ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಾಗಡಿ: ಚಾರಣಕ್ಕೆ ತೆರಳಿದ್ದ ವಾಲ್‌ಮಾರ್ಟ್‌ ಸಿಬ್ಬಂದಿ ಶವವಾಗಿ ಪತ್ತೆ

ಸಾವನದುರ್ಗ ಚಾರಣ ದುರಂತ ಅಂತ್ಯ* ಬೆಟ್ಟದಿಂದ ಆಯತಪ್ಪಿ ಬಿದ್ದಿರುವ ಅನುಮಾನ* ಐದು ದಿನದ ಕಾರ್ಯಾಚರಣೆ ಅಂತ್ಯ
Published 29 ಡಿಸೆಂಬರ್ 2023, 7:10 IST
Last Updated 29 ಡಿಸೆಂಬರ್ 2023, 7:10 IST
ಅಕ್ಷರ ಗಾತ್ರ

ಮಾಗಡಿ (ರಾಮನಗರ): ತಾಲ್ಲೂಕಿನ ಸಾವನದುರ್ಗ ಬೆಟ್ಟದಲ್ಲಿ ಐದು ದಿನಗಳ ಹಿಂದೆ ಚಾರಣಕ್ಕೆ ತೆರಳಿ ನಾಪತ್ತೆಯಾಗಿದ್ದ ಉತ್ತರಪ್ರದೇಶ ಮೂಲದ ಯುವಕ ಗಗನ್‌ದೀಪ್ ಸಿಂಗ್ (30) ಶವ ಗುರುವಾರ ಬೆಟ್ಟದ ತಪ್ಪಲಿನಲ್ಲಿ ಪತ್ತೆಯಾಗಿದೆ.

ಬೆಂಗಳೂರಿನಲ್ಲಿ ವಾಲ್ ಮಾರ್ಟ್ ಕಂಪನಿಯಲ್ಲಿ ಎಕ್ಸಿಕ್ಯುಟಿವ್ ಆಗಿ ಕೆಲಸ ಮಾಡುತ್ತಿದ್ದ ಸಿಂಗ್, ಡಿ. 24ರಂದು ಸ್ನೇಹಿತನೊಂದಿಗೆ ಚಾರಣಕ್ಕೆ ಬಂದಾಗ ನಾಪತ್ತೆಯಾಗಿದ್ದರು.

ಸಿಂಗ್ ಅವರಿಗಾಗಿ ಮಾಗಡಿ ಅರಣ್ಯ ಇಲಾಖೆ, ಪೊಲೀಸ್ ಇಲಾಖೆ, ಎಸ್‌ಡಿಆರ್‌ಎಫ್, ಅಗ್ನಿಶಾಮಕ ದಳದ ಸಿಬ್ಬಂದಿ, ಶ್ವಾನ ದಳ ಹಾಗೂ ಸ್ಥಳೀಯ ಬುಡುಕಟ್ಟು ಇರುಳಿಗರು ಸೇರಿದಂತೆ 150ಕ್ಕೂ ಹೆಚ್ಚು ಮಂದಿ ಸತತ ನಾಲ್ಕು ದಿನಗಳಿಂದ ಶೋಧ ಕಾರ್ಯದಲ್ಲಿ ತೊಡಗಿದ್ದರು. ಕಡೆಗೆ ಐದನೇ ದಿನ ಸಿಂಗ್ ಅವರು ಶವವಾಗಿ ಪತ್ತೆಯಾಗಿದ್ದಾರೆ.

‘ಬೆಟ್ಟದ ತಪ್ಪಲಿನ ಎಮ್ಮೆ ಬೀಳು ಭಾಗದಲ್ಲಿ ಸಿಬ್ಬಂದಿ ಹುಡುಕಾಟ ನಡೆಸುತ್ತಿದ್ದರು. ಮಧ್ಯಾಹ್ನ 1.50ರ ಸುಮಾರಿಗೆ ಕುರುಚಲು ಗಿಡಗಳ ಮಧ್ಯೆ ಇದ್ದ ಸಿಂಗ್ ಅವರ ಶವವನ್ನು ಪತ್ತೆ ಹಚ್ಚಿದ್ದಾರೆ’ ಎಂದು ಶೋಧ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಮಾಗಡಿ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಗಿರಿರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬೆಟ್ಟದಲ್ಲಿ  ಇಳಿಯುವಾಗ ಸಿಂಗ್ ಅವರು ಕಾಲು ಜಾರಿ ಉರುಳಿಕೊಂಡು ಮರದ ಮೇಲೆ ಬಿದ್ದಿದ್ದಾರೆ. ಬಳಿಕ, ಅಲ್ಲಿಂದ ಕೆಳಗಿದ್ದ ಬಂಡೆ ಮೇಲೆ ಬಿದ್ದಿರುವ ಅವರ ದೇಹಕ್ಕೆ ಹೆಚ್ಚಿನ ಗಾಯಗಳಾಗಿವೆ. ಶವವನ್ನು ಸ್ಥಳದಿಂದ ಹೊರತೆಗೆದೊಯ್ಯಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಕುಟುಂಬದವರಿಗೆ ಹಸ್ತಾಂತರಿಸಲಾಗುವುದು’ ಎಂದು ಹೇಳಿದರು.

ಉತ್ತರಪ್ರದೇಶದ ಸಿಂಗ್ ಅವರು, ಬೆಂಗಳೂರಿನಲ್ಲಿ ವ್ಯಾಪಾರ ಮಾಡಿಕೊಂಡಿದ್ದ ತಮ್ಮ ಅಣ್ಣ ಅಮನ್‌ದೀಪ್ ಸಿಂಗ್ ಅವರ ಮನೆಯಲ್ಲಿ ವಾಸವಾಗಿದ್ದರು. ಡಿ. 24ರಂದು ರಜೆ ಇದ್ದಿದ್ದರಿಂದ ಸಿಂಗ್ ಮತ್ತು ಅವರ ಸ್ನೇಹಿತ ಚಾರಣಕ್ಕೆ ಬಂದಿದ್ದರು.

ಡ್ರೋನ್‌ಗೆ ಹಾನಿ:

ಶೋಧ ಕಾರ್ಯಾಚರಣೆಗಾಗಿ ಮುಂಬೈ ಮತ್ತು ರಾಜಸ್ಥಾನದಿಂದ ಡ್ರೋನ್ ಕ್ಯಾಮೆರಾಗಳನ್ನು ತರಿಸಲಾಗಿತ್ತು. ಡಿ. 25ರಂದು ಮಧ್ಯರಾತ್ರಿ ಥರ್ಮಲ್ ಡ್ರೋನ್ ಬಳಸಿ ಸಿಂಗ್‌ ಅವರನ್ನು ಹುಡುಕುತ್ತಿದ್ದಾಗ ಮಾರ್ಗಮಧ್ಯೆ ಸಿಗ್ನಲ್‌ ಕಳೆದುಕೊಂಡು ನಿಯಂತ್ರಣಕ್ಕೆ ಸಿಗದ ಡ್ರೋನ್ ಮರಕ್ಕೆ ಡಿಕ್ಕಿ ಹೊಡೆದು ಹಾನಿಗೊಂಡಿತ್ತು’ ಎಂದು ಇನ್‌ಸ್ಪೆಕ್ಟರ್ ಗಿರಿರಾಜ್ ತಿಳಿಸಿದರು. ‘ಡ್ರೋನ್‌ ಜೊತೆಗೆ ಸಿಬ್ಬಂದಿ ಸಹ ಬೆಳಿಗ್ಗೆಯಿಂದ ಕತ್ತಲಾಗುವವರೆಗೆ ಬೆಟ್ಟದ ಸುತ್ತಲೂ ಹುಡುಕಾಟ ನಡೆಸುತ್ತಿದ್ದರು. ಸಿಂಗ್ ಅವರು ಕಟ್ಟಿದ್ದ ಆ್ಯಪಲ್ ಕಂಪನಿ ವಾಚ್ ಮತ್ತು ಬಳಸುತ್ತಿದ್ದ ಐಫೋನ್ ಲೋಕೇಷನ್ ಆಧರಿಸಿ ಪತ್ತೆ ಹಚ್ಚುವುದಕ್ಕಾಗಿ ಆ್ಯಪಲ್ ಕಂಪನಿಗೂ ಪತ್ರ ಬರೆದಿದ್ದೆವು. ಆದರೆ ಅಲ್ಲಿಂದ ಮಾಹಿತಿ ಬರುವುದಕ್ಕೆ ಮುಂಚೆಯೇ ಸಿಂಗ್ ಅವರ ಶವ ಪತ್ತೆಯಾಯಿತು’ ಎಂದು ಮಾಹಿತಿ ನೀಡಿದರು.

ಸುರಕ್ಷತಾ ಕ್ರಮಕ್ಕೆ ಸ್ಥಳೀಯರ ಒತ್ತಾಯ:

ಸಾವನದುರ್ಗದಲ್ಲಿ ಪ್ರವಾಸೋದ್ಯಮ ಇಲಾಖೆ ಹಾಗೂ ಅರಣ್ಯ ಇಲಾಖೆ ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದಿರುವುದೇ ಚಾರಣಕ್ಕೆ ಬಂದವರು ಈ ರೀತಿ ನಾಪತ್ತೆಯಾಗಿ ಶವವಾಗಿ ಪತ್ತೆಯಾಗುತ್ತಿರುವುದಕ್ಕೆ ಕಾರಣ. ಚಾರಣ ಕೈಗೊಳ್ಳಲು ಸಮಯ ನಿಗದಿಪಡಿಸಬೇಕು. ಬೆಟ್ಟದ ಪ್ರವೇಶದ್ವಾರದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು. ಬೆಟ್ಟದ ಮೇಲೆ ಹಾಗೂ ಕೆಳಗಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಬೇಕು. ಬೆಟ್ಟದಂಚಿಗೆ ಯಾರೂ ಹೋಗದಂತೆ ನಂದಿಬೆಟ್ಟದಲ್ಲಿ ಹಾಕಿರುವಂತೆ ಇಲ್ಲಿಯೂ ಸುರಕ್ಷತೆಗಾಗಿ ಗ್ರಿಲ್ ಅಳವಡಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT