ಗುರುವಾರ , ನವೆಂಬರ್ 21, 2019
20 °C
ಸರ್ವೆ ಕಾರ್ಯ, ಪರಿಹಾರದ ಬಳಿಕ ಕಾಮಗಾರಿ ನಡೆಸಲು ರೈತರ ಪಟ್ಟು

ಬೈಪಾಸ್‌ಗೆ ಮರಗಳ ನಾಶ: ಪ್ರತಿಭಟನೆ

Published:
Updated:
Prajavani

ರಾಮನಗರ: ಬೆಂಗಳೂರು–-ಮೈಸೂರು ರಾಷ್ಟ್ರೀಯ ಹೆದ್ದಾರಿ 275ರ ಬೈಪಾಸ್ ನಿರ್ಮಾಣಕ್ಕೆ ಯಾವುದೇ ಮುನ್ಸೂಚನೆ ನೀಡದೆ ಮಾವಿನ ಮರಗಳನ್ನು ಕತ್ತರಿಸಿ ಹಾಕಿದ್ದನ್ನು ವಿರೋಧಿಸಿ ತಾಲ್ಲೂಕಿನ ವಿಜಯಪುರ, ಜಯಪುರ ಗ್ರಾಮಗಳ ರೈತರು ಶನಿವಾರ ಪ್ರತಿಭಟನೆ ನಡೆಸಿದರು.

ಜಯಪುರ ಗೇಟ್ ಬಳಿ ಇರುವ ಹೆದ್ದಾರಿ ಗುತ್ತಿಗೆದಾರ ಸಂಸ್ಥೆಯ ಆವರಣಕ್ಕೆ ಬೆಳಗ್ಗೆ ಮುತ್ತಿಗೆ ಹಾಕಿದ ರೈತರು ಅಲ್ಲಿಂದ ಹೊರಗೆ ವಾಹನಗಳು ತೆರಳದಂತೆ ನಿಷೇಧ ಒಡ್ಡಿದರು. ತಮಗಾಗಿರುವ ಅನ್ಯಾಯಕ್ಕೆ ಪರಿಹಾರ ದೊರಕಿಸಿಕೊಡಬೇಕು, ಸರ್ವೆ ಮುಂತಾದ ಕಾರ್ಯಗಳನ್ನು ನಡೆಸಿದ ನಂತರವೇ ಕಾಮಗಾರಿ ಆರಂಭಿಸಬೇಕು ಎಂದು ಪಟ್ಟು ಹಿಡಿದರು.

ಯಾವುದೇ ನೋಟಿಸ್ ಜಾರಿ ಮಾಡದೆ ಪ್ರಾಧಿಕಾರ ತಮ್ಮ ಭೂಮಿಯನ್ನು ಆಕ್ರಮಿಸಿಕೊಂಡಿದೆ. 6/1 ನೋಟಿಫಿಕೇಷನ್ ಆಗದೆ ಪ್ರಾಧಿಕಾರ ತಮ್ಮ ಭೂಮಿಯ ಮೇಲೆ ಕಾಲಿಡುವಂತೆಯೂ ಇಲ್ಲ, ಕಳೆದ ವಾರ ಪ್ರಾಧಿಕಾರದ ಯೋಜನಾಧಿಕಾರಿಗಳನ್ನು ಭೇಟಿ ಮಾಡಿದಾಗ ಸರ್ವೆ ಮಾಡಿದ ನಂತರವೇ ಕಾಮಗಾರಿ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದ್ದರು. ಆದರೆ ಶುಕ್ರವಾರ ಏಕಾಏಕಿ ಯಂತ್ರಗಳನ್ನು ತಂದು ತೊಂದರೆ ಕೊಟ್ಟಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಶುಕ್ರವಾರ ವಿಜಯಪುರ ಗ್ರಾಮದ ಸರ್ವೆ ಸಂಖ್ಯೆ 1 ರ ಕೆಲವು ಪ್ರದೇಶದಲ್ಲಿನ ಮಾವಿನ ಮರಗಳನ್ನು ಹೆದ್ದಾರಿ ನಿರ್ಮಾಣಕ್ಕೆಂದು ತೆರವುಗೊಳಿಸಲಾಗಿದೆ. ನಾವು ಸ್ಥಳಕ್ಕೆ ಹೋಗುವಷ್ಟರಲ್ಲಿ 100ಕ್ಕೂ ಹೆಚ್ಚು ಮರಗಳು ನೆಲಕ್ಕುರುಳಿದ್ದವು. ವರ್ಷಗಟ್ಟಲೆ 2–3 ಕಿ.ಮೀ. ದೂರದಿಂದ ಬಿಂದಿಗೆಯಲ್ಲಿ ನೀರು ತಂದು ಬೆಳೆಸಿದ ಮಾವಿನ ಮರಗಳು ಧರೆಗುರುಳಿದ್ದನ್ನು ಕಂಡ ಕಣ್ಣೀರಿಟ್ಟೆವು. ಈ ಸಂದರ್ಭ ಗುತ್ತಿಗೆ ಕಂಪನಿ ಸಿಬ್ಬಂದಿ ನಮ್ಮ ಮೇಲೆ ಹಲ್ಲೆಗೆ ಮುಂದಾದರು ಎಂದು ದೂರಿದರು.

ಯಾವ ರೈತರ ಎಷ್ಟು ಭೂಮಿ ಸ್ವಾಧೀನವಾಗಬೇಕಾಗಿದೆ, ಎಷ್ಟು ಮರಗಳು ಕತ್ತರಿಸಬೇಕಾಗಿದೆ ಎಂಬುದನ್ನು ಸರ್ವೇ ಮಾಡಿ ದಾಖಲೆ ಮಾಡಿಕೊಂಡು, ಪರಿಹಾರ ಕೊಟ್ಟು ನಂತರ ಕಾಮಗಾರಿ ಆರಂಭಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿ ಧರಣಿ ಕುಳಿತರು.

ಮುಖಂಡರಾದ ವೆಂಕಟಸ್ವಾಮಿ, ಶ್ರೀನಿವಾಸ್ (ವಾಸು), ಪುಟ್ಟಸ್ವಾಮೀಗೌಡ, ವೆಂಕಟೇಶ್, ಚಿಕ್ಕವೆಂಕಟಪ್ಪ, ಬೋರೇಗೌಡ, ಶಿವಮಾದೇಗೌಡ, ತಮ್ಮಯ್ಯ, ಈರಪ್ಪ, ವೆಂಕಟಸ್ವಾಮಿ, ಸಿದ್ದಲಿಂಗಯ್ಯ, ಆನಂದ, ಮಂಚೇಗೌಡ, ಚಿಕ್ಕಮಾಧು, ಶಾರದಮ್ಮ ಇದ್ದರು.

ಯೋಜನಾಧಿಕಾರಿ ಭೇಟಿ, ಕಾಮಗಾರಿ ಸ್ಥಗಿತ

ಪ್ರತಿಭಟನೆಯ ವಿಷಯ ತಿಳಿದ ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿ 275ರ ಯೋಜನಾಧಿಕಾರಿ ಶ್ರೀಧರ್ ಸ್ಥಳಕ್ಕೆ ಭೇಟಿ ಕೊಟ್ಟು ಪ್ರತಿಭಟನಾಕಾರರ ಮನವಿ ಆಲಿಸಿದರು. ಅಕ್ಟೋಬರ್ 15 ರ ಒಳಗೆ ಸಲ್ಲ ಬೇಕಾದ ಪರಿಹಾರದ ಮೊತ್ತವನ್ನು ಸಲ್ಲಿಸಿದ ನಂತರ ನವೆಂಬರ್‍ ನಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳುವುದಾಗಿ ಭರವಸೆ ನೀಡಿದ ನಂತರ ರೈತರು ಪ್ರತಿಭಟನೆ ಕೈಬಿಟ್ಟರು.

ಪ್ರತಿಕ್ರಿಯಿಸಿ (+)