ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಗಡಿಯಲ್ಲಿ ಯತಿರಾಜ ಶಾಖಾ ಮಠ ಸ್ಥಾಪನೆಗೆ ಭೂಮಿಪೂಜೆ

Published 11 ಡಿಸೆಂಬರ್ 2023, 14:13 IST
Last Updated 11 ಡಿಸೆಂಬರ್ 2023, 14:13 IST
ಅಕ್ಷರ ಗಾತ್ರ

ಮಾಗಡಿ: ಪಟ್ಟಣದ ತಿರುಮಲೆಯಲ್ಲಿ ಸೋಮವಾರ ಮೇಲುಕೋಟೆ ಯತಿರಾಜ ಶಾಖಾ ಮಠದ ಸ್ಥಾಪನೆಗೆ ಮೇಲುಕೋಟೆಯ ಯತಿರಾಜ ನಾರಾಯಣ ಜೀಯರ್‌ ಸ್ವಾಮೀಜಿ ಭೂಮಿ ಪೂಜೆ ನೆರವೇರಿಸಿದರು.

‘ಜಗತ್ತಿನಲ್ಲಿರುವ ಕಣ ಕಣವೂ ಸಹ ಪರಬ್ರಹ್ಮಶಕ್ತಿಯೇ ಆಗಿದೆ. ಇಡಿ ವಿಶ್ವ ಭಗವಂತನಿಗೆ ಸೇರಿದ್ದು. ಭಗವಂತ ನಮ್ಮನ್ನು ಸ್ವಲ್ಪ ದಿನ ಇಲ್ಲಿ ಇದ್ದು ಇದನ್ನೆಲ್ಲ ಅನುಭವಿಸಿ ಬಾ ಎಂದು ಕಳಿಸಿದ್ದಾನೆ. ಅಂದರೆ ಭಗವಂತನ ಕೊಡುಗೆಯನ್ನು ಒಬ್ಬನೇ ಅನುಭವಿಸುವುದಲ್ಲ. ಇರುವುದನ್ನು ಇತರರಿಗೂ ಕೊಟ್ಟು ನೀನೂ ಅನುಭವಿಸು ಎಂದಿದ್ದಾನೆ. ದೇವರು ಎಲ್ಲರನ್ನೂ ಸಮಾನ ದೃಷ್ಟಿಯಿಂದ ನೋಡುತ್ತಾನೆ. ಆರಾಧನೆ, ಅನುಸಂಧಾನ ಮುಖ್ಯ’ ಎಂದು ಸ್ವಾಮೀಜಿ ಹೇಳಿದರು. 

‘ಮಾಗಡಿ ಪುರಾತನ ಕಾಲದಿಂದಲೂ ಧರ್ಮಭೂಮಿಯಾಗಿದೆ. ಸಿದ್ದಗಂಗೆಯ ಡಾ.ಶಿವಕುಮಾರ ಸ್ವಾಮೀಜಿ, ಆದಿಚುಂಚನಗಿರಿ ಡಾ.ಬಾಲಗಂಗಾಧರನಾಥ ಸ್ವಾಮೀಜಿ ಮಾಗಡಿ ಸೀಮೆಯಲ್ಲಿ ಜನಿಸಿ ಜಗದ ಬೆಳಕಾದವವರು. ಅಕ್ಷರ ದಾಸೋಹ, ಅನ್ನದಾಸೋಹದಲ್ಲಿ ಮಠಗಳು ಬಹುಮುಖ್ಯ ಪಾತ್ರವಹಿಸಿವೆ. ಕೆಂಪೇಗೌಡರ ಕಾಲದ 60 ಶರಣ ಮಠಗಳಲ್ಲಿ ಕೆಲವು ಇಂದಿಗೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿವೆ’ ಎಂದು ಕೆಪಿಸಿಸಿ ಉಪಾಧ್ಯಕ್ಷ ಎಚ್‌.ಎಂ.ರೇವಣ್ಣ ಹೇಳಿದರು.

‘ವಿಶಿಷ್ಟ ಅದ್ವೈತ ತತ್ವ ಪ್ರತಿಪಾದಕರಾಗಿದ್ದ ರಾಮಾನುಜಾಚಾರ್ಯರು ಮೇಲುಕೋಟೆಯಲ್ಲಿ ಸ್ಥಾಪಿಸಿದ್ದ ಯತಿರಾಜ ಮಠದ ಶಾಖೆಯನ್ನು ತಿರುಮಲೆ ರಂಗನಾಥಸ್ವಾಮಿಯ ಸನ್ನಿಧಿಯಲ್ಲಿ ಸ್ಥಾಪನೆ ಮಾಡುತ್ತಿರುವುದು ನಮಗೆಲ್ಲರಿಗೂ ಸಂತೋಷ ತಂದಿದೆ. ಮಠದ ಏಳಿಗೆಗೆ ನಾವೆಲ್ಲರೂ ದುಡಿಯುತ್ತೇವೆ’ ಎಂದರು.

ನಿವೃತ್ತ ಶಿಕ್ಷಕಿ ನಾಗಮ್ಮ ಅವರು ಯತಿರಾಜ ಶಾಖಾ ಮಠದ ಸ್ಥಾಪನೆಗೆ ಸ್ವಂತ ಮನೆ ಬಿಟ್ಟುಕೊಟ್ಟಿದ್ದು, ಮಠಕ್ಕೆ ಬಂಗಾರದ ಅಭಯ, ಗದಾಹಸ್ತ ಅರ್ಪಿಸಿದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT