ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಭಾ ಭವನ ಕಟ್ಟಡ ಕಾಮಗಾರಿ ಸ್ಥಗಿತ

ಗ್ರಾಮಸ್ವರಾಜ ಯೋಜನೆ ಹಣ ದುರ್ಬಳಕೆ; ಅನಾಥ ಸ್ಥಿತಿಯಲ್ಲಿ ಕಟ್ಟಡ
ಅಕ್ಷರ ಗಾತ್ರ

ಲಿಂಗಸುಗೂರು: ಹಗರಣಗಳ ಆಗರವಾದ ತಾಲ್ಲೂಕಿನ ನರಕಲದಿನ್ನಿ ಗ್ರಾಮ ಪಂಚಾಯಿತಿ ಸದಾ ಸುದ್ದಿಯಲ್ಲಿರುತ್ತದೆ. ಆಡಳಿತ ಮಂಡಳಿ ಮತ್ತು ಅಧಿಕಾರಿಗಳು ಅಭಿವೃದ್ಧಿಗಿಂತ ಸ್ವಯಂ ಪ್ರತಿಷ್ಠೆಗೆ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬುದಕ್ಕೆ ದಶಕದಿಂದ ಪೂರ್ಣಗೊಳ್ಳದೆ ಅನಾಥ ಸ್ಥಿತಿಯಲ್ಲಿರುವ ಸಭಾಭವನ ಕಟ್ಟಡ ಸಾಕ್ಷಿಯಾಗಿದೆ.

ಪ್ರಾದೇಶಿಕ ಅಸಮತೋಲನೆ ನಿವಾರಣೆಗೆ ಡಾ. ನಂಜುಂಡಪ್ಪ ವರದಿ ಆಧರಿಸಿ 2005–06ರಲ್ಲಿ ತಾಲ್ಲೂಕಿನ 35 ಗ್ರಾಮ ಪಂಚಾಯಿತಿಗಳಿಗೆ 5 ವರ್ಷಗಳ ಅವಧಿಗೆ ₹ 50 ಲಕ್ಷದ ಅನುದಾನ ನೀಡಲಾಗಿತ್ತು. ಅಂಗನವಾಡಿ ಕಟ್ಟಡ, ಬಸ್‌ ಶೆಲ್ಟರ್‌, ಪಂಚಾಯಿತಿ ಮೀಟಿಂಗ್‌ ಹಾಲ್‌ (ಸಭಾ ಭವನ), ಬಿಸಿಯೂಟದ ಕೊಠಡಿ ಸೇರಿದಂತೆ ಆದ್ಯತೆ ಮೇರೆಗೆ ಕಾಮಗಾರಿ ಕೈಗೆತ್ತಿಕೊಳ್ಳಲು ನಿರ್ದೇಶನ ನೀಡಲಾಗಿತ್ತೆಂದು ಮೂಲಗಳು ದೃಢಪಡಿಸಿವೆ.

2008–09ರ ಅವಧಿಯಲ್ಲಿ ನರಕಲದಿನ್ನಿ ಗ್ರಾಮ ಪಂಚಾಯಿತಿ ಕಟ್ಟಡಕ್ಕೆ ಹೊಂದಿಕೊಂಡು ಮೀಟಿಂಗ್‌ ಹಾಲ್‌ ನಿರ್ಮಾಣಕ್ಕೆ ಹಸಿರು ನಿಶಾನೆ ತೋರಲಾಗಿತ್ತು. ದಶಕದ ಅವಧಿಯಲ್ಲಿ ಎಷ್ಟೆಲ್ಲಾ ಯೋಜನೆಗಳು ಬಂದಿದ್ದರು ಕೂಡ ಆಡಳಿತ ಮಂಡಳಿಗಳು ಪೂರ್ಣಗೊಳಿಸುವ ತಂಟೆಗೆ ಮುಂದಾಗಿಲ್ಲ. ಈ ಕಟ್ಟಡ ಅರ್ಧಕ್ಕೆ ನಿಂತಿದ್ದು ಬಿಟ್ಟರೆ ಬೇರೆ ಇನ್ನ್ಯಾವ ಮಾಹಿತಿಯು ತಮಗೆ ಗೊತ್ತಿಲ್ಲ ಎಂದು ಬಹುತೇಕ ಸದಸ್ಯರು ಸ್ಪಷ್ಠಪಡಿಸಿದ್ದಾರೆ.

ಅನುದಾನದ ಲಭ್ಯತೆ ಆಧರಿಸಿ ಆಡಳಿತ ಮಂಡಳಿ ಅಭಿವೃದ್ಧಿ ಕೈಗೊಳ್ಳಲು ಹಲವು ಬಾರಿ ಜಾಗೃತಿ ಕಾರ್ಯಕ್ರಮ ನಡೆಸಲಾಗಿದೆ. ಗ್ರಾಮ ಸ್ವರಾಜ್‌ ಯೋಜನೆ ಕಡತಗಳು, ಯಾವ ಕಾಮಗಾರಿಗೆ ಎಷ್ಟು ಹಣ ನಿಗದಿ ಎಂಬುದರ ಮಾಹಿತಿ ಪಂಚಾಯಿತಿ ಮಟ್ಟದಲ್ಲಿ ಇಲ್ಲವೆಂಬುದು ಹಲವು ಸಂಶಯಕ್ಕೆ ದಾರಿ ಮಾಡಿದೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಕೆಲ ದಿನಗಳ ಹಿಂದೆ ಅಧಿಕಾರ ಸ್ವೀಕರಿಸಿರುವೆ. ಅರ್ಧಕ್ಕೆ ನಿಂತಿರುವ ಕಟ್ಟಡ ಯಾವ ಯೋಜನೆ, ಎಷ್ಟು ಅನುದಾನ ಎಂಬಿತ್ಯಾದಿ ಮಾಹಿತಿಯ ಕಡತಗಳು ಲಭ್ಯವಿಲ್ಲ. ಸ್ಥಳೀಯರ ಮಾಹಿತಿ ಪ್ರಕಾರ ಹತ್ತು ವರ್ಷದಿಂದ ಅಪೂರ್ಣ ಕಟ್ಟಡ ನಿಂತಿದೆ. ಪರಿಶೀಲಿಸಿ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸುವೆ’ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಖಾಜಾಹುಸೇನ ಗುರುಗುಂಟಾ ತಿಳಿಸಿದರು.

‘ಈಚೆಗೆ ಪ್ರಭಾರಿ ಅಧಿಕಾರ ಸ್ವೀಕರಿಸಿರುವೆ. ನರಕಲದಿನ್ನಿ ಅಪೂರ್ಣ ಸ್ಥಿತಿಯಲ್ಲಿರುವ ಕಟ್ಟಡದ ಕಡತಗಳನ್ನು ತರೆಯಿಸಿ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಈಗಾಗಲೆ ತಕ್ಷಣ ಮಾಹಿತಿ ಸಲ್ಲಿಸುವಂತೆ ಸೂಚಿಸಲಾಗಿದೆ’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪವನಕುಮಾರ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT