ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಂತ್ರಾಲಯದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ: ಸುಬುಧೇಂದ್ರ ತೀರ್ಥರು

ಗುರುವೈಭವೋತ್ಸವ: 16ರಂದು ವಿಶೇಷ ಪೂಜೆ
Published 12 ಮಾರ್ಚ್ 2024, 15:28 IST
Last Updated 12 ಮಾರ್ಚ್ 2024, 15:28 IST
ಅಕ್ಷರ ಗಾತ್ರ

ರಾಯಚೂರು: ‘ಮಂತ್ರಾಲಯ ಬಸ್‌ ನಿಲ್ದಾಣದ ಹಿಂಭಾಗದಲ್ಲಿ ಸಾವಿರಾರು ಭಕ್ತರು ತಂಗಲು ಅನುಕೂಲವಾಗುವಂತೆ ಭಕ್ತರ ನಿಲಯ ಸ್ಥಾಪಿಸಲಾಗುವುದು. ಅಂಚೆ ಕಚೇರಿ ಸಮೀಪ ಲಗೇಜ್‌ ರೂಮ್‌, ಶೌಚಾಲಯ ನಿರ್ಮಿಸಲಾಗುವುದು. ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು’ ಎಂದು ಮಂತ್ರಾಲಯದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ತಿಳಿಸಿದರು.

ಶ್ರೀ ರಾಘವೇಂದ್ರ ಗುರುವೈಭವೋತ್ಸವ ಅಂಗವಾಗಿ ಮಾರ್ಚ್ 16ರಂದು ರಾಯರ ಜನ್ಮದಿನ ಆಚರಿಸಲಾಗುವುದು. ವಿಶೇಷ ಪೂಜೆ, ಅನ್ನದಾನ, ಸಮಾಜದ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸೇವೆ ಸಲ್ಲಿಸಿದವರಿಗೆ ಸನ್ಮಾನ ಮಾಡಲಾಗುವುದು. ಗ್ರಂಥಗಳ ಬಿಡುಗಡೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು’ ಎಂದು ಮಂತ್ರಾಲಯದಲ್ಲಿ ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ರಾಘವೇಂದ್ರ ವೃತ್ತವನ್ನು ಅಭಿವೃದ್ಧಿಪಡಿಸಲಾಗುವುದು. ದಾನಿಗಳ ನೆರವಿನಿಂದ 200 ಕೊಠಡಿಗಳನ್ನು ನಿರ್ಮಾಣ ಮಾಡಲಾಗುವುದು. ತುಂಗಭದ್ರಾ ನದಿ ಬತ್ತಿದೆ. ಮಂತ್ರಾಲಯದ ಗೋಶಾಲೆಯಲ್ಲಿ ನೀರು ಹಾಗೂ ಮೇವಿನ ಸಮಸ್ಯೆಯಾಗದಂತೆ ಮೊದಲೇ ಮೇವು ಸಂಗ್ರಹ ಮಾಡಿಕೊಂಡಿದ್ದೇವೆ. ಬರ ಇದ್ದರೂ ರೈತರು ಮೇವು ದೇಣಿಗೆ ಕೊಡುತ್ತಿದ್ದಾರೆ. ಸಮೀಪದ ಬಡ ಗೋಶಾಲೆಗಳಿಗೆ ಮೇವು ದೇಣಿಗೆ ಕೊಡಲು ಸಿದ್ಧರಿದ್ದೇವೆ’ ಎಂದು ಹೇಳಿದರು.

‘ಮಠದ ಟ್ಯಾಂಕರ್‌ ಮೂಲಕ ಸುತ್ತಮುತ್ತಲಿನ ಗ್ರಾಮಗಳಿಗೆ ನೀರು ಪೂರೈಸುತ್ತಿದ್ದೇವೆ. ಭಕ್ತರಿಗೆ ನೀರಿನ ಅವಶ್ಯಕತೆ ಇರುವುದನ್ನು ಮನಗಂಡು ಹೊಸ ಕೆರೆ ನಿರ್ಮಿಸಲು ಉದ್ದೇಶಿಸಲಾಗಿದೆ. ತಜ್ಞರು ಪರಿಶೀಲನೆ ನಡೆಸಿದ್ದಾರೆ. ಸಾಧ್ಯವಾದರೆ ಮಾ.16ರಂದೇ ಕೆರೆ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಗುವುದು’ ಎಂದು ತಿಳಿಸಿದರು.

‘ಬಿಸಿಲು ಅಧಿಕ ಕಾರಣ ಇರುವ ಭಕ್ತರ ಅನುಕೂಲಕ್ಕಾಗಿ ಆವರಣದಲ್ಲಿ ಚಪ್ಪರಗಳನ್ನು ಹಾಕುವ ಕೆಲಸ ನಡೆದಿದೆ. ಅನ್ನಪೂರ್ಣ ಭೋಜನಾಲಯದಲ್ಲಿ ₹ 50 ಲಕ್ಷ ವೆಚ್ಚದಲ್ಲಿ ಚಾವಣಿ ನಿರ್ಮಿಸಲಾಗುತ್ತಿದೆ. ಮಠದ ಎಲ್ಲ ಸಂಸ್ಥೆಗಳಲ್ಲಿ ಸೋಲಾರ್‌ ಪ್ಲಾಂಟ್‌ ನಿರ್ಮಿಸಿದ್ದೇವೆ. ಮಾ.16ರಂದು ಸಮರ್ಪಣೆ ಮಾಡಲಾಗುವುದು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT