ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದೇಶದ ಪ್ರಗತಿಗೆ ಮೋದಿ ಕೊಡುಗೆ ಏನು: ಖರ್ಗೆ ಪ್ರಶ್ನೆ

Published 23 ಏಪ್ರಿಲ್ 2024, 5:45 IST
Last Updated 23 ಏಪ್ರಿಲ್ 2024, 5:45 IST
ಅಕ್ಷರ ಗಾತ್ರ

ಚನ್ನಪಟ್ಟಣ: ‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರೈತರ ಏಳಿಗೆಗೆ ಏನು ಕೊಡುಗೆ ನೀಡಿದೆ, ಹೆಣ್ಣುಮಕ್ಕಳ ಉದ್ಧಾರಕ್ಕೆ ಯಾವ ಯೋಜನೆ ರೂಪಿಸಿದೆ, ದೇಶದ ಪ್ರಗತಿಗೆ ಏನು ಮಾಡಿದೆ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದರು.

ನಗರದ ಕೆ.ಎಚ್.ಬಿ. ಬಡಾವಣೆಯಲ್ಲಿ ಸೋಮವಾರ ನಡೆದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಅವರ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಬಿಜೆಪಿಯು ದೇಶವನ್ನು ಒಡೆಯುವ ಕೆಲಸವನ್ನು ಮಾಡುತ್ತಿದೆ. ಜಾತಿ ಜಾತಿಗಳ ನಡುವೆ, ಜನರ ಜನರ ನಡುವೆ ಜಗಳವನ್ನು ತಂದಿಕ್ಕುವ ಕೆಲಸ ಮಾಡುತ್ತಿದೆ’ ಎಂದು ಆರೋಪಿಸಿದರು.

‘ಮೋದಿಯವರು ಹತ್ತು ವರ್ಷಗಳಿಂದ ಸತತವಾಗಿ ಪ್ರಧಾನಿಯಾಗಿದ್ದಾರೆ. ಆದರೆ, ಕೊಟ್ಟ ಮಾತನ್ನು ಉಳಿಸಿಕೊಂಡಿಲ್ಲ. ಎರಡು ಕೋಟಿ ಉದ್ಯೋಗ ಸೃಷ್ಟಿಸುತ್ತೇನೆ ಎಂದಿದ್ದರು, ವಿದೇಶಿ ಬ್ಯಾಂಕ್ ಗಳಲ್ಲಿರುವ ಕಪ್ಪು ಹಣವನ್ನು ತಂದು ಬಡವರ ಖಾತೆಗೆ ₹ 15 ಲಕ್ಷ ಹಣ ಹಾಕುತ್ತೇನೆ ಎಂದಿದ್ದರು. ಇವೆಲ್ಲವನ್ನು ಎಲ್ಲಿ ಮಾಡಿದ್ದಾರೆ. ಕಾಂಗ್ರೆಸ್‌ನವರು ಸುಳ್ಳು ಹೇಳುತ್ತಾರೆ ಎಂದು ಮೋದಿ ಆರೋಪಿಸುತ್ತಾರೆ, ಸುಳ್ಳು ಹೇಳುತ್ತಿರುವುದು ಮೋದಿಯವರಾ, ಕಾಂಗ್ರೆಸ್‌ನವರಾ’ ಎಂದು ಹರಿಹಾಯ್ದರು.

‘ದೇಶದಲ್ಲಿ ಪ್ರಜಾಪ್ರಭುತ್ವ ಹಾಗೂ ಸಂವಿಧಾನ ಉಳಿಯಬೇಕಾದರೆ ದೇಶದ ಜನತೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು. ಈ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಅವರು ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಕ್ಷೇತ್ರದ ಜನತೆ ಸುರೇಶ್ ಅವರನ್ನು ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ, ‘ಕಾಂಗ್ರೆಸ್ ಗೆದ್ದರೆ ಮಾಂಗಲ್ಯ ಸೂತ್ರ ಕಿತ್ತು ಮುಸ್ಲಿಮರಿಗೆ ನೀಡುತ್ತದೆ ಎಂದು ದೇಶದ ಪ್ರಧಾನಿ ಹೇಳುತ್ತಿದ್ದಾರೆ. ಮೋದಿಯವರಿಗೆ ಸೋಲುತ್ತೇನೆ ಎನ್ನುವ ಭಯ ಉಂಟಾಗಿದೆ ಅದಕ್ಕೆ ಹೀಗೆ ಮಾತನಾಡುತ್ತಿದ್ದಾರೆ. ಬಿಜೆಪಿ ಈ ಬಾರಿ ಅಧಿಕಾರಕ್ಕೆ ಬರುವುದಕ್ಕೆ ಸಾಧ್ಯವೇ ಇಲ್ಲ’ ಎಂದರು.

‘ಜೆಡಿಎಸ್ ಪಕ್ಷಕ್ಕೆ ಭವಿಷ್ಯವಿಲ್ಲ. ಕುಮಾರಸ್ವಾಮಿ ಅವರಿಗೆ ಧೈರ್ಯ ಇದ್ದಿದ್ದರೆ, ಕರ್ಮಭೂಮಿ ಎಂದು ಕರೆಯುವ ಇದೇ ಕ್ಷೇತ್ರದಲ್ಲಿ ಚುನಾವಣೆಯನ್ನು ಎದುರಿಸಬೇಕಾಗಿತ್ತು. ಅವರು ತಮ್ಮ ಭಾವನನ್ನು ಬೇರೊಂದು ಪಕ್ಷದಿಂದ ನಿಲ್ಲಿಸಿದ್ದಾರೆ. ಪ್ರಧಾನಿಯನ್ನಾಗಿ, ಮಗನನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ ಜಿಲ್ಲೆಯನ್ನು ಬಿಟ್ಟು ಬೇರೆ ಜಿಲ್ಲೆಗೆ ಹೋಗಿ ಸ್ಪರ್ಧೆ ಮಾಡುತ್ತಿದ್ದಾರೆ. ಇದಕ್ಕಿಂತ ಅವಮಾನದ ಸಂಗತಿ ಮತ್ತೊಂದಿಲ್ಲ’ ಎಂದರು.

‘ಡಿ.ಕೆ. ಸುರೇಶ್ ಅವರು ಪಂಚಾಯಿತಿ ಸದಸ್ಯನಂತೆ ಕೆಲಸ ಮಾಡಿದ್ದಾರೆ. ಕ್ಷೇತ್ರದಲ್ಲಿ 400ಕ್ಕೂ ಹೆಚ್ಚು ಶುದ್ದ ಕುಡಿಯುವ ನೀರಿನ ಘಟಕಗಳು, ಒಬ್ಬ ರೈತನಿಗೆ ಒಂದು ಟ್ರಾನ್ಸ್ ಫಾರ್ಮರ್ ವ್ಯವಸ್ಥೆ, ಸತ್ತೇಗಾಲದಿಂದ ನೀರನ್ನು ಒದಗಿಸುವ ವ್ಯವಸ್ಥೆ, ಕಣ್ವ ಜೀವನದಿಯಾಗಿಸುವ ಕೆಲಸ ಮಾಡಿದ್ದಾರೆ. ಕೊರೊನಾ ಕಾಲದಲ್ಲಿ ಯೋಗೇಶ್ವರ್, ಕುಮಾರಸ್ವಾಮಿ ಎಲ್ಲಿಗೆ ಹೋಗಿದ್ದರು. ಡಿ.ಕೆ.ಸುರೇಶ್ ಆಹಾರ, ಔಷಧಿ ಸೇರಿದಂತೆ ಜನರ ಸೇವೆ ಮಾಡಿದರು. ಶವಸಂಸ್ಕಾರ ಮಾಡಿದರು. ಕ್ಷೇತ್ರದ ಜನತೆ ಡಿ.ಕೆ. ಸುರೇಶ್ ಅವರನ್ನು ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಪುಟ್ಟಣ್ಣ, ಸುಧಾಮ್ ದಾಸ್, ಬೆಂಗಳೂರು - ಮೈಸೂರು ಇನ್ ಫ್ರಾಸ್ಟ್ರಕ್ಚರ್ ಕಾರಿಡಾರ್ ಅಧ್ಯಕ್ಷ ರಘುನಂದನ್ ರಾಮಣ್ಣ, ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ ರೇವಣ್ಣ, ಎಐಸಿಸಿ ಸದಸ್ಯ ಪ್ರಣವ್ ರಾವ್, ಮಾಜಿ ಶಾಸಕರಾದ ಎಂ.ಸಿ. ಅಶ್ವಥ್, ಸಾದತ್ ಆಲಿಖಾನ್, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಗಂಗಾಧರ್, ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಮೋದ, ಸುನೀಲ್, ಸ್ಥಳೀಯ ಮುಖಂಡರು ಭಾಗವಹಿಸಿದ್ದರು.

‘ಜೆಡಿಎಸ್ ಒಂದೂ ಕ್ಷೇತ್ರದಲ್ಲೂ ಗೆಲ್ಲುವುದಿಲ್ಲ’

ಚನ್ನಪಟ್ಟಣ: ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಒಂದೂ ಸ್ಥಾನದಲ್ಲೂ ಗೆಲ್ಲುವುದಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭವಿಷ್ಯ ನುಡಿದರು. ‘ದೇವೇಗೌಡರು ತಮ್ಮ ಅಳಿಯನನ್ನು ಬಿಜೆಪಿಯಿಂದ ನಿಲ್ಲಿಸಿದ್ದಾರೆ. ಒಂದು ಕಡೆ ಮಗ ಮತ್ತೊಂದು ಕಡೆ ಮೊಮ್ಮಗ. ಈ ಎಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ಈ ಹಿಂದೆಯೂ 2013ರಲ್ಲಿ ಸುರೇಶ್ ವಿರುದ್ಧ ಅನಿತಾ ಕುಮಾರಸ್ವಾಮಿ ಅವರನ್ನು ನಿಲ್ಲಿಸಿದ್ದರು. ಆದರೆ ಜನರ ಸಹಕಾರದಿಂದ ನಾವು ಗೆದ್ದೆವು. ಈ ಚುನಾವಣೆ ಮುಗಿದ ನಂತರ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ಜಗಳ ಹಳ್ಳಿ ಹಳ್ಳಿಗಳಲ್ಲಿ ಪ್ರಾರಂಭವಾಗಲಿದೆ. ನನ್ನ ಮಾತು ಅಕ್ಷರಶಃ ಸತ್ಯವಾಗುತ್ತದೆ’ ಎಂದರು. ‘ಹಾಸನದಿಂದ ಬಂದವರಿಗೆ ನಮ್ಮ ಜಿಲ್ಲೆಯಲ್ಲಿ ಅವಕಾಶ ಮಾಡಿಕೊಟ್ಟಿದ್ದೇವೆ. ನಾನೇ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಸೂಚಿಸಿದ್ದೆ. ಆದರೆ ಇಂದು ಕುಮಾರಸ್ವಾಮಿ ಅವರು ಅಧಿಕಾರದಿಂದ ಕೆಳಗೆ ಇಳಿಸಿದವರನ್ನೇ ತಬ್ಬಾಡುತ್ತಿದ್ದಾರೆ. ಅವರಿಗೆ ನೀತಿ ಇಲ್ಲ ಸಿದ್ಧಾಂತವಿಲ್ಲ’ ಎಂದು ಟೀಕಿಸಿದರು. ‘ಮತ್ತೊಮ್ಮೆ ಅವಕಾಶ ಸಿಕ್ಕರೆ ಚನ್ನಪಟ್ಟಣ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕು ಎಂಬುದು ನನ್ನ ಆಸೆ. ಚನ್ನಪಟ್ಟಣವು ಜಾತ್ಯತೀತ ತತ್ವ ಸಹಬಾಳ್ವೆಗೆ ಮಾದರಿ. ತಿಗಳ ಬೆಸ್ತ ಹಿಂದುಳಿದ ಪರಿಶಿಷ್ಟ ಜಾತಿ ಪಂಗಡಗಳ ಜನರು ಅತ್ಯಂತ ಅನ್ಯೋನ್ಯವಾಗಿ ಇಲ್ಲಿ ಜೀವನ ಮಾಡುತ್ತಿದ್ದಾರೆ’ ಎಂದು ಪ್ರಶಂಸಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT