ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭದ್ರಾ ಮೇಲ್ದಂಡೆ ಯೋಜನೆ ಜಾರಿಯಾಗಲಿ

ಅನ್ನದಾತರ ಅಭಿವೃದ್ಧಿ, ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಜನರ ಮನವಿ
Last Updated 21 ಮೇ 2018, 12:34 IST
ಅಕ್ಷರ ಗಾತ್ರ

ಹೊಸದುರ್ಗ: ಯಾರೇ ಮುಖ್ಯಮಂತ್ರಿ ಆಗಲಿ, ದೇಶಕ್ಕೆ ಅನ್ನ ಕೊಡುವ ಅನ್ನದಾತರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಬೇಕು. ಚುನಾವಣೆ ಪೂರ್ವದಲ್ಲಿ ರೈತರ ಮತ ಸೆಳೆಯಲು ಕೊಟ್ಟಂತಹ ಭರವಸೆಗಳನ್ನು ಸಂಪೂರ್ಣ ಈಡೇರಿಸಬೇಕು.

ತಾಲ್ಲೂಕಿನ ಕಸಬಾ ಹೋಬಳಿಯ ನೀರಗುಂದ ಗ್ರಾಮದ ಹೊಲವೊಂದರಲ್ಲಿ ಭಾನುವಾರ ಶೇಂಗಾ ಬಿತ್ತನೆ ಕಾರ್ಯದಲ್ಲಿ ತೊಡಗಿದ್ದ ರೈತ ಮಹಿಳೆ ಅನಸೂಯಮ್ಮ, ರಾಮಪ್ಪ, ರಾಜಪ್ಪ ಅವರು ‘ಪ್ರಜಾವಾಣಿ’ ಜೊತೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು ಹೀಗೆ.

‘ಬಯಲು ಸೀಮೆಯ ರೈತರು ನೆಮ್ಮದಿಯ ಜೀವನ ಸಾಗಿಸಬೇಕಾದರೆ ಸರ್ಕಾರ ಭದ್ರಾ ಮೇಲ್ದಂಡೆ ನೀರಾವರಿ ಯೋಜನೆ ಶೀಘ್ರ ಅನುಷ್ಠಾನಕ್ಕೆ ಪ್ರಥಮ ಪ್ರಾಶಸ್ತ್ಯ ನೀಡಬೇಕು. ಈ ಯೋಜನೆಯಡಿ ಕೆರೆಗಳಿಗೆ ನೀರು ತುಂಬಿಸಬೇಕು. ಪಂಪ್‌ಸೆಟ್‌ಗಳಿಗೆ ದಿನಕ್ಕೆ ಕನಿಷ್ಠ 6 ತಾಸಾದರೂ ಗುಣಮಟ್ಟದ ವಿದ್ಯುತ್‌ ಪೂರೈಸಬೇಕು. ನಾವು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು. ಎಲ್ಲಾ ಬೆಳೆಗಳ ಮಾರಾಟಕ್ಕೆ ಸ್ಥಳೀಯವಾಗಿ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಜತೆಗೆ, ಮಧ್ಯವರ್ತಿಗಳ ಹಾವಳಿಯಿಂದ ರೈತರನ್ನು ಮುಕ್ತಗೊಳಿಸಬೇಕು’ ಎನ್ನುತ್ತಾರೆ ರೈತ ರಾಜಪ್ಪ.

ಮೂರು, ನಾಲ್ಕು ವರ್ಷದಿಂದ ಸರಿಯಾಗಿ ಮಳೆ ಆಗದಿರುವುದರಿಂದ ಅಂತರ್ಜಲ ಮಟ್ಟ ಸಾವಿರಾರು ಅಡಿ ಪಾತಾಳಕ್ಕಿಳಿದಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕೊರೆಸಿದ್ದ ರೈತರ ಹಲವು ಕೊಳವೆ ಬಾವಿಗಳಲ್ಲಿ ಬೇಸಿಗೆಯಲ್ಲಿ ನೀರು ಬರಲಿಲ್ಲ. ಇದರಿಂದಾಗಿ ಹಲವು ವರ್ಷಗಳಿಂದ ಕಷ್ಟಪಟ್ಟು ಬೆಳೆಸಿದ್ದ ತೆಂಗು, ಅಡಿಕೆ ತೋಟಗಳು ಒಣಗುವಂತಾಗಿದ್ದು ದಿಕ್ಕು ತೋಚದಂತಾಗಿತ್ತು. ಕೆಲವೆಡೆ ಜಾನುವಾರು ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗಿತ್ತು. ಕುಡಿಯುವ ನೀರಿನಲ್ಲಿ ಪ್ಲೋರೈಡ್‌ ಅಂಶ ಹೆಚ್ಚಿಗೆ ಇರುವುದರಿಂದ ನಮ್ಮೂರಿನ ಜನರು ಶುದ್ಧ ಕುಡಿಯುವ ನೀರಿಗೆ ಪರದಾಡುತ್ತಿದ್ದಾರೆ. ನನೆಗುದಿಗೆ ಬಿದ್ದಿರುವ ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿ ಮಾಡಲು ಗ್ರಾಮ ಪಂಚಾಯಿತಿ ಅಧಿಕಾರಿಗಳು ಮುಂದಾಗಿಲ್ಲ ಎಂದು ಅನಸೂಯಮ್ಮ, ರಾಮಪ್ಪ ದೂರುತ್ತಾರೆ.

ಹಿಂದಿನ ಕಾಂಗ್ರೆಸ್‌ ಸರ್ಕಾರ 2018ರ ಮೇ ಅಂತ್ಯದೊಳಗೆ ಭದ್ರಾ ಮೇಲ್ದಂಡೆ ಯೋಜನೆ ನೀರನ್ನು ಜಿಲ್ಲೆಗೆ ಹರಿಸಿಯೇ ತೀರುತ್ತೇವೆ ಎಂದು ಭರವಸೆ ನೀಡಿತ್ತು. ಭದ್ರೆಯ ನೀರು ಬಂದಿದ್ದರೆ ಅಂತರ್ಜಲ ವೃದ್ಧಿಯಾಗಿ ರೈತರ ಬದುಕು ಹಸನಾಗುವ ಜತೆಗೆ, ಕುಡಿಯುವ ನೀರಿನ ಸಮಸ್ಯೆಯೂ ನಿವಾರಣೆ ಆಗುತಿತ್ತು. ಆದರೆ ಈ ನೀರಾವರಿ ಯೋಜನೆ ಕಾಮಗಾರಿ ಇನ್ನೂ ಆಮೆಗತಿಯಲ್ಲಿ ಸಾಗಿದೆ.

‘ನಮ್ಮೂರ ಕೆರೆಗೆ ಮಳೆಗಾಲದಲ್ಲಿ ನೀರು ಹರಿದು ಬರುತ್ತಿದ್ದ ಹಳ್ಳದ ಸಾಲಿಗೆ ಅಡ್ಡಲಾಗಿ ಭದ್ರಾ ಮೇಲ್ದಂಡೆ ಯೋಜನೆ ಕಾಲುವೆ ತೆಗೆದಿರುವುದರಿಂದ, ಸಮೃದ್ಧವಾಗಿ ಮಳೆಯಾದಾಗ ಭರ್ತಿಯಾಗುತ್ತಿದ್ದ ಕೆರೆಯೂ ತುಂಬದಂತಾಗಿದೆ. ಕೆರೆಯಲ್ಲಿ ನೀರಿಲ್ಲದಿದ್ದರೆ ಗ್ರಾಮದ ಸುತ್ತಮುತ್ತಲ ಹಳ್ಳಿಯ ರೈತರ ಕೊಳವೆಬಾವಿಯಲ್ಲಿ ಸಮರ್ಪಕವಾಗಿ ನೀರು ಬರುತ್ತಿಲ್ಲ. ಇದರಿಂದ ಬೆಳೆ ಉಳಿಸಿಕೊಳ್ಳಲು ಹರಸಾಹಸ ಪಡುವಂತಾಗಿದೆ’ ಎಂದು ರೈತರು ಹೇಳುತ್ತಾರೆ.

ನೂತನ ಸಮ್ಮಿಶ್ರ ಸರ್ಕಾರ ಬರದ ನಾಡಿನ ರೈತರ ಹಿತ ಕಾಪಾಡಬೇಕು. ಶೀಘ್ರ ಭದ್ರೆ ನೀರು ಹರಿಸಬೇಕು ಎಂಬುದು ತಾಲ್ಲೂಕಿನ ರೈತರ ಮನವಿ.

**
ಯಾರು ಮುಖ್ಯಮಂತ್ರಿ ಆದ್ರೇನು ನಮ್ಮ ಕೆಲಸ ತಪ್ಪಲ್ಲ. ನಮ್ಮ ಹೊಟ್ಟೆ ತುಂಬಬೇಕಾದರೆ ಕಷ್ಟಪಟ್ಟು ದುಡಿಯಬೇಕು. ಬಂದವರು ಅಭಿವೃದ್ಧಿಗೆ ಶ್ರಮಿಸಲಿ
ರಾಜಪ್ಪ, ರೈತ 

**
ತಾಲ್ಲೂಕಿಗೆ ಭದ್ರಾ ಮೇಲ್ದಂಡೆ ಯೋಜನೆ ಹಾಗೂ ಹೇಮಾವತಿ ನಾಲೆ ನೀರು ಹರಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ – ಗೂಳಿಹಟ್ಟಿ ಡಿ.ಶೇಖರ್‌, ಶಾಸಕ 

–ಎಸ್‌.ಸುರೇಶ್‌ ನೀರಗುಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT