ಸೋಮವಾರ, ಅಕ್ಟೋಬರ್ 21, 2019
22 °C
ಕಾಂಗ್ರೆಸ್‌–ಜೆಡಿಎಸ್‌ ಸರ್ಕಾರ ಕೆಡವುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಯೋಗೇಶ್ವರ್‌

ಸಿದ್ದರಾಮಯ್ಯ ನೀಡಿದ್ರಂತೆ ಆಹ್ವಾನ: ನನಗೆ ಯಾವುದೇ ಕರೆ ಬಂದಿಲ್ಲ ಎಂದ ಸಿಪಿವೈ

Published:
Updated:
Prajavani

ರಾಮನಗರ: ಚನ್ನಪಟ್ಟಣದ ಬಿಜೆಪಿ ಮುಖಂಡ ಸಿ.ಪಿ. ಯೋಗೇಶ್ವರ್‌ ಕಾಂಗ್ರೆಸ್‌ಗೆ ಮರು ಸೇರ್ಪಡೆಗೊಳ್ಳಲಿದ್ದಾರೆ ಎಂಬ ಸುದ್ದಿ ಕೆಲವು ದಿನಗಳಿಂದ ಹರಿದಾಡುತ್ತಿದೆ. ಆದರೆ ಸ್ವತಃ ಯೋಗೇಶ್ವರ್‌ ಇದನ್ನು ನಿರಾಕರಿಸಿದ್ದು, ಮತ್ತೆಂದೂ ಕಾಂಗ್ರೆಸ್‌ಗೆ ಹೋಗಲಾರೆ ಎಂದಿದ್ದಾರೆ.

ರಾಜ್ಯ ಬಿಜೆಪಿ ಸಚಿವ ಸಂಪುಟದಲ್ಲಿ ಅವಕಾಶ ವಂಚಿತರಾಗಿರುವ ಸಿಪಿವೈ ಕಾಂಗ್ರೆಸ್‌ನತ್ತ ಮುಖ ಮಾಡಿದ್ದು, ಅವರಿಗೆ ಸ್ವತಃ ಕಾಂಗ್ರೆಸ್ ಸಿಎಲ್‌ಪಿ ನಾಯಕ ಸಿದ್ದರಾಮಯ್ಯ ಪಕ್ಷ ಸೇರುವಂತೆ ಆಹ್ವಾನ ನೀಡಿದ್ದಾರೆ ಎಂದು ಸುದ್ದಿ ಹಬ್ಬಿತ್ತು. ಆದರೆ ‘ಅಂತಹ ಯಾವುದೇ ಆಹ್ವಾನ ನನಗೆ ಬಂದಿಲ್ಲ’ ಎನ್ನುತ್ತಾರೆ ಯೋಗೇಶ್ವರ್‌.

ಕಾಂಗ್ರೆಸ್‌–ಜೆಡಿಎಸ್‌ ಸರ್ಕಾರ ಕೆಡವುವಲ್ಲಿ ಪ್ರಮುಖ ಪಾತ್ರ ವಹಿಸಿದ್ದವರಲ್ಲಿ ಯೋಗೇಶ್ವರ್‌ ಹೆಸರು ಪ್ರಮುಖವಾಗಿ ಕೇಳಿಬಂದಿತ್ತು. ಅತೃಪ್ತ ಶಾಸಕರನ್ನು ಸಂಪರ್ಕಿಸಿ ಅವರನ್ನು ಬಿಜೆಪಿ ಮುಖಂಡರ ಸಖ್ಯ ಬೆಳೆಸುವಲ್ಲಿ ಸಿಪಿವೈ ಶ್ರಮಿಸಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರ ರಚನೆ ಸಂದರ್ಭ ಸಿಪಿವೈಗೆ ಸಚಿವ ಸ್ಥಾನ ಸಿಗುವ ನಿರೀಕ್ಷೆ ಇತ್ತು. ಆದರೆ ನಂತರದ ಬೆಳವಣಿಗೆಗಳಿಂದ ಸಿಪಿವೈ ಬೇಸರಗೊಂಡಿದ್ದರು ಎಂದು ಹೇಳಲಾಗುತ್ತಿದೆ.

ಮತ್ತೊಂದೆಡೆ, ಜಿಲ್ಲೆಯ ಪ್ರಭಾವಿ ನಾಯಕ ಡಿ.ಕೆ. ಶಿವಕುಮಾರ್ ಸದ್ಯ ಜೈಲಿನಲ್ಲಿ ಇದ್ದಾರೆ. ಸಂಸದ ಡಿ.ಕೆ. ಸುರೇಶ್‌ ಕೂಡ ದೆಹಲಿಯಲ್ಲಿಯೇ ಹೆಚ್ಚು ಕಾಲ ಕಳೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್‌ ವಲಯದಲ್ಲಿ ಶೂನ್ಯತೆ ಆವರಿಸಿದೆ. ಇದೇ ಅವಕಾಶ ಬಳಸಿಕೊಂಡು ಯೋಗೇಶ್ವರ್‌ ಕೈ ಪಾಳಯಕ್ಕೆ ಮರಳಬಹುದು ಎಂದು ಚರ್ಚೆ ನಡೆದಿದೆ.

ಆದರೆ ಯೋಗೇಶ್ವರ್‌ ಆಪ್ತರು ಹೇಳುವುದೇ ಬೇರೆ. ಡಿಕೆಶಿ ಸಹೋದರರು ಹಾಗೂ ಸಿಪಿವೈ ನಡುವೆ ಬದ್ಧ ವೈರತ್ವ ಮೂಡಿದೆ. ಅದರಲ್ಲೂ ಕಳೆದ ವಿಧಾನಸಭೆ ಚುನಾವಣೆ ಹಾಗೂ ನಂತರದಲ್ಲಿ ಅವರ ಮತ್ತು ಕಾಂಗ್ರೆಸ್‌ ನಡುವಿನ ಸಂಬಂಧ ಸಾಕಷ್ಟು ಹಳಸಿದೆ. ಹೀಗಿರುವಾಗ ಅವರು ಕಾಂಗ್ರೆಸ್‌ಗೆ ಮರಳುವುದು ಆಗದ ಮಾತು. ಇದರಿಂದ ಪಕ್ಷದೊಳಗೆ ಗುದ್ದಾಟ ಏರ್ಪಡುವುದೇ ಹೆಚ್ಚು ಎನ್ನುತ್ತಾರೆ ಸಿಪಿವೈ ಬೆಂಬಲಿಗರು.

‘ಯೋಗೇಶ್ವರ್‌ ಈಗಾಗಲೇ ಹಲವು ಬಾರಿ ಪಕ್ಷಾಂತರ ಮಾಡಿರಬಹುದು. ಆದರೆ ಪರಿಸ್ಥಿತಿ ಈಗ ಭಿನ್ನವಿದೆ. ಸಿಪಿವೈ ಪ್ರಬಲ ರಾಷ್ಟ್ರೀಯ ಪಕ್ಷದಲ್ಲೇ ನೆಲೆ ಕಂಡುಕೊಳ್ಳುವ ಯತ್ನದಲ್ಲಿ ಇದ್ದಾರೆ. ಅದರೊಳಗೇ ಅವಕಾಶ ಹುಡುಕುತ್ತಿದ್ದಾರೆ. ಹೀಗಾಗಿ ಸದ್ಯಕ್ಕಂತೂ ಕಾಂಗ್ರೆಸ್‌ ಸೇರ್ಪಡೆ ಆಗದ ಮಾತು’ ಎನ್ನುತ್ತಾರೆ ಅವರು.

**
ಪಕ್ಷಾಂತರ ಹೊಸತೇನಲ್ಲ
ಚನ್ನಪಟ್ಟಣ ಕ್ಷೇತ್ರದಲ್ಲಿ ಪಕ್ಷೇತರರಾಗಿ ಗೆದ್ದು ತಮ್ಮ ರಾಜಕೀಯ ಜೀವನದ ಇನ್ನಿಂಗ್ಸ್‌ ಆರಂಭಿಸಿದ ಯೋಗೇಶ್ವರ್‌ ಈ ಹಿಂದೆ ಕಾಂಗ್ರೆಸ್‌, ಬಿಜೆಪಿ, ಸಮಾಜವಾದಿ ಸೇರಿದಂತೆ ಹಲವು ಪಕ್ಷಗಳಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ. 2013ರ ವಿಧಾನಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದಿಂದ ಶಾಸಕರಾಗಿ ಆಯ್ಕೆಯಾದ ಬಳಿಕ ಅವರು ಮತ್ತೆ ಕಾಂಗ್ರೆಸ್‌ನ ಸಖ್ಯ ಬೆಳೆಸಿದ್ದರು. ಆದರೆ ಜಿಲ್ಲೆಯಲ್ಲಿ ಡಿ.ಕೆ. ಸಹೋದರರ ನಡುವಿನ ಸಂಬಂಧ ಹಳಸಿ 2018ರ ಚುನಾವಣೆ ಸಂದರ್ಭ ಬಿಜೆಪಿಗೆ ಮರಳಿದ್ದರು.

**
ಉಪಚುನಾವಣೆ ಜವಾಬ್ದಾರಿ
ಮುನಿಸಿನ ನಡುವೆಯೂ ಯೋಗೇಶ್ವರ್‌ ವಿಧಾನಸಭೆ ಉಪ ಚುನಾವಣೆಗೆ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕಳೆದ ಕೆಲವು ದಿನದಿಂದ ಅವರು ಮೈಸೂರಿನಲ್ಲಿ ಬೀಡು ಬಿಟ್ಟಿದ್ದು, ಬುಧವಾರ ಸಹ ಪಕ್ಷದ ಕಾರ್ಯಕರ್ತರೊಂದಿಗೆ ಸಭೆ ನಡೆಸಿದ್ದಾರೆ. ಹುಣಸೂರು, ಕೆ.ಆರ್‌. ಪೇಟೆ ಉಪ ಚುನಾವಣೆಯ ಸಿದ್ಧತೆಗಳ ಕಡೆ ಗಮನ ನೀಡುವಂತೆ ಬಿಜೆಪಿ ನಾಯಕರು ಅವರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

**

ನಾನು ಕಾಂಗ್ರೆಸ್ ಸೇರುವ ಪ್ರಶ್ನೆಯೇ ಇಲ್ಲ. ಯಾರಿಂದಲೂ ಆಹ್ವಾನ ಬಂದಿಲ್ಲ. ಅದೆಲ್ಲ ಬರೀ ಗಾಳಿ ಸುದ್ದಿ
ಸಿ.ಪಿ. ಯೋಗೇಶ್ವರ್‌
– ಬಿಜೆಪಿ ಮುಖಂಡ, ಚನ್ನಪಟ್ಟಣ

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)