ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಲ್ಮೀಕಿ ನಾಯಕ ಸಮುದಾಯದಿಂದ ಪ್ರತಿಭಟನೆ

Last Updated 6 ಜೂನ್ 2019, 14:07 IST
ಅಕ್ಷರ ಗಾತ್ರ

ರಾಯಚೂರು:ಎಸ್.ಟಿ ಸಮುದಾಯಕ್ಕೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ 7.5 ಮೀಸಲಾತಿ ಜಾರಿಗೊಳಿಸುವಂತೆ ಮತ್ತು ನಕಲಿ ಜಾತಿ ಪ್ರಮಾಣ ಪತ್ರಕ್ಕೆ ಕಡಿವಾಣ ಹಾಕುವುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ವಾಲ್ಮೀಕಿ ನಾಯಕ ಸಮುದಾಯದ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.

2011ರ ಜನಗಣತಿಯ ಅಂಕಿ ಅಂಶಗಳ ಪ್ರಕಾರ ಪರಿಶಿಷ್ಠ ವರ್ಗಗಳ ಜನಸಂಖ್ಯೆ 42,48,987 ಇದ್ದು. ರಾಜ್ಯದ ಒಟ್ಟಾರೆ ಜನಸಂಖ್ಯೆಯಲ್ಲಿ ಇವರ ಪ್ರಮಾಣ ಶೇ 6.95 ರಷ್ಟಿರುತ್ತದೆ. ಈಗ ಶೇಕಡ 7 ಕ್ಕೂ ಹೆಚ್ಚಿರುತ್ತದೆ. ಪ್ರಸ್ತುತ ಕರ್ನಾಟಕ ರಾಜ್ಯದಲ್ಲಿ ವಿವಿಧ ಹುದ್ದೆಗಳಿಗೆ ನಡೆಯುವ ನೇಮಕಾತಿ(ಬಡ್ತಿಯು ಸೇರಿದಂತೆ)ಗಳಲ್ಲಿ ಮತ್ತು ಶೈಕ್ಷಣಿಕ ಸಂಸ್ಥೆಗಳ ಪ್ರವೇಶಗಳಲ್ಲಿ ಕೇವಲ ಶೇಕಡ 3 ಮೀಸಲಾತಿಯನ್ನು ನಿಗದಿಪಡಿಸಲಾಗಿದೆ. ಇದರಿಂದ ಪರಿಶಿಷ್ಟ ವರ್ಗದವರಿಗೆ ಅನೇಕ ದಶಕಗಳಿಂದ ಅನ್ಯಾಯವಾಗಿದೆ. ಅದ್ದರಿಂದ ಪರಿಶಿಷ್ಠ ವರ್ಗದವರಿಗೆ ರಾಜ್ಯದಲ್ಲಿ ನಿಗದಿಪಡಿಸಿರುವ ಮೀಸಲಾತಿ ಪ್ರಮಾಣವನ್ನು ಶೇ 7 ಕ್ಕೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಕೆಲವು ಮುಂದುವರೆದ ವರ್ಗದವರು ಪರಿಶಿಷ್ಟ ವರ್ಗದವರಿಗೆ ಮೀಸಲಿರುವ ಸೌಲಭ್ಯಗಳನ್ನು ಪಡೆಯುತ್ತಿರುವುದು ಸಮುದಾಯದ ಗಮನಕ್ಕೆ ಬಂದಿರುತ್ತದೆ. ಈ ಬಗ್ಗೆ ಕೂಡಲೇ ರಾಜ್ಯ ಸರ್ಕಾರ ಗಮನಹರಿಸಿ ಅರ್ಹರಲ್ಲದವರಿಗೆ ಪರಿಶಿಷ್ಟ ವರ್ಗಗಳ ಪ್ರಮಾಣ ಪತ್ರ ನೀಡುವುದನ್ನು ತಡೆಗಟ್ಟಬೇಕು. ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯುವವರ ಮೇಲೆ ಕಠಿಣ ಕ್ರಮ ಜರುಗಿಸಬೇಕು ಎಂದರು.
ರಾಜ್ಯದಲ್ಲಿ ಒಟ್ಟು 50 ಬುಡಕಟ್ಟು ಗುಂಪುಗಳನ್ನು ಪರಿಶಿಷ್ಟ ವರ್ಗವೆಂದು ಅಧಿಸೂಚಿಸಲಾಗಿದೆ. ಪ್ರತಿ ಬುಡಕಟ್ಟು ತನ್ನದೇ ಆದ ಸಂಸ್ಕೃತಿ, ಸಂಪ್ರದಾಯ ಆಚರಣೆಗಳನ್ನು ರೂಢಿಸಿಕೊಂಡಿದ್ದು ಬದಲಾವಣೆಯ ಸಂದಿಗ್ಧತೆಯಲ್ಲಿರುತ್ತವೆ. ಪರಿಶಿಷ್ಟ ವರ್ಗದವರ ಅನೇಕ ವರ್ಷಗಳ ಬೇಡಿಕೆಯಾದ ಪ್ರತ್ಯೇಕ ಪರಿಶಿಷ್ಟ ವರ್ಗಗಳ ಸಚಿವಾಲಯವನ್ನು ಸ್ಥಾಪಿಸಬೇಕು.ಜಿಲ್ಲೆಯಲ್ಲಿ ಪರಿಶಿಷ್ಟ ವರ್ಗದವರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದ್ದು ಇದಕ್ಕೆ ಕಡಿವಾಣ ಹಾಕಬೇಕು. ದೌರ್ಜನ್ಯಕ್ಕೊಳಗಾದ ಪರಿಶಿಷ್ಟ ವರ್ಗದ ಸತ್ರಸ್ತರಿಗೆ ನಿಗದಿತ ಕಾಲಮಿತಿಯೊಳಗೆ ಪರಿಹಾರ ಮತ್ತು ಉದ್ಯೋಗ ತಲುಪುವಂತೆ ಕ್ರಮವಹಿಸಬೇಕು ಎಂದು ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಎನ್.ರಘುವೀರ ನಾಯಕ, ಮಲ್ಲಿಕಾರ್ಜುನ ನಾಯಕ, ವೈ.ಬಿ ಪಾಟೀಲ್, ಹುಲಿ ನಾಯಕ, ಶಿವಕುಮಾರ ನಾಯಕ, ಡಾ.ಶಾರದ ಹುಲಿ ನಾಯಕ,ಕೊಟ್ರೇಶಪ್ಪ ಕೋರಿ, ರಾಜಾ ಪಾಂಡುರಂಗ ನಾಯಕ, ವೈ ಹನುಮಂತ ನಾಯಕ, ತಿಮ್ಮಪ್ಪ ನಾಯಕ ಅಸ್ಕಿಹಾಳ, ತಿಮ್ಮಪ್ಪ ನಾಯಕ ಜಲ್ಲಿ, ರಂಗಪ್ಪ, ಈಶಪ್ಪ, ಸಾಧು ಅಂಜಿನಯ್ಯ, ಸರಸ್ವತಿ, ಹಂಪಮ್ಮ, ಮಮತ, ದೇವೇಂದ್ರಪ್ಪ, ಕರೆಪ್ಪ ನಾಯಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT