ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಮನಗರ | ಉಪನ್ಯಾಸಕನಿಗೆ ಜಾತಿ ನಿಂದನೆ, ಕೊಲೆ ಯತ್ನ

Published 5 ಮಾರ್ಚ್ 2024, 5:35 IST
Last Updated 5 ಮಾರ್ಚ್ 2024, 5:35 IST
ಅಕ್ಷರ ಗಾತ್ರ

ರಾಮನಗರ: ತಮ್ಮ ಜಮೀನಿನಲ್ಲಿ ಕೆಲಸ ಮಾಡಲು ಅಡ್ಡಿಪಡಿಸಿ ತೊಂದರೆ ನೀಡಿದ್ದವರ ವಿರುದ್ಧ ಪೊಲೀಸ್ ಠಾಣೆಗೆ ದೂರು ಕೊಟ್ಟ ಹಿನ್ನೆಲೆಯಲ್ಲಿ, ಒಕ್ಕಲಿಗ ಸಮುದಾಯದವರು ಭೋವಿ ಸಮುದಾಯಕ್ಕೆ ಸೇರಿದ ಉಪನ್ಯಾಸಕನಿಗೆ ಜಾತಿ ನಿಂದನೆ ಮಾಡಿ ಕೊಲೆಗೆ ಯತ್ನಿಸಿರುವ ಘಟನೆ ತಾಲ್ಲೂಕಿನ ಚನ್ನೇಗೌಡನದೊಡ್ಡಿಯಲ್ಲಿ ನಡೆದಿದೆ.

ಕೋಲಮಾರನಕುಪ್ಪೆಯ ಭೋವಿ ಸಮುದಾಯದ ಕುಮಾರಸ್ವಾಮಿ ಹಲ್ಲೆಗೊಳಗಾದವರು. ಆರೋಪಿಗಳಾದ ಗ್ರಾಮದ ರವಿಕುಮಾರ್, ಶಿವಲಿಂಗಯ್ಯ, ಯಲವಯ್ಯ, ತಗಡಯ್ಯ, ಮುತ್ತುರಾಜು, ರಾಜೇಶ್, ಅರುಣ್‌ಕುಮಾರ್, ಮಹೇಶ್, ಲಕ್ಷ್ಮಮ್ಮ, ಮಂಗಳಗೌರಮ್ಮ ಹಾಗೂ ಸಾವಿತ್ರಮ್ಮ ಸೇರಿ 11 ಮಂದಿ ವಿರುದ್ಧ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಾಗಿದೆ.

ತಮ್ಮ ಜಮೀನಿನಲ್ಲಿ ಕೆಲಸ ಮಾಡಲು ರವಿಕುಮಾರ್ ಮತ್ತು ಕುಟುಂಬದವರು ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿ, ಹಲ್ಲೆಗೊಳಗಾಗಿರುವ ಕುಮಾರಸ್ವಾಮಿ ಅವರ ತಾಯಿ ಠಾಣೆಗೆ ಮಾರ್ಚ್ 3ರಂದು ದೂರು ಕೊಟ್ಟಿದ್ದರು. ಇದನ್ನೇ ಮನಸ್ಸಿನಲ್ಲಿಟ್ಟುಕೊಂಡಿದ್ದ ಆರೋಪಿಗಳು ಅಂದು ರಾತ್ರಿ 8ರ ಸುಮಾರಿಗೆ ಚನ್ನೇಗೌಡನದೊಡ್ಡಿ ಬಸ್ ನಿಲ್ದಾಣದ ಬಳಿ ಕುಮಾರಸ್ವಾಮಿ ಅವರನ್ನು ಅಡ್ಡಗಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದರು.

‘ನಮ್ಮ ಮೇಲೆ ದೂರು ಕೊಡಿಸುತ್ತೀಯಾ’ ಎಂದು ಜಾತಿ ಹೆಸರಿನಲ್ಲಿ ಅಶ್ಲೀಲವಾಗಿ ನಿಂದಿಸಿ ದೊಣ್ಣೆ, ಕಲ್ಲುಗಳಿಂದ ಮುಖ, ತಲೆ ಹಾಗೂ ದೇಹದ ಇತರ ಭಾಗಗಳಿಗೆ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದಾರೆ. ಇದೇ ಸಂದರ್ಭದಲ್ಲಿ ದೂರಿನ ಪರಿಶೀಲನೆಗಾಗಿ ಗ್ರಾಮಕ್ಕೆ ‌ಬಂದ ಪೊಲೀಸ್ ಸಿಬ್ಬಂದಿ ಕುಮಾರಸ್ವಾಮಿ ಅವರನ್ನು ರಕ್ಷಿಸಿದ್ದಾರೆ. ನಂತರ, ಜಿಲ್ಲಾಸ್ಪತ್ರೆಗೆ ದಾಖಲಾದ ಅವರು ಮಾರನೆಯ ದಿನ ಠಾಣೆಗೆ ಬಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಹೇಳಿದರು.

ಬಂಧನ: ‘ಕುಮಾರಸ್ವಾಮಿ ಅವರ ತಾಯಿ ನೀಡಿದ ದೂರಿನ ಪರಿಶೀಲನೆಗೆ ಸಿಬ್ಬಂದಿ ಹೋಗಿದ್ದಾಗಲೇ, ಆರೋಪಿಗಳು ಹಲ್ಲೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕೆಲ ಆರೋಪಿಗಳನ್ನು ಬಂಧಿಸಲಾಗಿದೆ. ಉಳಿದವರ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ’ ಎಂದು ರಾಮನಗರ ಗ್ರಾಮಾಂತರ ಠಾಣೆ ಇನ್‌ಸ್ಪೆಕ್ಟರ್ ರಮೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT