ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೇವಾಂಶವಿಲ್ಲದೆ ಕಳೆಗುಂದಿದ ಬೆಳೆಗಳು

Last Updated 14 ಆಗಸ್ಟ್ 2019, 19:30 IST
ಅಕ್ಷರ ಗಾತ್ರ

ಮುದಗಲ್: ಹೋಬಳಿ ‌ವ್ಯಾಪ್ತಿಯಲ್ಲಿ ಸುರಿದ ಅಲ್ಪಸ್ವಲ್ಪ ಮಳೆ ನಂಬಿಕೊಂಡು ಬಿತ್ತನೆ ಮಾಡಿ ಬೆಳೆದಿರುವ ಬೆಳೆಗಳು ತೇವಾಂಶ ಕೊರತೆಯಿಂದ ಜೀವಕಳೆದುಕೊಳ್ಳುವ ಹಂತದಲ್ಲಿವೆ.

ಬಿತ್ತನೆಗಾಗಿ ಖರ್ಚು ಮಾಡಿಕೊಂಡಿರುವ ರೈತರು ಮಳೆ ಬಾರದಿರುವುದಕ್ಕೆ ಮುಗಿಲ ಕಡೆಗೆ ಮುಖ ಮಾಡಿದ್ದಾರೆ.ಮಳೆಗಾಲದ ಆರಂಭದಲ್ಲಿ ಮುದಗಲ್ ಸುತ್ತಮುತ್ತಲಿನ ಕನ್ನಾಪುರ ಹಟ್ಟಿ, ಆಶಿಹಾಳ, ಖೈರವಾಡಗಿ, ನಾಗರಾಳ, ವಂದಾಲಿ, ಆರ್ಯಭೋಗಾಪುರ, ಬ್ಯಾಲಿಹಾಳ, ಮಾಕಾಪುರ, ಆಮದಿಹಾಳ, ಆದಾಪುರ, ರಾಮತನಾಳ ಸೇರಿ ಹಲವು ಗ್ರಾಮಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ಮಳೆ ಬಿದ್ದಿತ್ತು. ಹೀಗಾಗಿ ರೈತರು ನಿರೀಕ್ಷೆ ಇಟ್ಟುಕೊಂಡು ಬಿತ್ತನೆ ಮಾಡಿದ್ದಾರೆ.

ಬಿತ್ತನೆಯಾಗಿ ಒಂದುವರೆ ತಿಂಗಳಾಗಿದ್ದು, ಸಮರ್ಪಕವಾಗಿ ಮಳೆ ಸುರಿಯುತ್ತಿಲ್ಲ. ರೈತರಲ್ಲಿ ನಿರಾಸೆ ಮೂಡಿಸಿದೆ. ವಾಡಿಕೆಯಂತೆ 255 ಮಿಲಿ ಮೀಟರ್‌ ಮಳೆಯಾಗಬೇಕಿತ್ತು. ಆದರೆ 207 ಮಿಲಿ ಮೀಟರ್‌ ಮಳೆಯಾಗಿದೆ. 14,023 ಹೆಕ್ಟೇರ್‌ ಬಿತ್ತನೆಯಾಗಬೇಕಿತ್ತು. 12,016 ಹೆಕ್ಟೇರ್‌ ಪ್ರದೇಶ ಮಾತ್ರ ಬಿತ್ತನೆಯಾಗಿದೆ.

ಬಿತ್ತನೆ ಮಾಡಿದ್ದ ಸಜ್ಜೆ, ಎಳ್ಳು, ಹೆಸರು, ಸೂರ್ಯಕಾಂತಿ, ತೊಗರಿ ಬೆಳೆಗಳಿಂದ ಹಸಿರು ಹರಡಿಕೊಂಡಿತ್ತು. ಬೆಳೆಗೆ ತೇವಾಂಶದ ಕೊರತೆಯಾಗಿದ್ದರಿಂದ ಕ್ರಮೇಣ ಬಿರುಗಾಳಿ ಸಹಿಸಲು ಸಾಧ್ಯವಾಗದೆ ನೆಲಕ್ಕೆ ಕುಸಿಯುತ್ತಿವೆ.ಖಾಸಗಿ ಅಂಗಡಿಗಳಲ್ಲಿ ಅಧಿಕ ಬೆಲೆ ನೀಡಿ ರಸಗೋಬ್ಬರ, ಬೀಜ ತಂದು ಬಿತ್ತಿದ್ದಾರೆ. ನಿರೀಕ್ಷೆಯಿಂದ ಬಿತ್ತದ್ದ ಬೆಳೆಗಳು ಒಣಗಲಾರಂಬಿಸಿದ್ದ ‘ವಿನಾಕಾರಣ ಹಣವ್ಯಯ ಮಾಡಿದೆವು ಎಂದು ರೈತರು ಕೈ ಹಿಚುಕಿಕೊಳ್ಳುತ್ತಿದ್ದಾರೆ.

ಸಂಕಷ್ಟಕ್ಕೀಡಾದ ರೈತರು ಸಾಕಿದ ಹಸು, ಎತ್ತುಗಳನ್ನು ಕಡಿಮೆ ದರಕ್ಕೆ ಮಾರಾಟ ಮಾಡಿ, ಕುಟುಂಬ ಸಮೇತ ಬೆಂಗಳೂರು, ಗೋವಾ, ಪುಣೆ, ಮುಂಬೈ, ಮಂಗಳೂರು ಮಹಾ ನಗರಗಳಿಗೆ ಗುಳೆ ಹೋಗುತ್ತಿದ್ದಾರೆ.

‘ಊರು ಬಿಟ್ಟು ಹೋಗದೇ ಇನ್ನೇನು ಮಾಡಬೇಕಾಗೆದ್ರಿ ಬಿತ್ತಿದ ಬೆಳೆ ಮಳೆ ಇಲ್ಲದೆ ನತ್ತಿ ಸುಡುವಂತಾಗೆದ್ರಿ. ಮಳೆ ದೂರ ಹೋಗಿ ಬಿಟ್ಟದ್‌. ಇನ್ನಷ್ಟು ದಿವಸ ನೋಡುತ್ತಿವಿ, ಮಳೆ ಬರಲಿಲ್ಲ ಅಂದ್ರ ನಾವು ಊರು ಬಿಟ್ಟು ಪ್ಯಾಟಿಗೆ ದುಡಿಯಾಕ ಹೋಗುತ್ತಿವ್ರಿ’ ಎಂದು ರೈತ ಬಸಪ್ಪ ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT