ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜಕಾಲುವೆ ಸ್ವಚ್ಛತೆಗೆ ಮುಂದಾದ ಹೆದ್ದಾರಿ ಪ್ರಾಧಿಕಾರ

Published 17 ಮೇ 2024, 6:14 IST
Last Updated 17 ಮೇ 2024, 6:14 IST
ಅಕ್ಷರ ಗಾತ್ರ

ಚನ್ನಪಟ್ಟಣ: ಜೋರು ಮಳೆ ಬಂದಾಗ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಹೊಳೆಯಂತೆ ತುಂಬಿ ಹರಿಯುತ್ತಿದ್ದ ಮಳೆ ನೀರನ್ನು ಸರಾಗವಾಗಿ ಹರಿದುಹೋಗುವಂತೆ ಮಾಡುವ ಉದ್ದೇಶದಿಂದ ಹೆದ್ದಾರಿಯ ಮಧ್ಯೆ ಹಾದುಹೋಗಿದ್ದ ರಾಜಕಾಲುವೆಯನ್ನು ಸ್ವಚ್ಛ ಮಾಡುವ ಕಾರ್ಯವನ್ನು ಹೆದ್ದಾರಿ ಪ್ರಾಧಿಕಾರವು ಬುಧವಾರದಿಂದ ಆರಂಭಿಸಿದೆ.

ನಗರದ ಅಂಬೇಡ್ಕರ್ ಭವನ ಹಾಗೂ ರೇಷ್ಮೆ ಗೂಡಿನ ಮಾರುಕಟ್ಟೆ ಬಳಿ ಹೆದ್ದಾರಿಯ ಮಧ್ಯಭಾಗದಲ್ಲಿ ರಾಜಕಾಲುವೆ ಹಾದುಹೋಗಿದ್ದು, ಇದರಲ್ಲಿ ಹೂಳು ತಂಬಿಕೊಂಡಿದ್ದ ಕಾರಣ ನಗರದಲ್ಲಿ ಜೋರು ಮಳೆ ಬಂದರೆ ಹೆದ್ದಾರಿಯಲ್ಲಿ ಹೊಳೆಯಂತೆ ಮಳೆ ನೀರು ಹರಿಯುತ್ತಿತ್ತು. ಇದರಿಂದ ಸಂಚಾರ ಮಾಡುವ ವಾಹನ ಸವಾರರು ಆತಂಕದಲ್ಲಿ ಪ್ರಯಾಣ ಮಾಡುವ ಸಂಕಷ್ಟ ಎದುರಿಸುತ್ತಿದ್ದರು.

ಇದಲ್ಲದೆ ಅಂಬೇಡ್ಕರ್ ಭವನ, ತಾಲ್ಲೂಕು ಕಚೇರಿ, ತಾ.ಪಂ. ಕಚೇರಿ, ರೇಷ್ಮೆಗೂಡಿನ ಮಾರುಕಟ್ಟೆ ಆವರಣಕ್ಕೂ ಮಳೆಯ ನೀರು ನುಗ್ಗಿ ಅವಾಂತರ ಸೃಷ್ಟಿಯಾಗುತ್ತಿತ್ತು. ಹಾಗೆಯೆ ಅಂಬೇಡ್ಕರ್ ಭವನದ ಒಳಾಂಗಣಕ್ಕೂ ನೀರು ನುಗ್ಗಿ ಅಲ್ಲಿ ಈಜುಕೊಳದಂತಹ ವಾತಾವರಣ ನಿರ್ಮಾಣವಾಗುತ್ತಿತ್ತು. ಹೆದ್ದಾರಿಯಲ್ಲಿ ಹೊಳೆಯಂತೆ ಹರಿಯುವ ನೀರನ್ನು ಕೆಲವರು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುತ್ತಿದ್ದರು. ಇದಕ್ಕೆ ಸಾಕಷ್ಟು ಟೀಕೆಗಳು ಎದುರಾಗಿದ್ದವು.

ಈಗ ಹೆದ್ದಾರಿ ಪ್ರಾಧಿಕಾರವು ರಾಜಕಾಲುವೆಯನ್ನು ಆಳ ಹಾಗೂ ಅಗಲ ಮಾಡಿ, ಅಲ್ಲಿರುವ ಹೂಳನ್ನು ತೆಗೆಯುವ ಕಾರ್ಯವನ್ನು ಆರಂಭಿಸಿದೆ. ಆ ಮೂಲಕ ಮಳೆಯ ನೀರು ಸರಾಗವಾಗಿ ಹರಿಯುವಂತೆ ಮಾಡುವ ಕಾಮಗಾರಿ ನಡೆಸಿದೆ. ಹೆದ್ದಾರಿ ಪ್ರಾಧಿಕಾರವು ಮಳೆಯ ನೀರಿನಿಂದ ಆಗುತ್ತಿದ್ದ ಅವಾಂತರಕ್ಕೆ ಮುಕ್ತಿ ನೀಡಲು ಮುಂದಾಗಿರುವುದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT