ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ | ಕಸದ ತಾಣವಾದ ಖಾಲಿ ನಿವೇಶನ: ಕಣ್ಮುಚ್ಚಿ ಕುಳಿತ ನಗರಸಭೆ

Published 25 ಮಾರ್ಚ್ 2024, 6:32 IST
Last Updated 25 ಮಾರ್ಚ್ 2024, 6:32 IST
ಅಕ್ಷರ ಗಾತ್ರ

ರಾಮನಗರ: ನಗರದಲ್ಲಿರುವ ಖಾಲಿ ನಿವೇಶನಗಳು ಕಸದ ತಾಣಗಳಾಗಿವೆ. ಪ್ಲಾಸ್ಟಿಕ್, ತರಕಾರಿ, ಬಾಕ್ಸ್‌ಗಳು ಸೇರಿದಂತೆ ವಿವಿಧ ರೀತಿಯ ಕಸಗಳಿಂದ ತುಂಬಿರುವ ನಿವೇಶನಗಳು ಒಂದು ರೀತಿಯಲ್ಲಿ ಕಸದ ತಿಪ್ಪೆಗಳಾಗಿ ಮಾರ್ಪಟ್ಟಿವೆ. ಹೊತ್ತಿಲ್ಲದ ಹೊತ್ತಲ್ಲಿ ಗೊತ್ತಾಗದಂತೆ ಪ್ಲಾಸ್ಟಿಕ್‌ನಲ್ಲಿ ತಂದು ಕಸ ಎಸೆಯುವವರಿಂದಾಗಿ ವಿವಿಧ ಸಮಸ್ಯೆಗಳು ಸೃಷ್ಟಿಯಾಗಿವೆ.

ಅರ್ಕಾವತಿ ಬಡಾವಣೆ, ವಿವೇಕಾನಂದ ನಗರ, ಐಜೂರು, ದ್ಯಾವರಸೇಗೌಡನದೊಡ್ಡಿ ರಸ್ತೆ, ಬಾಲಗೇರಿ, ರಾಯರದೊಡ್ಡಿ, ಕೆಂಪೇಗೌಡನ ದೊಡ್ಡಿ, ಅಂಬೇಡ್ಕರ್ ನಗರ, ಹುಣಸನಹಳ್ಳಿ ಸೇರಿದಂತೆ ನಗರದ ಯಾವುದೇ ಜನನಿಬಿಡ ಬಡಾವಣೆಗಳಲ್ಲಿರುವ ಖಾಲಿ ನಿವೇಶನಗಳು ಬಹುತೇಕ ಕಸದ ಸ್ಥಳಗಳಾಗಿವೆ. ನಗರಸಭೆಯವರು ಕಸ ತೆಗೆದರೂ, ಮಾರನೇಯ ದಿನ ಮತ್ತೆ ಅಲ್ಲೊಂದು ತಿಪ್ಪೆ ಎದ್ದು ಕುಳಿತಿರುತ್ತದೆ.

ಹಂದಿ, ನಾಯಿ ಹಾವಳಿ: ಖಾಲಿ ನಿವೇಶನಗಳಲ್ಲಿ ಅಲ್ಲಲ್ಲಿ ಸಣ್ಣದಾಗಿ ತಲೆ ಎತ್ತಿರುವ ಕಸದ ತಿಪ್ಪೆಯು ಹಂದಿ ಮತ್ತು ಬೀದಿ ನಾಯಿಗಳ ಅಡ್ಡೆಯಾಗಿದೆ. ಕಸದ ತಿಪ್ಪೆಗಳಲ್ಲಿ ಏನಾದರೂ ಆಹಾರ ಸಿಗಬಹುದು ಎಂದು ಕೆದಕುವ ದೃಶ್ಯ ಸಾಮಾನ್ಯವಾಗಿದೆ. ಇನ್ನು ಬೀದಿ ನಾಯಿಗಳ ಗುಂಪು ತಿಪ್ಪೆ ಬಳಿ ಬೀಡು ಬಿಡುವುದರಿಂದ ಸ್ಥಳೀಯರು ರಸ್ತೆಯಲ್ಲಿ ಆತಂಕದಿಂದಲೇ ಓಡಾಡಬೇಕಾಗುತ್ತದೆ. ಸ್ವಲ್ಪ ಎಚ್ಚರ ತಪ್ಪಿದರೂ ನಾಯಿ ಕಡಿತಕ್ಕೆ ಒಳಗಾಗಬೇಕಾಗುತ್ತದೆ.

‘ದುರ್ನಾತ ಬೀರುವ ಕಸದಿಂದಾಗಿ ಸೊಳ್ಳೆಗಳು ಹೆಚ್ಚಾಗಿವೆ. ಮನೆಯಲ್ಲಿ ಸೊಳ್ಳೆ ಪರದೆ, ಸೊಳ್ಳೆ ನಿಯಂತ್ರಣ ಕಾಯಿಲ್ ಅಥವಾ ಫ್ಯಾನ್ ಅನ್ನು ಸದಾ ಚಾಲು ಇಡಬೇಕಾಗುತ್ತದೆ. ಸಂಜೆಯಷ್ಟೇ ಅಲ್ಲದೆ ಹಗಲಲ್ಲೂ ಕಿಟಕಿ ಬಾಗಿಲುಗಳನ್ನು ತೆರೆಯಲು ಯೋಚಿಸುವಂತಾಗಿದೆ. ಸೊಳ್ಳೆಗಳಿಂದಾಗಿ ಜ್ವರ ಸೇರಿದಂತೆ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಎದುರಾಗುತ್ತಿವೆ. ಈ ಕಷ್ಟವನ್ನು ಯಾರ ಬಳಿ ಹೇಳಿಕೊಳ್ಳಬೇಕು’ ಎಂದು ವಿವೇಕಾನಂದ ನಗರದ ನವೀನ್ ಪ್ರಶ್ನಿಸಿದರು.

ನಿರ್ಲಕ್ಷ್ಯ ಕಾರಣ: ‘ಮನೆಮನೆಗೆ ನಿತ್ಯ ಬಂದು ಕಸ ಸಂಗ್ರಹಿಸುವುದು ನಗರಸಭೆಯ ಕರ್ತವ್ಯ. ಆದರೆ, ಹಲವೆಡೆ ತ್ಯಾಜ್ಯ ಸಂಗ್ರಹಿಸುವ ಆಟೊ ಟಿಪ್ಪರ್‌ಗಳು ನಿತ್ಯ ಬರುವುದಿಲ್ಲ. ಕೆಲವೆಡೆ ಎರಡ್ಮೂರು ದಿನಕ್ಕೊಮ್ಮೆ ಬರುವುದುಂಟು. ಖಾಲಿ ನಿವೇಶನಗಳಲ್ಲಿ ಜನ ಕಸ ಎಸೆಯಲು ಇದೇ ಪ್ರಮುಖ ಕಾರಣ’ ಎಂದು ಅರ್ಕಾವತಿ ಲೇಔಟ್ ನಿವಾಸಿ ವಿಜಯಕುಮಾರ್ ದೂರಿದರು.

‘ಕಸದ ವಾಹನ ಬಾರದಿದ್ದಾಗ ಜನ ಅನಿವಾರ್ಯವಾಗಿ ಖಾಲಿ ನಿವೇಶನಗಳಲ್ಲೇ ರಾತ್ರಿ ಅಥವಾ ನಸುಕಿನಲ್ಲಿ ಕಸ ಸುರಿಯುವುದು ಸಾಮಾನ್ಯ. ಅದಕ್ಕಾಗಿ, ನಗರಸಭೆಯ ವಾಹನಗಳು ನಿತ್ಯವೂ ತಪ್ಪದೆ ಮನೆ ಮನೆಯಿಂದ ಕಸ ಸಂಗ್ರಹಿಸಬೇಕು. ಆಗ ಯಾರೂ ಗೊತ್ತಾಗದಂತೆ ನಿವೇಶನಗಳಿಗೆ ಕಸ ತಂದು ಎಸೆಯುವುದಿಲ್ಲ’ ಎಂದು ಹೇಳಿದರು.

‘ಅಡುಗೆ ಮನೆಯ ಮುಸುರೆ ಸೇರಿದಂತೆ ಮನೆಯಲ್ಲಿ ನಿತ್ಯ ಉತ್ಪಾದನೆಯಾಗುವ ವಿವಿಧ ತ್ಯಾಜ್ಯವನ್ನು ಹೆಚ್ಚೆಂದರೆ ಒಂದು ದಿನ ಇಡಬಹುದು. ಅದು ಮೀರಿದರೆ ದುರ್ನಾತ ಬೀರಲಾರಂಭಿಸುತ್ತದೆ. ಹಾಗಾಗಿ, ನಗರಸಭೆಯವರು ನಿತ್ಯ ಬಂದು ಕಸ ಸಂಗ್ರಹಿಸಿದರೆ ಯಾರೂ ಹೊರಗಡೆ ಕಸ ಎಸೆಯುವುದಿಲ್ಲ’ ಎಂದು ಗೃಹಿಣಿ ಪವಿತ್ರಾ ಅಭಿಪ್ರಾಯಪಟ್ಟರು.

ತೆರವು ಮಾಡಿದರೂ ತಪ್ಪುತ್ತಿಲ್ಲ: ನಗರದ ವಿವಿಧೆಡೆ ಇರುವ ಖಾಲಿ ನಿವೇಶನಗಳಲ್ಲಿ ಕಸದ ರಾಶಿ ಇರುವ ಕುರಿತು ಸಾರ್ವಜನಿಕರು ನೀಡುವ ಮಾಹಿತಿ ಮೇರೆಗೆ, ಪೌರ ಕಾರ್ಮಿಕರು ಆಟೊ ಟಿಪ್ಪರ್‌ನೊಂದಿಗೆ ತೆರಳಿ ಗೆ ತಂದು ಹಾಕುವ ಕಸವನ್ನು ತೆರವುಗೊಳಿಸಿದರೂ, ಎರಡ್ಮೂರು ದಿನದ ಬಳಿಕ ಮತ್ತೆ ಅಷ್ಟೇ ಕಸ ಬಿದ್ದಿರುತ್ತದೆ. ಸ್ಥಳೀಯರಿಗೆ ಈ ಕುರಿತು ಎಷ್ಟೇ ಜಾಗೃತಿ ಮೂಡಿಸಿದರೂ ಪ್ರಯೋಜನವಾಗುತ್ತಿಲ್ಲ ಎಂದು ನಗರಸಭೆ ಸಿಬ್ಬಂದಿ ಅಸಹಾಯಕತೆ ವ್ಯಕ್ತಪಡಿಸಿದರು.

‘ತ್ಯಾಜ್ಯ ಸಂಗ್ರಹವನ್ನು ಸರಾಗಗೊಳಿಸುವುದಕ್ಕಾಗಿ ನಗರಸಭೆಯು ತಿಂಗಳುಗಳ ಹಿಂದೆ ನಗರದ ಮನೆಮನೆಗೆ ತಲಾ ಎರಡು ಕಸ ಸಂಗ್ರಹ ಡಬ್ಬಿಗಳನ್ನು ವಿತರಿಸಿದೆ. ಜನರು ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ಹಾಕಿ ಆಟೊ ಟಿಪ್ಪರ್ ಬಂದಾಗ ಕೊಟ್ಟರೆ ಸಾಕು. ಮುಚ್ಚಳ ಸಮೇತ ಇರುವ ಡಬ್ಬಿಗಳಿಂದ ಕಸದ ವಾಸನೆ ಹೊರಕ್ಕೂ ಬರುವುದಿಲ್ಲ. ಆದರೆ, ನಾಗರಿಕರಲ್ಲಿ ಘನತ್ಯಾಜ್ಯ ನಿರ್ವಹಣೆ ಪ್ರಜ್ಞೆ ಕಡಿಮೆ ಇರುವುದೇ ಕಸ ವಿಲೇವಾರಿ ಬಗೆಹರಿಯದ ಸಮಸ್ಯೆಯಾಗಿದೆ’ ಎಂದು ಹೆಸರು ಹೇಳಲಿಚ್ಛಿಸದ ನಗರಸಭೆ ಅಧಿಕಾರಿಯೊಬ್ಬರು ತಿಳಿಸಿದರು.

ರಾಮನಗರದ ದ್ಯಾವರಸೇಗೌಡನ ದೊಡ್ಡಿ ರಸ್ತೆಯ ಬದಿ ಇರುವ ಖಾಲಿ ನಿವೇಶನದ ಸ್ಥಿತಿ 
– ಪ್ರಜಾವಾಣಿ ಚಿತ್ರಗಳು: ಚಂದ್ರೇಗೌಡ
ರಾಮನಗರದ ದ್ಯಾವರಸೇಗೌಡನ ದೊಡ್ಡಿ ರಸ್ತೆಯ ಬದಿ ಇರುವ ಖಾಲಿ ನಿವೇಶನದ ಸ್ಥಿತಿ  – ಪ್ರಜಾವಾಣಿ ಚಿತ್ರಗಳು: ಚಂದ್ರೇಗೌಡ
ರಾಮನಗರದ ಬೆಂಗಳೂರು–ಮೈಸೂರು ರಸ್ತೆಯ ಅರ್ಕಾವತಿ ಸೇತುವೆಗೆ ಹೊಂದಿಕೊಂಡಂತಿರುವ ಖಾಲಿ ಜಾಗವು ಕಟ್ಟಡದ ಅವಶೇಷ ಮತ್ತು ಕಸದಿಂದ ತುಂಬಿರುವುದು
ರಾಮನಗರದ ಬೆಂಗಳೂರು–ಮೈಸೂರು ರಸ್ತೆಯ ಅರ್ಕಾವತಿ ಸೇತುವೆಗೆ ಹೊಂದಿಕೊಂಡಂತಿರುವ ಖಾಲಿ ಜಾಗವು ಕಟ್ಟಡದ ಅವಶೇಷ ಮತ್ತು ಕಸದಿಂದ ತುಂಬಿರುವುದು
ನಿಯಮ ಮೀರಿದರೆ ದಂಡ: ಪೌರಾಯುಕ್ತ
‘ನಿವೇಶನದಲ್ಲಿ ಯಾರೂ ಕಸ ಸುರಿಯದಂತೆ ಮತ್ತು ಅಕ್ರಮ ಚಟುವಟಿಕೆ ನಡೆಸದಂತೆ ಮಾಲೀಕರು ನಿವೇಶನದ ಸುತ್ತ ತಡೆಗೋಡೆ ನಿರ್ಮಿಸಿಕೊಳ್ಳಬೇಕು ಎಂಬ ನಿಯಮವಿದೆ. ಆದರೆ ಬೇರೆ ಬೇರೆ ಉದ್ದೇಶಗಳಿಗೆ ನಿವೇಶನ ಖರೀದಿಸಿರುವವರು ವರ್ಷಗಳಾದರೂ ಅಲ್ಲಿ ಮನೆ ಅಥವಾ ಕಟ್ಟಡ ನಿರ್ಮಿಸಿಲ್ಲ. ಅಲ್ಲದೆ ಸ್ಥಳೀಯರಲ್ಲದವರು ಇಂತಹ ನಿವೇಶನಗಳ ಮಾಲೀಕರಾಗಿದ್ದಾರೆ. ನಗರದಲ್ಲಿರುವ ಅಂತಹ ನಿವೇಶನಗಳನ್ನು ಪತ್ತೆ ಹಚ್ಚಲಾಗುವುದು. ಕಸದ ತಿಪ್ಪೆಗಳಾಗಿರುವ ನಿವೇಶನಗಳಿಗೆ ಮೊದಲು ತಡೆಗೋಡೆ ನಿರ್ಮಿಸಿಕೊಳ್ಳುವಂತೆ ಸೂಚನೆ ನೀಡಲಾಗುವುದು. ಪಾಲಿಸದಿದ್ದರೆ ನೋಟಿಸ್ ನೀಡಿ ದಂಡ ವಿಧಿಸಲಾಗುವುದು’ ಎಂದು ನಗರಸಭೆ ಪೌರಾಯುಕ್ತ ಎಲ್. ನಾಗೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ಜನ ಏನಂತಾರೆ...?

‘ನಗರಸಭೆ ಕಡಿವಾಣ ಅಗತ್ಯ’ ನಗರಸಭೆಯ ಕಸ ಸಂಗ್ರಹಿಸುವ ಆಟೊ ಟಿಪ್ಪರ್‌ಗಳು ಮನೆ ಬಾಗಿಲಿಗೆ ಬರುತ್ತಿದ್ದರೂ ಕೆಲವರು ಕಸ ತಂದು ಕೊಡದೆ ಬೀದಿಯಲ್ಲಿರುವ ಖಾಲಿ ನಿವೇಶನ ಅಥವಾ ರಸ್ತೆ ಬದಿಗೆ ತಂದು ತಂದು ಎಸೆಯುತ್ತಾರೆ. ಹಾಗಾಗಿ ಬಡಾವಣೆಯ ನಿವೇಶನ ಹಾಗೂ ರಸ್ತೆ ಬದಿ ಕಸದ ರಾಶಿ ಸಾಮಾನ್ಯವಾಗಿದೆ. ನಗರಸಭೆಯವರು ಅಂತಹವರಿಗೆ ಮೊದಲು ಕಡಿವಾಣ ಹಾಕಬೇಕು.

– ಕಮಲಮ್ಮ ಡಿ.ಜೆ ನಗರಸಭೆ ಮಾಜಿ ಸದಸ್ಯರು ಗಾಂಧಿನಗರ

‘ನೋಟಿಸ್ ಕೊಟ್ಟು ದಂಡ ವಿಧಿಸಲಿ’ ತಮ್ಮ ನಿವೇಶವನ್ನು ಸ್ವಚ್ಛವಾಗಿಟ್ಟುಕೊಳ್ಳದವರಿಗೆ ನಗರಸಭೆಯವರು ನೋಟಿಸ್ ಕೊಟ್ಟು ಎಚ್ಚರಿಕೆ ನೀಡಬೇಕು. ಅದಕ್ಕೂ ಕ್ಯಾರೆ ಎನ್ನದವರಿಗೆ ದಂಡ ವಿಧಿಸಬೇಕು. ಆದರೆ ನಗರಸಭೆಯವರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿಲ್ಲ. ಹಾಗಾಗಿಯೇ ಖಾಲಿ ನಿವೇಶನಗಳಲ್ಲಿ ಕಸದ ತಿಪ್ಪೆಗಳು ಎದ್ದು ಕೂರುತ್ತಿವೆ. ನಗರಸಭೆಯ ಕ್ರಮದ ಜೊತೆಗೆ ನಾಗರಿಕರು ಸಹ ಕಸ ಹಾಕದೆ ಹೊಣೆಗಾರಿಕೆ ಪ್ರದರ್ಶಿಸಬೇಕು.

– ಸಿದ್ದರಾಜು ನಿವೃತ್ತ ಮುಖ್ಯ ಶಿಕ್ಷಕ ರಾಮನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT