ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಬಡವರನ್ನು ಕಡೆಗಣಿಸಿದ ಬಿಜೆಪಿ’

ಕಾಂಗ್ರೆಸ್ ಬೆಂಬಲಿಸಲು ದಲಿತಪರ ಸಂಘಟನೆಗಳ ನಿರ್ಧಾರ
Published 4 ಏಪ್ರಿಲ್ 2024, 7:38 IST
Last Updated 4 ಏಪ್ರಿಲ್ 2024, 7:38 IST
ಅಕ್ಷರ ಗಾತ್ರ

ಚನ್ನಪಟ್ಟಣ: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಅವರನ್ನು ಬೆಂಬಲಿಸಲು ತೀರ್ಮಾನಿಸಲಾಗಿದೆ ಎಂದು ತಾಲ್ಲೂಕು ದಲಿತಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ತಿಳಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಪದಾಧಿಕಾರಿಗಳಾದ ಪಿ.ಜೆ.ಗೋವಿಂದರಾಜು, ಮತ್ತೀಕೆರೆ ಹನುಮಂತಯ್ಯ, ಕೂಡ್ಲೂರು ರವಿಕುಮಾರ್, ಅಪ್ಪಗೆರೆ ರವಿ, ಬಿವಿಎಸ್ ಕುಮಾರ್ ಇತರರು ಈ ವಿಷಯ ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ದೇಶವನ್ನು ಸರ್ವನಾಶ ಮಾಡಲು ಹೊರಟಿದೆ. ಸಂವಿಧಾನಾತ್ಮಕವಾಗಿ ಆಡಳಿತ ಮಾಡುತ್ತಿಲ್ಲ. ಬಡವರು, ದೀನ ದಲಿತ ವರ್ಗವನ್ನು ಕಡೆಗಣಿಸಿದೆ. ಚುನಾವಣೆ ವೇಳೆ ನೀಡಿದ್ದ ಆಶ್ವಾಸನೆಗಳಲ್ಲಿ ಯಾವುದನ್ನೂ ಈಡೇರಿಸಿಲ್ಲ. ಕಪ್ಪುಹಣವನ್ನು ತಂದು ದೇಶದ ಬಡವರ ಖಾತೆಗೆ ಹಾಕುವ ಅವರ ಭರವಸೆ ಇದುವರೆಗೂ ಈಡೇರಿಲ್ಲ. ಶ್ರೀಮಂತರ ಓಲೈಕೆ ಮಾಡುತ್ತಾ ಅವರ ಸಾಲಮನ್ನಾ ಮಾಡಿ ಬಡವರನ್ನು ಕಡೆಗಣಿಸಲಾಗುತ್ತಿದೆ. ಸಂವಿಧಾನ ಬದ್ಧ ಸರ್ಕಾರ ರಚನೆಗಾಗಿ ಈ ಬಾರಿ ದಲಿತ ಸಮುದಾಯ ಕಾಂಗ್ರೆಸ್ ಅನ್ನು ಬೆಂಬಲಿಸುವ ನಿರ್ಧಾರ ಮಾಡಿದೆ ಎಂದರು.

ಬಿಜೆಪಿ ಸರ್ಕಾರದ ಸಂಸದರು, ಮಂತ್ರಿಗಳು ಪದೇ ಪದೇ ಸಂವಿಧಾನ ಬದಲಾಯಿಸುವ ಮಾತು ಆಡುತ್ತಿದ್ದಾರೆ. ಇದಕ್ಕಾಗಿ 400 ಸ್ಥಾನಗಳನ್ನು ಗೆಲ್ಲಿಸಿ ಎಂದು ದೇಶದೆಲ್ಲೆಡೆ ಪ್ರಚಾರ ಮಾಡುತ್ತಿದೆ. ದೇಶದ ಪ್ರತಿಯೊಂದು ವರ್ಗಕ್ಕೂ ನ್ಯಾಯ ಒದಗಿಸಿದ ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವನ್ನು ಬದಲಾಯಿಸಿ ದೇಶವನ್ನು ಅಧಃಪತ್ತನದತ್ತ ನೂಕಲು ಮುಂದಾಗಿರುವ ಬಿಜೆಪಿಯನ್ನು ಸೋಲಿಸುವುದು ಉದ್ದೇಶವಾಗಿದೆ ಎಂದರು.

ಮುಖಂಡರಾದ ನೀಲಸಂದ್ರ ಸಿದ್ದರಾಮು, ಚಕ್ಕೆರೆ ಲೋಕೇಶ್, ಅಪ್ಪಗೆರೆ ಶ್ರೀನಿವಾಸಮೂರ್ತಿ, ಅರುಣ್ ಕುಮಾರ್, ಮೈಲನಾಯಕನಹಳ್ಳಿ ಕೃಷ್ಣಯ್ಯ, ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT