ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಾನ್ವಿ | ಬೋಧಕರ ಹುದ್ದೆ ಭರ್ತಿಗೆ ನಿರ್ಲಕ್ಷ್ಯ: ಅಸಮಾಧಾನ

ಪೋತ್ನಾಳ: ₹1.35 ಕೋಟಿ ವೆಚ್ಚದಲ್ಲಿ ಪಿಯು ಕಾಲೇಜು ಕಟ್ಟಡ ನಿರ್ಮಾಣ
ಬಸವರಾಜ ಭೋಗಾವತಿ
Published 15 ಜೂನ್ 2024, 7:01 IST
Last Updated 15 ಜೂನ್ 2024, 7:01 IST
ಅಕ್ಷರ ಗಾತ್ರ

ಮಾನ್ವಿ: ತಾಲ್ಲೂಕಿನ ಪೋತ್ನಾಳ ಗ್ರಾಮದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಆರಂಭವಾಗಿ ಏಳು ವರ್ಷಗಳು ಗತಿಸಿದರೂ ಪೂರ್ಣ ಪ್ರಮಾಣದಲ್ಲಿ ಬೋಧಕ, ಬೋಧಕೇತರ ಹುದ್ದೆಗಳ ಭರ್ತಿಗೆ ನಿರ್ಲಕ್ಷ್ಯ ವಹಿಸಿರುವುದು ಸ್ಥಳೀಯರಲ್ಲಿ ಅಸಮಾಧಾನ ಮೂಡಿಸಿದೆ.

ಇದರಿಂದ ಪೋತ್ನಾಳ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಅನೇಕ ವಿದ್ಯಾರ್ಥಿಗಳು ಪ್ರತಿ ವರ್ಷ ಪಿಯುಸಿ ವ್ಯಾಸಂಗಕ್ಕಾಗಿ ಸಿಂಧನೂರು ಹಾಗೂ ಮಾನ್ವಿ ಪಟ್ಟಣದ ಖಾಸಗಿ ಕಾಲೇಜುಗಳಲ್ಲಿ ಪ್ರವೇಶ ಪಡೆಯುವ ಸ್ಥಿತಿ ನಿರ್ಮಾಣವಾಗಿದೆ.

2017-18ರಲ್ಲಿ ಆಗಿನ ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿಯ ವತಿಯಿಂದ ಕಾಲೇಜು ಆರಂಭಕ್ಕೆ ಸರ್ಕಾರ ಕ್ರಮ ಕೈಗೊಂಡಿತ್ತು. ಈ ಕಾಲೇಜಿಗೆ ಅಗತ್ಯವಿರುವ ಪ್ರಾಂಶುಪಾಲ ಸೇರಿದಂತೆ ಒಟ್ಟು 10 ಬೋಧಕ, ಬೋಧಕೇತರ ಹುದ್ದೆಗಳು ಮಂಜೂರಾಗಿಲ್ಲ. ಜಿಲ್ಲೆಯ ಸಜ್ಜಲಗುಡ್ಡ ಗ್ರಾಮದ ಸರ್ಕಾರಿ ಪಿಯು ಕಾಲೇಜಿನಲ್ಲಿ ವಿಜ್ಞಾನ ವಿಭಾಗ ರದ್ದಾದ ಕಾರಣ ಅಲ್ಲಿನ ಮೂರು ಮಂಜೂರಾದ ಹುದ್ದೆಗಳನ್ನು ಈ ಕಾಲೇಜಿಗೆ ವರ್ಗಾಯಿಸಲಾಗಿತ್ತು.

ಕಾಲೇಜಿನಲ್ಲಿ ಪ್ರಸ್ತುತ ಕಲಾ ಹಾಗೂ ವಾಣಿಜ್ಯ ವಿಭಾಗಗಳ ಸಂಯೋಜನೆ ಇದೆ. ಕಳೆದ ಶೈಕ್ಷಣಿಕ ವರ್ಷ ಪ್ರಥಮ ಹಾಗೂ ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ 145 ವಿದ್ಯಾರ್ಥಿಗಳು, ವಾಣಿಜ್ಯ ವಿಭಾಗದಲ್ಲಿ 15 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರು. ಪ್ರಸಕ್ತ ವರ್ಷ ಪ್ರವೇಶಗಳು ಆರಂಭವಾಗಿವೆ.

ಇಂಗ್ಲಿಷ್, ಇತಿಹಾಸ ಹಾಗೂ ಸಮಾಜಶಾಸ್ತ್ರ ವಿಷಯಗಳಿಗೆ ಮಾತ್ರ ಕಾಯಂ ಉಪನ್ಯಾಸಕರು ಇದ್ದಾರೆ. ಸಮಾಜಶಾಸ್ತ್ರ ವಿಷಯದ ಉಪನ್ಯಾಸಕಿಗೆ ಪ್ರಭಾರ ಪ್ರಾಂಶುಪಾಲ ಹುದ್ದೆಯ ಜವಾಬ್ದಾರಿ ನೀಡಲಾಗಿದೆ. ಕನ್ನಡ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ ಮತ್ತು ವಾಣಿಜ್ಯ ವಿಭಾಗದ ಉಪನ್ಯಾಸಕ ಹುದ್ದೆಗಳು ಖಾಲಿ ಇದ್ದು ಅತಿಥಿ ಉಪನ್ಯಾಸಕರನ್ನು ಅವಲಂಬಿಸಲಾಗಿದೆ. ಬೋಧಕೇತರ ಸಿಬ್ಬಂದಿ ಇಲ್ಲ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಖಾಲಿ ಹುದ್ದೆಗಳ ಮಂಜೂರಿಗೆ ಸ್ಥಳೀಯರು ಮನವಿ ಮಾಡಿದ್ದಾರೆ.

ಕಾಂಪೌಂಡ್ ನಿರ್ಮಾಣ ನನೆಗುದಿಗೆ: ಪೊತ್ನಾಳ ಗ್ರಾಮದಲ್ಲಿ ₹1.35ಕೋಟಿ ವೆಚ್ಚದಲ್ಲಿ ಸುಸಜ್ಜಿತ ಪಿಯು ಕಾಲೇಜು ಕಟ್ಟಡ ನಿರ್ಮಿಸಲಾಗಿದೆ. ಆದರೆ ಕಟ್ಟಡಕ್ಕೆ ಕಾಂಪೌಂಡ್ ಇಲ್ಲದಿರುವ ಕಾರಣ ಸುರಕ್ಷತೆಗೆ ಧಕ್ಕೆಯಾಗಿದೆ. ಕಾಲೇಜಿನ ಆವರಣ ಸಂಜೆಯ ಸಮಯದಲ್ಲಿ ಮದ್ಯ ಸೇವನೆ ಸೇರಿದಂತೆ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಡುತ್ತದೆ. ಕಾಂಪೌಂಡ್ ನಿರ್ಮಾಣಕ್ಕೆ ಸ್ಥಳೀಯ ಗ್ರಾಮ ಪಂಚಾಯಿತಿ ಆಡಳಿತ ₹30ಲಕ್ಷ ಅನುದಾನ ಮಂಜೂರು ಮಾಡಿತ್ತು. ಆದರೆ, ಕಾಲೇಜಿಗೆ ಮೀಸಲಾದ ಜಾಗದ ವ್ಯಾಪ್ತಿ ಕುರಿತು ಆಕ್ಷೇಪಣೆ ವ್ಯಕ್ತವಾದ ಹಿನ್ನೆಲೆಯಲ್ಲಿ ನಿರ್ಮಾಣ ಕಾರ್ಯ‌ ನನೆಗುದಿಗೆ ಬಿದ್ದಿದೆ. ಕಾಲೇಜಿನ ಜಾಗದ ಹದ್ದುಬಸ್ತು ಮಾಡಿಸುವ ಕುರಿತು ಕುರಿತು ತಹಶೀಲ್ದಾರ್ ಅವರಿಗೆ ಪತ್ರ ಬರೆಯಲು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಸೂಚನೆ ನೀಡಿದ್ದಾಗಿ ಪ್ರಭಾರ ಪ್ರಾಂಶುಪಾಲೆ ಚನ್ನಬಸಮ್ಮ ತಿಳಿಸಿದ್ದಾರೆ.

ಕಾಲೇಜಿನಲ್ಲಿ ಖಾಲಿ ಇರುವ ಹುದ್ದೆಗಳ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ.
ಚನ್ನಬಸಮ್ಮ ಪ್ರಭಾರ ಪ್ರಾಂಶುಪಾಲೆ ಸರ್ಕಾರಿ ಪಿಯು ಕಾಲೇಜು ಪೋತ್ನಾಳ
ಕಾಲೇಜಿನಲ್ಲಿ ಕಾಯಂ ಬೋಧಕ ಹುದ್ದೆಗಳ ಭರ್ತಿ ಸೇರಿದಂತೆ ವಿದ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು
ಎಚ್.ಶರ್ಪುದ್ದೀನ್ ಪೋತ್ನಾಳ ಅಧ್ಯಕ್ಷ ಸಿಐಟಿಯು ಸಂಘಟನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT