ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹೋದರರ ಆಟ ಅಂತ್ಯವಾಗುವ ದಿನ ದೂರವಿಲ್ಲ: ಎಚ್‌ಡಿಕೆ ಗುಡುಗು

ಬಿಜೆಪಿ–ಜೆಡಿಎಸ್ ಮೈತ್ರಿಕೂಟದ ಶಕ್ತಿ ಪ್ರದರ್ಶನ; ಸಹೋದರರ ವಿರುದ್ಧ ಎಚ್‌ಡಿಕೆ ಗುಡುಗು
Published 5 ಏಪ್ರಿಲ್ 2024, 5:18 IST
Last Updated 5 ಏಪ್ರಿಲ್ 2024, 5:18 IST
ಅಕ್ಷರ ಗಾತ್ರ

ರಾಮನಗರ: ‘ಜಿಲ್ಲೆಯಲ್ಲಿ ಅಣ್ಣ–ತಮ್ಮಂದಿರ ಆಟ ಅಂತ್ಯವಾಗುವ ದಿನ ದೂರವಿಲ್ಲ. 2028ರ ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಗೆಲ್ಲಿಸಲು ಎಲ್ಲಾ ರೀತಿಯ ಶಕ್ತಿ ಕೊಡುತ್ತೇವೆ. ಅಲ್ಲಿ ನಮ್ಮ ಗೆಲುವು ಖಚಿತ. ನಮ್ಮ ಕಾರ್ಯಕರ್ತರು ಯಾವುದೇ ಬೆದರಿಕೆಗೆ ಬಗ್ಗಬೇಕಿಲ್ಲ’ ಎಂದು ಜೆಡಿಎಸ್ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಗುಡುಗಿದರು.

ನಗರದಲ್ಲಿ ಗುರುವಾರ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಮೈತ್ರಿಕೂಟದ ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್. ಮಂಜುನಾಥ್ ನಾಮಪತ್ರ ಸಲ್ಲಿಕೆ ಬಳಿಕ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ‘ಕ್ಷೇತ್ರದಲ್ಲಿ ನಡೆಯುತ್ತಿರುವ ಧರ್ಮಯುದ್ದದಲ್ಲಿ ಧರ್ಮಕ್ಕೇ ಜಯ. ಡಿ.ಕೆ. ಸಹೋದರರು ಎಷ್ಟೇ ಕೋಟಿ‌ ಖರ್ಚು ಮಾಡಿದರೂ ಗೆಲುವು ಸಾಧ್ಯವಿಲ್ಲ’ ಎಂದರು.

ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್. ಮಂಜುನಾಥ್ ಅವರು ನಾಮಪತ್ರ ಸಲ್ಲಿಕೆಗೆ ಮುಂಚೆ ನಡೆದ ಮೆರವಣಿಗೆಯಲ್ಲಿ ಕಂಡುಬಂದ ಜನಸ್ತೋಮ
ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್. ಮಂಜುನಾಥ್ ಅವರು ನಾಮಪತ್ರ ಸಲ್ಲಿಕೆಗೆ ಮುಂಚೆ ನಡೆದ ಮೆರವಣಿಗೆಯಲ್ಲಿ ಕಂಡುಬಂದ ಜನಸ್ತೋಮ

‘ರಾಮನಗರಕ್ಕೆ ನಾವು ಕೊಟ್ಟ ಕೊಡುಗೆ ಏನೆಂದು ಕೇಳುತ್ತಿದ್ದಾರೆ. 1994ರಲ್ಲಿ‌ ದೇವೇಗೌಡರು ಇಲ್ಲಿಗೆ ಬರುವುದಕ್ಕೆ ಮುಂಚೆ ಹಾಗೂ ಈಗ ಜಿಲ್ಲೆ ಹೇಗಿದೆ ಎಂಬುದನ್ನು ಜನ ಗಮನಿಸಲಿ. ಸಹೋದರರು ಅಧಿಕಾರಿಗಳನ್ನು ಗುಲಾಮರಾಗಿ ಕಾಣುತ್ತಿದ್ದಾರೆ. ನಮ್ಮ ಪಕ್ಷದ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸುತ್ತಿದ್ದಾರೆ. ಹಾಲಿನ ಸಂಘಗಳಲ್ಲಿ ಲೂಟಿ ಹೊಡೆದವರಿಗೆ ರಕ್ಷಣೆ ಕೊಡುತ್ತಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್. ಮಂಜುನಾಥ್ ಅವರು ನಾಮಪತ್ರ ಸಲ್ಲಿಕೆ ಹಾಗೂ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿದ್ದ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು
ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್. ಮಂಜುನಾಥ್ ಅವರು ನಾಮಪತ್ರ ಸಲ್ಲಿಕೆ ಹಾಗೂ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿದ್ದ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು

‘ಜಾತಿ ರಾಜಕಾರಣದ ಹೆಸರಿನಲ್ಲಿ ಒಂದು ವರ್ಗದ ಜನರು ನನಗೆ ಮೋಸ ಮಾಡಿದರು. ಆದರೆ, ಅಂತಹ ರಾಜಕಾರಣ ಇಲ್ಲಿ ಹೆಚ್ಚು ದಿನ ನಡೆಯುವುದಿಲ್ಲ. ಜಿಲ್ಲೆಗೆ ನಾನು ಕಾಲಿಟ್ಟ ಬಳಿಕ ಯಾವುದೇ ಸಂಘರ್ಷಕ್ಕೆ ಅವಕಾಶ ನೀಡದಂತೆ ನೋಡಿಕೊಂಡು ಬಂದೆ. ಆದರೂ, ನನ್ನ ಕೈಬಿಟ್ಟರು’ ಎಂದು ಮುಸ್ಲಿಮರ ವಿರುದ್ಧ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು.

ರಾಮನಗರದಲ್ಲಿ ಗುರುವಾರ ನಡೆದ ಬಿಜೆಪಿ–ಜೆಡಿಎಸ್ ಕಾರ್ಯಕರ್ತರ ಸಮಾವೇಶದ ಸ್ಥಳದಲ್ಲಿ ಕಟ್ಟೆಚ್ಚರ ವಹಿಸಿದ ಅರೆ ಸೇನಾಪಡೆ ಯೋಧರು
ರಾಮನಗರದಲ್ಲಿ ಗುರುವಾರ ನಡೆದ ಬಿಜೆಪಿ–ಜೆಡಿಎಸ್ ಕಾರ್ಯಕರ್ತರ ಸಮಾವೇಶದ ಸ್ಥಳದಲ್ಲಿ ಕಟ್ಟೆಚ್ಚರ ವಹಿಸಿದ ಅರೆ ಸೇನಾಪಡೆ ಯೋಧರು

‘ನಾನು ಯಾರಿಗೂ ಅನ್ಯಾಯ ಮಾಡಿಲ್ಲ.ರಾಮನಗರ ನನ್ನ ಹೃದಯವಾಗಿದ್ದು, ಇಲ್ಲಿನ ಜನ ನನ್ನ ಕೈ ಬಿಡಬೇಡಿ. ನನ್ನ ಬದುಕು ಮತ್ತು ಅಂತ್ಯ ಇಲ್ಲೇ ಆಗಲಿದೆ. ಮಂಜುನಾಥ್ ಅವರ ಕಾರಣದಿಂದಾಗಿ ಈ‌ ಜೀವ ಉಳಿದಿದೆ. ‌ಅವರನ್ನು ನೀವು ಗೆಲ್ಲಿಸಿ ಕೊಡಿ. ಅವರು ಜಿಲ್ಲೆಯ ಲೂಟಿಗೆ ಬಂದಿಲ್ಲ. ಬದಲಿಗೆ ಜಿಲ್ಲೆಯ ಕಲ್ಯಾಣಕ್ಕೆ ಬಂದಿದ್ದಾರೆ’ ಎಂದು ಮನವಿ ಮಾಡಿದರು.

ವಿಧಾನ ಪರಿಷತ್ ಸದಸ್ಯ ಅ. ದೇವೇಗೌಡ, ದೇವೇಗೌಡರ ಪುತ್ರಿ ಶೈಲಾ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆನಂದ ಸ್ವಾಮಿ, ಜೆಡಿಎಸ್ ಅಧ್ಯಕ್ಷ ಎ. ಮಂಜುನಾಥ್, ಮುಖಂಡರಾದ ಗೌತಮ್ ಗೌಡ, ಪ್ರಸಾದ್ ಗೌಡ, ನರಸಿಂಹಮೂರ್ತಿ, ಜಯಮುತ್ತು, ನಟಿ ಶ್ರುತಿ, ರಾಜಶೇಖರ್ ಹಾಗೂ ಎರಡೂ ಪಕ್ಷಗಳ ಮುಖಂಡರು ಇದ್ದರು.

ಸಮಾವೇಶದಲ್ಲಿ ಭಾಗವಹಿಸಿದ್ದ ಬಿಜೆಪಿ ಕಾರ್ಯಕರ್ತರಿಗೆ ಪಕ್ಷದ ಧ್ವಜಗಳನ್ನು ವಿತರಿಸಲಾಯಿತು
ಸಮಾವೇಶದಲ್ಲಿ ಭಾಗವಹಿಸಿದ್ದ ಬಿಜೆಪಿ ಕಾರ್ಯಕರ್ತರಿಗೆ ಪಕ್ಷದ ಧ್ವಜಗಳನ್ನು ವಿತರಿಸಲಾಯಿತು
ಧರ್ಮ ಮತ್ತು ಅಧರ್ಮದ ನಡುವಿನ ಈ ಚುನಾವಣೆಯಲ್ಲಿ ಧರ್ಮ ಶಾಂತಿ ಮತ್ತು ಪ್ರೀತಿಯನ್ನು ಗೆಲ್ಲಿಸಬೇಕು. ಸಹೋದರರ ದ್ವೇಷಾಸೂಯೆ ತೋಳ್ಬಲ ದೌರ್ಜನ್ಯಕ್ಕೆ ಕೊನೆ ಹಾಡಬೇಕು
– ಡಾ. ಸಿ.ಎನ್. ಅಶ್ವತ್ಥ ನಾರಾಯಣ
ನನ್ನದು ಅಂಡರ್ ಗ್ರೌಂಡ್ ಕ್ಷೇತ್ರ. ನಿಷ್ಠಾವಂತರ ಪಡೆ ನನ್ನೊಂದಿಗಿದ್ದು ಯಾರಿಗೂ ಅಂಜದೆ ಕೆಲಸ ಮಾಡುವೆ. ಈ ಚುನಾವಣೆ ಕನಕಪುರ ಮತ್ತು ಗ್ರಾಮಾಂತರಕ್ಕೆ ಸ್ವಾತಂತ್ರ್ಯ ತಂದು ಕೊಡುವ ಹೋರಾಟವಾಗಿದೆ
– ಎಂ. ಕೃಷ್ಣಪ್ಪ ಶಾಸಕ ಬೆಂಗಳೂರು ದಕ್ಷಿಣ
ಎಚ್‌ಡಿಕೆಗೆ ಗಂಡಸ್ತನ ಮತ್ತು ತಾಕತ್ತಿಲ್ಲವಾ ಎಂದಿರುವ ಸ್ಥಳೀಯ ಶಾಸಕರು ರಾಮನಗರದಲ್ಲಿ ಹೆಚ್ಚಿನ ಲೀಡ್ ಕೊಡಿಸಿ ತಮ್ಮ ಗಂಡಸ್ತನ ತೋರಿಸಲಿ
– ಮುನಿರತ್ನ ಶಾಸಕ
ಎದುರಾಳಿಗಳು ನನ್ನ ಹೆಸರಿನ ನಾಲ್ವರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವುದನ್ನು ನೋಡಿದರೆ ಈಗಾಗಲೇ ಅವರು ಚುನಾವಣೆಯಲ್ಲಿ ಸೋಲು ಒಪ್ಪಿಕೊಂಡಿದ್ದಾರೆ ಎಂದರ್ಥ
– ಡಾ. ಸಿ.ಎನ್. ಮಂಜುನಾಥ್ ಮೈತ್ರಿಕೂಟದ ಅಭ್ಯರ್ಥಿ

ಕಣದಿಂದು ಹಿಂದೆ ಸರಿದು ಬೆಂಬಲ ಕೊಡಿ: ಬಿಎಸ್‌ವೈ

‘ತಮ್ಮ ನಿಸ್ವಾರ್ಥ ಸೇವೆಗಾಗಿ ಮಂಜುನಾಥ್ ಅವರು ಅವಿರೋಧವಾಗಿ ಆಯ್ಕೆಯಾಗಬೇಕಾಗಿತ್ತು. ಕಾಂಗ್ರೆಸ್‌ನ ಡಿ.ಕೆ. ಶಿವಕುಮಾರ್ ಮತ್ತು ಡಿ.ಕೆ. ಸುರೇಶ್ ಅವರಿಗೆ ಅಧಿಕಾರ ಪಡೆಯಲು ಬೇಕಾದಷ್ಟು ಅವಕಾಶಗಳಿವೆ. ಮಂಜುನಾಥ್ ಸೇವೆಗೆ ಅವಕಾಶ ಮಾಡಿಕೊಡುವುದಕ್ಕಾಗಿ ಸುರೇಶ್ ಅವರು ಚುನಾವಣಾ ಕಣದಿಂದ ಹಿಂದೆ ಸರಿದು ಬೇಷರತ್ ಬೆಂಬಲ ಕೊಡಬೇಕು’ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಒತ್ತಾಯಿಸಿದರು. ಸಾಧನೆ ಚರ್ಚೆಗೆ ಸಾವಂತ್ ಆಹ್ವಾನ ‘ಕಾಂಗ್ರೆಸ್ ಐವತ್ತು ವರ್ಷಗಳಲ್ಲಿ ಮಾಡಿದ ಕೆಲಸವನ್ನು ಬಿಜೆಪಿ ಕೇವಲ ಹತ್ತು ವರ್ಷಗಳಲ್ಲಿ ಮಾಡಿದೆ. ಈ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಬಹಿರಂಗ ಚರ್ಚೆಗೆ ಸಿದ್ಧನಿದ್ದೇನೆ’ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸವಾಲು ಹಾಕಿದರು. ‘ವರ್ಷದ ಹಿಂದೆಯೇ ಈ ಮೈತ್ರಿಯಾಗಿದ್ದರೆ ರಾಜ್ಯದಲ್ಲಿ ಡಬಲ್ ಎಂಜಿನ್ ಸರ್ಕಾರ ಇರುತ್ತಿತ್ತು. ಈಗಲೂ ಕಾಲ ಮಿಂಚಿಲ್ಲ. ಈ ಚುನಾವಣೆಯಲ್ಲಿ ಹೆಚ್ಚಿನ ಅಭ್ಯರ್ಥಿಗಳನ್ನು ಗೆಲ್ಲಿಸಿ ಕಳಿಸಿದರೆ ಮುಂದೆ ಡಬಲ್ ಎಂಜಿನ್ ಸರ್ಕಾರ ಬರಲಿದೆ’ ಎಂದು ಹೇಳಿದರು. ‘ರಾವಣ ರಾಜ್ಯ ಅಂತ್ಯ; ರಾಮ ರಾಜ್ಯ ಸ್ಥಾಪನೆ’ ‘ಜಿಲ್ಲೆಯು ರಾಕ್ಷಸರ ಕೈಗೆ ಸಿಕ್ಕಿ ನಲುಗಿದೆ. ರಾವಣ ರಾಜ್ಯ ಕೊನೆಗಾಣಿಸಿ ರಾಮರಾಜ್ಯ ಸ್ಥಾಪಿಸಲು ಇಲ್ಲಿಗೆ ಸಾವಿರಾರು ಜನ ಬಂದಿದ್ದಾರೆ. ಜಿಲ್ಲೆಯ ಕಷ್ಟಸುಖ ಆಲಿಸದ ಡಿ.ಕೆ. ಶಿವಕುಮಾರ್ ಅವರು ರಾಮನಗರದಲ್ಲಿ ಏನೂ ಸಿಗುವುದಿಲ್ಲವೆಂದು ಜೆಸಿಬಿ ಹಿಟಾಚಿ ತೆಗೆದುಕೊಂಡು ಬೆಂಗಳೂರಿನಲ್ಲಿ ಹೋಗಿ ಬಗೆಯುತ್ತಿದ್ದಾರೆ. ಕಾಂಗ್ರೆಸ್‌ನ ರಾಕ್ಷಸ ಸಂಸ್ಕೃತಿ ಅಳಿಸಲು ಮೈತ್ರಿ ಅನಿವಾರ್ಯವಾಗಿತ್ತು. ಮತದಾರರು ಈ ಸಲ ‘ಡಿಕೆಶಿ ನೋಟು ಡಾಕ್ಟರ್‌ಗೆ ವೋಟು’ ಎಂಬ ಘೋಷವಾಕ್ಯವನ್ನು ನೆನಪಿಕೊಳ್ಳಬೇಕು. ನಾವು ಸಂಸದರ ಬದಲು ಆರೋಗ್ಯ ಸಚಿವನ ಆಯ್ಕೆಗೆ ಮತ ಹಾಕುತ್ತಿದ್ದೇವೆ ಎಂಬುದರ ಅರಿವಿರಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT