ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಡಿಗುಚ್ಚಮ್ಮ ಜಾತ್ರೆಗೆ ತೆರೆ

Published 17 ಏಪ್ರಿಲ್ 2024, 7:34 IST
Last Updated 17 ಏಪ್ರಿಲ್ 2024, 7:34 IST
ಅಕ್ಷರ ಗಾತ್ರ

ಕುದೂರು: ಹೋಬಳಿಯ ನಾರಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರೇಪಾಳ್ಯ ಗ್ರಾಮದ ಆದಿಶಕ್ತಿ ಕರಡಿ ಗುಚ್ಚಮ್ಮ ದೇವಿಯ ಜಾತ್ರಾ ಮಹೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸೋಮವಾರ ವಿಜೃಂಭಣೆಯಿಂದ ಜರುಗಿತು.

ಜಾತ್ರಾ ಮಹೋತ್ಸವಕ್ಕೆ ಸುಮಾರು 16 ಹಳ್ಳಿಗಳ ಜನರು ಶ್ರದ್ಧಾ ಭಕ್ತಿಯಿಂದ ಹಾಗೂ ಸ್ಪರ್ಧಾತ್ಮಕವಾಗಿ ಕುರ್ಜುಗಳನ್ನು ಕಟ್ಟಿಕೊಂಡು ದೇವಸ್ಥಾನ ಬಳಿ ಬಂದು ದೇವಿಯನ್ನು ವಿಜೃಂಭಣೆಯಿಂದ ಪೂಜಿಸುತ್ತಾರೆ. ಕುರ್ಜುಗಳೊಂದಿಗೆ ತಮ್ಮ ಮನೆಯ ಹೆಣ್ಣು, ಗಂಡು, ಹಿರಿಯರು, ಕಿರಿಯರು ಎಂಬ ಭೇದಭಾವವಿಲ್ಲದೆ ಕುಟುಂಬ ಸಮೇತರಾಗಿ ಆಗಮಿಸುತ್ತಾರೆ.

ಹೋಬಳಿಯ ಬಿಸ್ಕೂರು, ನಾರಸಂದ್ರ ಮತ್ತು ಮಾದಿಗೊಂದನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 16 ಹಳ್ಳಿಗಳಿಂದ ಕುರ್ಜುಗಳನ್ನು ಈ ಬಾರಿ ವಿಶೇಷವಾಗಿ ಅಲಂಕರಿಸಿಕೊಂಡು ಜಾತ್ರೆ ಆವರಣಕ್ಕೆ ತರಲಾಯಿತು. ಜಾತ್ರೆ ಮಹೋತ್ಸವಲ್ಲಿ ಭಾಗವಹಿಸಿದ್ದ ಹಳ್ಳಿಗಳನ್ನು ಪ್ರತಿನಿಧಿಸುವ ಕುರ್ಜುಗಳು ನೋಡುಗರನ್ನು ಆಕರ್ಷಿಸಿತು.

ಸಾಲುಗಟ್ಟಿ ನಿಂತ ವಾಹನಗಳು: ಜಾತ್ರಾ ಮಹೋತ್ಸವಕ್ಕೆ ರಾಜ್ಯದ ವಿವಿಧ ಮೂಲೆಗಳಿಂದ ಹಾಗೂ ಸುತ್ತಮುತ್ತಲ ಸುಮಾರು 50ಕ್ಕೂ ಹೆಚ್ಚು ಹಳ್ಳಿಗಳಿಂದ ಭಕ್ತರು ಭಾಗವಹಿಸಿದ್ದರು. ಇದರಿಂದಾಗಿ ವಾಹನಗಳ ದಟ್ಟಣೆಯಿಂದ ಸಂಚಾರ ದುಸ್ತರವಾಗಿತ್ತು.

ಮನೆಯ ಹೆಣ್ಣು ಮಕ್ಕಳು ದೇವಿಗೆ ಹೊಡೆದ ಹೊಂಬಾಳೆ ಮುಡಿಸಿದ ತಂಬಿಟ್ಟಿನ ಆರತಿಯನ್ನು ಹೊತ್ತು ದೇವಾಲಯಕ್ಕೆ ತಂದು ದೇವಿಗೆ ನೈವೇದ್ಯ ಅರ್ಪಿಸಿದರು. ಹರಕೆ ಹೊತ್ತವರು ಅಗ್ನಿಕೊಂಡಕ್ಕೆ ಎಳ್ಳು, ಕಾಸು, ಹಣ್ಣುಗಳನ್ನು ಹಾಕಿ ತಮ್ಮ ಹರಕೆ ತೀರಿಸಿದರು.

ಎತ್ತಿನ ಗಾಡಿ, ಟ್ರ್ಯಾಕ್ಟರ್ ಗಳಿಗೆ ಬಣ್ಣ ಬಣ್ಣದ ಬಟ್ಟೆಗಳಿಂದ ಕುರ್ಜುಗಳನ್ನು ಸಿಂಗಾರ ಮಾಡಿದ ವಾಹನಗಳ ಸಾಲು, ಆಕರ್ಷಕ ಎತ್ತುಗಳ ಮೆರವಣಿಗೆ, ಕಳಸಗಳ ಸಾಲು ಕರಡಿಗುಚ್ಚಮ್ಮ ದೇವಿಯ ಜಾತ್ರಾ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿತು.

ಕರಡಿಗುಚ್ಚಮ್ಮ ದೇವಿ ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ್ದ ವಿವಿಧ ಹಳ್ಳಿಗಳ ಆಕರ್ಷಕ ಕುರ್ಜುಗಳು.
ಕರಡಿಗುಚ್ಚಮ್ಮ ದೇವಿ ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ್ದ ವಿವಿಧ ಹಳ್ಳಿಗಳ ಆಕರ್ಷಕ ಕುರ್ಜುಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT