ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ಮೋದಿ ಭ್ರಷ್ಟಾಚಾರಿ, ಅತ್ಯಾಚಾರಿಗಳ ಕಾವಲುಗಾರ: ಕೆ.ರಾಧಾಕೃಷ್ಣ

Published 29 ಏಪ್ರಿಲ್ 2024, 15:39 IST
Last Updated 29 ಏಪ್ರಿಲ್ 2024, 15:39 IST
ಅಕ್ಷರ ಗಾತ್ರ

ರಾಯಚೂರು: ‘ಪ್ರಧಾನಿ ನರೇಂದ್ರ ಮೋದಿ ಭ್ರಷ್ಟಾಚಾರಿಗಳಿಗೆ, ಅತ್ಯಾಚಾರಿಗಳಿಗೆ ಕಾವಲುಗಾರರಾಗಿದ್ದಾರೆ. ಮೆಹುಲ್ ಚೋಕ್ಸಿ, ನೀರವ್ ಮೋದಿ ವಿದೇಶಕ್ಕೆ ಪರಾರಿಯಾಗಿದ್ದು, ಈಗ ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದ ಆರೋಪಿ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಪರಾರಿಯಾಗಿದ್ದಾರೆ’ ಎಂದು ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್)ದ ಪೊಲಿಟ್ ಬ್ಯೂರೋ ಸದಸ್ಯ ಕೆ.ರಾಧಾಕೃಷ್ಣ ವಾಗ್ದಾಳಿ ಹೇಳಿದರು.

‘2014ರಲ್ಲಿ ಕಾಂಗ್ರೆಸ್‌ಗೆ ಪರ್ಯಾಯವಾಗಿ ಆಡಳಿತ ನಡೆಸುತ್ತೇವೆ ಎಂಬ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದ ಕೇಂದ್ರದ ಬಿಜೆಪಿ ಸರ್ಕಾರ 10 ವರ್ಷಗಳಲ್ಲಿ ರೈತರ, ಕಾರ್ಮಿಕರ ಅಭಿವೃದ್ಧಿಗೆ ಯೋಜನೆ ಘೋಷಿಸದೇ ಕಾರ್ಪೊರೇಟ್, ಬಹುರಾಷ್ಟ್ರೀಯ ಕಂಪನಿಗಳ ಪರ ಕೆಲಸ ಮಾಡಿದೆ’ ಎಂದು ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

‘ಬಿಜೆಪಿ ಹಾಗೂ ಕಾಂಗ್ರೆಸ್ ಭಿನ್ನವಾಗಿಲ್ಲ. ಎರಡೂ ಪಕ್ಷಗಳ ಉದ್ದೇಶ ಒಂದೇ. ಹೀಗಾಗಿ ಎಸ್‌ಯುಸಿಐ, ಇಂಡಿಯಾ ಹಾಗೂ ಎನ್ ಡಿಎ ಒಕ್ಕೂಟದ ಜತೆಗೆ ಗುರುತಿಸಿಕೊಂಡಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಚುನಾವಣಾ ಬಾಂಡ್ ಮೂಲಕ ಭಾರಿ ಭ್ರಷ್ಟಾಚಾರ ನಡೆಸಿದ್ದು, ಶೇ 60ರಷ್ಟು ಬಾಂಡ್‌ಗಳನ್ನು ಬಿಜೆಪಿಯೇ ಖರೀದಿಸಿದೆ. ಕೇಂದ್ರ ಸರ್ಕಾರ ಬಹುತೇಕ ಉದ್ಯಮಿಗಳನ್ನು ಬೆದರಿಸಿ ಹಣ ವಸೂಲಿ ಮಾಡಿದೆ. ವಿರೋಧ ಪಕ್ಷದ ಅನೇಕರಿಗೆ ಐ.ಟಿ, ಇ.ಡಿ, ಸಿಬಿಐಯ ಭಯ ಹುಟ್ಟಿಸಿ ಬಿಜೆಪಿಗೆ ಸೇರಿಸಿಕೊಂಡಿದ್ದಾರೆ. 10 ವರ್ಷಗಳಲ್ಲಿ ಅನೇಕ ರೈತರು, ಕಾರ್ಮಿಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚುನಾವಣೆಗೂ ಮುಂಚೆ ನೀಡಿದ ಭರವಸೆ ಈಡೇರಿಸದೇ ಗೃಹ ಸಚಿವ ಅಮಿತ್ ಶಾ ಜುಮ್ಲಾ ಎಂದು ಹೇಳಿ ಮೋಸ ಮಾಡುತ್ತಿದ್ದಾರೆ’ ಎಂದು ದೂರಿದರು.

‘ರಾಜ್ಯದ ಜನರ ಅಭಿಪ್ರಾಯ ಪಡೆಯಲು ಜನ ಸಮಿತಿ ರಚನೆ ಮಾಡಿ 19 ಕ್ಷೇತ್ರಗಳಲ್ಲಿ ಎಸ್‌ಯುಸಿಐ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಇವರಲ್ಲಿ ಹೋರಾಟಗಾರರು, ಸಾಮಾಜಿಕ ಕಾಳಜಿ ಉಳ್ಳವರಿದ್ದಾರೆ. ಸಿಪಿಎಂ, ಸಿಪಿಐಎಂ ಪಕ್ಷಗಳು ಅಧಿಕಾರದ ಆಸೆಗಾಗಿ ಇಂಡಿಯಾ ಒಕ್ಕೂಟಕ್ಕೆ ಸೇರಿದ್ದು, ಎಸ್‌ಯುಸಿಐ ಸಿದ್ಧಾಂತಕ್ಕೆ ಬದ್ಧವಾಗಿ ಸ್ವತಂತ್ರವಾಗಿ ಚುನಾವಣೆ ಎದುರಿಸುತ್ತಿದೆ. ಆಡಳಿತದಲ್ಲಿ ಧರ್ಮ ನಿರಪೇಕ್ಷ, ಪರ್ಯಾಯ ರಾಜಕಾರಣಕ್ಕಾಗಿ ನಮ್ಮ ಪಕ್ಷವನ್ನು ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.

ಪಕ್ಷದ ರಾಜ್ಯ ಘಟಕದ ಸೆಕ್ರೆಟೇರಿಯಟ್ ಸದಸ್ಯ ಕೆ.ಸೋಮಶೇಖರ, ಜಿಲ್ಲಾ ಘಟಕದ ಕಾರ್ಯದರ್ಶಿ ಚಂದ್ರಗಿರೀಶ, ರಾಯಚೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕೆ.ರಾಮಲಿಂಗಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT