ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಗಾರಿಕಾ ಕಾಶಿ ಬಿಡದಿಯಲ್ಲಿ ಕಸದ ದುರ್ನಾತ

ಗೋವಿಂದರಾಜು ವಿ.
Published 4 ಡಿಸೆಂಬರ್ 2023, 4:20 IST
Last Updated 4 ಡಿಸೆಂಬರ್ 2023, 4:20 IST
ಅಕ್ಷರ ಗಾತ್ರ

ಬಿಡದಿ: ರಾಜ್ಯದ ರಾಜಧಾನಿ ಬೆಂಗಳೂರು ಮತ್ತು ರಾಮನಗರದ ನಡುವೆ ಇರುವ ಬಿಡದಿಯು ಇಲ್ಲಿರುವ ಅಂತರರಾಷ್ಟ್ರೀಯ ಮಟ್ಟದ ಕೈಗಾರಿಕೆಗಳಿಂದ ಪ್ರಖ್ಯಾತಿ ಪಡೆದಿದೆ. ಏಳು ವರ್ಷಗಳ ಹಿಂದೆ ಪುರಸಭೆಯಾಗಿರುವ ಈ ಹೋಬಳಿ ಕೇಂದ್ರವು, ಇತ್ತೀಚೆಗೆ ಕಸದ ಕಾರಣದಿಂದಾಗಿಯೂ ಗಮನ ಸೆಳೆಯುತ್ತಿದೆ.

ಬೆಂಗಳೂರು ಮತ್ತು ಮೈಸೂರಿನ ಹಳೆ ಹೆದ್ದಾರಿಯಲ್ಲಿರುವ ಬಿಡದಿ ದಾಟಿ ಹೋಗುವವರಿಗೆ ರಸ್ತೆಯುದ್ದಕ್ಕೂ ದಿನಗಳಿಂದ ತೆರವಾಗದ ದುರ್ನಾತ ಕಸದ ರಾಶಿಯ ದರ್ಶನವಾಗುತ್ತದೆ. ಅಷ್ಟೇ ಅಲ್ಲ, ಪಟ್ಟಣದ ಒಳಗಿನ ಬೀದಿಗಳಲ್ಲಿ ಓಡಾಡಿದರೂ ಅಲ್ಲಲ್ಲಿ ತ್ಯಾಜ್ಯದ ಸಣ್ಣ ತಿಪ್ಪೆಗಳು ಕಣ್ಣಿಗೆ ರಾಚುತ್ತವೆ. ಕೆಲವೆಡೆ ಹರಡಿಕೊಂಡಿರುವ ಕಸವು ರಸ್ತೆಯ ಒಂದಿಷ್ಟು ಭಾಗವನ್ನು ಅತಿಕ್ರಮಿಸಿದೆ.

ಪಟ್ಟಣದ ಬಹುತೇಕ ವಾರ್ಡ್‌ಗಳಲ್ಲಿ ನಿತ್ಯ ವಿಲೇವಾರಿಯಾಗದೆ ಚೆಲ್ಲಾಪಿಲ್ಲಿಯಾಗಿರುವ ಬಿದ್ದಿರುವ ಪ್ಲಾಸ್ಟಿಕ್, ತರಕಾರಿ, ಪೇಪರ್ ಸೇರಿದಂತೆ ಇತರ ಕಸವು ಬೀದಿನಾಯಿಗಳ ನೆಚ್ಚಿನ ತಾಣವಾಗಿವೆ. ಪೇಟೆ ಬೀದಿ ಸೇರಿದಂತೆ ಹಲವೆಡೆ ಗಬ್ಬೆದ್ದು ನಾರುವ ಕಸದ ರಾಶಿ ಕಂಡು ಸ್ಥಳೀಯರು, ಪುರಸಭೆಗೆ ಬೈಯುತ್ತಲೇ ಮೂಗು ಹಿಡಿದುಕೊಂಡು ಓಡಾಡುತ್ತಾರೆ.

ಅತ್ತ ಬೆಂಗಳೂರು ಗಡಿಗೆ ಹೊಂದಿಕೊಂಡಿರುವ ಬಿಡದಿಯನ್ನು ಇತ್ತೀಚೆಗಷ್ಟೇ ಬಿಡದಿಯನ್ನು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವನ್ನಾಗಿ ಮಾಡಿದ್ದಾರೆ. ಜೊತೆಗೆ, ಇಲ್ಲಿರುವ ಕೈಗಾರಿಕಾ ಪ್ರದೇಶಕ್ಕೆ ಮೆಟ್ರೊ ರೈಲು ಯೋಜನೆ ವಿಸ್ತರಣೆ ಮಾಡುವುದಾಗಿ ಹೇಳಿದ್ದಾರೆ. ಇಷ್ಟೆಲ್ಲಾ ಅಭಿವೃದ್ಧಿಗೆ ತೆರೆದುಕೊಂಡಿರುವ ಬಿಡದಿಯ ಖ್ಯಾತೆಗೆ ಇದೀಗ, ಕಸವು ಕುಖ್ಯಾತಿ ತಂದಿದೆ.

ಬೇಕಾಬಿಟ್ಟಿಯಾಗಿ ಸಂಗ್ರಹ

‘ಪುರಸಭೆ ವ್ಯಾಪ್ತಿಯ ಕೆಲವೆಡೆ ನಿತ್ಯ ಮುಂಜಾನೆ ಕಸ ಸಂಗ್ರಹಣೆ ಕಾರ್ಯ ನಡೆಯುತ್ತಿದೆ. ಆದರೆ, ಬೇಕಾಬಿಟ್ಟಿಯಾಗಿ ಸಂಗ್ರಹ ಮಾಡುತ್ತಾರೆ. ರಸ್ತೆ ಬದಿಯಲ್ಲಿರುವ ಕಸವನ್ನು ಸರಿಯಾಗಿ ತೆರವು ಮಾಡುವುದಿಲ್ಲ. ಮನೆಮನೆಗೂ ಸರಿಯಾಗಿ ಬಂದು ಸಂಗ್ರಹಿಸುವುದಿಲ್ಲ. ಅಧಿಕಾರಿಗಳು ಸಹ ಕಚೇರಿ ಬಿಟ್ಟು ಹೊರಬರುವುದಿಲ್ಲ’ ಎಂದು ಸ್ಥಳೀಯ ನಿವಾಸಿ ವಿಶ್ವನಾಥ್ ದೂರಿದರು.

‘ಹೋಬಳಿ ಕೇಂದ್ರವಾಗಿದ್ದ ಬಿಡದಿಯನ್ನು ಮೇಲ್ದರ್ಜೆಗೇರಿಸಿ ಪುರಸಭೆಯನ್ನಾಗಿ ಮಾಡಲಾಯಿತು. ಆದರೆ, ಅದಕ್ಕೆ ತಕ್ಕಂತೆ ಇಲ್ಲಿ ಮೂಲಸೌಕರ್ಯ ಅಭಿವೃದ್ಧಿಯಾಗಿಲ್ಲ. ಅದಕ್ಕೆ ಕಸದ ಸಮಸ್ಯೆಯೇ ಸಾಕ್ಷಿ. ಅಂತರರಾಷ್ಟ್ರೀಯ ಮಟ್ಟದ ಗಮನ ಸೆಳೆದಿರುವ ಬಿಡದಿ ಕೈಗಾರಿಕಾ ಪ್ರದೇಶವಿದ್ದರೂ, ಇಲ್ಲಿನ ಪಟ್ಟಣ ನೋಡಿದರೆ ಎಂತಹವರಿಗೆ ಬೇಸರವೆನಿಸದೆ ಇರದು’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಿಡದಿಯು ದೊಡ್ಡ ಕೈಗಾರಿಕಾ ಪ್ರದೇಶವೂ ಆಗಿರುವುದರಿಂದ, ಇಲ್ಲಿನ ರೈಲು ನಿಲ್ದಾಣದಲ್ಲಿ ನಿತ್ಯ ಅನೇಕ ರೈಲು ನಿಲ್ಲುತ್ತವೆ. ಇಲ್ಲಿನ ಕೈಗಾರಿಕ ಪ್ರದೇಶಕ್ಕೆ ಕೆಲಸಕ್ಕೆ ಬರುವ ಕಾರ್ಮಿಕರು ರೈಲುಗಳನ್ನೇ ಅವಲಂಬಿಸಿದ್ದಾರೆ. ಆದರೆ, ನಿಲ್ದಾಣದ ಸುತ್ತಮುತ್ತಲಿನ ಜಾಗ ಸಹ ಕಸದ ತಾಣವಾಗಿದೆ. ಇಲ್ಲಿ ಓಡಾಡುವ ಪ್ರಯಾಣಿಕರು ಮೂಗಿ ಹಿಡಿದುಕೊಂಡು ಓಡಾಡಬೇಕಿದೆ.

ಗಬ್ಬೆದ್ದು ನಾರುತ್ತದೆ

‘ಪುರಸಭೆಯು ಸರಿಯಾಗಿ ಕಸ ಸಂಗ್ರಹಿಸದೆ ಇರುವುದರಿಂದ, ಕಸದ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣಿಸುತ್ತಿದೆ. ಜನ ಸಹ ಒಂದು ಅಥವಾ ಎರಡು ದಿನ ಮನೆಯೊಳಗೆ ಕಸ ಇಟ್ಟುಕೊಳ್ಳುತ್ತಾರೆ. ಅಷ್ಟರೊಳಗೆ ಪುರಸಭೆಯವರು ಬಂದು ಸಂಗ್ರಹಿಸದಿದ್ದರೆ, ಗಬ್ಬು ನಾರು ಕಸವನ್ನು ಮನೆಯೊಳಗೆ ಇಟ್ಟುಕೊಳ್ಳಲು ಸಾಧ್ಯವೇ? ವಿಧಿ ಇಲ್ಲದೆ ರಸ್ತೆ ಬದಿಯೊ ಅಥವಾ ಬಡಾವಣೆಯ ಯಾವುದಾದರೂ ಮೂಲೆಯಲ್ಲಿ ಎಸೆಯುತ್ತಾರೆ. ಇದೇ ಕಾರಣಕ್ಕಾಗಿ ಪಟ್ಟಣದೊಳಗಿನ ಹಲವು ಬೀದಿಗಳು ಗಬ್ಬೆದ್ದು ನಾರುತ್ತಿವೆ’ ಎಂದು ಪೇಟೆ ಬೀದಿಯ ಮಹಿಳೆಯೊಬ್ಬರು ದೂರಿದರು.

ಬಿಡದಿ ಪಟ್ಟಣದಲ್ಲಿ ನಿತ್ಯ ಉತ್ಪತ್ತಿಯಾಗುವ ತ್ಯಾಜ್ಯ ವಿಲೇವಾರಿಯಾಗದ ಕಾರಣ ಸಮಸ್ಯೆ ಪೆಡಂಭೂತವಾಗಿ ಬೆಳೆದುನಿಂತಿದೆ. ವೇಗವಾಗಿ ಪಟ್ಟಣವಾಗಿ ಬೆಳೆದ ಕಾರಣ ಎಲ್ಲ ಕಡೆಗಳಲ್ಲಿ ಕಂಡು ಬರುವ ಕಸದ ಸಮಸ್ಯೆ ಇಲ್ಲಿಯೂ ತಾಂಡವವಾಡತೊಡಗಿತು. ಅವತ್ತೇ ಪುರಸಭೆ ಇದಕ್ಕೊಂದು ಸೂಕ್ತ ವ್ಯವಸ್ಥೆ ಮಾಡದ ಕಾರಣದಿಂದಾಗಿ ಸಮಸ್ಯೆ ಸಮಸ್ಯೆಯಾಗಿಯೇ ಮುಂದುವರೆಯುತ್ತಿದ್ದು ಅದರ ಪರಿಣಾಮವನ್ನು ಅಮಾಯಕ ಜನ ಅನುಭವಿಸುವಂತಾಗಿದೆ..

ನಿತ್ಯ 8–10 ಟನ್ ಉತ್ಪತ್ತಿ

‘ಬಿಡದಿಯಲ್ಲಿ ಸುಮಾರು 50 ಸಾವಿರ ಜನಸಂಖ್ಯೆ ಇದ್ದು, ನಿತ್ಯ ಏನಿಲ್ಲವೆಂದರು 8–10 ಟನ್ ಕಸ ಉತ್ಪತ್ತಿಯಾಗುತ್ತದೆ. ಪುರಸಭೆಯಾದಾಗಿನಿಂದಲೂ ಇಲ್ಲಿ ಕಸದ ವಿಲೇವಾರಿ ದೊಡ್ಡ ಸವಾಲಾಗಿದೆ. ಜನಸಂಖ್ಯೆ ಹೆಚ್ಚಿದಂತೆ, ಉತ್ಪತ್ತಿಯಾಗುವ ಕಸದ ಪ್ರಮಾಣ ಸಹ ಏರಿಕೆಯಾಗುತ್ತಿದೆ. ಆದರೆ, ವೈಜ್ಞಾನಿಕ ವಿಲೇವಾರಿಗೆ ಸೂಕ್ತ ಸರ್ಕಾರಿ ಜಾಗವಿಲ್ಲ. ಪರಿಸ್ಥಿತಿ ಹೀಗಿರುವಾಗ ನಾವೇನು ಮಾಡಬೇಕು’ ಎನ್ನುತ್ತಾರೆ ಪುರಸಭೆ ಅಧಿಕಾರಿಗಳು.

‘ರಸ್ತೆ ಬದಿಯಲ್ಲಿ ಕಸ ಹಾಕದಂತೆ ನಮ್ಮ ಸಿಬ್ಬಂದಿ ಹಾಗೂ ಪೌರ ಕಾರ್ಮಿಕರು ಎಷ್ಟೇ ಎಚ್ಚರಿಕೆ ನೀಡಿದರೂ, ಸೂಚನಾ ಫಲಕ ಹಾಕಿದರೂ ಜನ ಹಾದಿ–ಬೀದಿಯಲ್ಲಿ ಕಸ ಎಸೆಯುವುದನ್ನು ಮಾತ್ರ ನಿಲ್ಲಿಸಿಲ್ಲ. ನಾಗರಿಕರು ಸಹ ಕಸ ಸಂಗ್ರಹಿಸುವ ವಾಹನಗಳು ಬಂದಾಗ ಕಸ ಕೊಟ್ಟರೆ, ಬೀದಿಗಳಲ್ಲಿ ಕಸದ ರಾಶಿ ಕಣ್ಣಿಗೆ ಕಾಣುವುದು ತಪ್ಪುತ್ತದೆ. ಕಸ ನಿರ್ವಹಣೆಯಲ್ಲಿ ನಮ್ಮಷ್ಟೇ ಜವಾಬ್ದಾರಿ ನಾಗರಿಕರದ್ದು ಇದೆ’ ಎಂದು ಹೇಳಿದರು.

ಸಾಂಕ್ರಾಮಿಕ ರೋಗದ ಭೀತಿ

ಸಾಂಕ್ರಾಮಿಕ ರೋಗದ ಆತಂಕದಲ್ಲೇ ಜೀವನ ಹಸಿ ಮತ್ತು ಒಣ ತ್ಯಾಜ್ಯ ಸೇರಿದಂತೆ ಹಲವು ರೀತಿಯ ಕಸವನ್ನೊಳಗೊಂಡಿರುವ ತ್ಯಾಜ್ಯದ ತಿಪ್ಪೆಯನ್ನು ಒಂದು ದಿನ ತೆರವುಗೊಳಿಸದಿದ್ದರೆ ಅದು ಗಬ್ಬೆದ್ದು ನಾರತೊಡಗುತ್ತದೆ. ದುರ್ನಾತದ ಜೊತೆಗೆ ಸೊಳ್ಳೆಗಳ ಹಾವಳಿಯು ಹೆಚ್ಚಾಗಿರುವುದರಿಂದ ಪಟ್ಟಣದ ನಾಗರಿಕರು ಸಾಂಕ್ರಾಮಿಕ ರೋಗಗಳ ಆತಂಕದಲ್ಲೇ ಬದುಕುತ್ತಿದ್ದಾರೆ.

‘ಪಟ್ಟಣದ ಯಾವ ವಾರ್ಡ್ ಸಹ ಕಸದ ರಾಶಿಯಿಂದ ಮುಕ್ತವಾಗಿಲ್ಲ. ಎಲ್ಲಾ ಕಡೆಯೂ ಕಸದ ಸಮಸ್ಯೆ ಹೆಚ್ಚಾಗಿದೆ. ಇದರಿಂದಾಗಿ ಸೊಳ್ಳೆಗಳು ಹೆಚ್ಚಾಗಿದೆ. ಇದರಿಂದಾಗಿ ಜ್ವರ ವಿಷಮ ಜ್ವರ ಚಿಕೂನ್ ಗುನ್ಯಾ ಡೆಂಗಿ ಸೇರಿದಂತೆ ವಿವಿಧ ರೀತಿಯ ರೋಗಗಳು ಸಾಮಾನ್ಯವಾಗಿವೆ’ ಎಂದು ಸ್ಥಳಿಯ ನಿವಾಸಿ ವಿಶ್ವಾಸ್ ಹೇಳಿದರು.

‘ಸ್ಥಳೀಯರು ಯಾವುದೋ ಕಾರಣಕ್ಕೆ ಅನಾರೋಗ್ಯ ಕಾಣಿಸಿಕೊಂಡಿದೆ ಎಂದು ಭಾವಿಸಿಕೊಂಡಿದ್ದಾರೆ. ಆದರೆ ಕಸ ವಿಲೇವಾರಿ ಮಾಡದಿರುವುದೇ ಹಲವು ರೋಗಗಳಿಗೆ ಕಾರಣವಾಗಿದೆ. ಪಟ್ಟಣವೊಂದರ ಅನೈರ್ಮಲ್ಯವಾಗಿದ್ದರೆ ಅದು ರೋಗಗಳ ಕೂಪವಾಗುತ್ತದೆ. ಈ ಸತ್ಯ ಪುರಸಭೆಯವರಿಗೆ ಗೊತ್ತಿದ್ದರೂ ಅವರು ಕ್ಯಾರೇ ಎನ್ನುತ್ತಿಲ್ಲ. ಅವರದ್ದೇ ಲೋಕದಲ್ಲಿ ಮುಳುಗಿದ್ದಾರೆ. ಜನಪ್ರತಿನಿಧಿಗಳು ಸಹ ತಲೆ ಕೆಡಿಸಿಕೊಂಡಿಲ್ಲ. ತೆರಿಗೆ ಕಟ್ಟಿದ ಕರ್ಮಕ್ಕೆ ನಾಗರಿಕರು ಇವೆಲ್ಲವನ್ನು ಅನುಭವಿಸಬೇಕಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಸ್ತೆ ಬದಿಯೇ ಕಸ ವಿಲೇವಾರಿ ಬಿಡದಿ ವೃತ್ತದ ಸಮೀಪ ಇರುವ ಸೇತುವೆ ಬಳಿಯ ನೆಲ್ಲಿಗುಡ್ಡ ಕೆರೆಯ ಕಾಲುವೆ ಪಕ್ಕದ ಜಾಗದಲ್ಲೇ ಕಸ ರಾಶಿ ಇದೆ. ಒಂದಿಷ್ಟು ಕಸವು ಕಾಲುವೆಗೆ ಬಿದ್ದಿದೆ. ಈ ಜಾಗದ ಜೊತೆಗೆ ಪಟ್ಟಣದ ಕೆಲ ರಸ್ತೆಗಳ ಬದಿಯಲ್ಲೇ ಕಸ ವಿಲೇವಾರಿ ಮಾಡಿ ಹೋಗುತ್ತಾರೆ. ಕಟ್ಟಡ ತ್ಯಾಜ್ಯವನ್ನು ಹೀಗೆಯೇ ಮಾಡಲಾಗುತ್ತಿದೆ. ರಾಷ್ಟ್ರೀಯ ‌ಹಸಿರು ನ್ಯಾಯಮಂಡಳಿಯ ಯಾವ ಮಾರ್ಗಸೂಚಿಗಳು ಸಹ ಇಲ್ಲಿ ಪಾಲನೆಯಾಗಿಲ್ಲ. ಇಷ್ಟಾದರೂ ಮಾಲಿನ್ಯ ನಿಯಂತ್ರಣ ಮಂಡಳಿ ಸಹ ಪುರಸಭೆಯ ಜೊತೆಗೆ ಕಣ್ಮುಚ್ಚಿ ಕುಳಿತಿದೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದರು.

ಬಿಡದಿ ಪುರಸಭೆ ವ್ಯಾಪ್ತಿಯಲ್ಲಿ ನಿತ್ಯ ಸಂಗ್ರಹವಾಗುವ ಕಸ ವಿಲೇವಾರಿಗೆ ಸೂಕ್ತ ಜಾಗವಿಲ್ಲ. ಹಾಗಾಗಿ ವಿಲೇವಾರಿಗೆ 9 ಎಕರೆ ಜಾಗ ಗುರುತಿಸುವ ಪ್ರಯತ್ನ ನಡೆಯುತ್ತಿದ್ದು ಅಂತಿಮಗೊಂಡರೆ ವಿಲೇವಾರಿ ಸಮಸ್ಯೆ ಬಗೆಹರಿಯಲಿದೆ.
ರಮೇಶ್ ಕೆ.ಜಿ, ಮುಖ್ಯಾಧಿಕಾರಿ ಬಿಡದಿ ಪುರಸಭೆ
ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರಾಗಿರುವ ಬಿಡದಿಯಲ್ಲಿ ಕಸದ ಸಮಸ್ಯೆ ಇಷ್ಟೊಂದು ಬಿಗಡಾಯಿಸಿರುವುದು ಜಿಲ್ಲಾಡಳಿತ ಹಾಗೂ ಸ್ಥಳೀಯ ಪುರಸಭೆ ಆಡಳಿತದ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಸ್ಥಳೀಯವಾಗಿಯೇ ಇಷ್ಟೊಂದು ಸಮಸ್ಯೆ ಇರುವಾಗಲೇ ಬಿಡದಿ ಸುತ್ತಮುತ್ತ ಬೆಂಗಳೂರಿನ ಕಸ ವಿಲೇವಾರಿಗೆ ಜಾಗ ಗುರುತಿಸುವ ಪ್ರಯತ್ನ ನಡೆಯುತ್ತಿದೆ. ನಮ್ಮ ಸಮಸ್ಯೆ ಬಗೆಹರಿಸಲಾಗದವರು ಬೆಂಗಳೂರಿನ ಕಸಕ್ಕೆ ಜಾಗ ಹೊಂದಿಸುತ್ತಿದ್ದಾರೆ. ಜಿಲ್ಲಾಡಳಿತ ಮೊದಲು ಬಿಡದಿ ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು
ನಿಖಿಲ್ ಸಜ್ಜೆನಿಂಗಯ್ಯ, ದಲಿತ ಸಂಘರ್ಷ ಸಮಿತಿ
ಬಿಡದಿ ಪಟ್ಟಣವು ದಿನೇ ದಿನೇ ಬೆಳವಣಿಗೆಯಾಗುತ್ತಿದೆ. ದೇಶ–ವಿದೇಶಗಳ ವ್ಯಾಪಾರಿಗಳು ಹಾಗೂ ಉದ್ಯಮಿಗಳು ಇಲ್ಲಿಗೆ ಭೇಟಿ ನೀಡುತ್ತಿರುತ್ತಾರೆ. ಟೊಟೊಟಾ ಕೋಕೊಕೊಲಾ ಸೇರಿದಂತೆ ಹಲವು ಕಂಪನಿಗಳು ಇಲ್ಲಿವೆ. ಸಾವಿರಾರು ಜನರಿಲ್ಲಿ ಕೆಲಸ ಮಾಡುತ್ತಿದ್ದಾರೆ. ಅಂತಹ ಹೆಗ್ಗಳಿಕೆಯ ಪಟ್ಟಣದಲ್ಲಿ ಕಸ ವಿಲೇವಾರಿ ಸಮಸ್ಯೆ ಇರುವುದು ನಾಚಿಕೆಗೇಡಿನ ವಿಷಯ. ಈ ಸಮಸ್ಯೆ ಬಗೆಹರಿಸಲು ಆದಷ್ಟು ಬೇಗ ಸರ್ಕಾರಿ ಜಾಗ ಗುರುತಿಸಿ ಶಾಶ್ವತ ಪರಿಹಾರವನ್ನು ಒದಗಿಸಬೇಕಿದೆ
ಶ್ರೀನಿವಾಸ್, ಪುರಸಭೆ ಸದಸ್ಯ
ಪಟ್ಟಣದ ಬೀದಿಗಳಷ್ಟೇ ಅಲ್ಲ ಖಾಲಿ ನಿವೇಶನಗಳೂ ಸಹ ಕಸದ ತಾಣಗಳಾಗಿವೆ. ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೂ ಕಾರಣ. ಅವರೆಲ್ಲರೂ ಕಚೇರಿ ಬಿಟ್ಟು ಹೊರಗೆ ಬರುವುದಿಲ್ಲ. ಕುರ್ಚಿ ಬಿಟ್ಟು ಪಟ್ಟಣದೊಳಗೆ ಸುತ್ತಾಡಿದರೆ ಇಲ್ಲಿನ ಸ್ಥಿತಿ ಗೊತ್ತಾಗುತ್ತದೆ. ಗಬ್ಬೆದ್ದು ನಾರುತ್ತಿರುವ ಪಟ್ಟಣವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕೆಂಬ ಅರಿವು ಆಗಲಾದರೂ ಬರುತ್ತದೆ. ಆದರೆ ಇಲ್ಲಿರುವವರಲ್ಲಿ ಅಂತಹ ಯಾವುದೇ ಕಾಳಜಿ ಇಲ್ಲ. ಅವರ ಚಿತ್ತ ಬೇರೆ ಕಡೆಗಿದೆ. ಅದಕ್ಕಾಗಿಯೇ ಸಮಸ್ಯೆ ಬಿಗಡಾಯಿಸಿದೆ. ಇನ್ನಾದರೂ ಅಧಿಕಾರಿಗಳು ಚಳಿ ಬಿಟ್ಟು ಎಚ್ಚೆತ್ತುಕೊಳ್ಳಬೇಕು. ಎಷ್ಟು ವರ್ಷ ಈ ಸಮಸ್ಯೆಯನ್ನು ಹೀಗೆಯೇ ಸಹಿಸಿಕೊಂಡು ಬದುಕುವುದು?
ಕುಮಾರ್ ಬಾನಂದೂರು, ನಿವಾಸಿ
ಬಿಡದಿ ಪಟ್ಟಣದ ಸರ್ಕಾರಿ ಕಚೇರಿಯೊಂದರ ಕಾಂಪೌಂಡ್ ಬಳಿ ಇರುವ ಕಸದ ರಾಶಿ
ಬಿಡದಿ ಪಟ್ಟಣದ ಸರ್ಕಾರಿ ಕಚೇರಿಯೊಂದರ ಕಾಂಪೌಂಡ್ ಬಳಿ ಇರುವ ಕಸದ ರಾಶಿ
ಬಿಡದಿಯ ರೈಲು ನಿಲ್ದಾಣದ ಬಳಿ ಹಲವು ದಿನಗಳಿಂದ ಕಸ ರಾಶಿ ತೆರವಾಗಿಲ್ಲ
ಬಿಡದಿಯ ರೈಲು ನಿಲ್ದಾಣದ ಬಳಿ ಹಲವು ದಿನಗಳಿಂದ ಕಸ ರಾಶಿ ತೆರವಾಗಿಲ್ಲ
ಬಿಡದಿ ಪಟ್ಟಣದ  ಹೆದ್ದಾರಿಯ ಪಕ್ಕದಲ್ಲಿ ಬಿದ್ದಿರುವ ಕಸದ ರಾಶಿ
ಬಿಡದಿ ಪಟ್ಟಣದ  ಹೆದ್ದಾರಿಯ ಪಕ್ಕದಲ್ಲಿ ಬಿದ್ದಿರುವ ಕಸದ ರಾಶಿ
ಬಿಡದಿ ಪಟ್ಟಣದ ರಸ್ತೆ ಬದಿ ಹಲವು ದಿನಗಳಿಂದ ತೆರವಾಗದೆ ಬಿದ್ದಿರುವ ಕಸದ ರಾಶಿಯಲ್ಲಿ ಹಸು ಮತ್ತು ನಾಯಿ ಆಹಾರ ಹುಡುಕುತ್ತಿದ್ದ ದೃಶ್ಯ ಕಂಡುಬಂತು
ಬಿಡದಿ ಪಟ್ಟಣದ ರಸ್ತೆ ಬದಿ ಹಲವು ದಿನಗಳಿಂದ ತೆರವಾಗದೆ ಬಿದ್ದಿರುವ ಕಸದ ರಾಶಿಯಲ್ಲಿ ಹಸು ಮತ್ತು ನಾಯಿ ಆಹಾರ ಹುಡುಕುತ್ತಿದ್ದ ದೃಶ್ಯ ಕಂಡುಬಂತು
ಬಿಡದಿ ಪಟ್ಟಣದ ಬೆಂಗಳೂರು–ಮೈಸೂರಿನ ಹಳೆ ಹೆದ್ದಾರಿ ಹಾದು ಹೋಗುವ ನೆಲ್ಲಿಗುಡ್ಡ ಕೆರೆಯ ಕಾಲುವೆಗೆ ನಿರ್ಮಿಸಿರುವ ಸೇತುವೆ ಬದಿಯೇ ಕಸದ ರಾಶಿಯವನ್ನು ವಿಲೇವಾರಿ ಮಾಡಿರುವುದು 
ಬಿಡದಿ ಪಟ್ಟಣದ ಬೆಂಗಳೂರು–ಮೈಸೂರಿನ ಹಳೆ ಹೆದ್ದಾರಿ ಹಾದು ಹೋಗುವ ನೆಲ್ಲಿಗುಡ್ಡ ಕೆರೆಯ ಕಾಲುವೆಗೆ ನಿರ್ಮಿಸಿರುವ ಸೇತುವೆ ಬದಿಯೇ ಕಸದ ರಾಶಿಯವನ್ನು ವಿಲೇವಾರಿ ಮಾಡಿರುವುದು 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT