ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ನಿಂದ ಅಂಬೇಡ್ಕರ್‌ಗೆ ಅನ್ಯಾಯವಾಗಿಲ್ಲ: ನರಸಿಂಹಯ್ಯ

ಸಂವಿಧಾನ ರಚನೆಗೆ ಅವಕಾಶ ಕೊಟ್ಟಿದ್ದು, ಸಚಿವರನ್ನಾಗಿ ಮಾಡಿದ್ದು ಕಾಂಗ್ರೆಸ್: ನರಸಿಂಹಯ್ಯ
Published 24 ಏಪ್ರಿಲ್ 2024, 5:20 IST
Last Updated 24 ಏಪ್ರಿಲ್ 2024, 5:20 IST
ಅಕ್ಷರ ಗಾತ್ರ

ರಾಮನಗರ: ‘ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಅನ್ಯಾಯ ಮಾಡಿದೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಸಂವಿಧಾನ ಬರೆಯಲು ಅಂಬೇಡ್ಕರ್‌ ಅವರಿಗೆ ಅವಕಾಶ ಕೊಟ್ಟಿದ್ದೇ ಕಾಂಗ್ರೆಸ್. ಅದರಿಂದಾಗಿಯೇ, ಅವರ ಹೆಸರು ದೇಶವಷ್ಟೇ ಅಲ್ಲದೆ ವಿಶ್ವಮಟ್ಟದಲ್ಲಿ ಜನಪ್ರಿಯವಾಯಿತು’ ಎಂದು ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಮತ್ತು ಪರಿಶಿಷ್ಟ ಪಂಗಡ ಘಟಕದ ಅಧ್ಯಕ್ಷ ಎನ್. ನರಸಿಂಹಯ್ಯ ಹೇಳಿದರು.

‘ತಮ್ಮ ನಾಯಕರನ್ನು ಮೆಚ್ಚಿಸುವುದಕ್ಕಾಗಿ ಬಿಜೆಪಿ ಮತ್ತು ಜೆಡಿಎಸ್‌ನಲ್ಲಿರುವ ದಲಿತ ಮುಖಂಡರು, ಅಂಬೇಡ್ಕರ್ ಕುರಿತು ವಾಸ್ತವ ಮರೆಮಾಚಿ ಸುಳ್ಳು ಹೇಳುತ್ತಿದ್ದಾರೆ. ದೇಶದ ದಲಿತರು ಇಂದು ಉತ್ತಮ ಸ್ಥಿತಿಯಲ್ಲಿದ್ದರೆ ಅದಕ್ಕೆ ಸಂವಿಧಾನದ ಜೊತೆಗೆ ಕಾಂಗ್ರೆಸ್ ಕೂಡ ಕಾರಣ’ ಎಂದು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿರುಗೇಟು ನೀಡಿದರು.

‘ಅಂಬೇಡ್ಕರ್ ತೀರಿಕೊಂಡಾಗ ಅಂತ್ಯಕ್ರಿಯೆಗೆ ಕಾಂಗ್ರೆಸ್‌ನವರು ಜಾಗ ಕೊಡಲಿಲ್ಲ ಎಂಬುದು ಸುಳ್ಳು. ಸ್ವಾಭಿಮಾನಿಯಾಗಿದ್ದ ಅಂಬೇಡ್ಕರ್ ತಮ್ಮ ಕಡೆಯ ದಿನಗಳಲ್ಲಿ, ನನ್ನ ಕರ್ಮಭೂಮಿ ಮುಂಬೈನಲ್ಲೇ ಅಂತ್ಯಕ್ರಿಯೆ ನಡೆಯಬೇಕು. ಯಾರೊಬ್ಬರ ನೆರವು ಪಡೆಯಬಾರದು ಎಂದು ತಮ್ಮ ಆಪ್ತ ಸಹಾಯಕ ನಾನಕ್‌ಚಂದ್ ರತ್ತು ಬಳಿ ಹೇಳಿಕೊಂಡಿದ್ದರು. ಅವರ ಆಶಯದಂತೆ, ದೆಹಲಿ ಬದಲು ಮುಂಬೈನಲ್ಲಿ ಅಂತ್ಯಕ್ರಿಯೆ ನಡೆಯಿತು. ದೆಹಲಿಯಿಂದ ಮೃತದೇಹವನ್ನು ಮುಂಬೈಗೆ ಸಾಗಿಸಲು ಸಚಿವರಾಗಿದ್ದ ಜಗಜೀವನ್ ರಾಂ ವಿಮಾನ ವ್ಯವಸ್ಥೆ ಮಾಡಿದ್ದರು. ಅದರ ಶುಲ್ಕವನ್ನು ಸಹ ಅಂಬೇಡ್ಕರ್ ಅಭಿಮಾನಿಗಳು ಪಾವತಿಸಿದ್ದರು. ಈ ವಿಷಯವನ್ನು ತಿರುಚಿ ಹೇಳುವ ಮನುವಾದಿಗಳ ಮಾತನ್ನೇ, ದಲಿತರೂ ಹೇಳುತ್ತಾ ಅಂಬೇಡ್ಕರ್‌ಗೆ ಅವಮಾನ ಮಾಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಡಿಸಿದರು.

‘ಕಾಂಗ್ರೆಸ್ ಸಂವಿಧಾನದ ಪರವಾಗಿದ್ದರೆ, ಬಿಜೆಪಿ ತದ್ವಿರುದ್ಧವಾಗಿದೆ. ಆ ಪಕ್ಷದ ಸಚಿವರು ಹಾಗೂ ಸಂಸದರು ಸಂವಿಧಾನ ಬದಲಾವಣೆ ಕುರಿತು ರಾಜಾರೋಷವಾಗಿ ಮಾತನಾಡಿದ್ದಾರೆ. ಇಷ್ಟು ದಿನ ಎಲ್ಲವನ್ನೂ ಕೇಳಿಸಿಕೊಂಡು ಸುಮ್ಮನಿದ್ದ ಮೋದಿ, ಚುನಾವಣೆ ಬರುತ್ತಿದ್ದಂತೆ ಸ್ವತಃ ಅಂಬೇಡ್ಕರ್ ಬಂದರೂ ಸಂವಿಧಾನ ಬದಲಾವಣೆ ಸಾಧ್ಯವಿಲ್ಲ ಎಂದಿರುವುದು ಅವರ ಸಮಯಸಾಧಕತನವನ್ನು ತೋರಿಸುತ್ತದೆ’ ಎಂದು ಟೀಕಿಸಿದರು.

ಘಟಕದ ಜಿಲ್ಲಾ ಉಪಾಧ್ಯಕ್ಷ ಜಯಚಂದ್ರ, ಜಂಟಿ ಕಾರ್ಯದರ್ಶಿ ಶಿವಣ್ಣ, ಸಾತನೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರುಮೂರ್ತಿ ಎನ್.ಸಿ, ಕನಕಪುರದ ಮಾರುತಿ, ಕೃಷ್ಣ ನಾಯಕ, ಅಂಚೀಪುರ ಶೇಖರ್ ಹಾಗೂ ಇತರರು ಇದ್ದರು.

ಜೆಡಿಎಸ್‌ನ ಎಚ್.ಡಿ. ದೇವೇಗೌಡ ಮತ್ತು ಎಚ್‌.ಡಿ. ಕುಮಾರಸ್ವಾಮಿ ಅವರು ತಮ್ಮ ಸ್ವಾರ್ಥಕ್ಕಾಗಿ ಬಿಜೆಪಿಗೆ ಪಕ್ಷವನ್ನು ಅಡವಿಟ್ಟಿದ್ದಾರೆ. ಕೋಮುವಾದಿಗಳ‌ ಜೊತೆ ಕೈ ಜೋಡಿಸಿ ಜಾತ್ಯತೀತ ತತ್ವವನ್ನು ಗಾಳಿಗೆ ತೂರಿದ್ದಾರೆ

– ಎನ್. ನರಸಿಂಹಯ್ಯ ಅಧ್ಯಕ್ಷ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಮತ್ತು ಪರಿಶಿಷ್ಟ ಪಂಗಡ ಘಟಕ

‘ವಿದ್ವತ್ತಿಗೆ ತಲೆಬಾಗಿ ಸಚಿವ ಸ್ಥಾನ ಕೊಟ್ಟಿದ್ದರು’

‘ದೇಶದಲ್ಲಿ ಮೊದಲಿಗೆ ಅಸ್ತಿತ್ವಕ್ಕೆ ಬಂದ ಜವಾಹರಲಾಲ್ ನೆಹರೂ ನೇತೃತ್ವದ ಕಾಂಗ್ರೆಸ್ ಸರ್ಕಾರವು ಅಂಬೇಡ್ಕರ್ ಅವರ ವಿದ್ವತ್ತಿಗೆ ತಲೆಬಾಗಿ ಅವರನ್ನು ಕಾನೂನು ಸಚಿವರನ್ನಾಗಿ ಮಾಡಿತ್ತು. ಹಿಂದೂ ಕೋಡ್‌ ಬಿಲ್‌ಗೆ ಬಹುಮತ ಸಿಗದಿದ್ದಾಗ ಬೇಸರಗೊಂಡು ಅಂಬೇಡ್ಕರ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ನಂತರದ ಚುನಾವಣೆಯಲ್ಲಿ ತಮ್ಮ ಪಕ್ಷದಿಂದಲೇ ಸ್ಪರ್ಧಿಸುವಂತೆ ಕಾಂಗ್ರೆಸ್ ನಾಯಕರು ಅಂಬೇಡ್ಕರ್ ಮನವೊಲಿಸಲು ಯತ್ನಿಸಿದ್ದರು’ ಎಂದು ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಮತ್ತು ಪರಿಶಿಷ್ಟ ಪಂಗಡ ಘಟಕದ ಪ್ರಧಾನ ಕಾರ್ಯದರ್ಶಿ ಜಯರಾಮ್ ಹೇಳಿದರು. ‘ಸ್ವಾಭಿಮಾನಿ ಅಂಬೇಡ್ಕರ್ ತಾವು ಕಟ್ಟಿರುವ ಪಕ್ಷದಿಂದಲೇ ಸ್ಪರ್ಧಿಸುವುದಾಗಿ ಹೇಳಿದರು. ತಮ್ಮ ಪಕ್ಷದಿಂದ ಕಣಕ್ಕಿಳಿದಿದ್ದ ಅವರು ಕಾಂಗ್ರೆಸ್ ಅಭ್ಯರ್ಥಿ ಎದುರು ಸೋತರು. ಪಕ್ಷ ರಾಜಕಾರಣ ಎಂದ ಮೇಲೆ ಸೋಲು–ಗೆಲುವು ಸಹಜ. ಇದನ್ನೇ ವಿರೋಧ ಪಕ್ಷದವರು ಅಂಬೇಡ್ಕರ್ ಅವರನ್ನು ಕಾಂಗ್ರೆಸ್‌ನವರು ಸೋಲಿಸಿ ಅನ್ಯಾಯ ಮಾಡಿದರು ಎಂದು ಅಪಪ್ರಚಾರ ಮಾಡುತ್ತಾ ದಲಿತರ ದಿಕ್ಕು ತಪ್ಪಿಸುತ್ತಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT