ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿರೋಧಿಸುವವರಿಗೆ ಎಚ್‌ಡಿಕೆ ತಿಳಿವಳಿಕೆ ಹೇಳಲಿ

ಹೇಮಾವತಿ ಎಕ್ಸ್‌ಪ್ರೆಸ್‌ ಕಾಲುವೆ ಯೋಜನೆ
Published 11 ಜೂನ್ 2024, 4:43 IST
Last Updated 11 ಜೂನ್ 2024, 4:43 IST
ಅಕ್ಷರ ಗಾತ್ರ

ಮಾಗಡಿ: ’ತಾಲ್ಲೂಕಿನ 63 ಕೆರೆಗಳಿಗೆ ನೀರು ತುಂಬಿಸುವ ಹೇಮಾವತಿ ಯೋಜನೆಗಾಗಿ ಎಕ್ಸ್‌ಪ್ರೆಸ್‌ ಕಾಲವೆ ಕಾಮಗಾರಿ ಆರಂಭಿಸಿದ್ದು, ತುಮಕೂರಿನಲ್ಲಿ ವಿರೋಧ ಮಾಡುತ್ತಿರುವ ಬಿಜೆಪಿ, ಜೆಡಿಎಸ್ ಪಕ್ಷದ ಶಾಸಕರಿಗೆ ಕೇಂದ್ರ ಸಚಿವ ಎಚ್. ಡಿ.ಕುಮಾರಸ್ವಾಮಿ ಹಾಗೂ ಸಂಸದ ಡಾ.ಸಿ.ಎನ್. ಮಂಜುನಾಥ್ ತಿಳಿವಳಿಕೆ ಹೇಳಿ ಕಾಮಗಾರಿ ಆರಂಭಿಸಬೇಕು’ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಪೂಜಾರಿ ಪಾಳ್ಯ ಕೆ.ಕೃಷ್ಣಮೂರ್ತಿ ಮನವಿ ಮಾಡಿದರು.

ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ‘ತಾಲ್ಲೂಕಿನ ಕೆರೆಗಳಿಗೆ ಹೇಮಾವತಿ ನೀರು ತರಬೇಕೆಂಬುದು 30ಕ್ಕೂ ಹೆಚ್ಚು ವರ್ಷ ಹೋರಾಟ ನಡೆದಿದೆ. ಮಾಜಿ ಸಚಿವ ಎಚ್.ಎಂ.ರೇವಣ್ಣ ಅವರ ಕನಸಿನ ಯೋಜನೆಯಾಗಿರುವ ಹೇಮಾವತಿ ಯೋಜನೆ ಅನುಷ್ಠಾನ ಆಗುವ ನಿಟ್ಟಿನಲ್ಲಿ ಸಾಕಷ್ಟು ಶ್ರಮ ಹಾಕಲಾಗಿದೆ. ಕಾಂಗ್ರೆಸ್ ಸರ್ಕಾರವು ಕೋಟಿಗಟ್ಟಲೆ ಹಣ ಬಿಡುಗಡೆಗೊಳಿಸಿ ಯೋಜನೆ ಪೂರ್ಣಗೊಳಿಸುವ ಹಂತದಲ್ಲಿ ಈಗ ಎಕ್ಸ್‌ಪ್ರೆಸ್‌ ಕಾಲುವೆ ಕಾಮಗಾರಿಗೆ ತುಮಕೂರಿನಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಕಾಮಗಾರಿ ನಡೆಯದಂತೆ ತುಮಕೂರು ಗ್ರಾಮಾಂತರ ಶಾಸಕ ಸುರೇಶ್ ಗೌಡ, ಮಾಜಿ ಸಚಿವ ಸೊಗಡು ಶಿವಣ್ಣ, ಜೆಡಿಎಸ್ ಶಾಸಕ ಎಂ.ಟಿ.ಕೃಷ್ಣಪ್ಪ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.  ನೂತನ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಪ್ರಧಾನಿಯ ಹತ್ತಿರ ನೇರವಾಗಿ ಮಾತನಾಡುವಷ್ಟು ಅಧಿಕಾರವನ್ನು ಪಡೆದಿದ್ದಾರೆ. ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವ ತಮ್ಮ ಪಕ್ಷದ ಶಾಸಕರಿಗೆ ತಿಳಿವಳಿಕೆ ಹೇಳಿ ಕಾಮಗಾರಿ ಪೂರ್ಣ ಮಾಡಲು ಸಂಪೂರ್ಣ ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.

‘ಬರಪಿಡಿತ ತಾಲ್ಲೂಕು ಆದ ಮಾಗಡಿಗೆ ನೀರಾವರಿ ಕೊಡುಗೆ ನೀಡುವ ಮೂಲಕ ರೈತರಿಗೆ ಅನುಕೂಲ ಮಾಡುವ ಕೆಲಸವನ್ನು ನೂತನ ಕೇಂದ್ರ ಸಚಿವ, ಸಂಸದರು ಮಾಡಬೇಕು. ಇಲ್ಲವಾದರೆ 15 ದಿನಗಳ ನಂತರ ನಮ್ಮ ಹೋರಾಟದ ತೀವ್ರಗೊಳಿಸಲಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಕಾಂಗ್ರೆಸ್ ಕಿಸಾನ್ ಸಮಿತಿ ಜಿಲ್ಲಾಧ್ಯಕ್ಷ ಆಗ್ರೋ ಪುರುಷೋತ್ತಮ್ ಮಾತನಾಡಿ, ‘ಈಗ ನಡೆದ ಸಂಸತ್ ಚುನಾವಣೆಯ ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಎನ್‌ಡಿಎ ಮೈತ್ರಿ ಅಭ್ಯರ್ಥಿಗೆ 29 ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದಿದ್ದು, ಚುನಾವಣೆಯಲ್ಲಿ ಗೆದ್ದಿದ್ದು ಮತದಾರರ ಋಣ ತೀರಿಸುವ ನಿಟ್ಟಿನಲ್ಲಿ ತಮ್ಮ ಪಕ್ಷದ ಶಾಸಕರಿಗೆ ತಿಳಿವಳಿಕೆ ಹೇಳಬೇಕು. ಕೇಂದ್ರದಲ್ಲಿ ನನಗೆ ಅಧಿಕಾರ ಸಿಕ್ಕರೆ ಬಯಲು ಸೀಮೆ ಪ್ರದೇಶಗಳಿಗೆ ಶಾಶ್ವತ ಕುಡಿಯುವ ನೀರಿನ ಯೋಜನೆ ಮಾಡುತ್ತೇನೆ, ಇಲ್ಲವಾದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಹೇಳಿಕೆ ಕೊಟ್ಟಿದ್ದು ಮಾಗಡಿ ತಾಲೂಕಿಗೆ ಹೇಮಾವತಿ ನೀರು ಹರಿಸುವ ನಿಟ್ಟಿನಲ್ಲಿ ಸಂಪೂರ್ಣ ಸಹಕಾರ ಕೊಡುತ್ತಾರೆ ಎಂಬ ವಿಶ್ವಾಸವಿದೆ’ ಎಂದು ಹೇಳಿದರು.

ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ವೆಂಕಟೇಶ್ ಮಾತನಾಡಿ, ಮಾಜಿ ಸಚಿವ ಸೊಗಡು ಶಿವಣ್ಣ ಅವರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಇಲ್ಲಸಲ್ಲದ ಸುಳ್ಳು ಆರೋಪ ಮಾಡುತ್ತಿದ್ದಾರೆ. ಕುಣಿಗಲ್ ತಾಲೂಕಿಗೆ 3 ಟಿಎಂಸಿ ಅಡಿ ನೀರು ಮತ್ತು ಮಾಗಡಿಗೆ ಮುಕ್ಕಾಲು ಟಿಎಂಸಿ ಅಡಿ ನೀರು ಹಂಚಿಕೆ ಮಾಡಲಾಗಿದೆ. ಕಾಲುವೆ ಮೂಲಕ ಸತತವಾಗಿ ಒಂದೂವರೆ ತಿಂಗಳು ನೀರು ಹರಿಸಿದರೆ ಮಾಗಡಿ ತಾಲೂಕಿನ 63 ಕೆರೆಗಳಿಗೆ ನೀರು ತುಂಬಿಸಬಹುದು. ಮಾಗಡಿ ತಾಲೂಕಿಗೆ ಮಾತ್ರ ಹೇಮಾವತಿ ಯೋಜನೆ ಅನುಷ್ಠಾನವಾಗಿದೆ. ರಾಮನಗರ, ಕನಕಪುರಕ್ಕೆ ಒಂದು ಹನಿ ನೀರು ತೆಗೆದುಕೊಂಡು ಹೋಗುತ್ತಿಲ್ಲ ಅಲ್ಲಿನ ಜನಗಳಿಗೆ ಸುಳ್ಳು ಮಾಹಿತಿ ನೀಡಿ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ಗ್ಯಾರಂಟಿ ಯೋಜನೆಯ ತಾಲ್ಲೂಕು ಅಧ್ಯಕ್ಷ ಕಲ್ಕೆರೆ ಶಿವಣ್ಣ ಮಾತನಾಡಿದರು. ಇದೇ ವೇಳೆ ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT