ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಪನಗೌಡರಿಗೆ ಇನ್ನೂ ಸಚಿವ ಸ್ಥಾನದ ಮೇಲೆಯೇ ಆಸೆ

Published 27 ಜನವರಿ 2024, 16:20 IST
Last Updated 27 ಜನವರಿ 2024, 16:20 IST
ಅಕ್ಷರ ಗಾತ್ರ

ರಾಯಚೂರು/ಸಿಂಧನೂರು: ರಾಜ್ಯ ಸರ್ಕಾರ ರಾಯಚೂರು ಜಿಲ್ಲೆಯ ಮೂವರು ಶಾಸಕರನ್ನು ನಿಗಮ ಮಂಡಳಿಗೆ ನೇಮಕ ಮಾಡಿದರೂ ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ಇನ್ನೂ ಸಚಿವ ಸ್ಥಾನದ ನಿರೀಕ್ಷೆಯಲ್ಲೇ ಇದ್ದಾರೆ.

ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್ ಹಾಗೂ ಮಸ್ಕಿ ಶಾಸಕ ಬಸವನಗೌಡ ತುರುವಿಹಾಳ ಅವರು ಹೈಕಮಾಂಡ್‌ ನೀಡಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವುದಾಗಿ ಹೇಳುವ ಮೂಲಕ ಸಹಮತ ವ್ಯಕ್ತಪಡಿಸಿದ್ದಾರೆ.

ಐದು ಬಾರಿ ಶಾಸಕರಾದರೂ ಸಚಿವ ಸ್ಥಾನ ನೀಡದೇ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದಕ್ಕೆ ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ಅಸಮಾಧಾನ ವ್ಯಕ್ತಗೊಂಡರೂ ಬಹಿರಂಗವಾಗಿ ಹೇಳಿಕೊಳ್ಳುತ್ತಿಲ್ಲ. ಆದರೆ, ಅವರ ಬೆಂಬಲಿಗರು ಬಹಿರಂಗವಾಗಿಯೇ ಪಕ್ಷದ ಹೈಕಮಾಂಡ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸರ್ಕಾರ ನೀಡಿರುವ ಅಧ್ಯಕ್ಷ ಸ್ಥಾನ ಸ್ವೀಕರಿಸದಂತೆ ಶಾಸಕ ಹಂಪನಗೌಡರ ಮೇಲೆ ಕಾರ್ಯಕರ್ತರು ಒತ್ತಡ ಹಾಕುತ್ತಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ನಾಲ್ಕು ಬಾರಿ ಗೆದ್ದರೂ ಸಚಿವ ಸ್ಥಾನಕ್ಕೆ ಅರ್ಹ ಎಂದು ಪರಿಗಣಿಸದೇ ಇರುವುದು ನೋವು ತಂದಿದೆ ಎಂದು ಬಹಿರಂಗವಾಗಿಯೇ ಆಡಿಕೊಳ್ಳುತ್ತಿದ್ದಾರೆ.

ಹಂಪನಗೌಡರು 2004ರಿಂದ ಕಾಂಗ್ರೆಸ್ ಬಲವರ್ಧನೆಗೆ ಶ್ರಮಿಸುತ್ತಿದ್ದಾರೆ. 2013 ರಿಂದ 2018 ರವರೆಗೆ ಅಧಿಕಾರದಲ್ಲಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತಾವಧಿಯಲ್ಲಿ ಸಚಿವ ಸ್ಥಾನ ಕೊಡಬೇಕಾಗಿತ್ತು. ಪ್ರಾದೇಶಿಕತೆ ಸಮುದಾಯಗಳ ಪ್ರಾತಿನಿಧ್ಯದ ನೆಪದಲ್ಲಿ ಅವಕಾಶ ವಂಚಿತರನ್ನಾಗಿ ಮಾಡಲಾಯಿತು. 2023ರ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಪಕ್ಷ ಅಧಿಕಾರಕ್ಕೆ ಬಂದರೆ ಸಚಿವ ಸ್ಥಾನ ನೀಡುವುದಾಗಿ ಭರವಸೆ ನೀಡಿದ್ದರು. ಮೊದಲ ಬಾರಿ ಸಚಿವ ಸಂಪುಟ ರಚನೆ ಸಮಯದಲ್ಲಿ ಸಚಿವ ಸ್ಥಾನಕ್ಕೆ ಪರಿಗಣಿಸಲಿಲ್ಲ. 2ನೇ ಬಾರಿ ಸಂಪುಟ ವಿಸ್ತರಿಸುವ ಸಮಯದಲ್ಲಾದರೂ ಸಚಿವ ಸ್ಥಾನದ ಅವಕಾಶ ನೀಡುತ್ತಾರೆಂದು ಭರವಸೆ ಇಟ್ಟುಕೊಂಡಿದ್ದರು. ಈಗ ನಿಗಮಕ್ಕೆ ನೇಮಕ ಮಾಡಿ ಅನ್ಯಾಯ ಮಾಡಿದ್ದಾರೆ ಎಂದು ನಗರಸಭೆ ಮಾಜಿ ಅಧ್ಯಕ್ಷ ಸೈಯದ್ ಜಾಫರ್‌ಅಲಿ ಜಾಗೀರದಾರ, ಸದಸ್ಯ ಶೇಖರಪ್ಪ ಗಿಣಿವಾರ, ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಲಿಂಗಾಧರ ಗುರುಸ್ವಾಮಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ

‘ಹಿರಿತನದ ಆಧಾರದಲ್ಲಾದರೂ ಹಂಪನಗೌಡರಿಗೆ ಸಚಿವ ಸ್ಥಾನ ಕೊಡಬೇಕಿತ್ತು. ಏನೇ ಆದರೂ ಹಂಪನಗೌಡರು ತೆಗೆದುಕೊಳ್ಳುವ ನಿರ್ಧಾರಕ್ಕೆ ಕಾರ್ಯಕರ್ತರು ಬದ್ಧರಾಗಿರುತ್ತೇವೆ’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಸವರಾಜ ಹಿರೇಗೌಡ ಹೇಳುತ್ತಾರೆ.

ಇದಕ್ಕೂ ಮೊದಲು ಹಂಪನಗೌಡ ಬಾದರ್ಲಿ ಅವರು ನನಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನದ ಅಗತ್ಯವೇ ಇಲ್ಲ ಎಂದು ಬಹಿರಂಗವಾಗಿ ಹೇಳಿದ್ದರು. ಆದರೆ, ಈಗ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡುತ್ತಿದ್ದಾರೆ.

‘ಈಗ ಏನನ್ನೂ ಹೇಳುವುದಿಲ್ಲ. ಹಿಂದೆ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗೆ ನಿಗಮ ಮಂಡಳಿಯ ಅಧಿಕಾರ ನನಗೆ ಬೇಡವೆಂದು ನಯವಾಗಿಯೇ ಹೇಳಿರುವೆ. ಇದೀಗ ಮತ್ತೊಮ್ಮೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜನ ಖರ್ಗೆ ಸೇರಿ ಪ್ರಮುಖರಿಗೆ ನನ್ನ ಮನದಾಳದ ಮಾತನ್ನು ಹೇಳುವೆ. ಜನರಿಂದ ನೇರವಾಗಿ ಆಯ್ಕೆಯಾದ ನಾಲ್ಕು ಶಾಸಕರ ಪೈಕಿ ಒಬ್ಬರಿಗಾದರೂ ಸಚಿವ ಸ್ಥಾನ ಕೊಡಬೇಕು ಎನ್ನುವುದು ನನ್ನ ಆಶಯ’ ಎಂದು ಹಂಪನಗೌಡ ಬಾದರ್ಲಿ ಪ್ರತಿಕ್ರಿಯಿಸಿದರು.

ಬಸನಗೌಡ ದದ್ದಲ್
ಬಸನಗೌಡ ದದ್ದಲ್
ಬಸನಗೌಡ ತುರುವಿಹಾಳ
ಬಸನಗೌಡ ತುರುವಿಹಾಳ
ಪಕ್ಷದ ಹೈಕಮಾಂಡ್ ತೀರ್ಮಾನಕ್ಕೆ ಬದ್ಧ-ದದ್ದಲ್
‘ಪರಿಶಿಷ್ಟ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ನೀಡಿರುವ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ತೀರ್ಮಾನಕ್ಕೆ ನಾನು ಬದ್ಧ’ ಎಂದು ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್ ಹೇಳಿದರು. ‘ಪಕ್ಷ ಯಾವುದೇ ಜವಾಬ್ದಾರಿ ನೀಡಿದರೂ ಸಮರ್ಥವಾಗಿ ನಿಭಾಯಿಸುವೆ’ ಎಂದು ಶನಿವಾರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು. ‘ಈ ಹಿಂದೆ ಒಂದು ಬಾರಿ ಪರಿಶಿಷ್ಟ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷನಾಗಿ ನಿಗಮದ ಸೌಲಭ್ಯಗಳನ್ನು ಸಮರ್ಪಕವಾಗಿ ಜನರಿಗೆ ತಲುಪಿಸಿದ ಅನುಭವ ಇದೆ. ಮತ್ತೆ ಅಧ್ಯಕ್ಷ ಸ್ಥಾನ ನನಗೆ ಒಲಿದು ಬಂದಿರುವುದರಿಂದ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಸೌಲಭ್ಯಗಳನ್ನು ಪಡೆಯುವ ನಿಟ್ಟಿನಲ್ಲಿ ಜನರ ನಿರೀಕ್ಷೆ ಇದೆ. ಕಾರಣ ಪರಿಶಿಷ್ಟ ವರ್ಗಗಳ ಅಭಿವೃದ್ಧಿ ನಿಗಮಕ್ಕೆ ಹೆಚ್ಚಿನ ಅನುದಾನ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚಿಸುವೆ’ ಎಂದು ತಿಳಿಸಿದರು. ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ಅವರನ್ನು ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮಕ್ಕೆ ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್ ಅವರನ್ನು ಕರ್ನಾಟಕ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮಕ್ಕೆ ಹಾಗೂ ಮಸ್ಕಿ ಶಾಸಕ ಬಸವನಗೌಡ ತುರುವಿಹಾಳ ಅವರನ್ನು ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT