತ್ತಿಲ್ಲ, ಹೊಸದಾಗಿ ಬೆಳ್ಳುಳ್ಳಿ ಬಂದರೂ ಹಸಿ ಇರುವ ಕಾರಣ ಗ್ರಾಹಕರು ಖರೀದಿಸುವುದಿಲ್ಲ, ಸದ್ಯ ದರ ಏರಿಕೆಯಿಂದ ಒಂದು ಕೆ.ಜಿ. ಖರೀದಿಸುವ ಗ್ರಾಹಕರು ಕಡಿಮೆ ಖರೀದಿಸುತ್ತಿದ್ದಾರೆ’ ಎಂದು ವಾರದ ಸಂತೆಯಲ್ಲಿ ಬೆಳ್ಳುಳ್ಳಿ ಹಾಗೂ ಮಸಾಲೆ ಪದಾರ್ಥಗಳನ್ನು ಮಾರಾಟ ಮಾಡುವ ವ್ಯಾಪಾರಿ ಮೆಹಬೂಬ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT