ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ | ಲಿಂಗಾಯತ ಮುಖಂಡರೊಂದಿಗೆ ಡಿ.ಕೆ. ಸುರೇಶ್ ಸಭೆ

ಶಿವಕುಮಾರ ಸ್ವಾಮೀಜಿ ಹುಟ್ಟೂರು ವೀರಾಪುರ ಅಭಿವೃದ್ಧಿ ಭರವಸೆ
Published 16 ಏಪ್ರಿಲ್ 2024, 5:38 IST
Last Updated 16 ಏಪ್ರಿಲ್ 2024, 5:38 IST
ಅಕ್ಷರ ಗಾತ್ರ

ಕುದೂರು (ರಾಮನಗರ): ಚುನಾವಣೆ ಹೊತ್ತಲ್ಲೇ ಇಲ್ಲಿನ ನಾರಸಂದ್ರದಲ್ಲಿ ಲಿಂಗಾಯತ ಸಮುದಾಯದ ಮುಖಂಡರೊಂದಿಗೆ ಸಭೆ ನಡೆಸಿದ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಅವರು ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡಿದರು.

‘ತುಮಕೂರಿನ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರ ಹುಟ್ಟೂರು ವೀರಾಪುರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಒಂದೂವರೆ ವರ್ಷದೊಳಗೆ ಪೂರ್ಣಗೊಳಿಸಿ ಉದ್ಘಾಟನೆ ಮಾಡಲಾಗುವುದು’ ಎಂದು ಭರವಸೆ ನೀಡಿದರು.

‘ನನಗೆ ಜಾತಿ –ಧರ್ಮ ಗೊತ್ತಿಲ್ಲ. ನೀವು ನನಗೆ ಮತ ಹಾಕುತ್ತೀರಿ ಎಂಬ ವಿಶ್ವಾಸವಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೂತರೆ ನಿಂತರೆ ನೊಣವಿನಕೆರೆ ಅಜ್ಜಯ್ಯ ಅವರನ್ನು ಪೂಜಿಸುತ್ತಾರೆ. ಡಿಸಿಎಂ ಆಗಲು ಅವರ ಆಶೀರ್ವಾದವೂ ಕಾರಣ. ಈ ಚುನಾವಣೆಯಲ್ಲೂ ನಮಗೆ ಅವರ ಆಶೀರ್ವಾದವಿದೆ. ಶಿವಕುಮಾರ ಸ್ವಾಮೀಜಿ ಹಾಗೂ ಇಲ್ಲಿನ ಜೈನ ಮಠದ ಆಶೀರ್ವಾದವೂ ನಮಗಿದೆ’ ಎಂದರು.

‘ದೇಶದಲ್ಲಿ ಸುಳ್ಳುಗಳನ್ನೇ ಪದೇ ಪದೇ ಹೇಳಿ ನಿಜ ಮಾಡುವ ಪ್ರಯತ್ನಗಳು ನಡೆಯುತ್ತಿವೆ. ಯುವಜನರು ಭ್ರಮನಿರಸನವಾಗಿದ್ದು, ಬದಲಾವಣೆ ಬಯಸಿದ್ದಾರೆ. ಬಸವಣ್ಣ, ಕುವೆಂಪು, ಡಾ.ಬಿ.ಆರ್. ಅಂಬೇಡ್ಕರ್ ಅವರ ತತ್ವಗಳು ಮರೆಯಾಗುತ್ತಿವೆ. ಅವುಗಳನ್ನು ಪುನರ್ ಸ್ಥಾಪಿಸಲು ನಾವು ಹೋರಾಟ ಮಾಡುತ್ತಿದ್ದೇವೆ. ನಿಮ್ಮ ಪರವಾಗಿ ಕೆಲಸ ಮಾಡಿರುವ ನನಗೆ ಚುನಾವಣೆಯಲ್ಲಿ ಮತದ ಕೂಲಿ ಕೊಡಿ. ಇದರಿಂದ ಮತ್ತಷ್ಟು ಕೆಲಸ ಮಾಡಲು ಶಕ್ತಿ ಬರುತ್ತದೆ’ ಎಂದು ಕೋರಿದರು.

ತಾಲ್ಲೂಕಿನ ಅಭಿವೃದ್ಧಿಗಾಗಿ ನಿಮ್ಮ ಮತ ಹಾಕಿ. ಕಳೆದ 10 ವರ್ಷಗಳಿಂದ ಮೋದಿ ಅವರು ಕೇವಲ ಒಂದೇ ಭಾಷಣ ಮಾಡುತ್ತಿದ್ದಾರೆ. ನಿಮ್ಮ ಆದಾಯ ಡಬಲ್ ಆಗಲಿದೆ ಎಂದು ಹೇಳುತ್ತಿದ್ದಾರೆ. ನಿಮ್ಮ ಆದಾಯ ಡಬಲ್ ಆಗಿದೆಯಾ? ಖರ್ಚು ಡಬಲ್ ಆಗಿದೆಯಾ? ವೆಚ್ಚ ಡಬಲ್ ಆಗಿರುವಾಗ ಮೋದಿ ಜಪ ಏಕೆ ಮಾಡುತ್ತೀರಿ? ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ. ನಮಗೆ ಮತ್ತೊಮ್ಮೆ ಶಕ್ತಿ ನೀಡಿ ಹೆಚ್ಚಿನ ಕೆಲಸ ಮಾಡಲು ಅವಕಾಶ ಕೊಡಿ ಎಂದರು.

ಮುಂದಿನ ಎರಡು ವರ್ಷಗಳಲ್ಲಿ ಸಂಪರ್ಕ ಕಾಲುವೆ ಮೂಲಕ ಶ್ರೀರಂಗ ಏತನೀರಾವರಿ ಯೋಜನೆಯಿಂದ ಮೂಲಕ ನೀರು ಕೊಡಿಸುವ ಜವಾಬ್ದಾರಿ ನಮ್ಮದು. ವಿರೋಧ ಪಕ್ಷದವರು ಇರುವುದೇ ಮಾತನಾಡಲು. ಅವರು ಮಾತನಾಡುತ್ತಿದ್ದರೆ ನಾನು ಎಚ್ಚರಿಕೆಯಿಂದ ಕೆಲಸ ಮಾಡಬಹುದು. ಅವರ ಅವಧಿಯಲ್ಲಿ ಏನು ಮಾಡಿದ್ದಾರೋ ಮಾಡಿಲ್ಲವೋ ಗೊತ್ತಿಲ್ಲ. ಜನ ತೀರ್ಪು ನೀಡಿ ಬಾಲಕೃಷ್ಣ ಅವರಿಗೆ ಸೇವೆ ಮಾಡಲು ಅವಕಾಶ ನೀಡಿದ್ದಾರೆ. ಅವರಂತೆ ನನಗೂ ಹೆಚ್ಚಿನ ಮತ ನೀಡಿ ಆಶೀರ್ವಾದ ಮಾಡಿ. ನಾವು ನಿಮ್ಮ ಕೆಲಸಗಳನ್ನು ಮಾಡುತ್ತೇವೆ ಎಂದು ಭರವಸೆ ನೀಡಿದರು.

ಮಾಗಡಿ ಶಾಸಕ ಎಚ್‌.ಸಿ. ಬಾಲಕೃಷ್ಣ ಹಾಗೂ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್‌.ಎಂ. ರೇವಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT