ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರೇಗುಡ್ಡಕ್ಕೆ ಅಧಿಕಾರಿಗಳು ಮತ್ತೆ ಬರೋದ್ಯಾವಾಗ?

ಅಪೂರ್ಣ ಸ್ಥಿತಿಯಲ್ಲಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ಜನರ ಒತ್ತಾಯ
Last Updated 27 ಜೂನ್ 2019, 14:36 IST
ಅಕ್ಷರ ಗಾತ್ರ

ಮಾನ್ವಿ: ತಾಲ್ಲೂಕಿನ ಪ್ರಮುಖ ಧಾರ್ಮಿಕ ಸುಕ್ಷೇತ್ರ ಕರೇಗುಡ್ಡದಲ್ಲಿ ಮುಖ್ಯಮಂತ್ರಿಯ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಜೂನ್‌ 26ರಂದು ಯಶಸ್ವಿಯಾಗಿ ನಡೆಯುವ ಮೂಲಕ ರಾಜ್ಯದ ಗಮನ ಸೆಳೆದಿರುವುದು ಗ್ರಾಮಸ್ಥರಲ್ಲಿ ಖುಷಿ, ಭಾವನೆ ಮೂಡಿಸಿದೆ.

ಪ್ರತಿವರ್ಷ ನವರಾತ್ರಿ ಸಂದರ್ಭದಲ್ಲಿ 10–11ದಿನಗಳವರೆಗೆ ಗ್ರಾಮದ ಮಹಾಂತೇಶ್ವರ ಮಠದಲ್ಲಿ ನಡೆಯುವ ಪುರಾಣ ಪ್ರವಚನ, ಇತರ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಜಿಲ್ಲೆ ಹಾಗೂ ತಾಲ್ಲೂಕಿನ ವಿವಿಧೆಡೆಯಿಂದ ಅಪಾರ ಸಂಖ್ಯೆಯ ಭಕ್ತರು ಆಗಮಿಸುತ್ತಾರೆ. ಆದರೆ ಮುಖ್ಯಮಂತ್ರಿಯ ಗ್ರಾಮ ವಾಸ್ತವ್ಯ ಹಾಗೂ ಜನತಾದರ್ಶನ ಕಾರ್ಯಕ್ರಮಕ್ಕಾಗಿ ಸುಮಾರು 1 5ಸಾವಿರ ಜನರು ವಿವಿಧೆಡೆಯಿಂದ ಬಂದದ್ದು ಗ್ರಾಮಸ್ಥರಿಗೆ ಹೊಸ ಅನುಭವ ನೀಡಿದೆ.

ಮುಖ್ಯಮಂತ್ರಿ, ಹಲವು ಸಚಿವರು ಮತ್ತು ಶಾಸಕರ ಜತೆಗೆ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಉನ್ನತ ಮಟ್ಟದ ಅಧಿಕಾರಿಗಳು ಗ್ರಾಮದಲ್ಲಿ ಠಿಕಾಣಿ ಹೂಡಿದ್ದನ್ನು ಕಂಡ ಗ್ರಾಮಸ್ಥರಿಗೆ ರಾಜ್ಯದ ಆಡಳಿತ ಯಂತ್ರಾಂಗವನ್ನು ಕಣ್ಣಾರೆ ಕಂಡ ಅಚ್ಚರಿಯ ಅನುಭವ ಮಾಡಿಕೊಂಡಿದ್ದಾರೆ. 20 ದಿನಗಳಿಂದ ಜಿಲ್ಲೆಯ ಸಚಿವ, ಶಾಸಕರು ಮತ್ತು ಅಧಿಕಾರಿಗಳ ನಿರಂತರ ಭೇಟಿಯಿಂದ ಸದಾ ವಾಹನಗಳ ಸಂಚಾರ, ಜನಜಂಗುಳಿಯಿಂದ ಕೂಡಿದ್ದ ತಾಲ್ಲೂಕಿನ ಕರೇಗುಡ್ಡ ಗ್ರಾಮದಲ್ಲಿ ಮಳೆ ನಿಂತ ಮೇಲೆ ಕಂಡು ಬರುವಂತಹ ಪ್ರಶಾಂತ ವಾತಾವರಣ ಗುರುವಾರ ಇತ್ತು.

ಗ್ರಾಮದ ಜನರೆಲ್ಲ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಚಾಲನೆ ಹಾಗೂ ಜನತಾ ದರ್ಶನ ಕಾರ್ಯಕ್ರಮ, ಗ್ರಾಮದ ಸರ್ಕಾರಿ ಶಾಲೆಯಲ್ಲಿ ರಾತ್ರಿ ಮುಖ್ಯಮಂತ್ರಿಮಲಗಿದ್ದ ವಿಷಯದ ಬಗ್ಗೆ ಚರ್ಚಿಸುತ್ತಿರುವುದು ಕಂಡು ಬಂದಿತು. ಎಂದಿನಂತೆ ಗುರುವಾರ ಶಾಲೆಗೆ ಬಂದ ಮಕ್ಕಳೂ ಕೂಡ ತಮ್ಮ ಶಾಲೆಯಲ್ಲಿ ರಾತ್ರಿಹೊತ್ತು ಮುಖ್ಯಮಂತ್ರಿ ನಿದ್ದೆ ಮಾಡಿದ ಸಂಗತಿ ಬಗ್ಗೆ ಖುಷಿಯಿಂದ ಮಾತನಾಡಿಕೊಳ್ಳುತ್ತಿದ್ದರು ಎಂದು ಶಿಕ್ಷಕ ಮೋಹನ್‌ ತಿಳಿಸಿದರು.

ಅಭಿವೃದ್ಧಿ ಕಾರ್ಯ: ಮುಖ್ಯಮಂತ್ರಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ದಿನ ನಿಗದಿಯಾದ ನಂತರ ಪ್ರತಿ ದಿನ ಕರೇಗುಡ್ಡ ಗ್ರಾಮಕ್ಕೆ ರಾಜಕಾರಣಿಗಳು, ಅಧಿಕಾರಿಗಳು ಭೇಟಿ ನೀಡಿದ್ದರು. ಗ್ರಾಮದ ಮುಖ್ಯ ರಸ್ತೆಯ ಅಭಿವೃದ್ಧಿ ಹಾಗೂ ರಸ್ತೆ ಪಕ್ಕದಲ್ಲಿ ಚರಂಡಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಅರ್ಧಕ್ಕೆ ನಿಂತಿರುವ ಚರಂಡಿ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳುವ ಬಗ್ಗೆ ಗ್ರಾಮಸ್ಥರು ಆತಂಕ ಹೊಂದಿದ್ದಾರೆ. ಗ್ರಾಮದ ಪ್ರಮುಖ ಸ್ಥಳಗಳು ಮತ್ತು ಬೀದಿಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿತ್ತು. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಅಂಗನವಾಡಿ ಕೇಂದ್ರದ ಕಟ್ಟಡ, ವ್ಯವಸಾಯ ಸೇವಾ ಸಹಕಾರ ಸಂಘದ ಕಟ್ಟಡಗಳಿಗೆ ಸುಣ್ಣ ಬಣ್ಣ ಬಳಿದು ಸಜ್ಜುಗೊಳಿಸಿದ ಬಗ್ಗೆ ಗ್ರಾಮಸ್ಥರು ಸದಾಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಹಿಳಾ ಶೌಚಾಲಯ?
ಮಹಿಳೆಯರು ಶೌಚಕ್ಕೆ ಬಳಸುತ್ತಿದ್ದ ಸ್ಥಳವನ್ನು ಸ್ವಚ್ಛಗೊಳಿಸಲಾಗಿದೆ. ಒಂದು ವಾರದಿಂದ ಮಹಿಳೆಯರ ಬಯಲು ಶೌಚಕ್ಕೆ ಈಗ ಜಾಗದ ಕೊರತೆಯಾಗಿದೆ. ಸ್ವಚ್ಛತಾ ಕಾರ್ಯ ಆರಂಭಕ್ಕೆ ಮೊದಲು ಮಹಿಳಾ ಶೌಚಾಲಯ ಕಟ್ಟಡ ನಿರ್ಮಿಸಿಕೊಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು. ಅದಷ್ಟು ಬೇಗನೆ ಮಹಿಳಾ ಶೌಚಾಲಯ ನಿರ್ಮಿಸಿಕೊಡಬೇಕು ಎಂಬುದು ಗ್ರಾಮಸ್ಥರ ಕೋರಿಕೆ.

ಹುಸಿಯಾದ ನಿರೀಕ್ಷೆ
ಬಹಿರಂಗ ವೇದಿಕೆ ಕಾರ್ಯಕ್ರಮದಲ್ಲಿ ಬುಧವಾರ ಶಾಸಕ ರಾಜಾ ವೆಂಕಟಪ್ಪ ನಾಯಕ ಮಾತನಾಡಿ ಕರೇಗುಡ್ಡ ಗ್ರಾಮದ ಐತಿಹಾಸಿಕ ಮಹಾಂತೇಶ್ವರ ಮಠದಲ್ಲಿ ಯಾತ್ರಿ ನಿವಾಸ ಮತ್ತಿತರ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಪ್ರವಾಸೋದ್ಯಮ ಇಲಾಖೆಯಿಂದ ₹50ಲಕ್ಷ ವಿಶೇಷ ಅನುದಾನಕ್ಕೆ ಬೇಡಿಕೆ ಇಟ್ಟಿದ್ದರು. ಆನಂತರ ಮಾತನಾಡಿದ ಸಿಎಂ ಕುಮಾರಸ್ವಾಮಿ ಈ ಕುರಿತು ಖಚಿತ ಭರವಸೆ ನೀಡದಿರುವುದು ಗ್ರಾಮಸ್ಥರಿಗೆ ನಿರಾಶೆ ಮೂಡಿಸಿದೆ. ಗ್ರಾಮದಲ್ಲಿ ವಾಸ್ತವ್ಯ ಮಾಡಿದ ನೆನಪಿಗಾಗಿ ಕರೇಗುಡ್ಡ ಗ್ರಾಮಾಭಿವೃದ್ಧಿಗಾಗಿ ವಿಶೇಷ ಯೋಜನೆಯನ್ನು ಮುಖ್ಯಮಂತ್ರಿ ಘೋಷಿಸಬೇಕಿತ್ತು ಎಂದು ಗ್ರಾಮದ ಹಿರಿಯರು ಅಭಿಪ್ರಾಯಪಟ್ಟಿದ್ದಾರೆ.

**

ಪುಟ್ಟ ಗ್ರಾಮವಾಗಿದ್ದರೂ ಕೂಡ ಸಿಎಂ ಗ್ರಾಮ ವಾಸ್ತವ್ಯದಿಂದ ರಾಜ್ಯದ ಗಮನ ಸೆಳೆದಿದೆ. ಗ್ರಾಮದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳಾಗಿವೆ. ನಮ್ಮ ಗ್ರಾಮಕ್ಕೆ ಬಂದಿರುವುದು ಸದಾ ಸ್ಮರಣೀಯ.
–ಅಮರೇಶ ಸಾಲಿಮಠ, ಸಂಗೀತ ಶಿಕ್ಷಕ,ಗ್ರಾಮಸ್ಥ, ಕರೇಗುಡ್ಡ

**
ವಾಸ್ತವ್ಯ ಮಾಡಿದ ನೆನಪಿಗಾಗಿ ಮುಖ್ಯಮಂತ್ರಿಯವರು ಕರೇಗುಡ್ಡಗ್ರಾಮದ ಅಭಿವೃದ್ಧಿಗೆ ವಿಶೇಷ ಯೋಜನೆ ಮತ್ತು ಅನುದಾನದ ಘೋಷಣೆ ಮಾಡಬೇಕಿತ್ತು.
–ಈರಣ್ಣ ನಾಯಕ , ಗ್ರಾಮಸ್ಥ, ಕರೇಗುಡ್ಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT