ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಧನೂರು: ಮುಖ್ಯರಸ್ತೆ ಅತಿಕ್ರಮಿಸಿರುವ ಬೀದಿ ವ್ಯಾಪಾರಿಗಳು

Published 4 ಫೆಬ್ರುವರಿ 2024, 15:50 IST
Last Updated 4 ಫೆಬ್ರುವರಿ 2024, 15:50 IST
ಅಕ್ಷರ ಗಾತ್ರ

ಸಿಂಧನೂರು: ರಾಯಚೂರು-ಗಂಗಾವತಿ ಮುಖ್ಯರಸ್ತೆಯನ್ನು ಬೀದಿ ವ್ಯಾಪಾರಿಗಳು ವಿವಿಧ ಅಂಗಡಿಗಳನ್ನು ತೆರೆದು ಅತಿಕ್ರಮಿಸಿಕೊಂಡಿದ್ದು ಒಂದೆಡೆಯಾದರೆ, ಸಂಘ-ಸಂಸ್ಥೆಗಳು ಅವರಿಂದ ಬಾಡಿಗೆ ವಸೂಲಿ ಮಾಡುತ್ತಿರುವುದಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ನ್ಯಾಯಾಲಯದ ಕಂಪೌಂಡ್‌ಗೆ ಹೊಂದಿಕೊಂಡು ಇಟ್ಟುಕೊಂಡಿದ್ದ ಡಬ್ಬಾ ಅಂಗಡಿಗಳನ್ನು ನ್ಯಾಯಾಲಯದ ಆದೇಶದ ಮೇರೆಗೆ ನಗರಸಭೆಯಿಂದ ಎರಡು ದಿನದ ಹಿಂದೆ ತೆರವುಗೊಳಿಸಲಾಗಿದೆ. ಆದರೆ ಗಂಗಾವತಿ, ರಾಯಚೂರು ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟು ಮಾಡಿ ದೊಡ್ಡ ದೊಡ್ಡ ಅಂಗಡಿಗಳನ್ನು ಹಾಕಿಕೊಂಡಿರುವ ವ್ಯಾಪಾರಿಗಳ ಮೇಲೆ ನಗರಸಭೆ ಪೌರಾಯುಕ್ತರು ಏಕೆ ಕಾರ್ಯಾಚರಣೆ ಮಾಡುತ್ತಿಲ್ಲ ಎಂಬುದನ್ನು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಗಂಗಾವತಿ ರಸ್ತೆಯಲ್ಲಿ ತೋಟಗಾರಿಕೆ ಇಲಾಖೆಯ ಕಂಪೌಂಡಿಗೆ ಹೊಂದಿಕೊಂಡು ಮುಖ್ಯರಸ್ತೆಯನ್ನು ಆಕ್ರಮಿಸಿ ಗ್ಯಾರೇಜ್, ಚಿಕ್ಕನ್ ಅಂಗಡಿ, ರೆಗ್ಜೀನ್ ಶಾಪ್, ಬಿರಿಯಾನಿ ಹೋಟೆಲ್, ಟೀಸ್ಟಾಲ್, ವಾಟರ್ ಸರ್ವಿಸ್, ಜ್ಯೂಸ್ ಸೆಂಟರ್, ಪಂಕ್ಚರ್ ಶಾಫ್, ಟೂಬ್ ಟಯರ್‌ ಮಾರಾಟ ಸೇರಿದಂತೆ ಹಲವಾರು ವಿಧದ ವ್ಯಾಪಾರ ವಹಿವಾಟು ನಡೆಯುತ್ತಿವೆ. ಈ ಅಂಗಡಿಗಳನ್ನು ಬಡವರು ಮಾತ್ರವಲ್ಲದೆ, ಶ್ರೀಮಂತರು, ಕೆಲ ಸಂಘಟನೆಗಳ ಮುಖಂಡರು, ಸಮಾಜ ಸೇವಕರೆಂದು ಹೇಳಿಕೊಳ್ಳುವ ಕೆಲ ವ್ಯಕ್ತಿಗಳು ತಾವೇ ಅಂಗಡಿಗಳನ್ನು ನಿರ್ಮಿಸಿ ಬಾಡಿಗೆ ಕೊಟ್ಟಿದ್ದಾರೆ. ಇಂಥ ಅಂಗಡಿಗಳನ್ನು ತೆರವುಗೊಳಿಸುವ ಮೂಲಕ ಸಾರ್ವಜನಿಕ ಸಂಚಾರಕ್ಕೆ ಅನುಕೂಲ ಮಾಡಿಕೊಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಸಾರ್ವಜನಿಕ ಆಸ್ತಿಯ ಮೇಲೆ ದೊಡ್ಡ ದೊಡ್ಡ ಶೆಡ್‌ಗಳನ್ನು ನಿರ್ಮಿಸಿ ಬಾಡಿಗೆ ಕೊಡುವುದು ಯಾವ ನ್ಯಾಯವೆಂದು ಪ್ರಶ್ನಿಸುತ್ತಿರುವ ಸಾರ್ವಜನಿಕರು, ಇಂಥ ಅಕ್ರಮ ಅಂಗಡಿಗಳಿಗೆ ಜೆಸ್ಕಾಂ ಇಲಾಖೆ ವಿದ್ಯುತ್ ಪರವಾನಗಿ ಕೊಟ್ಟಿರುವ ಕುರಿತಾಗಿಯೂ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ನಗರಸಭೆ, ಲೋಕೋಪಯೋಗಿ ಇಲಾಖೆ ಜಂಟಿಯಾಗಿ ಕಾರ್ಯಾಚರಣೆ ಮಾಡುವ ಮೂಲಕ ಅಕ್ರಮವಾಗಿ ಸಾರ್ವಜನಿಕ ಆಸ್ತಿಯಲ್ಲಿ ಬಾಡಿಗೆ ವಸೂಲಿ ಮಾಡುವ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಪೊಲೀಸ್ ಇಲಾಖೆಯು ಸಹ ಸಂಬಂಧಪಟ್ಟ ಅಧಿಕಾರಿಗಳಿಗೆ ಸಹಕಾರ ನೀಡುವ ಮೂಲಕ ಸಾರ್ವಜನಿಕ ಆಸ್ತಿಯನ್ನು ರಕ್ಷಣೆ ಮಾಡಬೇಕು ಮತ್ತು ಸಾರ್ವಜನಿಕ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ನಗರಾಭಿವೃದ್ಧಿ ಹೋರಾಟ ಸಮಿತಿ ಒತ್ತಾಯಿಸಿದೆ.

ಅಧಿಕೃತ ಮನೆಗೆ ವಿದ್ಯುತ್ ಪರವಾನಗಿ ಕೊಡಲು ಜೆಸ್ಕಾಂ ಅಧಿಕಾರಿಗಳು ತಿಂಗಳುಗಟ್ಟಲೇ ಅಲೆದಾಡಿಸುತ್ತಾರೆ. ಆದರೆ ಅನಧಿಕೃತ ಅಂಗಡಿಗಳಿಗೆ ಪರವಾನಗಿ ಕೊಟ್ಟಿರುವುದು ಭ್ರಷ್ಟಾಚಾರಕ್ಕೆ ಕನ್ನಡಿ.
ಖಾಜಾಸಾಬ್ ಕುಷ್ಟಗಿ ನಗರದ ನಿವಾಸಿ
ಶ್ರೀಮಂತರು ಸಂಘ–ಸಂಸ್ಥೆಗಳ ಮುಖಂಡರು ಡಬ್ಬಿ ಅಂಗಡಿಗಳನ್ನು ಮಾಡಿ ಖಾಲಿ ಸ್ಥಳದಲ್ಲಿಟ್ಟು ಬಡವರಿಂದ ಬಾಡಿಗೆ ವಸೂಲಿ ಮಾಡುತ್ತಿರುವುದು ಖೇದಕರ ಸಂಗತಿ. ಇಂತಹ ಅಂಗಡಿಗಳನ್ನು ತೆರವು ಮಾಡಬೇಕು
ಬಸಪ್ಪ ಖಂಡೋಜಪ್ಪ ಸ್ಥಳೀಯರು
ರಾಯಚೂರು-ಗಂಗಾವತಿ ಮುಖ್ಯರಸ್ತೆಯಲ್ಲಿ ಕೆಲವರು ಅಂಗಡಿಗಳನ್ನು ಇಟ್ಟು ಬೀದಿ ವ್ಯಾಪಾರಿಗಳಿಂದ ಬಾಡಿಗೆ ವಸೂಲಿ ಮಾಡುತ್ತಿರುವ ಸಂಗತಿ ಗಮನಕ್ಕೆ ಬಂದಿದೆ. ಆದಷ್ಟು ಬೇಗ ಇಂತಹ ಅಕ್ರಮ ಅಂಗಡಿಗಳನ್ನು ಸಹ ತೆರವುಗೊಳಿಸಲು ಕ್ರಮಕೈಗೊಳ್ಳುತ್ತೇವೆ
ಮಂಜುನಾಥ ಗುಂಡೂರು ನಗರಸಭೆ ಪೌರಾಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT