ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕ ಸಮಾನತೆಗೆ ಅಡ್ಡಿಯಾದ ಶೋಷಣೆ

ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಲೇಖಕ ಶಿವಣ್ಣ ಆತಂಕ
Published 17 ಏಪ್ರಿಲ್ 2024, 7:35 IST
Last Updated 17 ಏಪ್ರಿಲ್ 2024, 7:35 IST
ಅಕ್ಷರ ಗಾತ್ರ

ರಾಮನಗರ: ‘ಮೇಲ್ವರ್ಗದವರ ಶೋಷಣೆಯು ಕಾಲ ಬದಲಾದಂತೆ ರೂಪಾಂತರಗೊಂಡು, ತಳ ಸಮುದಾಯದ ಆರ್ಥಿಕ ಸಮಾನತೆಯ ಸಾಧನೆಗೆ ದೊಡ್ಡ ತೊಡಕಾಗಿದೆ. ಭಾರತೀಯ ಸಮಾಜದಲ್ಲಿ ಬೇರೂರಿರುವ ಜಾತಿ ಪದ್ಧತಿಯೂ ಆರ್ಥಿಕ ಅಸಮಾನತೆಯನ್ನು ಸೃಷ್ಟಿಸುವಲ್ಲಿ ಮೇಲುಗೈ ಸಾಧಿಸುತ್ತಲೇ ಬರುತ್ತಿದೆ’ಎಂದು ಲೇಖಕ ಜಿ.ಶಿವಣ್ಣ ಆತಂಕ ವ್ಯಕ್ತಪಡಿಸಿದರು.

ತಾಲ್ಲೂಕಿನ ಕುಂಬಾಪುರದಲ್ಲಿ ಜನಮುಖಿ ಟ್ರಸ್ಟ್ ಆಯೋಜಿಸಿದ್ದ ಡಾ. ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಜಾತಿ ಪದ್ಧತಿಯು ಸಮಾಜದಲ್ಲಿ ಉಳ್ಳವರು ಮತ್ತು ಇಲ್ಲದವರು ಎಂಬ ಎರಡು ವರ್ಗವನ್ನು, ಮಡಿ– ಮೈಲಿಗೆ, ಮೇಲು–ಕೀಳೆಂಬ ತಾರತಮ್ಯವನ್ನು ಸೃಜಿಸಿ, ಮನುಷ್ಯರ ನಡುವೆ ದೊಡ್ಡ ಕಂದಕ ಸೃಷ್ಟಿಸಿದೆ’ ಎಂದರು.

‘ಬಾಲ್ಯದಿಂದಲೂ ಶೋಷಣೆಯನ್ನು ಅನುಭವಿಸಿದ ಅಂಬೇಡ್ಕರ್ ಛಲ ಬಿಡದೆ ದೇಶ–ವಿದೇಶಗಳಲ್ಲಿ ವಿದ್ಯಾಭ್ಯಾಸ ಮಾಡಿ ಶಿಕ್ಷಣದಲ್ಲಿ ಸಾಧನೆ ಮಾಡಿದರು. ಅದರ ಮೂಲಕವೇ ಶೋಷಣೆಯ ವಿರುದ್ಧ ಹೋರಾಟಗಳನ್ನು ಕೈಗೊಂಡರು. 1927ರಲ್ಲಿ ಚೌಡರ್ ಕೆರೆ ಚಳವಳಿ, 1930ರಲ್ಲಿ ನಾಸಿಕ್‌ನ ಕಾಳಾರಾಮ್ ದೇವಾಲಯ ಪ್ರವೇಶದಂತಹ ಹೋರಾಟಗಳ ಮೂಲಕ ಸಮಾನ ಹಕ್ಕುಗಳ ಅಗತ್ಯವನ್ನು ಪ್ರತಿಪಾದಿಸಿದರು’ ಎಂದು ನೆನೆದರು.

‘ಕಾಳಾರಾಮ್ ಹೋರಾಟಕ್ಕಾಗಿ ಸವರ್ಣಿಯರಿಂದ ತೀವ್ರ ಪ್ರತಿರೋಧ ಎದುರಿಸಿದ ಅಂಬೇಡ್ಕರ್‌, ಜೀವ ಬೆದರಿಕೆ ಎದುರಿಸಿದರು. ಈ ಘಟನೆ ಅವರಲ್ಲಿ ಚಳವಳಿಯ ದಿಕ್ಕನ್ನೇ ಬದಲಿಸಿತು. ಇದೇ ಕಾರಣಕ್ಕಾಗಿ ಮುಂದೆ ಅವರು ದೇವಾಲಯ ಪ್ರವೇಶ ಸೇರಿದಂತೆ, ಸಮಾಜದಲ್ಲಿ ಪ್ರತಿಯೊಬ್ಬರೂ ಘನತೆಯಿಂದ ಬದುಕುವುದಕ್ಕಾಗಿ ಬೇಕಾದ ಹಕ್ಕುಗಳಿಗೆ ಸಂವಿಧಾನದ ಮೂಲಕ ಕಾನೂನಿನ ಮಾನ್ಯತೆ ಕಲ್ಪಿಸಿಕೊಟ್ಟರು’ ಎಂದು ನುಡಿದರು.

ಉಪನ್ಯಾಸಕ ಡಾ. ಅಂಕನಹಳ್ಳಿ ಪಾರ್ಥ ಮಾತನಾಡಿ, ‘ಅಂಬೇಡ್ಕರ್ ಅವರ ಮೀಸಲಾತಿ ನೀತಿಯಿಂದ ಕೇವಲ ಪರಿಶಿಷ್ಟರಿಗಷ್ಟೇ ಪ್ರಯೋಜನವಾಗಿಲ್ಲ. ಉಚ್ಛ ಜಾತಿಗಳನ್ನ ಹೊರತುಪಡಿಸಿ ಹಿಂದುಳಿದವರು, ಅಲ್ಪಸಂಖ್ಯಾತರು ಸೇರಿದಂತೆ ಎಲ್ಲರೂ ಮೀಸಲಾತಿ ಫಲವನ್ನು ಅನುಭವಿಸುತ್ತಿದ್ದಾರೆ. ಆದರೆ, ಮೇಲ್ನೋಟಕ್ಕೆ ಪರಿಶಿಷ್ಟರನ್ನು ಮಾತ್ರ ಮೀಸಲಾತಿ ಫಲಾನುಭವಿಗಳು ಎಂದು ಸಮಾಜ ನೋಡುತ್ತಿದೆ. ಇತರ ಸಮುದಾಯದವರು ಸಹ ಮೀಸಲಾತಿ ಕುರಿತು ಎದೆ ತಟ್ಟಿ ಮಾತನಾಡಬೇಕು’ ಎಂದರು.

ಜಾನಪದ ಲೋಕದ ಕ್ಯೂರೇಟರ್ ಡಾ. ರವಿ, ‘ಮಹಿಳಾ ಸಮಾನತೆ, ಆಸ್ತಿ ಹಕ್ಕು, ವಿವಾಹ ವಿಚ್ಛೇದನ, ಮಹಿಳಾ ಸ್ವಾತಂತ್ರ್ಯ, ನೀರಾವರಿ ವ್ಯವಸ್ಥೆ, ಜನಸಂಖ್ಯಾ ನಿಯಂತ್ರಣ ಸೇರಿದಂತೆ ಹಲವು ವಿಷಯ ಮತ್ತು ಕ್ಷೇತ್ರಗಳಲ್ಲಿ ಅಂಬೇಡ್ಕರ್ ನೀಡಿದ ಕೊಡುಗೆ ಅನನ್ಯವಾಗಿದೆ. ಈ ಬಗ್ಗೆ ಹೆಚ್ಚು ಅರಿವು ಮೂಡಿಸಬೇಕಿದೆ’ ಎಂದು ಅಭಿಪ್ರಾಯಪಟ್ಟರು.

ಜನಮುಖಿ ಟ್ರಸ್ಟ್ ಕಾರ್ಯದರ್ಶಿ ಕುಂಬಾಪುರ ವಿ. ಬಾಬು, ಮುಖಂಡರಾದ ಜಾಲಮಂಗಲ ನಾಗರಾಜ್, ಗೋವಿಂದರಾಜ್, ಕೆಂಗಲ್ ಮೂರ್ತಿ, ಅರಸೇಗೌಡ, ಮುಖ್ಯ ಶಿಕ್ಷಕ ಚಂದ್ರು, ಚಲುವರಾಜ್, ಶಿವಪ್ರಕಾಶ್, ಶಿವಶಂಕರ್, ರಾಮಣ್ಣ, ಗುಡ್ಡೆ ವೆಂಕಟೇಶ್ ಹಾಗೂ ಇತರರು ಇದ್ದರು.

ರಾಮನಗರದ ಅರ್ಕಾವತಿ ಬಡಾವಣೆಯ ಎಚ್‌.ಪಿ ಅನಿಲ್ ಸಿಲಿಂಡರ್ ಗೋಡೌನ್ ಬಳಿ ಸಿದ್ದಾರ್ಥ ನಗರದ ಹಿರಿಯ ನಾಗರೀಕರು ಹಾಗೂ ಸ್ಥಳೀಯರು ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಿಸಿದರು
ರಾಮನಗರದ ಅರ್ಕಾವತಿ ಬಡಾವಣೆಯ ಎಚ್‌.ಪಿ ಅನಿಲ್ ಸಿಲಿಂಡರ್ ಗೋಡೌನ್ ಬಳಿ ಸಿದ್ದಾರ್ಥ ನಗರದ ಹಿರಿಯ ನಾಗರೀಕರು ಹಾಗೂ ಸ್ಥಳೀಯರು ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಿಸಿದರು
ರಾಮನಗರ ತಾಲ್ಲೂಕನ ಬನ್ನಿಕುಪ್ಪೆ ಬಿ. ಕ್ಲಸ್ಟರ್ ಕೇಂದ್ರದಲ್ಲಿ ನಡೆದ ಡಾ.ಬಿ. ಆರ್. ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಪುಸ್ತಕಗಳನ್ನು ವಿತರಿಸಲಾಯಿತು. ಸಮೂಹ ಸಂಪನ್ಮೂಲ ವ್ಯಕ್ತಿ ಚಿಕ್ಕವೀರಯ್ಯ ಶಿಕ್ಷಕರಾದ ಬಸವರಾಜು ವೆಂಕಟೇಶಯ್ಯ ಮಂಜುಳಾ ಮಂಗಳ ಗೌರಮ್ಮ ಇದ್ದಾರೆ
ರಾಮನಗರ ತಾಲ್ಲೂಕನ ಬನ್ನಿಕುಪ್ಪೆ ಬಿ. ಕ್ಲಸ್ಟರ್ ಕೇಂದ್ರದಲ್ಲಿ ನಡೆದ ಡಾ.ಬಿ. ಆರ್. ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಪುಸ್ತಕಗಳನ್ನು ವಿತರಿಸಲಾಯಿತು. ಸಮೂಹ ಸಂಪನ್ಮೂಲ ವ್ಯಕ್ತಿ ಚಿಕ್ಕವೀರಯ್ಯ ಶಿಕ್ಷಕರಾದ ಬಸವರಾಜು ವೆಂಕಟೇಶಯ್ಯ ಮಂಜುಳಾ ಮಂಗಳ ಗೌರಮ್ಮ ಇದ್ದಾರೆ
ರಾಮನಗರದ ಎಪಿಎಂಸಿಯಲ್ಲಿ ಡಾ.ಬಿ. ಆರ್. ಅಂಬೇಡ್ಕರ್ ಜಯಂತಿ ಆಚರಿಸಲಾಯಿತು. ಕರ್ನಾಟಕ ಸಮತಾ ಸೈನಿಕ ದಳದ ರಾಮನಗರ ತಾಲ್ಲೂಕು ಅಧ್ಯಕ್ಷ ರಮೇಶ್ ಕೃಷ್ಣ ರೆಡ್ಡಿ ಜಕ್ಕನಹಳ್ಳಿ ಪ್ರತಾಪ್ ಕೆಂಗಲಯ್ಯ ಮಂಡಿ ಚಂದ್ರು ಇದ್ದಾರೆ
ರಾಮನಗರದ ಎಪಿಎಂಸಿಯಲ್ಲಿ ಡಾ.ಬಿ. ಆರ್. ಅಂಬೇಡ್ಕರ್ ಜಯಂತಿ ಆಚರಿಸಲಾಯಿತು. ಕರ್ನಾಟಕ ಸಮತಾ ಸೈನಿಕ ದಳದ ರಾಮನಗರ ತಾಲ್ಲೂಕು ಅಧ್ಯಕ್ಷ ರಮೇಶ್ ಕೃಷ್ಣ ರೆಡ್ಡಿ ಜಕ್ಕನಹಳ್ಳಿ ಪ್ರತಾಪ್ ಕೆಂಗಲಯ್ಯ ಮಂಡಿ ಚಂದ್ರು ಇದ್ದಾರೆ

‘ಅಂಬೇಡ್ಕರ್ ಒಂದು ವರ್ಗಕ್ಕೆ ಸೀಮಿತವಲ್ಲ’

ರಾಮನಗರ: ‘ಸಂವಿಧಾನದ ಮೂಲಕ ಈ ದೇಶದ ಎಲ್ಲಾ ಸಮುದಾಯಗಳಿಗೆ ಘನತೆಯಿಂದ ಬದುಕುವ ಅವಕಾಶ ಕಲ್ಪಿಸಿದ ಅಂಬೇಡ್ಕರ್ ಅವರು ಒಂದು ಜಾತಿ ಅಥವಾ ವರ್ಗಕ್ಕೆ ಸೀಮಿತರಲ್ಲ. ಅವರು ಎಲ್ಲಾ ಜಾತಿ ಧರ್ಮದವರಿಗೂ ನಾಯಕ. ಅವರನ್ನು ಸಂಕುಚಿತ ದೃಷ್ಟಿಯಿಂದ ನೋಡದೆ ವಿಶಾಲ ಹೃದಯದಿಂದ ಅವರ ಕೊಡುಗೆಯನ್ನು ಸ್ಮರಿಸಬೇಕು’ ಎಂದು ಪ್ರಾಧ್ಯಾಪಕ ಶಿವಲಿಂಗಯ್ಯ ಹೇಳಿದರು. ನಗರದ ಅರ್ಕಾವತಿ ಬಡಾವಣೆಯ ಎಚ್‌.ಪಿ ಅನಿಲ್ ಸಿಲಿಂಡರ್ ಗೋಡೌನ್ ಬಳಿ ಸಿದ್ದಾರ್ಥ ನಗರದ ಹಿರಿಯ ನಾಗರೀಕರು ಹಾಗೂ ಸ್ಥಳೀಯರು ಇತ್ತೀಚೆಗೆ ಹಮ್ಮಿಕೊಂಡಿದ್ದ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಹಾಯಕ ಪ್ರಾಧ್ಯಾಪಕ ಪೂರ್ಣಚಂದ್ರ ಅಂಜನಪ್ಪ ಬಸವರಾಜು ಡಾ. ಅಂಕನಳ್ಳಿ ಪಾರ್ಥ ಗಂಗಾಧರ್ ಸಿದ್ದರಾಜು ರಾಮು ಬಿ. ಹಾಗೂ ಇತರರು ಇದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾರ್ವಜನಿಕರಿಗೆ ಸಿಹಿ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT