ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಯಚೂರು: ಕಾರ್ಮಿಕರ ಹಕ್ಕುಗಳಿಗಾಗಿ ಸಂಘಟಿತ ಹೋರಾಟಕ್ಕೆ ಕರೆ

ಕೇಂದ್ರ ಸರ್ಕಾರ ವಿರುದ್ಧ ಕೆ.ಸೋಮಶೇಖರ ಆಕ್ರೋಶ
Published 27 ಡಿಸೆಂಬರ್ 2023, 14:45 IST
Last Updated 27 ಡಿಸೆಂಬರ್ 2023, 14:45 IST
ಅಕ್ಷರ ಗಾತ್ರ

ರಾಯಚೂರು: ಅನೇಕ ತ್ಯಾಗ ಬಲಿದಾನಗಳಿಂದ ಗಳಿಸಿದ ಕಾರ್ಮಿಕರ ಹಕ್ಕುಗಳನ್ನು ಕೇಂದ್ರ ಸರ್ಕಾರ ಮೊಟಕುಗೊಳಿಸಲು ಮುಂದಾಗಿದೆ. ಕಾರ್ಮಿಕರ ಹಕ್ಕುಗಳಿಗಾಗಿ ಸರ್ಕಾರದ ವಿರುದ್ಧ ಸಂಘಟಿತ ಹೋರಾಟ ಅಗತ್ಯವಾಗಿದೆ ಎಂದು ಆಲ್ ಇಂಡಿಯಾ ಯುನಿಟೆಡ್ ಟ್ರೇಡ್ ಯುನಿಯನ್ ಸೆಂಟರ್ (ಎಐಯುಟಿಯುಸಿ) ರಾಜ್ಯಾಧ್ಯಕ್ಷ ಕೆ.ಸೋಮಶೇಖರ ಸಲಹೆ ನೀಡಿದರು.

ನಗರದ ಸ್ಪಂದನ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ರಾಯಕೆಮ್ ಮೆಡಿಕೇರ್ ಸಂಸ್ಥೆಯ ಕಾರ್ಮಿಕರ ಹಾಗೂ ನೌಕರರ ಪ್ರಥಮ ಸಮ್ಮೇಳನದಲ್ಲಿ ಮಾತನಾಡಿದ ಅವರು, ಒಳ್ಳೆಯ ದಿನ ತರುವುದಾಗಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ ಹಿಂದಿನ ಸರ್ಕಾರಗಳಂತೆ ಮಾಲೀಕರ ಪರ ನೀತಿಗಳನ್ನೇ ಜಾರಿಗೊಳಿಸುವ ಮೂಲಕ ದುಡಿಯುವ ವರ್ಗವನ್ನು ಸಂಕಷ್ಟಕ್ಕೀಡು ಮಾಡಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ದುಡಿಯುವ ವರ್ಗ ತೀವ್ರ ಬಾಧೆಗೆ ತುತ್ತಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಾರ್ವಜನಿಕ ಉದ್ಯಮಗಳನ್ನು ಜನಹಿತಕ್ಕೆ ವಿರುದ್ಧವಾಗಿ ಖಾಸಗೀಕರಣ ಮಾಡಲಾಗುತ್ತಿದೆ. ಕಾಯಂ ಉದ್ಯೋಗಗಳನ್ನು ಕಡಿತಗೊಳಿಸಿ ಹೊರಗುತ್ತಿಗೆ, ನಿಗದಿತ ಅವಧಿಗೆ ಮಾತ್ರ ಉದ್ಯೋಗ ಎಂಬ ಹೆಸರಲ್ಲಿ ಕಾರ್ಮಿಕರ ಶೋಷಣೆ ಮಾಡಲಾಗುತ್ತಿದೆ. ಕಾರ್ಮಿಕರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಬಲಿಷ್ಠ ಹೋರಾಟಕ್ಕೆ ಮುಂದಾಗಬೇಕಿದೆ. ಶಾಸನಬದ್ಧ ಸೌಲಭ್ಯಗಳನ್ನು ಪಡೆಯಲು, ಸೇವೆ ಕಾಯಂಗೊಳಿಸುವಂತೆ ಹೋರಾಡಬೇಕಿದೆ ಎಂದು ಸಲಹೆ ನೀಡಿದರು.

ಸಂಘದ ಅಧ್ಯಕ್ಷ ವೀರೇಶ.ಎನ್.ಎಸ್ ಮಾತನಾಡಿ, ಐದಾರು ವರ್ಷಗಳಿಂದ ಗುತ್ತಿಗೆ ಕಾರ್ಮಿಕರ ಕನಿಷ್ಠ ವೇತನ, ಪಿಎಫ್, ಇಎಸ್‍ಐ, ರಜಾ ಸೌಲಭ್ಯ, ಬೋನಸ್, ರಿಯಾಯಿತಿ ದರದಲ್ಲಿ ಕ್ಯಾಂಟೀನ್ ಸೌಲಭ್ಯ, ಸಮವಸ್ತ್ರ ಸೇರಿ ಅನೇಕ ಸೌಲಭ್ಯ ಪಡೆಯುವಲ್ಲಿ ಸಂಘ ಯಶಸ್ವಿಯಾಗಿದೆ. ಕನಿಷ್ಠ ವೇತನಕ್ಕಿಂತ ಹೆಚ್ಚಿನ ವೇತನ ಕೊಡಿಸುವಲ್ಲಿ ಸಂಘ ಯಶಸ್ವಿಯಾಗಿದೆ. ಮುಂದಿನ ಹೋರಾಟಕ್ಕೆ ಈ ಸಮ್ಮೇಳನ ಸ್ಫೂರ್ತಿಯಾಗಲಿದೆ ಎಂದು ತಿಳಿಸಿದರು.

ಇದೇ ವೇಳೆ ನೂತನ ಸಮಿತಿ ರಚಿಸಲಾಯಿತು. ಅಧ್ಯಕ್ಷರಾಗಿ ವೀರೇಶ ಎನ್.ಎಸ್., ಉಪಾಧ್ಯಕ್ಷರಾಗಿ ಯಲ್ಲಪ್ಪ, ಮಹೇಶ ಚೀಕಲಪರ್ವಿ, ಮಲ್ಲೇಶ, ರಾಮಾಂಜನೇಯ, ಶರಣಗೌಡ ತಾಯಣ್ಣ ನಾಮಾಲಿ, ಪ್ರಧಾನ ಕಾರ್ಯದರ್ಶಿ ಜಿ.ಬಸವರಾಜ, ಸಂಘಟನಾ ಕಾರ್ಯದರ್ಶಿ ಕರಿಲಿಂಗ, ಖಜಾಂಜಿ ರಾಘವೇಂದ್ರ ಗೌಡ, ಜಂಟಿ ಕಾರ್ಯದರ್ಶಿ ಬಸವರಾಜ, ಚೇತನ್, ಮಲ್ಲೇಶ್ವರಯ್ಯ, ರಜಾಕ್, ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಕಲ್ಲಪ್ಪ, ಮಾಳಪ್ಪ, ಬಸಯ್ಯ, ಎಂ.ಎಂ.ರವಿ, ಅಕ್ಬರ್, ಬೂದೇಶ, ಮಹಾದೇವ, ಹನುಮೇಶ, ಗೋವಿಂದರಾಜ, ಸುನೀಲ ಕುಮಾರ, ಮಧು, ನರಸಪ್ಪ ಅವರನ್ನು ಆಯ್ಕೆ ಮಾಡಲಾಯಿತು.  

ಪ್ರಾಸ್ತಾವಿಕವಾಗಿ ಮಹೇಶ ಚೀಕಲಪರ್ವಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಬಸವರಾಜ ಜಿ. ವರದಿ ಮಂಡಿಸಿದರು.  ಮಾರೆಪ್ಪ ಏಗನೂರು ಮುಖ್ಯ ಗೊತ್ತುವಳಿ ಮಂಡಿಸಿದರು. ಚೇತನ್ ಅನುಮೋದಿಸಿದರು. ಮುಖಂಡರಾದ ಯಲ್ಲಪ್ಪ, ಅಣ್ಣಪ್ಪ, ರಾಮಾಂಜನೇಯ, ಮಲ್ಲೇಶ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT