ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೈತ್ರಿ ವಿರೋಧಿಸಿ ಕಾಂಗ್ರೆಸ್ ಸೇರ್ಪಡೆ

ಚನ್ನಪಟ್ಟಣ ನಗರಸಭೆ ಅಧ್ಯಕ್ಷ ಪಿ.ಪ್ರಶಾಂತ್
Published 6 ಏಪ್ರಿಲ್ 2024, 6:04 IST
Last Updated 6 ಏಪ್ರಿಲ್ 2024, 6:04 IST
ಅಕ್ಷರ ಗಾತ್ರ

ಚನ್ನಪಟ್ಟಣ: ‘ಜೆಡಿಎಸ್ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವುದನ್ನು ವಿರೋಧಿಸಿ ನಾವು ಒಂಬತ್ತು ಮಂದಿ ನಗರಸಭೆ ಜೆಡಿಎಸ್ ಸದಸ್ಯರು ಕಾಂಗ್ರೆಸ್ ಸೇರ್ಪಡೆಯಾಗಿದ್ದೇವೆ’ ಎಂದು ನಗರಸಭೆ ಅಧ್ಯಕ್ಷ ಪಿ.ಪ್ರಶಾಂತ್ ತಿಳಿಸಿದರು.

ನಗರದ ತಾಲ್ಲೂಕು ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಶುಕ್ರವಾರ ಕಾಂಗ್ರೆಸ್ ಸೇರ್ಪಡೆಯಾದ ಇತರ 8 ಮಂದಿ ಸದಸ್ಯರ ಜೊತೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ‘ಕಳೆದ ವಿಧಾನಸಭಾ ಚುನಾವಣೆ ವೇಳೆ ಬಿಜೆಪಿ ವಿರುದ್ಧ ನಾವು ಕೆಲಸ ಮಾಡಿದ್ದೇವೆ. ಈ ಚುನಾವಣೆಯಲ್ಲಿ ಬಿಜೆಪಿ ಜೊತೆ ಕೆಲಸ ಮಾಡಲು ಇಷ್ಟವಾಗುತ್ತಿಲ್ಲ’ ಎಂದರು.

‘ನಾವು ಎಲ್ಲ ವರ್ಗಗಳ ಜನರ ಮತ ಪಡೆದು ಆಯ್ಕೆಯಾಗಿದ್ದೇವೆ. ನಮ್ಮ ವಾರ್ಡ್‌ಗಳಲ್ಲಿ ಹಿಂದು–ಮುಸ್ಲಿಂ ಮತ ಪಡೆದಿದ್ದೇವೆ. ಇಲ್ಲಿ ಯಾರನ್ನೂ ಕಡೆಗಣಿಸುವ ಮಾತೇ ಇಲ್ಲ. ನಮ್ಮ ವಾರ್ಡ್‌ಗಳ ಜನರ ಅಭಿಪ್ರಾಯಗಳನ್ನು ಸಂಗ್ರಹಿಸಿ ಆನಂತರವೇ ಕಾಂಗ್ರೆಸ್ ಸೇರಿದ್ದೇವೆ. ನಮ್ಮ ವಾರ್ಡ್‌ ಅಭಿವೃದ್ಧಿಯೇ ನಮ್ಮ ಗುರಿ’ ಎಂದು ಹೇಳಿದರು.

ಹುದ್ದೆಗೆ ರಾಜೀನಾಮೆ ನೀಡುತ್ತೀರಾ ಎಂದು ಪ್ರಶ್ನೆಗೆ ಉತ್ತರಿಸಿದ ಪ್ರಶಾಂತ್, ‘ರಾಜೀನಾಮೆ ನೀಡುವ ಪ್ರಶ್ನೆ ಬರುವುದಿಲ್ಲ. ನಮ್ಮ ಅವಧಿ ಇನ್ನೂ ಎರಡೂವರೆ ವರ್ಷ ಇದೆ. ನಮ್ಮನ್ನು ಆರಿಸಿ ಕಳಿಸಿರುವುದು ನಮ್ಮ ವಾರ್ಡ್‌ಗಳ ಜನತೆ. ಅವರ ಅಭಿಪ್ರಾಯ ಕೇಳಿ ಕಾಂಗ್ರೆಸ್ ಸೇರಿದ್ದೇವೆ. ಜನರ ಸೇವೆ ಮಾಡುವ ಉದ್ದೇಶದಿಂದ ಕಾಂಗ್ರೆಸ್ ಗೆ ಬಂದಿದ್ದೇವೆ’ ಎಂದು ತಿಳಿಸಿದರು.

ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಗಂಗಾಧರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಮೋದ್, ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ ನಗರಸಭೆ ಸದಸ್ಯರಾದ ಪ್ರಶಾಂತ್, ಎಂ.ಜೆ. ರೇವಣ್ಣ, ಸತೀಶ್ ಬಾಬು, ಶ್ರೀನಿವಾಸ್ ಮೂರ್ತಿ, ನಾಗೇಶ್, ಸಿ.ಜೆ. ಲೋಕೇಶ್, ಸಯ್ಯದ್ ರಫೀಕ್, ಅಭಿದಾ ಬಾನು, ಭಾನುಪ್ರಿಯ ಹಾಗೂ ಪಕ್ಷೇತರ ಸದಸ್ಯೆ ಉಮಾ, ತಾಲ್ಲೂಕು ಕಾಂಗ್ರೆಸ್ ಪದಾಧಿಕಾರಿಗಳು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT