ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನ್ಯಾಯ ಪ್ರಶ್ನಿಸಿದ್ದಕ್ಕೆ ದೇಶದ್ರೋಹಿ ಪಟ್ಟ

ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರ ಸಭೆಯಲ್ಲಿ ಸಂಸದ ಡಿ.ಕೆ.ಸುರೇಶ್‌
Published 6 ಏಪ್ರಿಲ್ 2024, 6:03 IST
Last Updated 6 ಏಪ್ರಿಲ್ 2024, 6:03 IST
ಅಕ್ಷರ ಗಾತ್ರ

ಕನಕಪುರ: ‘ತೆರಿಗೆ ವಿಚಾರದಲ್ಲಿ ಕನ್ನಡ ನಾಡಿಗೆ ಆಗಿರುವ ಅನ್ಯಾಯದ ಬಗ್ಗೆ, ಕೇಂದ್ರ ಸರ್ಕಾರದಿಂದ ಕನ್ನಡಿಗರಿಗೆ ಆಗುತ್ತಿರುವ ಮಲತಾಯಿ ಧೋರಣೆ ವಿರುದ್ಧ ದನಿ ಎತ್ತಿದ್ದಕ್ಕೆ ನನ್ನನ್ನೇ ದೇಶದ್ರೋಹಿ ಎಂದು ಬಿಂಬಿಸಲು ಬಿಜೆಪಿಯವರು ಹೊರಟಿದಿದ್ದಾರೆ. ಅವರಿಗೆ ಕರ್ನಾಟಕದ ಜನತೆ ತಕ್ಕ ಪಾಠ ಕಲಿಸಬೇಕು’ ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದರು.

ನಗರದ ಹೊರವಲಯದ ಅರಳಾಳು ಬಳಿ ಶುಕ್ರವಾರ ನಡೆದ ಕನಕಪುರ ವಿಧಾನಸಭಾ ಕ್ಷೇತ್ರದ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಿಂದ ಕೇಂದ್ರಕ್ಕೆ ಸುಮಾರು ₹24 ಲಕ್ಷ ಕೋಟಿ ತೆರಿಗೆ ಹಣ ಹೋಗುತ್ತಿದೆ. ಒಬ್ಬ ಕನ್ನಡಿಗ ತಲಾ ₹13,428 ತೆರಿಗೆ ಕಟ್ಟುತ್ತಿದ್ದಾನೆ. ಉತ್ತರ ಪ್ರದೇಶದ ಒಬ್ಬ ವ್ಯಕ್ತಿ ಕೇವಲ ₹2,793 ತೆರಿಗೆ ಕಟ್ಟುತ್ತಿದ್ದಾನೆ. ಆದರೆ ಕೇಂದ್ರ ಸರ್ಕಾರ ತೆರಿಗೆ ಹಣ ಹಂಚಿಕೆಯಲ್ಲಿ ತಾರತಮ್ಯ ಮಾಡಿ ಬಹುಪಾಲು ಹಣವನ್ನು ಉತ್ತರ ರಾಜ್ಯಗಳಿಗೆ ಹಂಚಿಕೆ ಮಾಡಿ ದಕ್ಷಿಣ ರಾಜ್ಯಗಳಿಗೆ ವಂಚನೆ ಮಾಡುತ್ತಿದೆ ಎಂದು ದೂರಿದರು.‌

‘ಕೋವಿಡ್ ಸಂದರ್ಭದಲ್ಲಿ ಇಡೀ ದೇಶವನ್ನು ಲಾಕ್‌ಡೌನ್‌ ಮಾಡಿದಾಗ ರಾಜ್ಯ ಸರ್ಕಾರ ಕೈಚೆಲ್ಲಿ ಕುಳಿತ್ತಿತ್ತು. ಆ ಸಂದರ್ಭದಲ್ಲಿ ರೈತರು ಬೆಳೆದ ಬೆಳೆಗಳು ಮಾರಾಟವಾಗದೆ ಕಷ್ಟದಲ್ಲಿದ್ದರು. ಅವರಿಂದ ಬೆಳೆಗಳನ್ನು ಖರೀದಿ ಮಾಡಿ ಅದನ್ನು ಜನತೆಗೆ ಹಂಚುವ ಕೆಲಸ ಮಾಡಿದ್ದೇನೆ. ಅದನ್ನು ಕ್ಷೇತ್ರದ ಜನತೆಗಾಗಿ ಮಾಡಿದ್ದೇನೆ ಹೊರತು ಯಾರನ್ನು ಮೆಚ್ಚಿಸಲು ಅಲ್ಲ’ ಎಂದರು.

ದೇಶದ ಬೃಹತ್ ಕೈಗಾರಿಕೆ ಉದ್ಯಮಿಗಳ ಸುಮಾರು ₹17.50 ಲಕ್ಷ ಕೋಟಿ ಸಾಲ ಮನ್ನಾ ಮಾಡಿರುವ ಕೇಂದ್ರ ಸರ್ಕಾರ, ದೇಶದ ಬಡ ರೈತರ ಸಾಲ ಮನ್ನಾ ಮಾಡಿಲ್ಲ. ಬಿಜೆಪಿ ಸರ್ಕಾರ ಬಡವರ, ರೈತರ ವಿರೋದಿ ಎಂಬುದು ಇದರಿಂದ ಸಾಬೀತಾಗಿದೆ. ಕಳೆದ ಹತ್ತು ವರ್ಷಗಳಲ್ಲಿ ಅವರು ಹೇಳಿದ ಹದಿನೈದು ಲಕ್ಷ ಹಣ ದೇಶದ ಜನರ ಖಾತೆಗೆ ಬಂದಿಲ್ಲ. ಎರಡು ಕೋಟಿ ಉದ್ಯೋಗ ಸೃಷ್ಟಿ ಆಗಿಲ್ಲ ಎಂದು ಆರೋಪಿಸಿದರು.

ದೇಶದ ಜನರಿಗೆ ಅಚ್ಛೆ ದಿನ್ ಆಯೇಗಾ ಎಂಬ ಸುಳ್ಳು ಗ್ಯಾರಂಟಿಗಳು ಬೇಕಾ? ಇಲ್ಲಾ ನುಡಿದಂತೆ ನಡೆದಿರುವ ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳು ಬೇಕಾ ಎಂಬುದನ್ನು ರಾಜ್ಯದ ಮತದಾರರೇ ಈ ಚುನಾವಣೆಯಲ್ಲಿ ತೀರ್ಮಾನಿಸಲಿದ್ದಾರೆ ಎಂದರು.

ಈ ಚುನಾವಣೆಯ ಸತ್ಯ- ಸುಳ್ಳಿನ ನಡುವೆ ನಡೆಯುತ್ತಿದೆ. ಜನರಿಗೆ ಸೇವೆ ಮಾಡುವ ಜನಸೇವಕ ಬೇಕೋ ಹಾಗೂ ಎಸಿ ರೂಂ ನಲ್ಲಿ ಕುಳಿತು ಕೆಲಸ ಮಾಡುವವರು ಬೇಕೋ ಎಂಬುದಕ್ಕೆ ಕ್ಷೇತ್ರದ ಪ್ರಬುದ್ಧ ಮತದಾರರು ತೀರ್ಮಾನಿಸಲಿದ್ದಾರೆ. ತಮ್ಮ ಮತದಾನದ ಮೂಲಕ ತಕ್ಕ ಉತ್ತರ ನೀಡಲಿದ್ದಾರೆ ಎಂದರು.

ವಿಧಾನ ಪರಿಷತ್‌ ಸದಸ್ಯ, ಕಾಂಗ್ರೆಸ್‌ ಮುಖಂಡರಾದ ಎಚ್‌‌.ಕೆ.ಶ್ರೀಕಂಠು, ವಿಜಯದೇವು, ವಿಶ್ವನಾಥ್‌, ದಿಲೀಪ್‌, ಪುರುಷೋತ್ತಮ್‌, ಕಿರಣ್‌, ಮಲ್ಲೇಶ್‌ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಜನರ ಋಣ ತೀರಿಸದ ಎಚ್‌ಡಿಡಿ

ಎಚ್‌ಡಿಕೆ ಜಿಲ್ಲೆಯ ಜನ ಎಚ್‌.ಡಿ.ದೇವೇಗೌಡ ಅವರನ್ನು ದೇಶದ ಪ್ರಧಾನಿಯಾಗಿ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ರಾಜ್ಯದ ಮುಖ್ಯಮಂತ್ರಿ ಯನ್ನಾಗಿ ಮಾಡಿದ್ದಾರೆ. ಆದರೂ ಈ ಭಾಗದ ಜನರಿಗೆ ಶಾಶ್ವತವಾದ ನೀರಾವರಿ ಯೋಜನೆಯನ್ನು ತಂದು ಜನರ ಋಣ ತೀರಿಸುವ ಕೆಲಸ ಅವರು ಮಾಡಿಲ್ಲ ಎಂದು ಸಂಸದ ಡಿ.ಕೆ.ಸುರೇಶ್‌ ಹೇಳಿದರು. ಬೆಂಗಳೂರು ಹಾಗೂ ಸುತ್ತಲಿನ 5 ಜಿಲ್ಲೆಗಳ ಜನರ ಋಣ ತೀರಿಸುವ ಉದ್ದೇಶದಿಂದ ಕುಡಿಯುವ ನೀರಿಗಾಗಿ ಮೇಕೆದಾಟು ಯೋಜನೆ ಆರಂಭಿಸಲು ನಾವು ಪ್ರಯತ್ನಕ್ಕೆ ಸಹಕಾರ ನೀಡದಿರುವುದು ಅವರ ವಿರೋಧಿ ನೀತಿಯನ್ನು ತೋರುತ್ತದೆ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT