ಕವಿತಾಳ: ಸಮೀಪದ ಉಟಕನೂರು ಗ್ರಾಮದ ಅಡವಿ ಸಿದ್ದೇಶ್ವರ ಮಠದ ಜಾತ್ರೆ ಅಂಗವಾಗಿ ಶನಿವಾರ ಹೂವಿನ ರಥೋತ್ಸವ ವಿಜೃಂಭಣೆಯಿಂದ ಜರುಗಿತು.
ಮರಿ ಬಸವಲಿಂಗ ತಾತನವ ಪುಣ್ಯಸ್ಮರಣೆ ನಿಮಿತ್ತ ಕತೃ ಗದ್ದುಗೆಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಮತ್ತು ಮಹಾ ಮಂಗಳಾರತಿ ಸೇರಿದಂತೆ ವಿಶೇಷ ಪೂಜೆಗಳನ್ನು ನೆರವೇರಿಸಲಾಯಿತು.
ಗ್ರಾಮದ ಪ್ರಮುಖ ರಸ್ತೆಗಳಲ್ಲಿ ತಾತನವರ ಮೂರ್ತಿಯ ಮೆರವಣಿಗೆ, ಪಲ್ಲಕ್ಕಿ ಉತ್ಸವ, ನಂದಿಕೋಲು ಮೆರವಣಿಗೆ ನಡೆಯಿತು. ಭಕ್ತರು ಮಠದಲ್ಲಿ ಗದ್ದುಗೆಗೆ ಕಾಯಿ, ಕರ್ಪೂರ, ನೈವೇದ್ಯ ಸಮರ್ಪಿಸಿದರು ಮತ್ತು ದೀಡ್ ನಮಸ್ಕಾರ ಹಾಕಿ ಹರಕೆ ತೀರಿಸಿದರು.
ಉಟಕನೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸಹಸ್ರಾರು ಜನರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ರಥಕ್ಕೆ ಉತ್ತತ್ತಿ, ಬಾಳೆಹಣ್ಣು ಎಸೆದು ಭಕ್ತಿ ಮೆರೆದರು. ಭಕ್ತರಿಗೆ ಮಠದಲ್ಲಿ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.
ಕವಿತಾಳ ಸಮೀಪದ ಉಟಕನೂರು ಜಾತ್ರೆ ನಿಮಿತ್ತ ಶನಿವಾರ ರಥೋತ್ಸವ ವಿಜೃಂಭಣೆಯಿಂದ ಜರುಗಿತು.