ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯರೇ ಇಲ್ಲದ ಸರ್ಕಾರಿ ಆಸ್ಪತ್ರೆ!

ತಾಲ್ಲೂಕಿನ 10 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಿಬ್ಬಂದಿ ಕೊರತೆ
Last Updated 25 ನವೆಂಬರ್ 2016, 8:30 IST
ಅಕ್ಷರ ಗಾತ್ರ

ದೇವದುರ್ಗ: ಪಟ್ಟಣದ ಆಸ್ಪತ್ರೆ ಸೇರಿದಂತೆ ತಾಲ್ಲೂಕಿನ 10 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರಿಲ್ಲದೆ ರೋಗಿಗಳು ತೊಂದರೆ ಪಡುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯನ್ನು ಕಳೆದ ಹತ್ತು ವರ್ಷದ ಹಿಂದೆ ಜರ್ಮನಿ ಆರ್ಥಿಕ ನೆರವಿನಿಂದ 100 ಹಾಸಿಗೆ ಆಸ್ಪತ್ರೆಯನ್ನಾಗಿ ಮೇಲ್ದರ್ಜಿಗೆ ಏರಿಸಲಾಗಿದೆ. ಆದರೆ ವೈದ್ಯರ ಕೊರತೆಯಿಂದ ಉತ್ತಮ ಚಿಕಿತ್ಸೆ ದೊರೆಯುತ್ತಿಲ್ಲ.

ಪಟ್ಟಣ ಮತ್ತು ಸಮೀಪದ 20ಕ್ಕೂ ಹೆಚ್ಚು ಗ್ರಾಮಗಳು ಇಲ್ಲಿನ ಆಸ್ಪತ್ರೆ ವ್ಯಾಪ್ತಿಗೆ ಬರುತ್ತವೆ. ಇದರಲ್ಲಿ ಪ್ರಮುಖವಾಗಿ ದೊಡ್ಡಿ, ತಾಂಡಾ ಹೆಚ್ಚಾಗಿದ್ದು, ಜನರು ತೀರ ಬಡವರು, ಕೂಲಿಕಾರರು ಇದ್ದಾರೆ. ಮುಖ್ಯ ವೈದ್ಯಾಧಿಕಾರಿ ಸೇರಿ 9 ತಜ್ಞ ವೈದ್ಯರು ಇರಬೇಕಾಗಿದ್ದ ಆಸ್ಪತ್ರೆಯಲ್ಲಿ ಎಲ್ಲ ಹುದ್ದೆಗಳು ಖಾಲಿ ಇವೆ. ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಹುದ್ದೆ ಹಲವು ವರ್ಷಗಳಿಂದ ಖಾಲಿ ಇದೆ. ಎಲ್ಲ ಹುದ್ದೆಗಳು ಭರ್ತಿಯಾಗಿರುವ ಉದಾಹರಣೆ ಇದುವರೆಗೆ ಇಲ್ಲ.

ಸಾರ್ವಜನಿಕ ಆಸ್ಪತ್ರೆಯಲ್ಲಿ 17 ಜನ ನರ್ಸ್‌ಗಳ ಪೈಕಿ ಕೇವಲ 8 ಜನ ಇದ್ದಾರೆ. ಪ್ರಯೋಗಾಲಯ ತಂತ್ರಜ್ಞ, ಪ್ರಥಮ ದರ್ಜೆ ಸಹಾಯಕ, ಕ್ಷಕಿರಣ ತಂತ್ರಜ್ಞ, ಹಿರಿಯ ಮಹಿಳಾ ಸಹಾಯಕಿ, ಕಿರಿಯ ಆರೋಗ್ಯ ಸಹಾಯಕಿಯರು, ಆಂಬುಲೆನ್ಸ್‌ ಚಾಲಕರು, ಕಚೇರಿ ಅಧೀಕ್ಷಕರು, ಬೆರಚ್ಚುಗಾರರು, ಕ್ಷಕಿರಣ ಸಹಾಯಕರ ಹುದ್ದೆಗಳು ಖಾಲಿ ಇವೆ.

ವೈದ್ಯರು ಮತ್ತು ಸಿಬ್ಬಂದಿ ಇಲ್ಲದೆ ಕಾರಣ ಮೊದಲ ಮಹಡಿಗೆ ಬೀಗ ಹಾಕಿ ವರ್ಷಗಳು ಕಳೆದಿದೆ. ಇದನ್ನು ಖಂಡಿಸಿ ವಿವಿಧ ಸಂಘ, ಸಂಸ್ಥೆಗಳು ಪ್ರತಿಭಟನೆ ನಡೆಸುವ ಮೂಲಕ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಇಲಾಖೆ ಅಧಿಕಾರಿಗಳು ಸೇವೆಯಲ್ಲಿದ್ದ ಕೆಲವು ವೈದ್ಯರನ್ನು ಬೇರೆ ಕಡೆಗೆ ಬಿಡುಗಡೆ ಮಾಡಿದ್ದಾರೆ. ಇಲ್ಲಿನ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಇದ್ದ ವೈದ್ಯರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಲಿಲ್ಲ ಎಂದು ಆಪ್‌ ಪಕ್ಷದ ಮುಖಂಡ ಶಂಕರಗೌಡ ಚನ್ನೂರು ಆರೋಪಿಸಿದ್ದಾರೆ.

ಕೋಟಿಗಟ್ಟಲೇ ಹಣ ಖರ್ಚು ಮಾಡಿ ನೀಡಲಾಗಿರುವ ವಿವಿಧ ಯಂತ್ರಗಳನ್ನು ಬಳಕೆ ಮಾಡದೆ ದೂಳು ಹಿಡಿದಿವೆ ಎಂದು ಹೈದರಾಬಾದ್‌ ಕರ್ನಾಟಕ ವಿಮೋಚನಾ ವೇದಿಕೆ ಅಧ್ಯಕ್ಷ ರಾಮಣ್ಣ ಎನ್‌. ಗಣೇಕಲ್‌ ಆರೋಪಿಸಿದ್ದಾರೆ.

ಸರ್ಕಾರಿ ಆಸ್ಪತ್ರೆ ನಂಬಿಕೊಂಡಿರುವ  ಬಡ ಕುಟುಂಬಗಳು ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದರೆ ವೈದ್ಯರಿಲ್ಲದಿರುವುದರಿಂದ ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಗಳಿಗೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ನಾಯಿ, ಹಾವು ಕಚ್ಚಿದರೂ ದೂರದ ರಾಯಚೂರಿಗೆ ಹೋಗುವಂಥ ಸ್ಥಿತಿ ಇದೆ ಎಂದು ದೂರಿದರು.

ಆಸ್ಪತ್ರೆ ನಿರ್ವಹಣೆ (ಸ್ವಚ್ಛತೆ)ಗೆ ಆರೋಗ್ಯ ಇಲಾಖೆ ಗುತ್ತಿಗೆ ನೀಡಿದ್ದರೂ ಆಸ್ಪತ್ರೆಯಲ್ಲಿ ಗಬ್ಬೆದ್ದು ನಾರುತ್ತಿದೆ. ಗುತ್ತೆಗೆದಾರರು ಲಕ್ಷಗಟ್ಟಲೆ ಹಣ ಪಡೆದರೂ ನಿರ್ವಹಣೆ ಮಾಡುತ್ತಿಲ್ಲ. ಪ್ರತಿನಿತ್ಯ ಆಸ್ಪತ್ರೆಗೆ ಬರುವವರು ಮೂಗು ಮುಚ್ಚಿಕೊಂಡೇ ಒಳಗೆ ಪ್ರವೇಶ ಮಾಡುವಂಥ ಸ್ಥಿತಿ ನಿರ್ಮಾಣವಾಗಿದೆ ಹೆಸರು ಹೇಳಲು ಬಯಸದ ಆರೋಗ್ಯ ಸಹಾಯಕಿಯೊಬ್ಬರು ಹೇಳಿದರು.

ತಾಲ್ಲೂಕಿನಲ್ಲಿ 8 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಜಾಲಹಳ್ಳಿ, ಅರಕೇರಾ ಹೋಬಳಿ ಕೇಂದ್ರಗಳಲ್ಲಿ ಸಮುದಾಯ ಆರೋಗ್ಯ ಕೇಂದ್ರಗಳು ಸೇರಿ ಗ್ರಾಮೀಣ ಭಾಗದಲ್ಲಿ ಒಟ್ಟು 10 ಆಸ್ಪತ್ರೆಗಳಿದ್ದು, ಇಲ್ಲಿಯೂ ವೈದ್ಯರ ಸಮಸ್ಯೆಯಿಂದ ಜನ ಸಾಮಾನ್ಯರಿಗೆ ತೊಂದರೆ ಆಗಿದೆ. ಹಿರೇಬೂದೂರು, ರಾಮದುರ್ಗ, ಚಿಂಚೋಡಿ ಮತ್ತು ಗಾಣಧಾಳ ಆಸ್ಪತ್ರೆಗಳಲ್ಲಿ ವೈದ್ಯಾಧಿಕಾರಿ ಇಲ್ಲ. ಬೇರೊಂದು ಆಸ್ಪತ್ರೆಯಿಂದ ವಾರಕ್ಕೆ ಎರಡು ದಿನಗಳಂತೆ ವೈದ್ಯರನ್ನು ಕಳಿಹಿಸಲಾಗುತ್ತದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬನೇಶ ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT