ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌಢ್ಯದ ವಿರುದ್ಧ ಜಾಗೃತಿ ಮೂಡಿಸಲು ಸಾಹಿತಿಗಳು ಮುಂದಾಗಲಿ: ಸಾಹಿತಿ ಬಸವರಾಜ ಸಲಹೆ

Published 24 ಡಿಸೆಂಬರ್ 2023, 15:40 IST
Last Updated 24 ಡಿಸೆಂಬರ್ 2023, 15:40 IST
ಅಕ್ಷರ ಗಾತ್ರ

ರಾಯಚೂರು: ‘ಇಂದಿನ ತಾಂತ್ರಿಕ ಯುಗದಲ್ಲೂ ಅನೇಕರು ಮೌಢ್ಯಾಚರಣೆ ಮಾಡುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಬಸವಾದಿ ಶರಣರು 12ನೇ ಶತಮಾನದಲ್ಲೇ ಮೌಢ್ಯದ ವಿರುದ್ಧ ಧ್ವನಿ ಎತ್ತಿ ವಚನಗಳ ಮೂಲಕ ಬದುಕಿನ ಮಾರ್ಗ ತೋರಿಸಿದ್ದಾರೆ. ಇಂದಿನ ಸಾಹಿತಿಗಳು ಮೌಢ್ಯದ ವಿರುದ್ಧ ಜಾಗೃತಿ ಮೂಡಿಸಲು ಮುಂದಾಗಬೇಕು’ ಎಂದು ಸಾಹಿತಿ ಟಿ.ಎಚ್.ಎಂ ಬಸವರಾಜ ಬಳ್ಳಾರಿ ಸಲಹೆ ನೀಡಿದರು.

ಬೆಳಕು ಸಾಹಿತ್ಯಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿ ಟ್ರಸ್ಟ್ ವತಿಯಿಂದ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಬೆಳಕು ಸಂಭ್ರಮ, ಕವಿಗೋಷ್ಠಿ, ಸಾಧಕರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ರಾಯಚೂರು ಜಿಲ್ಲೆ ಸಾಹಿತಿಗಳು, ಸಂಶೋಧಕರ, ಸಾಧು ಸಂತರ ತವರೂರು. ಇಲ್ಲಿ ಶಾಂತರಸರು, ಸಿದ್ರಾಮಪ್ಪ ನೀರಮಾನ್ವಿ, ಪಂಡಿತ ಸಿದ್ಧರಾಮ ಜಂಬಲದಿನ್ನಿ ಸೇರಿದಂತೆ ಅನೇಕರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಇವರ ಹಾದಿಯಲ್ಲೇ ನಾವೆಲ್ಲ ನಡೆಯಬೇಕಾಗಿದೆ’ ಎಂದರು.

‌‘ಜೋತಿಷ್ಯ ನಂಬುವುದು ಸಹ ಮೌಢ್ಯದ ಒಂದು ಭಾಗವೇ ಆಗಿದೆ. ಸಾಹಿತಿಗಳು ಬರಹಗಳ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸಬೇಕು’ ಎಂದು ಹೇಳಿದರು.

ಅಭಯ ಸಮಾಜಸೇವಾ ಸಂಸ್ಥೆಯ ಅಧ್ಯಕ್ಷ ಅಭಯ ಕೃಷ್ಣಯ್ಯ ಮಾತನಾಡಿ, ‘ನಾಡಿನಲ್ಲಿ ಅನೇಕರು ಎಲೆಮರೆ ಕಾಯಿಯಂತೆ ಸೇವೆ ಸಲ್ಲಿಸುತ್ತಿದ್ದಾರೆ. ಪ್ರತಿಭೆ ಹಾಗೂ ಸಾಧಕರನ್ನು ಗುರುತಿಸುವ ಕಾರ್ಯವಾಗಬೇಕಿದೆ. ಸಂಘ–ಸಂಸ್ಥೆಗಳು ಕಲಾವಿದರಿಗೆ ಸಾಹಿತಿಗಳನ್ನು ಪ್ರೋತ್ಸಾಹಿಸಿದರೆ ಸಮಾಜ ಸುಸ್ಥಿತಿಯಲ್ಲಿರುತ್ತದೆ’ ಎಂದರು.

ಕಾರ್ಯಕ್ರಮದಲ್ಲಿ ವಿವಿಧ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇದೇ ವೇಳೆ ರಾಜ್ಯಮಟ್ಟದ ಕವಿಗೋಷ್ಠಿ ಹಾಗೂ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಇರಕಲ್ ಶಿವಶಕ್ತಿ ಪೀಠ ಮಠದ ಬಸವ ಪ್ರಸಾದ ಶರಣ ಸಾನಿಧ್ಯ ವಹಿಸಿದ್ದರು. ಬೆಳಕು ಸಂಸ್ಥೆಯ ಸಂಸ್ಥಾಪಕ ಅಣ್ಣಪ್ಪ ಮೇಟಿಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸುರೇಂದ್ರ ಬಾಬು, ಸುಭಾಷ ಖೇಣಿದ, ಚನ್ನಬಸವ ಬಾಗಲವಾಡ, ಭೀಮರಾಯ ಹದ್ದಿನಾಳ, ಕನ್ನಡ ಸಾಹಿತ್ಯ ಪರಿಷತ್ತಿನ ಸಿರವಾರ ತಾಲ್ಲೂಕು ಘಟಕದ ಅಧ್ಯಕ್ಷ ಸುರೇಶ ಹೀರಾ, ಚಂದ್ರಶೇಖರ ಮದ್ಲಾಪುರ, ಕಿರಣ ಚಿಂಚರಕಿ, ಸೌಮ್ಯಗೌಡ, ಶಾಂತ ಬಲ್ಲಟಿಗಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT