ಒತ್ತಡ ನಿವಾರಣೆಗೆ ಕ್ರೀಡೆ ಸಹಕಾರಿ: ಡಿಸಿ

7
ಎರಡು ದಿನಗಳ ಜಿಲ್ಲಾಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆ

ಒತ್ತಡ ನಿವಾರಣೆಗೆ ಕ್ರೀಡೆ ಸಹಕಾರಿ: ಡಿಸಿ

Published:
Updated:
Prajavani

ರಾಯಚೂರು: ಜನರಿಗೆ ಸೇವೆ ಒದಗಿಸಲು ಸರ್ಕಾರದ ವೇಗ ಹೆಚ್ಚಾಗಿದ್ದು, ನೌಕರರ ಮೇಲೆ ಒತ್ತಡವೂ ತೀವ್ರವಾಗಿದೆ. ಈ ಒತ್ತಡ ನಿವಾರಣೆ ಮಾಡಿಕೊಳ್ಳಲು ನೌಕರರು ಕ್ರೀಡಾಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಬಿ.ಶರತ್ ಹೇಳಿದರು.

ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಆರಂಭವಾದ ಎರಡು ದಿನಗಳ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಯನ್ನು  ಗುರುವಾರ ಉದ್ಘಾಟಿಸಿ ಮಾತನಾಡಿದರು.

ನೌಕರಿ ಮಾಡುವ ಸಲುವಾಗಿಯೇ ಯಾರೂ ಹುಟ್ಟಿರುವುದಿಲ್ಲ. ನೌಕರಿಯೂ ಜೀವನದ ಒಂದು ಭಾಗವಾಗಿದ್ದು, ಕಚೇರಿಯಲ್ಲಿ ಕೆಲಸ ಮುಗಿಸಿಕೊಂಡು ಹೋದ ನಂತರ ನೌಕರರ ಕುಟುಂಬದವರೊಂದಿಗೆ ಸಂತೋಷದಿಂದ ಕಾಲ ಕಳೆಯುವುದರಿಂದ ಮರು ದಿನದ ಕೆಲಸಕ್ಕೆ ಉತ್ಸಾಹ ಮೂಡಲಿದೆ ಎಂದರು.

ಸರ್ಕಾರಿ ಕೆಲಸ ಮಾಡುವ ನೌಕರರು ಒತ್ತಡದಿಂದ ಕೆಲಸದ ಮುಗಿಸಿಕೊಂಡು ಮನೆಗೆ ನೆಮ್ಮದಿಯ ಜೀವನ ನಡೆಸಲು ಕ್ರೀಡೆಗಳು ಸಹಕಾರಿಯಾಗಿದ್ದು, ಪ್ರತಿಯೊಬ್ಬರೂ ಕ್ರೀಡೆಗಳಲ್ಲಿ ತಪ್ಪದೇ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಯಾವುದೇ ಕ್ರೀಡೆಯಿರಲಿ ಗೆಲುವೊಂದೆ ಮುಖ್ಯವಲ್ಲ. ಕ್ರೀಡೆಯಲ್ಲಿ ಕ್ರೀಡಾಸ್ಪೂರ್ತಿಯಿಂದ ಪಾಲ್ಗೊಂಡು ಕ್ರೀಡಾಕೂಟದ ಯಶಸ್ವಿಗೆ ಸಹಕಾರ ನೀಡುವುದು ಪ್ರಮುಖವಾಗಿದೆ. ಕ್ರೀಡಾಕೂಟದ ಮೂಲಕ ನೌಕರರಿಗೆ ಆತ್ಮವಿಶ್ವಾಸ ಬೆಳೆಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.

ಪ್ರತಿಯೊಂದು ಕೆಲಸವನ್ನು ಸರ್ಕಾರಿ ನೌಕರರ ಮಾಡಬೇಕು ಎಂಬ ಧೋರಣೆ ಸಮಾಜದಲ್ಲಿದ್ದು, ಈ ಧೋರಣೆಯನ್ನು ಜನರು ಬಿಡಬೇಕು. ಮನೆಯ ಹತ್ತಿರದ ಕಸವನ್ನೂ ನಗರಸಭೆಯ ಸಿಬ್ಬಂದಿ ಬಂದೇ ತೆಗೆಯಬೇಕು ಎನ್ನದೇ ಮನೆಯ ಸುತ್ತಮುತ್ತಲಿನ ಪರಿಸರವನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ನಿಭಾಯಿಸಬೇಕು ಎಂದು ತಿಳಿಸಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಟಿ.ಮಂಜುನಾಥಸ್ವಾಮಿ ಸ್ವಾಗತಿಸಿದರು. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಂಟಿ ಕಾರ್ಯದರ್ಶಿ ಎನ್.ಮಲ್ಲಿಕಾರ್ಜುನ, ಜಿಲ್ಲಾ ಘಟಕದ ಅಧ್ಯಕ್ಷ ಮಹೆಬೂಬ ಪಾಷ ಮೂಲಿಮನಿ, ಖಜಾಂಚಿ ಲಕ್ಷ್ಮಪ್ಪ, ಪ್ರಾಥಮಿಕ ಶಾಲಾ ಸಹಶಿಕ್ಷಕರ ಸಂಘದ ಜಿಲ್ಲಾ ಘಟಕ ಅಧ್ಯಕ್ಷ ವೀರಭದ್ರಪ್ಪ, ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ನೀರಜಕುಮಾರ, ನೌಕರರ ಸಂಘದ ಸಿಂಧನೂರು ತಾಲ್ಲೂಕು ಅಧ್ಯಕ್ಷ ಚಂದ್ರಶೇಖರ ಹಿರೇಮಠ, ಸಿರವಾರ ಅಧ್ಯಕ್ಷ ಅಯ್ಯನಗೌಡ, ಮಸ್ಕಿ ಅಧ್ಯಕ್ಷ ಶಂಕರಗೌಡ, ಅಕ್ಕಮಹಾದೇವಿ, ಯಂಕಪ್ಪ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !