ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನನ್ನ ಬಳಿಯೂ ಬಾಲಕೃಷ್ಣ ವಂಚನೆ ಲಿಸ್ಟ್ ಇದೆ: ಮಂಜುನಾಥ್ ತಿರುಗೇಟು

ಹಾಲಿ–ಮಾಜಿ ಶಾಸಕ ವಾಕ್ಸಮರ ತಾರಕಕ್ಕೆ; ಬಾಲಕೃಷ್ಣ ಆರೋಪಕ್ಕೆ ಮಂಜುನಾಥ್ ತಿರುಗೇಟು
Published 16 ಫೆಬ್ರುವರಿ 2024, 15:33 IST
Last Updated 16 ಫೆಬ್ರುವರಿ 2024, 15:33 IST
ಅಕ್ಷರ ಗಾತ್ರ

ಮಾಗಡಿ: ಹಾಲಿ ಕಾಂಗ್ರೆಸ್ ಶಾಸಕ ಎಚ್‌.ಸಿ. ಬಾಲಕೃಷ್ಣ ಮತ್ತು ಜೆಡಿಎಸ್‌ನ ಮಾಜಿ ಶಾಸಕರೂ ಆಗಿರುವ ಜಿಲ್ಲಾ ಜೆಡಿಎಸ್ ಘಟಕದ ಅಧ್ಯಕ್ಷ ಎ. ಮಂಜುನಾಥ್ ಅವರ ನಡುವಣ ವಾಕ್ಸಮರ ತಾರಕಕ್ಕೇರಿದೆ. ತಮ್ಮ ವಿರುದ್ಧ ಮಾಡಿರುವ ಸಾಲ ಹಿಂದಿರುಗಿಸದ ಆರೋಪ ಕುರಿತು ಶುಕ್ರವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಂಜುನಾಥ್, ಶಾಸಕರ ಹೇಳಿಕೆಗೆ ತಿರುಗೇಟು ನೀಡಿದರು.

‘ಬಾಲಕೃಷ್ಣ ಅವರು ಐದು ಬಾರಿ ಶಾಸಕರಾಗಲು ಚುನಾವಣೆ ಸಂದರ್ಭದಲ್ಲಿ ಯಾವ್ಯಾವ ಗಿರಾಕಿಗಳನ್ನು ಕರೆದುಕೊಂಡು ಬಂದು ಹಣ ಖರ್ಚು ಮಾಡಿದ್ದಾರೆಂಬುದು ಗೊತ್ತಿದೆ. ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಟಿಕೆಟ್ ಕೊಡಿಸುತ್ತೇನೆ ಎಂದು ಹೇಳಿ ಗಂಗಾಧರ್ ಅವರ ಬಳಿ ₹50 ಲಕ್ಷ ಹಣ ಪಡೆದು ನಾಮ ಹಾಕಿದರು. ಇದೇ ರೀತಿ ಹಲವರಿಗೆ ಮೋಸ ಮಾಡಿದ್ದಾರೆ. ಅವರು ಯಾರಿಗೆಲ್ಲಾ ವಂಚಿಸಿದ್ದಾರೆಂಬ ಪಟ್ಟಿ ನನ್ನ ಬಳಿಯೂ ಇದೆ’ ಎಂದು ಆರೋಪಿಸಿದರು.

‘ಫೈನಾನ್ಸಿಯರ್‌ಗಳ ಬಳಿ ಬಂಡವಾಳ ಹಾಕಿಸಿಕೊಂಡು ಅವರು ಚುನಾವಣೆ ಮಾಡಿಕೊಂಡು ಬಂದಿರುವುದು ನನಗೂ ತಿಳಿದಿದೆ. ಹದಿನೈದು ವರ್ಷಗಳಿಂದ ರಾಜಕಾರಣ ಮಾಡಿಕೊಂಡು ಬಂದಿರುವ ನಾನು, ಅವರಂತೆ ಗಿರಾಕಿಗಳನ್ನು ಹುಡುಕಿ ರಾಜಕಾರಣ ಮಾಡಿಲ್ಲ. ಯಾರ ಬಳಿಯೂ ಒಂದು ಲೋಟ ಕಾಫಿ ಕುಡಿದಿಲ್ಲ. ಯಾರ ಮನೆಯನ್ನೂ ಹಾಳು ಮಾಡಿಲ್ಲ’ ಎಂದು ತಿರುಗೇಟು ನೀಡಿದರು.

‘ಲೋಕಸಭಾ ಚುನಾವಣೆಯಲ್ಲಿ ನಾವು ಯಾರನ್ನಾದರೂ ಅಭ್ಯರ್ಥಿ ಮಾಡುತ್ತೇವೆ. ಸಿ.ಪಿ. ಯೋಗೇಶ್ವರ್, ಡಾ. ಸಿ.ಎನ್. ಮಂಜುನಾಥ್ ಅಥವಾ ನಾನು ಸ್ಪರ್ಧಿಸುತ್ತೇನೊ ಅದೆಲ್ಲಾ ನಮಗೆ ಬಿಟ್ಟ ವಿಚಾರ. ಆ ಬಗ್ಗೆ ಇವರ‍್ಯಾಕೆ ತಲೆ ಕೆಡಿಸಿಕೊಳ್ಳಬೇಕು. ತಾಕತ್ತಿದ್ದರೆ ಮೈತ್ರಿ ಅಭ್ಯರ್ಥಿ ವಿರುದ್ಧ ಇವರು ಸ್ಪರ್ಧಿಸಲಿ. ಒಟ್ಟಿನಲ್ಲಿ ಇವರ ಆಸೆ ಚುನಾವಣೆಯಲ್ಲಿ ಡಿ.ಕೆ. ಸುರೇಶ್ ಸೋಲಿಸುವುದಾಗಿದೆ. ಜನರ ಮುಂದೆ ಅದನ್ನು ನೇರವಾಗಿ ಹೇಳಲಿ’ ಎಂದು ಸವಾಲು ಹಾಕಿದರು.

‘ಮಂಡಳಿಯ ಅಧ್ಯಕ್ಷರಾಗಿದ್ದಕ್ಕೆ ಇಷ್ಟೊಂದು ಹಾರಾಡುತ್ತಿರುವ ನೀವು, ಸಚಿವರಾಗಿದ್ದರೆ ಹೇಗಿರುತ್ತಿತ್ತೊ. ಇದೆಲ್ಲ ಗೊತ್ತಿದ್ದೇ ಅವರ ಪಕ್ಷದ ಹೈಕಮಾಂಡ್, ನಿಮ್ಮ ಬಾಲವನ್ನು ಕತ್ತರಿಸಿದೆ. ತಾಕತ್ತಿದ್ದರೆ ಲೋಕಸಭಾ ಚುನಾವಣೆಯಲ್ಲಿ ನಿಮ್ಮ ಪಕ್ಷದ ಅಭ್ಯರ್ಥಿಗೆ ಕ್ಷೇತ್ರದಲ್ಲಿ ಎಷ್ಟು ಲೀಡ್ ಕೊಡಿಸುತ್ತೀರಿ ಎಂದು ಹೇಳಿ? ಆಗ ನಿಮ್ಮ ಸಾಮರ್ಥ್ಯ ಏನೆಂದು ಗೊತ್ತಾಗುತ್ತದೆ’ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರಾದ ಎಂ.ಎನ್. ಮಂಜು, ಜಯಕುಮಾರ್, ಮಂಜಣ್ಣ, ಜಯರಾಮ್, ಕೆಂಪಸಾಗರ ಮಂಜುನಾಥ್, ಕರಡಿ ನಾಗರಾಜು, ಹಳ್ಳಿಕಾರ್ ಹನುಮಂತು ಇದ್ದರು.

‘ಬೇನಾಮಿ ಸೈಟ್ ಮಾಡಿ ಹಣ ಹಂಚಿಕೆ’

‘ನಾನು ರಿಯಲ್ ಎಸ್ಟೇಟ್ ವ್ಯವಹಾರ ಬಿಟ್ಟು ಹತ್ತು ವರ್ಷವಾಯಿತು. ಚುನಾವಣೆಯಲ್ಲಿ ಸೋತಿರುವ ನಾನು ಸಾಲಗಾರ. ನನಗೆ ಸಾಲ ಕೊಡುವವರು ಆಧಾರವಿಲ್ಲದೆ ಕೊಡುತ್ತಾರೆಯೇ? ಪಡೆದಿರುವ ಸಾಲಕ್ಕೆ ಬಡ್ಡಿ ಕಟ್ಟುತ್ತಿದ್ದು ಸಾಲವನ್ನು ತೀರಿಸುತ್ತೇನೆ. ಶಾಸಕರು ಬೆಳಿಗ್ಗೆ ಎದ್ದರೆ ಸಾಕು ವ್ಯವಹಾರ ಮಾಡುತ್ತಾರೆ. ಇವರ ಪತ್ನಿ ಮಕ್ಕಳು ಹಾಗೂ ಕುಟುಂಬದವರ ಹೆಸರಿನಲ್ಲಿ ನಿವೇಶನಗಳಿವೆ. ಈ ರೀತಿ ಬೇನಾಮಿ ನಿವೇಶನ ಮಾಡಿ ಚುನಾವಣೆಯಲ್ಲಿ ಹಣ ಹಂಚಿ ಗೆದ್ದಿರುವುದು ನನಗೆ ಗೊತ್ತಿಲ್ಲ ಎಂದುಕೊಂಡಿದ್ದಾರೆ. ನೆಲಮಂಗಲದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಜಮೀನು ಕಬಳಿಸಲು ಹೋಗಿ ನಿಮ್ಮ ಕುಟುಂಬದರ ಮೇಲೆ ಪ್ರಕರಣ ದಾಖಲು ಆಗಿರುವುದು ನೆನಪಿಲ್ಲವೆ? ಇಲ್ಲಿಯವರೆಗೆ ನಾನು ತೂಕವಾಗಿ ಮಾತನಾಡಿದ್ದೆ. ಆದರೆ ಇನ್ನು ಮುಂದೆ ನಿನ್ನ ಬಗ್ಗೆ ಚಿಲ್ಲರೆಯಾಗಿ ಮಾತನಾಡುತ್ತೇನೆ. ಚುನಾವಣೆಯಲ್ಲಿ ಸ್ವತಃ ನಾನೇ ಸೋತಿದ್ದೇನೆಯೇ ಹೊರತು ನಿನ್ನಿಂದ ಸೋಲಿಸಲು ಆಗಿಲ್ಲ. ಅದು ನನಗೆ ಗೊತ್ತಿದೆ ನಿನ್ನಂತೆ ನಾನು ಡಬಲ್ ಗೇಮ್ ಆಡಿಲ್ಲ’ ಎಂದು ಏಕವಚನದಲ್ಲಿ ಮಂಜುನಾಥ್ ವಾಗ್ದಾಳಿ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT