ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣಾ ನದಿಗೆ ಹೆಚ್ಚುವರಿ ನೀರು: ಪ್ರವಾಹ ಭೀತಿ

Last Updated 22 ಸೆಪ್ಟೆಂಬರ್ 2017, 6:54 IST
ಅಕ್ಷರ ಗಾತ್ರ

ದೇವದುರ್ಗ: ನಾರಾಯಣಪುರ ಅಣೆಕಟ್ಟೆಯಿಂದ ಹೆಚ್ಚುವರಿ ನೀರನ್ನು ಕೃಷ್ಣಾ ನದಿಗೆ ಹರಿಬಿಟ್ಟ ಕಾರಣ ಗುರುವಾರ ಮಧ್ಯಾಹ್ನದಿಂದ ತಾಲ್ಲೂಕಿನ ನದಿ ದಂಡೆಯಲ್ಲಿ ಪ್ರವಾಹ ಭೀತಿ ಎದುರಾಗಿದೆ. ಸಂದರ್ಭದಲ್ಲಿಯೂ ಕೃಷ್ಣಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಹರಿಬಿಡುವ ಸಂಭವ ಇದೆ ಎಂದು ಹೂವಿನಹೆಡ್ಗಿಯಲ್ಲಿ ಇರುವ ಕೇಂದ್ರ ನೀರು ಮಾಪನ ಇಲಾಖೆಯ ಎಂಜಿನಿಯರ್‌ ಕೇಶವ ಮೂರ್ತಿ ತಿಳಿಸಿದರು.

ತಾಲ್ಲೂಕಿನ ನದಿ ಪಾತ್ರದ ಗ್ರಾಮಗಳಲ್ಲಿ ಮಧ್ಯಾಹ್ನ ಪ್ರವಾಹದ ಭೀತಿ ಉಂಟಾಗಿದ್ದು, ತೀರ ನದಿ ದಂಡೆಯಲ್ಲಿನ ಗದ್ದೆಗಳು ಮತ್ತು ಜಮೀನುಗಳು ಮುಳುಗಡೆಯಾಗಿರುವುದು ಕಂಡು ಬಂದಿದೆ. ಯಾವುದೇ ಜೀವ ಹಾನಿ ಸಂಭವಿಸಿಲ್ಲ. ನದಿಯ ಮೂಲಕ ಏತ ನೀರಾವರಿ ಸೌಲಭ್ಯ ಪಡೆಯಲಾಗಿದ್ದ ರೈತರ ಪಂಪ್‌ಸೆಟ್‌ಗಳು ಗುರುವಾರ ಏಕಾಏಕಿಯಾಗಿ ನದಿಗೆ ಪ್ರವಾಹ ಬಂದ ಕಾರಣ ನೀರಿನಲ್ಲಿ ಮುಳುಗಡೆಯಾಗಿದೆ. ಕೆಲವು ರೈತರು ಪ್ರವಾಹವನ್ನು ಲೆಕ್ಕಿಸದೆ ನದಿಯಲ್ಲಿ ಇಳಿದು ಪಂಪ್‌ಸೆಟ್‌ಗಳನ್ನು ದಡಕ್ಕೆ ತರುವ ಪ್ರಯತ್ನ ಮಾಡಿದ್ದಾರೆ.

ಸಂಪರ್ಕ ಕಡಿತ ಭೀತಿ: ಅಣೆಕಟ್ಟೆಯಿಂದ ಗುರುವಾರ ರಾತ್ರಿ ನದಿಗೆ ಇನ್ನು ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಬಿಟ್ಟರೆ ತಾಲ್ಲೂಕಿನ ಹೂವಿನಹೆಡ್ಗಿ ಗ್ರಾಮದ ಮುಂದೆ ಇರುವ ಸೇತುವೆ ಮುಳುಗಡೆಯಾಗುವ ಸಂಭವ ಇದೆ. ಈಗಾಗಲೇ ಸೇತುವೆಗೆ ಕೆಲವೇ ಅಡಿಗಳು ಮಾತ್ರ ಬಾಕಿ ಉಳಿದಿದ್ದು, ಅಪಾಯದ ಮಟ್ಟದಲ್ಲಿ ನದಿ ಉಕ್ಕಿ ಹರಿಯುತ್ತಿದೆ.

ಪ್ರಯಾಣಿಕರು ಮತ್ತು ವಾಹನ ಸವಾರರು ಎದುರಿಕೊಂಡು ಸೇತುವೆ ಮೇಲೆ ಸಂಚಾರಕ್ಕೆ ಹಿಂದೇಟು ಹಾಕುತ್ತಿದ್ದಾರೆ. ದೇವದುರ್ಗ, ಜಾಲಹಳ್ಳಿ ಮತ್ತು ಗಬ್ಬೂರು ಪೊಲೀಸ್‌ರು ಸೇತುವೆ ಬಳಿ ಇದ್ದುಕೊಂಡು ಪ್ರಯಾಣಿಕರ ಸುರಕ್ಷಿತಕ್ಕಾಗಿ ಕ್ರಮ ವಹಿಸಿದ್ದಾರೆ.

ಪ್ರತಿ ವರ್ಷ ಸೇತುವೆ ಎರಡರಿಂದ ಮೂರು ದಿನ ಮುಳುಗಡೆಯಾಗುವುದು ಸಾಮಾನ್ಯ. ಕರ್ನಾಟಕ ಮತ್ತು ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಾಜ್ಯ ಹೆದ್ದಾರಿಯಾಗಿದ್ದು, ಸೇತುವೆ ಮುಳುಗಡೆಯಾದರೆ ಪ್ರಯಾಣಿಕರು ಸುಮಾರು 70 ಕಿಲೋ ಮೀಟರ್‌ ಸುತ್ತುವರೆದು ಶಹಾಪುರ ತಲುಪಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT