ಗುರುವಾರ , ಫೆಬ್ರವರಿ 27, 2020
19 °C
ಸಾಂಪ್ರದಾಯಿಕ ಬೆಳೆಯೊಂದಿಗೆ ಆಧುನಿಕ ತಂತ್ರಜ್ಞಾನ ಬಳಸಲು ಸಲಹೆ

‘ದ್ವಿತಳಿ ರೇಷ್ಮೆಗೆ ಉತ್ತಮ ಬೇಡಿಕೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಕನಕಪುರ: ‘ರಾಮನಗರ ತಾಲ್ಲೂಕಿನಲ್ಲಿ ಹೆಚ್ಚು ರೇಷ್ಮೆ ಬೆಳೆಗಾರರಿದ್ದು, ಸಾಂಪ್ರದಾಯಿಕವಾಗಿ ಮಿಶ್ರತಳಿ ರೇಷ್ಮೆ ಗೂಡು ಬೆಳೆಯುತ್ತಿರುವುದರಿಂದ ಅವಶ್ಯಕವಾಗಿ ಬೇಕಿರುವ ದ್ವಿತಳಿ ರೇಷ್ಮೆಗೂಡಿಗೆ ಬೇರೆಯವರನ್ನು ಅವಲಂಬಿಸಬೇಕಿದೆ’ ಎಂದು ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಮುತ್ತುರಾಜು ಹೇಳಿದರು.

ಇಲ್ಲಿನ ರೇಷ್ಮೆ ಇಲಾಖೆ ತಾಂತ್ರಿಕ ಸೇವಾ ಕೇಂದ್ರದಲ್ಲಿ ರೇಷ್ಮೆ ಬೆಳೆಗಾರರಿಗೆ ದ್ವಿತಳಿ ರೇಷ್ಮೆ ಬೆಳೆಯ ಜ್ಞಾನಾರ್ಜನೆಗಾಗಿ ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪರ್ಧೆ ಎದುರಿಸಬೇಕಿದೆ. ಅದಕ್ಕಾಗಿ ಮುಂದಿನ ದಿನಗಳಲ್ಲಿ ದ್ವಿತಳಿಯಿಂದ ಮಾತ್ರ ನೂಲು ಬಿಚ್ಚುವ ಆಟೊ ಮೆಟಿಂಗ್ ರೀಲಿಂಗ್‌ ಮಿಷನ್‌ಗಳು ಬರುತ್ತವೆ. ಆ ಸಂದರ್ಭದಲ್ಲಿ ಮಿಶ್ರತಳಿಗೆ ಬೇಡಿಕೆ ಇರುವುದಿಲ್ಲ’. ‘ಮಿಶ್ರತಳಿ ರೇಷ್ಮೆ ಹುಳು ಸಾಕಣೆಯು ವೈಜ್ಞಾನಿಕ ಮತ್ತು ತಾಂತ್ರಿಕತೆಯಿಂದ ಅತ್ಯಂತ ಸುಲಭವಾಗಲಿದೆ. ಹೆಚ್ಚಿನ ಕಾರ್ಮಿಕರ ಅಗತ್ಯವಿಲ್ಲದೆ ಬೆಳೆಯಬಹುದು. ಇದರ ಬಗ್ಗೆ ರೈತರು ತಿಳಿದುಕೊಳ್ಳಬೇಕು’ ಎಂದು ಹೇಳಿದರು.

‘ತಾಲ್ಲೂಕಿನಲ್ಲಿ ರೇಷ್ಮೆ ಉದ್ಯಮ ಮತ್ತು ರೇಷ್ಮೆ ಬೆಳೆಗಾರರನ್ನು ಅಭಿವೃದ್ಧಿಪಡಿಸಲು ಹಾಗೂ ರೇಷ್ಮೆ ನೂಲು ಬಿಚ್ಚುವುದನ್ನು ಸರಳೀಕರಿಸಿ ಉತ್ಪಾದನೆ ಹೆಚ್ಚಿಸಲು ಸಂಸದರು 5 ಆಟೊ ಮೆಟಿಂಗ್ ರೀಲಿಂಗ್‌ ಮಿಷನ್‌ಗಳನ್ನು ಕನಕಪುರದಲ್ಲಿ ಪ್ರಾರಂಭಸುತ್ತಿದ್ದಾರೆ. ಈಗಾಗಲೆ 2 ಘಟಕಗಳು ಪ್ರಾರಂಭಿಕ ಹಂತದಲ್ಲಿದ್ದು ಕಾರ್ಯ ನಿರ್ವಹಸಲಿವೆ. ಈ ಘಟಕ ಪ್ರಾರಂಭವಾದರೆ ಸಾವಿರಾರು ಕೆ.ಜಿ. ಯಷ್ಟು ದ್ವಿತಳಿ ರೇಷ್ಮೆ ಗೂಡ ಬೇಕಾಗುತ್ತದೆ’ ಎಂದರು.

‘ಪ್ರಸ್ತುತ ಮಿಶ್ರತಳಿ ರೇಷ್ಮೆ ಹುಳು ಸಾಕಾಣಿಕೆ ಮಾಡುತ್ತಿರುವ ರೈತರು, ಅದೇ ರೇಷ್ಮೆ ತೋಟಗಳಲ್ಲಿ ದ್ವಿತಳಿ ರೇಷ್ಮೆ ಬೆಳೆಯನ್ನು ಗುಣಮಟ್ಟದಲ್ಲಿ ಬೆಳೆದು ಆರ್ಥಿಕವಾಗಿ ಅಭಿವೃದ್ಧಿಯಾಗಬೇಕು’ ಎಂದು ಮನವಿ ಮಾಡಿದರು.

ಚಾಕಿ ಸಾಕಾಣಿಕೆಯನ್ನು ದೊಡ್ಡ ಉದ್ಯಮವನ್ನಾಗಿಸಿ ರಾಷ್ಟ್ರ ಪ್ರಶಸ್ತಿ ಪಡೆದಿರುವ ಕೀರಣಗೆರೆ ಚಾಕಿಸಾಕಾಣಿಕೆ ಕೇಂದ್ರದ ಸಂಸ್ಥಾಪಕ ಜಗದೀಶ್‌ ಮಾತನಾಡಿ, ‘ನಮ್ಮಲ್ಲಿ ಉತ್ಕೃಷ್ಟ ಹಾಗೂ ಫಲವತ್ತಾದ ಭೂಮಿ, ಅಂತರ್ಜಲವಿದೆ. ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು. ಸಾಂಪ್ರದಾಯಿಕ ರೇಷ್ಮೆ ಬೆಳೆಯೊಂದಿಗೆ, ಇಂದಿನ ವೈಜ್ಞಾನಿಕತೆ ಅಳವಡಿಸಿಕೊಂಡರೆ ಉತ್ಕೃಷ್ಟವಾಗಿ ರೇಷ್ಮೆ ಉತ್ಪಾದಿಸಬಹುದು. ಹಿಪ್ಪುನೇರಳರ ಸೊಪ್ಪಿನ ಗುಣಮಟ್ಟದಿಂದಲೇ ಉತ್ತಮ ಗೂಡು, ರೇಷ್ಮೆ ನೂಲನ್ನು ಪಡೆಯಬಹುದು’ ಎಂದರು.

‘ರೈತರು ಹಳೆ ಪದ್ಧತಿ ಬಿಟ್ಟು ಹೊಸ ತಾಂತ್ರಿಕ ಪದ್ಧತಿ ಅಳವಡಿಸಿಕೊಳ್ಳಬೇಕು. ರೇಷ್ಮೆ ತೋಟ, ರೇಷ್ಮೆ ಹುಳುವಿನ ಮನೆ, ರೇಷ್ಮೆ ಗೂಡು ಕಟ್ಟುವ ಚಂದ್ರಿಕೆ ಮೊದಲಾದವು ಬದಲಾಗಬೇಕು. ಇಂದು ಬೆಳೆಯುತ್ತಿರುವ ಮಿಶ್ರತಳಿ ರೇಷ್ಮೆ ಗೂಡಿನಲ್ಲಿ ಆಟೊ ಮೆಟಿಂಗ್‌ ರೀಲಿಂಗ್‌ ಮಿಷನ್‌ಗಳಲ್ಲಿ ನೂಲು ಬಿಚ್ಚಲು ಆಗುವುದಿಲ್ಲ. ಅದಕ್ಕೆ ದ್ವಿತಳಿಯ ರೇಷ್ಮೆ ಗೂಡೇ ಬೇಕಾಗುತ್ತದೆ’‌ ಎಂದರು.

‘ಅದಕ್ಕೆ ಉತ್ತಮ ಬೇಡಿಕೆ ಮತ್ತು ಧಾರಣೆ ಸಿಗಲಿದೆ. ರೈತರು ಈಗಿನಿಂದಲೇ ದ್ವಿತಳಿ ರೇಷ್ಮೆ ಬೆಳೆ ಮಾಡಬೇಕು. ಇದಕ್ಕೆ ಸರ್ಕಾರ ಸಹಕಾರ ಕೊಡುತ್ತಿದ್ದು ಬೆಳೆ ಹಾಗೂ ರೇಷ್ಮೆ ತೋಟ ನಿರ್ವಹಣೆ ಬಗ್ಗೆ ಇಲಾಖೆ ಮಾಹಿತಿ ನೀಡಿ ಸಹಕರಿಸುತ್ತದೆ’ ಎಂದು ತಿಳಿಸಿದರು.

ಉತ್ತಮವಾಗಿ ರೇಷ್ಮೆ ಬೆಳೆ ಬೆಳೆಯುತ್ತಿರುವ ಹಾಗೂ ದ್ವಿತಳಿ ಬೆಳೆ ಬೆಳೆಯಲು ಆಸಕ್ತಿ ಹೊಂದಿರುವ 400 ಮಂದಿ ರೈತರನ್ನು ಆಯ್ಕೆ ಮಾಡಿ ಕಾರ್ಯಾಗಾರದಲ್ಲಿ ಹೆಚ್ಚಿನ ಮಾಹಿತಿ ನೀಡಿ, ದ್ವಿತಳಿ ರೇಷ್ಮೆ ಬೆಳೆಯುವಂತೆ ಪ್ರೇರೇಪಿಸಲಾಯಿತು.

ಸಂಪನ್ಮೂಲ ವ್ಯಕ್ತಿ ನಿವೃತ್ತ ರೇಷ್ಮೆ ಉಪನಿರ್ದೇಶಕ ರಾಜಪ್ಪ ರೇಷ್ಮೆ ಕೃಷಿ ಬಗ್ಗೆ ತಿಳಿಸಿಕೊಟ್ಟರು. ರೇಷ್ಮೆ ವಿಸ್ತರಣಾಧಿಕಾರಿ ಎಚ್‌.ಸಿ.ಸುರೇಶ್‌, ತಾಂತ್ರಿಕ ಸೇವಾ ಕೇಂದ್ರದ ರೇಷ್ಮೆ ನಿರೀಕ್ಷಕ ಪುಟ್ಟಮಾದಯ್ಯ, ಶಕುಂತಲ, ರೇಷ್ಮೆ ಪ್ರದರ್ಶಕರಾದ ಕುಮಾರಸ್ವಾಮಿ, ಗೋಂದಳೆ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)