ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲಿಂಗಸುಗೂರು | ಆರ್ಥಿಕ ಸಂಕಷ್ಟದಲ್ಲಿ ಏತ ನೀರಾವರಿ ಯೋಜನೆ

ರಾಂಪುರ–ನವಲಿ ಜಡಿಶಂಕರಲಿಂಗ ಏತ ನೀರಾವರಿ ಯೋಜನೆ ನಿರ್ವಹಣೆ ಸಮಸ್ಯೆ
ಬಿ.ಎ. ನಂದಿಕೋಲಮಠ
Published 23 ಜೂನ್ 2024, 5:23 IST
Last Updated 23 ಜೂನ್ 2024, 5:23 IST
ಅಕ್ಷರ ಗಾತ್ರ

ಲಿಂಗಸುಗೂರು: ತಾಲ್ಲೂಕಿನ ರೈತರ ಜೀವನಾಡಿಗಳೆಂದು ಗುರುತಿಸಿಕೊಂಡಿದ್ದ ಬಹುತೇಕ ನೀರಾವರಿ ಯೋಜನೆಗಳು ಅನುಷ್ಠಾನ ಹಂತದಲ್ಲಿಯೇ ನೆಲಸಮಗೊಂಡಿರುವುದು ಐತಿಹ್ಯ. ಅಸ್ತಿತ್ವದಲ್ಲಿರುವ ಏಕೈಕ ರಾಂಪೂರ ನವಲಿ ಜಡಿಶಂಕರಲಿಂಗ ಏತ ನೀರಾವರಿ ಯೋಜನೆ ನಿರ್ವಹಣೆಗೆ ಬಿಡಿಕಾಸು ಇಲ್ಲದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ.

ಪ್ರಗತಿಪರ ಸಂಘಟನೆಗಳು, ರಾಜಕೀಯ ಮುಖಂಡರ ಇಚ್ಛಾಶಕ್ತಿ ಮೇರೆಗೆ 2003-04ರಲ್ಲಿ ಅನುಷ್ಠಾನಕ್ಕೆ ಬಂದಿದೆ. ನಾರಾಯಣಪುರ (ಬಸವಸಾಗರ) ಅಣೆಕಟ್ಟೆ ಹಿನ್ನೀರಿಗೆ ನವಲಿ ಬಳಿ ಒಂದನೇ ಜಾಕ್‌ವೆಲ್‍ ಮೂಲಕ 14 ಕಿ.ಮೀ ಸಂಪರ್ಕ ಕಾಲುವೆ ಮೂಲಕ ನೀರು ಹರಿಸಲಾಗುತ್ತಿದೆ. ಆನೆಹೊಸೂರು ಬಳಿ ಎರಡನೇ ಜಾಕ್‌ವೆಲ್‍ ಮೂಲಕ ವ್ಯಾಪ್ತಿ ಪ್ರದೇಶದ 24 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರು ಹರಿಸುವ ಯೋಜನೆ ನಿರ್ವಹಣೆ ಸಮಸ್ಯೆ ಎದುರಿಸುವಂತಾಗಿದೆ.

2003-04ರಲ್ಲಿ ಅಳವಡಿಸಿದ ಪಂಪ್, ಮೋಟರ್‌ಗಳು ಮೇಲಿಂದ ಮೇಲೆ ದುರಸ್ತಿಗೆ ಬರುತ್ತಿವೆ. ಪಂಪ್‍ಗಳ ಸಾಮರ್ಥ್ಯ ಕ್ಷೀಣಿಸಿದ್ದು ಅಚ್ಚುಕಟ್ಟು ಪ್ರದೇಶದ ರೈತರಿಗೆ ಸಮರ್ಪಕ ನೀರು ಹರಿಸಲು ಸಾಧ್ಯವಾಗುತ್ತಿಲ್ಲ. ಎರಡು ವರ್ಷಗಳ ಹಿಂದೆ ಜಾಕ್‌ವೆಲ್‍ ನಿರ್ಹಣೆಗೆ ₹5 ಕೋಟಿ ಹಾಗೂ 33/6.6 ಕೆ.ವಿ ವಿದ್ಯುತ್‍ ಕೇಂದ್ರದ ನಿರ್ವಹಣೆಗೆ ಸೇರಿದಂತೆ ಕಾಲುವೆಗಳ ಮತ್ತು ಜಾಕ್‌ವೆಲ್‍ ನಿರ್ವಹಣೆಗೆ ಹಣಕಾಸಿನ ಬೇಡಿಕೆ ಸಲ್ಲಿಸಿದ್ದರೂ ಮಂಜೂರಾತಿ ದೊರೆತಿಲ್ಲ.

ನವಲಿ ಜಾಕ್‌ವೆಲ್‍ ವಿದ್ಯುತ್‍ ಬಾಕಿ ₹2,43,75,257, ಆನೆಹೊಸೂರು ಜಾಕ್‌ವೆಲ್‍ ವಿದ್ಯುತ್‍ ಬಾಕಿ ₹3,26,82,462 ಹಾಗೂ ನಂದವಾಡಗಿ ಏತ ನೀರಾವರಿ ಯೋಜನೆ ಮೊದಲ ಜಾಕ್‌ವೆಲ್‍ (ತೊಂಡಿಹಾಳ) ವಿದ್ಯುತ್‍ ಬಾಕಿ ₹1,39, 81,296 ಒಟ್ಟು ₹7,10,39,016 ಜೆಸ್ಕಾಂಗೆ ಕಟ್ಟಬೇಕಿದೆ. 33/6.6 ಕೆವಿ ಕೇಂದ್ರದ ವಿದ್ಯುತ್‍ ಪರಿವರ್ತಕ ದುರಸ್ತಿ ಮತ್ತು ನಿರ್ವಹಣೆಗೆ ಲಕ್ಷಾಂತರ ಹಣ ಅಧಿಕಾರಿಗಳೇ ಖರ್ಚು ಮಾಡಿರುವುದು ಮೇಲಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ.

‘ನವಲಿ ಮತ್ತು ಆನೆಹೊಸೂರು ಜಾಕ್‌ವೆಲ್‍ಗಳಲ್ಲಿನ ಪಂಪ್‍ ಮತ್ತು ಮೋಟರ್‌ಗಳ ದುರಸ್ತಿ ಆಗಬೇಕಿವೆ. ರೇಸಿಂಗ್‍ ಪೈಪ್‌ಲೈನ್‍ ಸೋರಿಕೆ, ಕಾಲುವೆಗಳ ನಿರ್ವಹಣೆ ಕುರಿತು ಕ್ರಿಯಾಯೋಜನೆ ಸಿದ್ಧಪಡಿಸಿ ಕಳುಹಿಸಿದರೂ ಅನುಮೋದನೆ ನೀಡುತ್ತಿಲ್ಲ. ಜಾಕ್‌ವೆಲ್‌ ಮತ್ತು ಕಾಲುವೆ ನಿರ್ವಹಣೆ ಸಿಬ್ಬಂದಿಗೆ ವೇತನ ನೀಡದೆ ಹೋಗಿದ್ದರಿಂದ ಕೆಲಸಕ್ಕೆ ಬರುತ್ತಿಲ್ಲ. ಸಣ್ಣಪುಟ್ಟ ದುರಸ್ತಿ, ಕಡಿಮೆ ವೇತನ ಸ್ವಂತ ನೀಡುತ್ತಿದ್ದೇವೆ’ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿ ತಿಳಿಸಿದ್ದಾರೆ.

ರಾಜ್ಯ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಶಿವಪುತ್ರಗೌಡ ಪಾಟೀಲ ಮಾತನಾಡಿ, ‘ರಾಂಪೂರ ನವಲಿ ಏತ ನೀರಾವರಿ ಯೋಜನೆ ನಿರ್ವಹಣೆ ಸಮಸ್ಯೆಯಿಂದ ಭಾಗಶಃ ಪ್ರದೇಶಕ್ಕೆ ಸಮರ್ಪಕ ನೀರು ಹರಿಸುತ್ತಿಲ್ಲ. ಯಾವುದೇ ಸೌಲಭ್ಯ ಕೇಳಿದರೂ ಆರ್ಥಿಕ ತೊಂದರೆ ಮುಂದಿಡುತ್ತಿದ್ದಾರೆ. ಗ್ಯಾರಂಟಿ ಹೆಸರಲ್ಲಿ ದಿವಾಳಿ ಎದ್ದಿರುವ ಸರ್ಕಾರ ಬೆಲೆ ಏರಿಕೆ ಮಾಡುತ್ತಿದ್ದು ಇಂತಹ ಯೋಜನೆಗಳಿಗೆ ಬಿಡಿಕಾಸು ನೀಡುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜೆಸ್ಕಾಂ ಶಾಖಾ ವ್ಯವಸ್ಥಾಪಕ ಬಸವರೆಡ್ಡಿ ಮಾತನಾಡಿ, ‘ಸರ್ಕಾರದ ಆಡಳಿತದಲ್ಲಿರುವ ಕುಡಿಯುವ ನೀರು ಅಥವಾ ಏತ ನೀರಾವರಿ ಯೋಜನೆಗಳಿಗೆ ಎಷ್ಟೇ ವಿದ್ಯುತ್‍ ಬಳಸಿದ್ದರೂ ವಿದ್ಯುತ್‍ ಸಂಪರ್ಕ ಕಡಿತಗೊಳಿಸುವುದಿಲ್ಲ. ಜೆಸ್ಕಾಂ ನಿಯಮ ಮೀರಿ ಬಾಕಿ ಉಳಿದಾಗ ವಿದ್ಯುತ್ ಸಂಪರ್ಕ ಕಡಿತ ಅನಿವಾರ್ಯ. ಏತ ನೀರಾವರಿ ಯೋಜನೆ ವಿದ್ಯುತ್‍ ಸಂಪರ್ಕ ಕಡಿತದ ಬಗ್ಗೆ ಯಾವುದೇ ನಿರ್ಧಾರ ಇಲ್ಲ’ ಎಂದು ಹೇಳಿದರು.

‘ಕಾಲುವೆಗಳ ಹೂಳು ಮತ್ತು ಜಂಗಲ್‍ ಕಟಿಂಗ್‍ ಉದ್ಯೋಗ ಖಾತ್ರಿಗೆ ವಹಿಸಿದ್ದೇವೆ. ಜಾಕ್‌ವೆಲ್‍ ಪಂಪ್, ಮೋಟರ್‌ ದುರಸ್ತಿ ಮತ್ತು ನಿರ್ವಹಣೆಗೆ ಸಂಬಂದಿಸಿ ಕ್ರಿಯಾಯೋಜನೆ ಸಿದ್ಧಪಡಿಸಿ ಮುಖ್ಯ ಎಂಜಿನಿಯರ್ ಕಚೇರಿಗೆ ಸಲ್ಲಿಸಿದೆ. ಅನುಮೋದನೆ ದೊರೆತಾಕ್ಷಣ ದುರಸ್ತಿ, ನಿರ್ವಹಣೆ ಸರಿಪಡಿಸಲಾಗುವುದು’ ಎಂದು ಏತ ನೀರಾವರಿ ಯೋಜನೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಚಂದ್ರಕಾಂತ ಮಾದಯ್ಯ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT