ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಿಂದುಳಿದವರು, ಪರಿಶಿಷ್ಟರು ರಾಜಕಿಯ ಶಕ್ತಿಯಾಗಬೇಕು: ಶೇಷಾದ್ರಿ

ಕೈವಾರ ತಾತಯ್ಯ ಬಲಿಜ ಸಮುದಾಯ ಸೇವಾ ಸಂಘ ಉದ್ಘಾಟನೆ: ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ
Published 6 ನವೆಂಬರ್ 2023, 6:48 IST
Last Updated 6 ನವೆಂಬರ್ 2023, 6:48 IST
ಅಕ್ಷರ ಗಾತ್ರ

ರಾಮನಗರ: ‘ಯಾವುದೇ ಸಮುದಾಯ ರಾಜಕೀಯವಾಗಿ ಪ್ರಬಲವಾಗಿದ್ದಾಗ ಮಾತ್ರ, ಅದರ ಆರ್ಥಿಕ ಮತ್ತು ಸಾಮಾಜಿಕ ಸ್ಥಾನಮಾನವೂ ಉತ್ತಮವಾಗಿರುತ್ತದೆ. ಆ ನಿಟ್ಟಿನಲ್ಲಿ, ಹಿಂದುಳಿದ ವರ್ಗಗಳು ಮತ್ತು ಪರಿಶಿಷ್ಟ ಸಮುದಾಯದವರು ರಾಜಕೀಯ ಶಕ್ತಿಯಾಗಿ ಬೆಳೆಯಬೇಕು’ ಎಂದು ಬಲಿಜ ಸಮುದಾಯದ ಹಿರಿಯ ಮುಖಂಡ ಹಾಗೂ ನಗರಸಭೆ ಸದಸ್ಯ ಕೆ. ಶೇಷಾದ್ರಿ ಶಶಿ ಹೇಳಿದರು.

ನಗರದ ಬಲಿಜ ಸಮುದಾಯ ಭವನದಲ್ಲಿ ಭಾನುವಾರ ನಡೆದ‌ ಶ್ರೀ ಕೈವಾರ ತಾತಯ್ಯ ಬಲಿಜ ಸಮುದಾಯ ಸೇವಾ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ರಾಮನಗರದಲ್ಲಿ ಪರಿಶಿಷ್ಟ ಸಮುದಾಯದವರು ಸುಮಾರು 60 ಸಾವಿರ ಹಾಗೂ ಹಿಂದುಳಿದ ವರ್ಗದವರು 50 ಸಾವಿರ ಇದ್ದಾರೆ. ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ, ಇವರಿಬ್ಬರ ಋಣದಲ್ಲಿ ಇರುತ್ತಾರೆ. ಹಾಗಾಗಿ, ಇವೆರಡೂ ಸಮುದಾಯಗಳು ರಾಜಕೀಯವಾಗಿ ನಿರ್ಣಾಯಕರಾಗಿ ರೂಪುಗೊಳ್ಳಬೇಕಾದ ಅಗತ್ಯವಿದೆ’ ಎಂದರು.

ನಾಯಕತ್ವ ನೀಡಿದ ಸಮುದಾಯ: ‘ಬಲಿಜ ಸಮುದಾಯವು ಸದಾ ಸಾಮಾಜಿಕ ನ್ಯಾಯದ ಪರವಾಗಿ ನಿಂತಿದೆ. ಶೋಷಿತ ಸಮುದಾಯಗಳಿಗೆ ನಾಯಕತ್ವ ನೀಡುತ್ತಾ ಅವರನ್ನು ಜೊತೆಗೆ ಕರೆದೊಯ್ಯುತ್ತಾ ಬಂದಿದೆ. ಹಿರಿಯರು ಹಾಕಿಕೊಟ್ಟ ಪರಂಪರೆಯನ್ನು ಇಂದಿಗೂ ಮುಂದುವರಿಸಿಕೊಂಡು ಹೋಗುತ್ತಿದ್ದೇವೆ. ಬಲಿಜರಲ್ಲಿ 40 ಉಪ ಪಂಗಡಗಳಿದ್ದು, ಒಬ್ಬರ ಮಾತನ್ನು ಇನ್ನೊಬ್ಬರು ಕೇಳುವುದಿಲ್ಲ. ಆ ಮನೋಭಾವವನ್ನು ಬಿಟ್ಟು ಒಂದಾಗಬೇಕು’ ಎಂದು ಹೇಳಿದರು.

‘ಕಾಲಜ್ಞಾನಿ ಕೈವಾರ ತಾತಯ್ಯ, ವಿಜಯನಗರದ ಅರಸ ಕೃಷ್ಣದೇವರಾಯ, ವೈಚಾರಿಕ ಕ್ರಾಂತಿ ಮಾಡಿದ ರಾಮಸ್ವಾಮಿ ಪೆರಿಯಾರ್ ನಾಯ್ಕರ್, ಶಿಕ್ಷಣದಲ್ಲಿ ಕ್ರಾಂತಿ ಮಾಡಿದ ಸಾವಿತ್ರಿಬಾಯಿ ಪುಲೆ, ಜ್ಯೋತಿಬಾ ಪುಲೆ ಸೇರಿದಂತೆ ಬಲಿಜ ಸಮುದಾಯದ ಹಲವರು ಸಮಾಜಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ’ ಎಂದು ನೆನೆದರು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥ ನಾರಾಯಣಗೌಡ ಮಾತನಾಡಿ, ‘ಸಾಮುದಾಯಿಕ ಪ್ರಜ್ಞೆ ಅತಿ ಮುಖ್ಯ. ಬಲಿಜ ಸಮುದಾಯದ ಕೃಷ್ಣದೇವರಾಯರು ಇನ್ನೂ ಕೆಲ ವರ್ಷ ಆಳ್ವಿಕೆ ನಡೆಸಿದ್ದರೆ, ಉತ್ತರ ಕರ್ನಾಟಕ ಭಾಗ ಸಹ ಮೈಸೂರು ಭಾಗದಂತೆ ಅಭಿವೃದ್ಧಿ ಕಾಣುತ್ತಿತ್ತು. ರಾಜಕಾರಣದಲ್ಲಿ ಜಾತಿ ಮುಖ್ಯ ಪಾತ್ರ ವಹಿಸುತ್ತದೆ. ದೇಶದಲ್ಲಿ ಒಬಿಸಿ ಸಮುದಾಯ ಅತಿ ಹೆಚ್ಚಾಗಿದ್ದು, ರಾಜಕೀಯ ಶಕ್ತಿಯಾಗಬೇಕಿದೆ’ ಎಂದರು.

ಕಾಂಗರೂ ಕೇರ್ ಆಸ್ಪತ್ರೆ ಸಂಸ್ಥಾಪಕ ಡಾ. ಶೇಖರ್ ಸುಬ್ಬಯ್ಯ, ‘ದಕ್ಷಿಣ ಭಾರತದ ರಾಜ್ಯಗಳಲ್ಲಿ ಬಲಿಜ ಸಮುದಾಯವರು ಸುಮಾರು 5 ಕೋಟಿ ಇದ್ದಾರೆ. ಆಂಧ್ರಪ್ರದೇಶದಲ್ಲಿ ಶೇ 27ರಷ್ಟು‌‌ ಇದ್ದೇವೆ. ನಮ್ಮ ಶಕ್ತಿಯನ್ನು ನಾವು ಅರಿತುಕೊಂಡಾಗ ಮಾತ್ರ ಮುಂದೆ ಬರಲು ಸಾಧ್ಯ’ ಎಂದು ಅಭಿಪ್ರಾಯಪಟ್ಟರು.

ಸಮುದಾಯದ ಸಿ.ಎನ್.ಆರ್. ವೆಂಕಟೇಶ್, ಕಿರಣ್, ಉಮೇಶ್ ಮಾತನಾಡಿ, ‘ಸಮುದಾಯವು ಸಂಘಟಿತವಾಗಬೇಕಾದರೆ ಯುವಜನರು ಸಕ್ರಿಯವಾಗಿ ಭಾಗವಹಿಸಬೇಕು. ಸಂಘವು ನಿರ್ದಿಷ್ಟ ಕಾರ್ಯಸೂಚಿಗಳೊಂದಿಗೆ ಕಾರ್ಯ ನಿರ್ವಹಿಸಬೇಕು. ಅದಕ್ಕಾಗಿ, ಪ್ರತಿ ವರ್ಷ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಸಮುದಾಯದವರು ಭೂಮಿಯನ್ನು ಮಾರಾಟ ಮಾಡದೆ, ತಮ್ಮಲ್ಲೇ ಉಳಿಸಿಕೊಳ್ಳಬೇಕು’ ಎಂದರು.

ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಗಣ್ಯರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.

ನಗರಸಭೆ ಅಧ್ಯಕ್ಷೆ ವಿಜಯಕುಮಾರಿ, ಉಪಾಧ್ಯಕ್ಷ ಸಿ. ಸೋಮಶೇಖರ್, ಸದಸ್ಯೆ ಮಂಜುಳಾ ವೆಂಕಟೇಶ್, ಜೆಡಿಎಸ್ ರಾಮನಗರ ತಾಲ್ಲೂಕು ಅಧ್ಯಕ್ಷ ರಾಜಶೇಖರ್, ಸಂಘದ ಗೌರವಾಧ್ಯಕ್ಷ ಎಂ. ರಾಮಚಂದ್ರ, ಅಧ್ಯಕ್ಷ ಹನುಮಯ್ಯ, ಉಪಾಧ್ಯಕ್ಷ ಆರ್.ಕೆ. ಮೋಹನ್‌ರಾಮ್ ಮನ್ನಾರ್, ಪ್ರಧಾನ ಕಾರ್ಯದರ್ಶಿ ಅನಂತ ಪದ್ಮನಾಭ, ಖಜಾಂಚಿ ಪುಟ್ಟರಾಜು ಟಿ, ಸಹ ಕಾರ್ಯದರ್ಶಿ ಶಮಂತ ಆರ್‌.ಎಂ, ನಿರ್ದೇಶಕರು, ಸಮುದಾಯದ ಕೆಂಗೇರಿ ನರಸಿಂಹಯ್ಯ , ಬಿಜೆಪಿ ಮುಖಂಡ ಶಿವಾನಂದ ಇದ್ದರು.

Highlights - ರಾಜಕೀಯವಾಗಿ ನಿರ್ಣಾಯಕರಾಗಿ ರೂಪುಗೊಳ್ಳಬೇಕು ದಕ್ಷಿಣ ಭಾರತದಲ್ಲಿ 5 ಕೋಟಿ ಇರುವ ಬಲಿಜ ಸಮುದಾಯ ನಿರ್ದಿಷ್ಟ ಕಾರ್ಯಸೂಚಿಯೊಂದಿಗೆ ಸಂಘ ಕೆಲಸ ಮಾಡಲಿ

Cut-off box - ‘ವರದಿ ಹಿಂದೆ ಜಾತಿ ಸಮೀಕರಣದ ಹುನ್ನಾರ’ ‘ಕಾಂತರಾಜು ಆಯೋಗವು ರಾಜ್ಯದಲ್ಲಿ ನಡೆಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿ ಕುರಿತು ಗಂಭೀರವಾಗಿ ಯೋಚಿಸಬೇಕು. ಸಮುದಾಯಗಳ ಸ್ಥಿತಿಗತಿ ಕುರಿತಾದ ಈ ವರದಿಯನ್ನು ಜಾತಿ ಸಮೀಕರಣವಾಗಿ ಪರಿವರ್ತಿಸುವ ಹುನ್ನಾರ ನಡೆಯುತ್ತಿದೆ. ಪ್ರಬಲ ಜಾತಿಗಳ ಪರವಾಗಿ ವರದಿಯನ್ನು ಬಳಸುವ ಪ್ರಯತ್ನ ನಡೆಯುತ್ತಿದೆ. ಹಿಂದುಳಿದ ಸಮುದಾಯದವರು ಸಾಮಾಜಿಕ ಮತ್ತು ಆರ್ಥಿಕವಾಗಿ ಬೆಳೆಯುವ ಜೊತೆಗೆ ರಾಜಕೀಯ ಶಕ್ತಿಯನ್ನು ಸಹ ಗಳಿಸಬೇಕು’ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥ ನಾರಾಯಣಗೌಡ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT