ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜ್ವಲ್ ಪ್ರಕರಣದ ತಂತ್ರ: ಜೆಡಿಎಸ್ ಮುಗಿಸಲು ಕುತಂತ್ರ; ಎ. ಮಂಜುನಾಥ್

ಜೆಡಿಎಸ್ ಜಿಲ್ಲಾ ಅಧ್ಯಕ್ಷ ಎ. ಮಂಜುನಾಥ್ ಆರೋಪ; ಮೈತ್ರಿಕೂಟದಿಂದ ಪ್ರತಿಭಟನೆ ಇಂದು
Published 8 ಮೇ 2024, 5:01 IST
Last Updated 8 ಮೇ 2024, 5:01 IST
ಅಕ್ಷರ ಗಾತ್ರ

ರಾಮನಗರ: ‘ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರು ಹಲವು ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದ ಪ್ರಕರಣದ ಹಿಂದೆ ಜೆಡಿಎಸ್‌ ಪಕ್ಷವನ್ನೇ ಮುಗಿಸಲು ಸಂಚು ಮಾಡಲಾಗಿದೆ. ದೌರ್ಜನ್ಯದ ವಿಡಿಯೊಗಳನ್ನು ಹೊಂದಿರುವ ಪೆನ್‌ ಡ್ರೈವ್‌ ವಿತರಣೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೈವಾಡವಿದೆ’ ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಎ. ಮಂಜುನಾಥ್ ಆರೋಪಿಸಿದರು.

‘ಪ್ರಜ್ವಲ್ ಕಾರು ಚಾಲಕ ಕಾರ್ತಿಕ್ ಅವರಿಂದ ವಿಡಿಯೊಗಳನ್ನು ಮೊದಲಿಗೆ ಪಡೆದಿದ್ದ ಬಿಜೆಪಿ ಮುಖಂಡ ದೇವರಾಜೇಗೌಡ ಅವರು, ವಿಡಿಯೊಗಳು ಸಾರ್ವಜನಿಕವಾಗಿ ಸೋರಿಕೆಯಾಗಲು ಶಿವಕುಮಾರ್ ಅವರೇ ಕಾರಣವೆಂಬುದಕ್ಕೆ ಆಡಿಯೊ ಕ್ಲಿಪ್‌ ಬಹಿರಂಗಪಡಿಸಿದ್ದಾರೆ. ಹಾಗಾಗಿ, ಬಹಿರಂಗ ಮಾಡಿದವರ ವಿರುದ್ಧವೂ ತನಿಖೆಯಾಗಬೇಕು’ ನಗರದ ಜೆಡಿಎಸ್ ಕಚೇರಿಯಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

‘ಪ್ರಕರಣವನ್ನೇ ಆಧಾರವಾಗಿಟ್ಟುಕೊಂಡು ಜೆಡಿಎಸ್ ಮತ್ತು ಅದರ ನಾಯಕರ ಕತೆ ಮುಗಿಸಲು ಹೊರಟಿರುವ ಶಿವಕುಮಾರ್ ವಿರುದ್ಧ ಮೈತ್ರಿ ಪಕ್ಷಗಳ ನೇತೃತ್ವದಲ್ಲಿ, ರಾಮನಗರದ ಐಜೂರು ವೃತ್ತದಲ್ಲಿ ಗುರುವಾರ ಬೆಳಿಗ್ಗೆ 11 ಗಂಟೆಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಎರಡೂ ಪಕ್ಷಗಳ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು’ ಎಂದು ಮನವಿ ಮಾಡಿದರು.

ಶಕ್ತಿ ಕುಂದುವ ಭಯ: ‘ಬಿಜೆಪಿ–ಜೆಡಿಎಸ್ ಮೈತ್ರಿಯಿಂದ ಒಕ್ಕಲಿಗರ ನಾಯಕತ್ವದ ತಮ್ಮ ಶಕ್ತಿ ಎಲ್ಲಿ ಕುಂದುತ್ತದೆಯೋ, ಮುಂದೆ ಮುಖ್ಯಮಂತ್ರಿಯಾಗುವ ತಮ್ಮ ಹಾದಿಗೆ ಎಲ್ಲಿ ತೊಂದರೆಯಾಗುತ್ತದೆಯೊ ಎಂಬ ಭಯದಿಂದ ಶಿವಕುಮಾರ್ ಪೆನ್‌ ಡ್ರೈವ್ ವಿತರಿಸಿದ್ದಾರೆ. ಅವರಿಗೆ ಸಂತ್ರಸ್ತರ ಬಗ್ಗೆ ಕಾಳಜಿ ಇದ್ದಿದ್ದರೆ ಅವರ ಮುಖವನ್ನು ಬ್ಲರ್‌ ಮಾಡಬೇಕಿತ್ತು’ ಎಂದರು.

‘ಕೀಳು ಮಟ್ಟದ ರಾಜಕಾರಣವು ದೊಡ್ಡ ನಾಯಕರಾಗಿರುವ ಶಿವಕುಮಾರ್ ಘನತೆಗೆ ತಕ್ಕದ್ದಲ್ಲ. ಇದರಿಂದಾಗಿ ಮುಂದೆ ಕಾಂಗ್ರೆಸ್‌ನವರೇ ಅವರ ಜೊತೆ ನಿಲ್ಲಲು ಭಯಪಡುತ್ತಾರೆ. ಎಲ್ಲಿ ನಮಗೂ ಮುಂದೊಂದು ದಿನ ಗಂಡಾಂತರ ಕಾದಿದೆಯೊ ಎಂದು ಯಾರೂ ಅವರತ್ತ ಸುಳಿಯದ ದಿನಗಳು ಬರುತ್ತವೆ’ ಎಂದು ಹೇಳಿದರು.

‘ಮಂಡ್ಯದ ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಅವರು ತಾವು ಯಾವ ಪಕ್ಷದವರು ಎಂಬುದನ್ನು ಮರೆತು ಶಿವಕುಮಾರ್ ಏಜೆಂಟರಂತೆ ಮಾತನಾಡುತ್ತಿದ್ದಾರೆ. ಪ್ರಜ್ವಲ್ ಪ್ರಕರಣಕ್ಕೂ ಅವರಿಗೂ ಏನು ಸಂಬಂಧ? ನಮ್ಮ ನಾಯಕರ ಕುರಿತು ಮಾತನಾಡಲು ಅವರಿಗೇನು ಹಕ್ಕಿದೆ? ಮಂಡ್ಯದಲ್ಲಿ ಯಾಕೆ ಸುದ್ದಿಗೋಷ್ಠಿ ನಡೆಸಿದರು? ಅದರ ಹಿಂದೆ ಯಾರಿದ್ದಾರೆಂಬುದು ಎಲ್ಲರಿಗೂ ಗೊತ್ತಿದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಪಕ್ಷದ ಮುಖಂಡರಾದ ಉಮೇಶ್, ಜಿ.ಟಿ. ಕೃಷ್ಣ, ಜಯಕುಮಾರ್, ಸರಸ್ವತಿ, ಶೋಭಾ ಹಾಗೂ ಇತರರು ಇದ್ದರು.

ಪ್ರಜ್ವಲ್ ಪ್ರಕರಣದ ತನಿಖೆಗೆ ನೇಮಿಸಿರುವ ಎಸ್‌ಐಟಿ ಶಿವಕುಮಾರ್ ಅವರ ಕೈಗೊಂಬೆಯಾಗಿದ್ದು ಪಾರದರ್ಶಕವಾಗಿ ತನಿಖೆ ನಡೆಯುತ್ತಿಲ್ಲ. ಹಾಗಾಗಿ ತನಿಖೆಯನ್ನು ಸಿಬಿಐಗೆ ವಹಿಸಬೇಕು
– ಎ. ಮಂಜುನಾಥ್ ಅಧ್ಯಕ್ಷ ಜೆಡಿಎಸ್ ಜಿಲ್ಲಾ ಘಟಕ

‘ಪ್ರಜ್ವಲ್ ತಪ್ಪಿಗೆ ತಕ್ಕ ಶಿಕ್ಷೆಯಾಗಲಿ’

‘ಪ್ರಜ್ವಲ್ ಎಸಗಿರುವ ಲೈಂಗಿಕ ದೌರ್ಜನ್ಯ ಅಕ್ಷಮ್ಯ. ಅವರ ತಪ್ಪಿಗೆ ಶಿಕ್ಷೆಯಾಗಲೇಬೇಕು ಎಂದು ಪಕ್ಷದ ನಾಯಕರು ಸ್ಪಷ್ಟಪಡಿಸಿದ್ದಾರೆ. ನಮ್ಮ ಪ್ರತಿಭಟನೆಯು ಪ್ರಜ್ವಲ್ ತಪ್ಪನ್ನು ಸಮರ್ಥಿಸುವ ಉದ್ದೇಶ ಹೊಂದಿಲ್ಲ. ಬದಲಿಗೆ ಪ್ರಕರಣದ ನೆಪದಲ್ಲಿ ಪಕ್ಷ ಮತ್ತು ನಾಯಕರನ್ನು ಮುಗಿಸಲು ಹೊರಟಿರುವ ಶಿವಕುಮಾರ್ ವಿರುದ್ಧ ಪ್ರತಿಭಟಿಸಿ ಕೀಳುಮಟ್ಟದ ರಾಜಕೀಯ ಖಂಡಿಸುವುದಾಗಿದೆ’ ಎಂದು ಪ್ರಶ್ನೆಯೊಂದಕ್ಕೆ ಎ. ಮಂಜುನಾಥ್ ಪ್ರತಿಕ್ರಿಯಿಸಿದರು. ‘ಹುಸೇನ್ ವಿಡಿಯೊ ನನ್ನ ಬಳಿಗೂ ಬಂದಿತ್ತು’ ‘ಶಿವಕುಮಾರ್ ಆಪ್ತರಾದ ಶಾಸಕ ಎಚ್‌.ಎ. ಇಕ್ಬಾಲ್ ಹುಸೇನ್ ಅವರು ಕಾರ್ಯಕರ್ತೆಯೊಬ್ಬರ ಜೊತೆ ವಾಟ್ಸ್‌ಆ್ಯಪ್‌ ವಿಡಿಯೊ ಕಾಲ್‌ನಲ್ಲಿ ಮಾತನಾಡಿರುವ ವಿಡಿಯೊ ಬಹಿರಂಗವಾಗುವುದಕ್ಕೆ ಮುಂಚೆ ನನ್ನ ಬಳಿಗೂ ಬಂದಿತ್ತು. ವಿಡಿಯೊ ಇಟ್ಟುಕೊಂಡು ರಾಜಕಾರಣ ಮಾಡುವುದು ಬೇಡ ಎಂದು ಹೇಳಿ ಕಳಿಸಿದ್ದೆ. ಈ ವಿಡಿಯೊ ಜೊತೆಗೆ ಇತರ ‌ವಿಡಿಯೊಗಳು ಬಹಿರಂಗವಾಗಿದ್ದರೆ ಶಿವಕುಮಾರ್ ಘನತೆ ಏನಾಗುತ್ತಿತ್ತು ಊಹಿಸಿಕೊಳ್ಳಲಿ. ವಿಡಿಯೊದಲ್ಲಿರುವುದು ನಾನೇ ಎಂದಿರುವ ಹುಸೇನ್ ನಂತರ ಅದು ನನ್ನದಲ್ಲ ಎಂದಿದ್ದಾರೆ. ಅವರಿಗೆ ಅನುಮಾನವಿದ್ದರೆ ವಿಡಿಯೊ ಕುರಿತು ತನಿಖೆಗೆ ಒತ್ತಾಯಿಸಲಿ’ ಎಂದು ಮಂಜುನಾಥ್ ಸವಾಲು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT