ಶನಿವಾರ, ಸೆಪ್ಟೆಂಬರ್ 19, 2020
21 °C
ಹೊಲ ಹದ ಮಾಡದ ರೈತರು: ವಿಮೆ ಮಾಡಿಸಲೂ ನಿರಾಸಕ್ತಿ

ಮುನಿದ ಮುಂಗಾರು: ಬಾಡಿದ ಬೆಳೆ

ಆರ್‌.ಜಿತೇಂದ್ರ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಕಳೆದೊಂದು ವಾರದಲ್ಲಿ ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ 88ರಷ್ಟು ಮಳೆ ಕೊರತೆಯಾಗಿದ್ದು, ಬಿತ್ತನೆಯಾದ ಅಲ್ಪಸ್ವಲ್ಪ ಬೆಳೆಯೂ ಹಾಳಾಗುತ್ತಿದೆ.

ಜಿಲ್ಲೆಗೆ ಈ ಬಾರಿಯ ಮುಂಗಾರು ಫಲಪ್ರದವಾಗಿಲ್ಲ. ವಾಡಿಕೆಯ ಅರ್ಧದಷ್ಟೂ ಮಳೆಯಾಗದ ಕಾರಣ ಬಿತ್ತನೆ ಕಾರ್ಯಕ್ಕೆ ತೀವ್ರ ಹಿನ್ನಡೆಯಾಗಿದೆ. ಈ ಬಾರಿ ಪೂರ್ವ ಮುಂಗಾರಿನಲ್ಲಿ ಮಾಗಡಿ, ರಾಮನಗರ ತಾಲ್ಲೂಕಿನಲ್ಲಿ ತೊಗರಿ, ಅಲಸಂದೆ, ಅವರೆ, ಕನಕಪುರ ಹಾಗೂ ಚನ್ನಪಟ್ಟಣ ತಾಲ್ಲೂಕಿನಲ್ಲಿ ಎಳ್ಳನ್ನು ರೈತರು ಬಿತ್ತನೆ ಮಾಡಿದ್ದರು. ಕೆಲವು ಕಡೆ ಜೋಳವನ್ನೂ ಚೆಲ್ಲಲಾಗಿತ್ತು. ಆದರೆ ಬಹುತೇಕ ಕಡೆ ಬೆಳೆ ಈಗಾಗಲೇ ಒಣಗಿಹೋಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಪೂರ್ವ ಮುಂಗಾರಿನ ಬಿತ್ತನೆ ಪ್ರಮಾಣವೇ ಕಡಿಮೆ ಇದೆ.

ಜಿಲ್ಲೆಯಲ್ಲಿ ಜೂನ್‌ನಿಂದ ಈವರೆಗೆ 69 ಮಿ.ಮೀ. ವಾಡಿಕೆ ಮಳೆಗೆ ಪ್ರತಿಯಾಗಿ 66 ಮಿ.ಮೀ. ಮಳೆಯಾಗಿದೆ. ಆದರೆ ಇದರಲ್ಲಿ ಜೂನ್‌ನ ಆರಂಭದಲ್ಲಿ ಸುರಿದ ಪೂರ್ವ ಮುಂಗಾರಿನ ಪ್ರಮಾಣವೇ ಹೆಚ್ಚಾಗಿದೆ. ಇದುವರೆಗೂ ಜಿಲ್ಲೆಯಲ್ಲಿ ಮುಂಗಾರಿನ ಒಂದು ಹದ ಮಳೆಯಾಗಿಲ್ಲ. ಇದರಿಂದಾಗಿ ರೈತರು ಭೂಮಿಯ ಉಳುಮೆ ಕಾರ್ಯವನ್ನೇ ನಿಲ್ಲಿಸಿದ್ದಾರೆ. ಬೀಜ, ರಸಗೊಬ್ಬರದ ದಾಸ್ತಾನು ಹಾಗೆಯೇ ಉಳಿದಿದೆ.

‘ಜಿಲ್ಲೆಯ ನಾಲ್ಕೂ ತಾಲ್ಲೂಕಿನಲ್ಲಿಯೂ ಸದ್ಯ ಮಳೆಯ ಕೊರತೆ ಇದೆ. ಹೀಗಾಗಿ ಬಹುತೇಕ ಭೂಮಿ ಉಳುಮೆ ಆಗಿಲ್ಲ. ಇದೇ 12ರಿಂದ ಮತ್ತೆ ಮುಂಗಾರು ಚುರುಕು ಪಡೆಯುವ ನಿರೀಕ್ಷೆ ಇದೆ. ಹಾಗಾದಲ್ಲಿ ಮುಂಗಾರು ಬಿತ್ತನೆಗೆ ಯಾವುದೇ ಅಡ್ಡಿ ಆತಂಕವಿಲ್ಲ. ಜಿಲ್ಲೆಯಲ್ಲಿ ರಾಗಿ ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆ ಆಗಲಿದ್ದು, ಜುಲೈ ಮೂರನೇ ವಾರದಿಂದ ಬಿತ್ತನೆ ಕಾರ್ಯ ನಡೆಯಲಿದೆ. ಅಷ್ಟರ ಹೊತ್ತಿಗೆ ಉತ್ತಮ ಮಳೆ ಆಗುವ ನಿರೀಕ್ಷೆ ಇದೆ’ ಎನ್ನುತ್ತಾರೆ ಕೃಷಿ ಇಲಾಖೆಯ ಉಪ ನಿರ್ದೇಶಕ ಅಶೋಕ್.

ವಿಮೆ ಪ್ರಮಾಣವೂ ಕಡಿಮೆ: ಮಳೆಯ ತೀವ್ರ ಕೊರತೆ ಇದ್ದಾಗ್ಯೂ ಜಿಲ್ಲೆಯಲ್ಲಿ ರೈತರು ಪ್ರಧಾನಮಂತ್ರಿ ಕಿಸಾನ್‌ ಭಿಮಾ ಯೋಜನೆಗೆ ಅಷ್ಟು ಆಸಕ್ತಿ ತೋರಿಲ್ಲ.

ಕನಕಪುರ ಹಾಗೂ ಚನ್ನಪಟ್ಟಣ ತಾಲ್ಲೂಕಿನಲ್ಲಿ ಎಳ್ಳು ಬಿತ್ತನೆಯಾಗಿದ್ದು, ಈ ಎರಡೂ ಕಡೆ ಶೇ 50ಕ್ಕಿಂತ ಹೆಚ್ಚು ಮಳೆ ಕೊರತೆ ಇದೆ. ಎಳ್ಳು ಬೆಳೆಯ ವಿಮೆ ಮಾಡಿಸಲು ಇದೇ 15ವರೆಗೂ ಕಾಲಾವಕಾಶ ಇದೆ. ಒಂದೊಮ್ಮೆ ಈ ಎರಡೂ ತಾಲ್ಲೂಕು ಬರಪೀಡಿತ ಎಂದು ಘೋಷಣೆ ಆದಲ್ಲಿ ರೈತರಿಗೆ ವಿಮೆ ಪರಿಹಾರ ಸಿಗುವ ಸಾಧ್ಯತೆ ಇದೆ. ಉಳಿದ ಬೆಳೆಗಳಿಗೂ ವಿಮೆ ಮಾಡಿಸಲು ಇದೇ 31ರವರೆಗೆ ಕಾಲಾವಕಾಶ ಇದೆ. ರಾಗಿ ಬೆಳೆಗೆ ಆಗಸ್ಟ್‌ ವರೆಗೂ ರೈತರು ವಿಮೆ ಅರ್ಜಿ ಸಲ್ಲಿಸಬಹುದಾಗಿದೆ.

‘ತೀವ್ರ ಬರಗಾಲದ ಸಂದರ್ಭದಲ್ಲಿ ವಿಮೆಗಳು ರೈತರ ಕೈ ಹಿಡಿಯುವಂತಾಗಬೇಕು. ಈಗ ಸದ್ಯ ಗ್ರಾ.ಪಂ. ಮಟ್ಟದಲ್ಲಿ ಬೆಳೆ ನಷ್ಟ ಆಧರಿಸಿ ವಿಮೆ ಪರಿಹಾರ ನೀಡಲಾಗುತ್ತಿದೆ. ಇದರಿಂದ ರೈತರಿಗೆ ಹೆಚ್ಚು ಅನುಕೂಲ ಆಗುತ್ತಿಲ್ಲ. ಹೀಗಾಗಿ ಪ್ರತಿ ರೈತನ ಹೊಲದಲ್ಲಿ ಆದ ನಷ್ಟ ಆಧರಿಸಿ ವಿಮೆ ನೀಡುವ ನೀತಿ ಜಾರಿಗೆ ಬರಬೇಕು’ ಎನ್ನುತ್ತಾರೆ ರೈತ ಮುಖಂಡ ಸಿ. ಪುಟ್ಟಸ್ವಾಮಿ.

ಅಂಕಿ–ಅಂಶ

3723 ಹೆಕ್ಟೇರ್‌–ಕಳೆದ ವರ್ಷದ ಪೂರ್ವಮುಂಗಾರು ಬಿತ್ತನೆ ಪ್ರಮಾಣ
2478–ಈ ವರ್ಷದ ಪೂರ್ವ ಮುಂಗಾರು ಬಿತ್ತನೆ ಪ್ರಮಾಣ

258 ಮಿ.ಮೀ–ಜನವರಿಯಿಂದ ಜುಲೈ 4ವರೆಗಿನ ವಾಡಿಕೆ ಮಳೆ ಪ್ರಮಾಣ
216 ಮಿ.ಮೀ–ವಾಸ್ತವ ಮಳೆ ಪ್ರಮಾಣ
–16 : ಮಳೆ ಕೊರತೆಯ ಪ್ರಮಾಣ

ತಾಲ್ಲೂಕುವಾರು ಮಳೆ ಪ್ರಮಾಣ (ಜೂನ್‌ 1ರಿಂದ ಜುಲೈ 4ವರೆಗೆ–ಮಿಲಿಮೀಟರ್‌ಗಳಲ್ಲಿ)
ತಾಲ್ಲೂಕು ವಾಡಿಕೆ ವಾಸ್ತವ ಕೊರತೆ/ಹೆಚ್ಚುವರಿ(ಶೇಕಡವಾರು)
ಚನ್ನಪಟ್ಟಣ 77 65 –16
ಕನಕಪುರ 68 36 –47
ಮಾಗಡಿ 84 127 51
ರಾಮನಗರ 82 87 7
(ಆಧಾರ: ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ)

ಇದೇ ತಿಂಗಳ 12ರ ಬಳಿಕ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ. ಹಾಗಾದಲ್ಲಿ ಮಾತ್ರ ಮುಂಗಾರು ಬಿತ್ತನೆ ಕಾರ್ಯ ಚುರುಕಾಗಲಿದೆ.
-ಅಶೋಕ್‌
ಉಪನಿರ್ದೇಶಕ, ಕೃಷಿ ಇಲಾಖೆ

ವಾಹನಗಳಿಗೆ ನೀಡುವಂತೆ ರೈತರ ಬೆಳೆಗೂ ವೈಯಕ್ತಿಕ ವಿಮೆ ಪದ್ಧತಿ ಜಾರಿಗೆ ತರಬೇಕು. ಆಗ ಮಾತ್ರ ವಿಮೆಯಿಂದ ರೈತರಿಗೆ ಅನುಕೂಲ ಆಗುತ್ತದೆ
-ಸಿ. ಪುಟ್ಟಸ್ವಾಮಿ
ರೈತ ಮುಖಂಡ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.