ರಾಮನಗರ: ಜಿಲ್ಲೆಯ ಪ್ರಮುಖ ಕೈಗಾರಿಕಾ ಪ್ರದೇಶ ನೆಲೆಸಿರುವ ಬಿಡದಿಯನ್ನು ಗ್ರೇಟರ್ ಬೆಂಗಳೂರು-ಬಿಡದಿ ಸ್ಮಾರ್ಟ್‌ಸಿಟಿ ಯೋಜನೆ(ಜಿಬಿಡಿಎ) ಎಂದು ಘೋಷಿಸಿ ನಗರಾಭಿವೃದ್ಧಿ ಇಲಾಖೆ ಇತ್ತೀಚೆಗೆ ಆದೇಶ ಹೊರಡಿಸಿದೆ.
ಹಿಂದೆ ಇದ್ದ ಬಿಡದಿ ಸ್ಮಾರ್ಟ್ ಸಿಟಿ ಯೋಜನಾ ಪ್ರಾಧಿಕಾರದ ಹೆಸರನ್ನು ಬದಲಾಯಿಸಿ, ನ. 18ರಂದು ಆದೇಶ ಹೊರಡಿಸಲಾಗಿದೆ. ಬಿಡದಿ ಸ್ಮಾರ್ಟ್‌ಸಿಟಿ ಯೋಜನೆಯನ್ನು ಗ್ರೇಟರ್ ಬೆಂಗಳೂರು ಯೋಜನೆ ಎಂದು ಘೋಷಿಸುವುದಾಗಿ, ಇತ್ತೀಚೆಗೆ ಟೊಯೊಟೊ ಕಂಪನಿ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇತ್ತೀಚೆಗೆ ಘೋಷಿಸಿದ್ದ ಬೆನ್ನಲ್ಲೇ ಈ ಆದೇಶ ಹೊರಬಿದ್ದಿದೆ.
ಬಿಎಂಆರ್‌ಡಿಎ ಆಯುಕ್ತರನ್ನು ಜಿಬಿಡಿಎ ಮುಖ್ಯಸ್ಥರನ್ನಾಗಿ ಮತ್ತು ಬಿಎಂಆರ್‌ಡಿಎ ಯೋಜನಾ ನಿರ್ದೇಶಕರನ್ನು ಸದಸ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.
ಸರ್ಕಾರ 2006ರಲ್ಲಿ ಬಿಡದಿ ಸ್ಮಾರ್ಟ್ ಸಿಟಿ ಯೋಜನೆ ರೂಪಿಸಿತ್ತು. ಹೋಬಳಿಯ 29 ಗ್ರಾಮಗಳ 10 ಸಾವಿರ ಎಕರೆಯನ್ನು ಸ್ವಾಧೀನಪಡಿಸಿಕೊಂಡು, ಸ್ಮಾರ್ಟ್‌ಸಿಟಿ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿತ್ತು.