ಶನಿವಾರ, ಡಿಸೆಂಬರ್ 14, 2019
22 °C
ಜಿ.ಕೆ.ಬಿ.ಎಂ.ಎಸ್ ಶಾಲೆಗೆ ಹೊಸ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ

ಕೈಗಾರಿಕೆಗಳು ಶಾಲೆ ಅಭಿವೃದ್ಧಿಗೆ ಮುಂದಾಗಲಿ: ಲಿಂಗಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ‘ಶಾಲೆಯೊಂದರ ನಿರ್ಮಾಣಕ್ಕೆ ಸರ್ಕಾರ ಕೋಟಿಗಟ್ಟಲೆ ಹಣ ವೆಚ್ಚ ಮಾಡುವುದು ಕಷ್ಟ. ಶತನಮಾನ ಕಂಡಿರುವ ಇಲ್ಲಿನ ಜಿ.ಕೆ.ಬಿ.ಎಂ.ಎಸ್ ಶಾಲೆಗೆ ₹ 4 ಕೋಟಿ ವೆಚ್ಚದಲ್ಲಿ ಹೊಸ ಕಟ್ಟಡ ಕಟ್ಟಿಕೊಡಲು ಟೊಯೊಟಾ ಕಿರ್ಲೋಸ್ಕರ್ ಮೋಟಾರ್‌ ಕಂಪನಿ ಮುಂದೆ ಬಂದಿರುವುದು ಶ್ಲಾಘನೀಯ’ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಂ. ಲಿಂಗಪ್ಪ ಹೇಳಿದರು.

ಇಲ್ಲಿನ ಜಿ.ಕೆ.ಬಿ.ಎಂ.ಎಸ್ ಶಾಲೆಯ ನೂತನ ಕಟ್ಟಡ ನಿರ್ಮಾಣಕ್ಕೆ ಸೋಮವಾರ ಭೂಮಿ ಪೂಜೆ ನೆರೆವೇರಿಸಿ ಅವರು ಮಾತನಾಡಿದರು. ‘ಕೈಗಾರಿಕೆಗಳು ಇಂದು ತಮ್ಮ ಸಿ.ಎಸ್.ಆರ್ ನಿಧಿಯಲ್ಲಿ ಇಂತಹ ಉಪಯುಕ್ತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಹೆಮ್ಮೆಯ ಸಂಗತಿ. 15 ವರ್ಷಗಳ ಹಿಂದೆ ನಾನು ಶಾಸಕನಾಗಿದ್ದ ವೇಳೆಯಲ್ಲೇ ಜಿ.ಕೆ.ಬಿ.ಎಂ.ಎಸ್ ಶಾಲೆ ಶಿಥಿಲವಾಗುತ್ತಿದ್ದ ಬಗ್ಗೆ ಮಾಹಿತಿ ಇತ್ತು. ಆದರೆ ದೊಡ್ಡ ಮೊತ್ತದ ಅನುದಾನವನ್ನು ಕೊಡಲು ಯಾವ ಸರ್ಕಾರಗಳಿಗೂ ಸಾಧ್ಯವಾಗಲಿಲ್ಲ’ ಎಂದರು.

‘ಟೊಯೊಟಾ ಕಂಪನಿ ಜಿಲ್ಲೆಯಲ್ಲಿ ಸುಮಾರು 600 ಸರ್ಕಾರಿ ಶಾಲೆಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಿಕೊಟ್ಟಿದೆ. ಮಕ್ಕಳ ಬೌದ್ಧಿಕ ಪ್ರಗತಿಗೆ ಉತ್ತಮ ಬೋಧನೆಯ ಜತೆಗೆ ಉತ್ತಮ ವಾರಾವರಣವಿದ್ದರೆ ಅದು ಪ್ರೇರಕವಾಗಿರುತ್ತದೆ’ ಎಂದು ತಿಳಿಸಿದರು.

‘ಸಿ.ಡಿ.ನರಸಿಂಹಯ್ಯ, ಜಿ.ವಿ.ಕೆ.ರಾವ್, ಕೆಂಗಲ್ ಹನುಮಂತಯ್ಯ ಖ್ಯಾತನಾಮರು ವ್ಯಾಸಂಗ ಮಾಡಿದ ಶಾಲೆಯಿದು. ಈಗಾಗಲೇ ಕಟ್ಟಡವನ್ನು ಕೆಡವಲಾಗಿದೆ. ನೂತನವಾಗಿ ಕಟ್ಟಲಾಗುವ ಕಟ್ಟಡದಲ್ಲಿ ಹಳೇ ಕಟ್ಟಡದ ಮುಂಭಾಗದ ವಿನ್ಯಾಸವನ್ನೇ ಬಳಸಿಕೊಳ್ಳಿ’ ಎಂದು ಅವರು ಟೊಯೊಟಾ ಅಧಿಕಾರಿಗಳಿಗೆ ಮನವಿ ಮಾಡಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಗಾಣಕಲ್ ನಟರಾಜ್ ಮಾತನಾಡಿ ತಾಲೂಕಿನಲ್ಲಿ ‘16 ಸರ್ಕಾರಿ ಶಾಲೆಗಳಲ್ಲಿ ಅಡುಗೆ ಮನೆಗಳ ದುರಸ್ತಿ, 102 ಶೌಚಾಲಯಗಳ ದುರಸ್ತಿಯಾಗಬೇಕಾಗಿದ್ದು, ಕೈಗಾರಿಕೆಗಳ ಸಂಘ ಈ ಕಾರ್ಯವನ್ನು ನಡೆಸಿಕೊಡಬೇಕು. ಪ್ಲಾಸ್ಟಿಕ್ ಮುಕ್ತ ಗ್ರಾಮಗಳ ನಿರ್ಮಾಣಕ್ಕಾಗಿ ಪಂಚಾಯಿತಿಗಳು ಮುಂದಾಗಿದ್ದು, ಕನಿಷ್ಠ 6 ಪಂಚಾಯಿತಿಗಳಿಗೆ ಬ್ಯಾಗ್ ಗಳನ್ನು ವಿತರಿಸಲು ಹಾಗೂ ರಾಮನಗರದ ಬೀಡಿ ಕಾರ್ಮಿಕರ ಕಾಲೊನಿಯ ಸರ್ಕಾರಿ ಶಾಲೆಯನ್ನು ಉನ್ನತೀಕರಿಸಿಕೊಡಬೇಕು’ ಎಂದು ಮನವಿ ಮಾಡಿದರು.

ಬಿಡದಿ ಕೈಗಾರಿಕೆಗಳ ಸಂಘದ ಅಧ್ಯಕ್ಷ ರಾಜೇಂದ್ರ ಹೆಗಡೆ ಮಾತನಾಡಿ ‘ಜಿ.ಕೆ.ಬಿ.ಎಂ.ಎಸ್ ಶಾಲೆಗೆ ನೂತನ ಕಟ್ಟಡ ಕಟ್ಟಿ ಕೊಡುವುದು ಟೊಯೊಟಾ ಕಿರ್ಲೋಸ್ಕರ್ ಮೋಟಾರ್‌ ಕಂಪನಿಯ ಕನಸಿನ ಯೋಜನೆಯಾಗಿದೆ. ಮುಂದಿನ ಮಕ್ಕಳ ದಿನಾಚರಣೆಯ ವೇಳೆಗೆ ನೂತನ ಶಾಲೆಯ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ’ ಎಂದರು.

ಶಾಲೆಯ ಮುಖ್ಯ ಶಿಕ್ಷಕ ಶ್ರೀನಿವಾಸ್ ಮಾತನಾಡಿ ನೂತನ ಕಟ್ಟಡ ನಿರ್ಮಾಣವಾದ ನಂತರ ವಿದ್ಯಾರ್ಥಿಗಳ ದಾಖಲಾತಿಗೆ ಬೇಡಿಕೆ ಹೆಚ್ಚಾಗಲಿದೆ. ಹೀಗಾಗಿ ಎರಡನೇ ಅಂತಸ್ತನ್ನು ನಿರ್ಮಿಸಿಕೊಡಿ ಎಂದು ಕೋರಿದರು.

ಡಯಟ್ ಪ್ರಚಾರ್ಯ ಎಂ.ಎಚ್. ಗಂಗಮಾರೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎನ್. ಮರೀಗೌಡ, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ರಾಜಶೇಖರ್, ಎಸ್‌ಡಿಎಂಸಿ ಅಧ್ಯಕ್ಷೆ ಗೀತಾ, ನಿವೃತ್ತ ಮುಖ್ಯಶಿಕ್ಷಕ ಸೋಮಶೇಖರಯ್ಯ, ಬಿ. ತಮ್ಮಯ್ಯ, ನಾರಾಯಣಸ್ವಾಮಿ, ಟೊಯೊಟಾ ಕಿರ್ಲೋಸ್ಕರ್ ಮೋಟಾರ್‌ ಕಂಪನಿಯ ಅಧಿಕಾರಿಗಳಾದ ಪ್ರಸಾದ್, ರಾಮಚಂದ್ರ ಹೆಗಡೆ, ನೀಲಕಂಠಸ್ವಾಮಿ ಇದ್ದರು.

ಶಾಲೆಯ ಹಿನ್ನಲೆ

ಇಂಗ್ಲಿಷರ ಆಳ್ವಿಕೆಯ ವೇಳೆ ಬ್ರಿಟಿಷ್ ಅಧಿಕಾರಿಗಳು ತಂಗಲು ಒಂದು ಕೊಠಡಿ ಮತ್ತು ಪ್ರಾರ್ಥನಾ ಮಂದಿರವನ್ನು ನಿರ್ಮಿಸಿಕೊಂಡಿದ್ದರು. 1893ರಲ್ಲಿ ಇದೇ ಕಟ್ಟಡದಲ್ಲಿ ದಿ ವೆಸ್ಲಿಯನ್ ನ ಮಿಷನ್ ಏಡೆಡ್ ಇಂಗ್ಲಿಷ್ ಸ್ಕೂಲ್ ಎಂಬ ಇಂಗ್ಲಿಷ್ ಮಾಧ್ಯಮ ಶಾಲೆಯನ್ನು ಆರಂಭಿಸಲಾಗಿತ್ತು. 1924ರಲ್ಲಿ ಈ ಶಾಲೆಯಲ್ಲಿ ಹಿರಿಯ ಪ್ರಾಥಮಿಕ ತರಗತಿಗಳು ಆರಂಭವಾಗಿ ವೆಸ್ಲಿಯನ್ ಮಿಡಲ್ ಸ್ಕೂಲ್ ಎಂಬ ಮರು ನಾಮಕರಣದೊಂದಿಗೆ ಮುಂದುವರೆಯಿತು. 1931ರಲ್ಲಿ ವೆಸ್ಲಿಯನ್ ಮಿಷನ್ ಕನ್ನಡ ಸ್ಕೂಲ್ ಆಗಿ ಪರಿವರ್ತನೆ ಆಯಿತು. 1941ರಲ್ಲಿ ಸ್ಥಳೀಯ ಆಡಳಿತ ಈ ಶಾಲೆಯನ್ನು ವಹಿಸಿಕೊಂಡು ನಿರ್ವಹಿಸಲಾರಂಭಿಸಿದ ನಂತರ ಸರ್ಕಾರಿ ಕನ್ನಡ ಬಾಲಕರ ಮಾದರಿ ಶಾಲೆ (ಜಿ.ಕೆ.ಬಿ.ಎಂ.ಎಸ್) ಎಂದು ಪುನರ್ ನಾಮಕರಣಗೊಂಡಿದೆ. ಅನೇಕ ಖ್ಯಾತನಾಮರು ಇಲ್ಲಿ ವ್ಯಾಸಂಗ ಮಾಡಿದ್ದಾರೆ.

ಪ್ರತಿಕ್ರಿಯಿಸಿ (+)