ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಣಗುತ್ತಿರುವ ತೊಗರಿ–ಹತ್ತಿಗೆ ತಾಮ್ರದ ರೋಗ: ಕಂಗಾಲಾದ ರೈತರು

ಅಕ್ಷರ ಗಾತ್ರ

ಲಿಂಗಸುಗೂರು: ತಾಲ್ಲೂಕಿನಲ್ಲಿ ಕೆಲ ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ತಾಲ್ಲೂಕಿನ ಕೆಲ ಪ್ರದೇಶಗಳಲ್ಲಿ ಅತಿಯಾದ ತೇವಾಂಶದಿಂದ ತೊಗರಿ ಬೆಳೆ ಸಿಡಿ ಆಯ್ದು ಒಣಗುತ್ತಿದೆ. ಇನ್ನೊಂದಡೆ ಹತ್ತಿ ಬೆಳೆಗೆ ತಾಮ್ರದ (ಕೆಂಪು)ರೋಗ ತಗಲುವ ಜೊತೆಗೆ ಕೀಟಬಾಧೆ ಹೆಚ್ಚಾಗಿದ್ದರಿಂದ ರೈತರು ಕಂಗಾಲಾಗಿದ್ದಾರೆ.

ಮುಂಗಾರು ಮಳೆಯ ವೈಫಲ್ಯತೆ ಮಧ್ಯೆಯು ಕೂಡ ಅಲ್ಲಲ್ಲಿ ಬೆಳೆದು ನಿಂತಿದ್ದ ತೊಗರಿ, ಹತ್ತಿ, ಮೆಣಸಿನಕಾಯಿ, ಸಜ್ಜೆ, ಎಳ್ಳು, ಹೆಸರು ಇತರೆ ಬೆಳೆಗಳು ಬಾಡುತ್ತಿರುವ ಸಮಯದಲ್ಲಿ ಸುರಿದ ಧಾರಾಕಾರ ಮಳೆಯಿಂದ ರೈತರು ಹರ್ಷಗೊಂಡಿದ್ದರು. ಆದರೆ, ಅತಿಯಾದ ಮಳೆಯಿಂದ ಬೆಳೆದು ನಿಂತ ಫಸಲಿಗೆ ಕೀಟಬಾಧೆ ಆರಂಭಗೊಂಡಿದೆ. ಕೆಲ ಬೆಳೆಗಳಿಗೆ ರೋಗ ತಗುಲಿದ್ದು ನಿಯಂತ್ರಣಕ್ಕಾಗಿ ಕೆಲ ರೈತರು ಪರದಾಡುವಂತ ಸ್ಥಿತಿ ನಿರ್ಮಾಣಗೊಂಡಿದೆ.

ಮಳೆಯ ಕೊರತೆಯಿಂದ ಬಾಡಿ ಹೋಗುತ್ತಿರುವ ಬೆಳೆಗೆ ಜೀವ ಬಂದಂತಾಗಿದೆ. ಆದರೆ, ನಿರಂತರ ಧಾರಾಕಾರ ಮಳೆಗೆ ಭೂಮಿಯಲ್ಲಿ ತೇವಾಂಶ ಹೆಚ್ಚಾಗಿ ಸಿಡಿ ಹಾಯ್ದು ತೊಗರಿ ಭಾಗಶಃ ಒಣಗುತ್ತಿದೆ. ಹತ್ತಿ ಬೆಳೆಗೆ ಕೆಂಪು ರೋಗ ಕಾಣಿಸಿಕೊಂಡಿದೆ. ಕೀಟಗಳ ಬಾಧೆ ನಿಯಂತ್ರಣ ಮೀರಿದ್ದು ಚೇತರಿಸಿಕೊಳ್ಳುತ್ತಿರುವ ಫಸಲನ್ನು ತಿಂದು ಹಾಳುಮಾಡುತ್ತಿವೆ ಎಂದು ರೈತ ಸದ್ಯೋಜಾತಪ್ಪ ದೇವರಭೂಪುರ ಅಳಲು ತೋಡಿಕೊಂಡಿದ್ದಾರೆ.

ಹೊನ್ನಳ್ಳಿಯ ರೈತ ಅಯ್ಯಪ್ಪ ಮಾಳೂರು ಜಮೀನಿನಲ್ಲಿ ಬಿತ್ತನೆ ಮಾಡಿದ ಹತ್ತಿ ಬೆಳೆ ಮಳೆಯ ಕೊರತೆಯಿಂದ ನಿರೀಕ್ಷಿತ ಪ್ರಮಾಣದಲ್ಲಿ ಬೆಳೆದು ನಿಂತಿಲ್ಲ. ಅಲ್ಪಸ್ವಲ್ಪ ಮಳೆಗೆ ಜೀವ ಹಿಡಿದಿದ್ದ ಹತ್ತಿ ಬೆಳೆಗೆ ನಿರಂತರ ಮಳೆಗೆ ತಾಮ್ರ ರೋಗ ಕಾಣಿಸಿಕೊಂಡಿದ್ದು ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗಿದೆ. ಬಂದಷ್ಟು ಹತ್ತಿ ಬಿಡಿಸಲು ಕುಟುಂಬಸ್ಥರು ಹರಸಾಹ ಪಡುತ್ತಿರುವುದು ಕಂಡು ಬಂದಿತು.

ಜೂನ್‌ ತಿಂಗಳಿಂದ ಸೆಪ್ಟೆಂಬರ್‌ ಅಂತ್ಯದವರೆಗೆ ವಾಡಿಕೆ ಮಳೆ ಪ್ರಮಾಣ 401 ಎಂ.ಎಂ ನಷ್ಟಿತ್ತು. ಇದುವರೆಗೆ ಸುರಿದ ಮಳೆ ಪ್ರಮಾಣ 448 ಎಂ.ಎಂ ಬಂದಿದೆ. ವಾಡಿಕೆ ಮಳೆಗಿಂತ ಶೇ 12ರಷ್ಟು ಹೆಚ್ಚಿನ ಪ್ರಮಾಣದ ಮಳೆ ಬಿದ್ದಿದೆ. ಆದರೆ, ಸೆಪ್ಟಂಬರ್‌ ತಿಂಗಳದ ವಾಡಿಕೆ ಪ್ರಮಾಣ ಅಂದಾಜು 150 ಎಂ.ಎಂ ಇತ್ತು. ಆದರೆ, 229 ಎಂ.ಎಂ. ಮಳೆ ಬಿದ್ದಿದ್ದು ತೆವಾಂಶ ಪ್ರಮಾಣ ಹೆಚ್ಚಾಗಿದೆ ಎಂದು ಕೃಷಿ ಇಲಾಖೆ ಮೂಲಗಳು ಸ್ಪಷ್ಟಪಡಿಸಿವೆ.

ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಸ್‌.ಎಚ್‌. ರಕ್ಕಸಗಿ ಮಾತನಾಡಿ, ‘ಭೂಮಿಯಲ್ಲಿ ತೇವಾಂಶ ಪ್ರಮಾಣ ಹೆಚ್ಚಾಗಿದ್ದರಿಂದ ಅಲ್ಲಲ್ಲಿ ತೊಗರಿ ಬೆಳೆಗೆ ಸಿಡಿ (ಒಣಗುವುದು) ಕಾಣಿಸಿಕೊಂಡಿದೆ’ ಎಂದು ಸಲಹೆ ನೀಡಿದ್ದಾರೆ.

ಅಲ್ಲದೆ, ‘ಹತ್ತಿ ಬೆಳೆಗೆ ಅಲ್ಲಲ್ಲಿ ತೊಪ್ಪಲು, ಕಾಯಿ ಕೆಂಪು ರೋಗ (ತಾಮ್ರ) ಕಾಣಿಸಿಕೊಂಡಿದ್ದು ಇದಕ್ಕೆ ರೈತರು ಮ್ಯಾಗ್ನೇಷಿಯಮ್‌ ಸಲ್ಫೇಟ್‌ ಸಿಂಪರಣೆ ಮಾಡುವುದರಿಂದ ನಿಯಂತ್ರಣ ಮಾಡಬಹುದಾಗಿದೆ. ತೇವಾಂಶದಿಂದ ಅಷ್ಟೇನು ತೊಂದರೆ ಆಗದು. ರೈತರು ಆತಂಕ ಪಡುವ ಅಗತ್ಯವಿಲ್ಲ. ಹೆಚ್ಚಿನ ಮಾಹಿತಿಗಾಗಿ ರೈತರು ಕೃಷಿ ಇಲಾಖೆ ವಿಜ್ಞಾನಿಗಳನ್ನು ಸಂಪರ್ಕಿಸಿ ಮೇಲಿಂದ ಮೇಲೆ ಸಲಹೆ ಪಡೆದುಕೊಳ್ಳಲು’ ಮನವಿ ಮಾಡಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT