ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಕಪುರ: ನಿರ್ವಹಣೆ ಇಲ್ಲದೆ ಪಾಳು ಬಿದ್ದ ಉದ್ಯಾನ

ಕೆಪಿಟಿಸಿಎಲ್ ನಿರ್ಲಕ್ಷ್ಯದಿಂದಾಗಿ ಕಳೆಗುಂದಿದ ಉದ್ಯಾನ: ಸೂಕ್ತ ನಿರ್ವಹಣೆಗೆ ನಾಗರಿಕರ ಆಗ್ರಹ
Published 27 ನವೆಂಬರ್ 2023, 4:42 IST
Last Updated 27 ನವೆಂಬರ್ 2023, 4:42 IST
ಅಕ್ಷರ ಗಾತ್ರ

ಕನಕಪುರ: ಉದ್ಯಾನಗಳು ಪಟ್ಟಣದ ಸೌಂದರ್ಯವನ್ನು ಹೆಚ್ಚಿಸುತ್ತವೆ. ಹಸಿರ ಸಿರಿಯನ್ನು ಹೆಚ್ಚಿಸುವ ಉದ್ಯಾನಗಳು, ಸ್ಥಳೀಯ ನಿವಾಸಿಗಳ ವಾಯುವಿಹಾರ, ಮಕ್ಕಳ ಆಟಕ್ಕೆ ಹಾಗೂ ನಾಗರಿಕರ ಸಮಯ ಕಳೆಯಲು ತಾಣಗಳೂ ಹೌದು. ಇದೇ ಉದ್ದೇಶಕ್ಕಾಗಿ, ಉದ್ಯಾನಗಳನ್ನು ನಿರ್ಮಿಸಲಾಗುತ್ತದೆ.

ಇಂತಹದ್ದೇ ಉದ್ದೇಶದಿಂದ ಪಟ್ಟಣದಲ್ಲಿ ಕುರುಪೇಟೆ ಬಳಿ ಕೆಪಿಟಿಸಿಎಲ್ ಕಚೇರಿ ಮುಂಭಾಗದಲ್ಲಿ ನಿರ್ಮಿಸಿರುವ ಉದ್ಯಾನವು ಸೂಕ್ತ ನಿರ್ವಹಣೆ ಇಲ್ಲದೆ ಸೊರಗಿದೆ. ಹೆಸರಿಗಷ್ಟೇ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಉದ್ಯಾನವಿದೆ. ಆದರೆ, ಬಳಕೆ ಮಾತ್ರ ಅಷ್ಟಕಷ್ಟೆ ಎಂಬಂತಾಗಿದೆ. 

ಕನಕಪುರ ತಾಲ್ಲೂಕು ಕಚೇರಿಯನ್ನು 2015ರಲ್ಲಿ ನೂತನವಾಗಿ ನಿರ್ಮಾಣ ಮಾಡುವ ಸಂದರ್ಭದಲ್ಲಿ, ಅಂದು ಖಾಲಿಯಿದ್ದ ಬ್ರಿಟಿಷರ ಕಾಲದ ಕೆಇಬಿ ಕಟ್ಟಡಕ್ಕೆ ತಾಲ್ಲೂಕು ಕಚೇರಿ ಮತ್ತು ತಾಲ್ಲೂಕು ಪಂಚಾಯಿತಿ ಕಚೇರಿಯನ್ನು ಸ್ಥಳಾಂತರ ಮಾಡಲಾಗಿತ್ತು. ಆಗ ಕಚೇರಿ ಮುಂಭಾಗ ಇದ್ದಂತಹ ವಿಶಾಲವಾದ ಪ್ರದೇಶದಲ್ಲಿ ಸಾರ್ವಜನಿಕರ ಬಳಕೆಗಾಗಿ ಉದ್ಯಾನವನವನ್ನು ನಿರ್ಮಾಣ ಮಾಡಲಾಗಿತ್ತು.

ತಾಲ್ಲೂಕು ಕಚೇರಿ ಈ ಜಾಗದಲ್ಲಿ ಇರುವಷ್ಟು ದಿನ ಉದ್ಯಾನವನದ ನಿರ್ವಹಣೆ ಚೆನ್ನಾಗಿಯೇ ನಡೆಯುತ್ತಿತ್ತು. ಸಾರ್ವಜನಿಕರು ಸಹ ಹೆಚ್ಚಾಗಿ ಇಲ್ಲಿಗೆ ಬಂದು ಕಾಲ ಕಳೆಯುತ್ತಿದ್ದರು. ವಾಯುವಿಹಾರಿಗಳಿಗೂ ನೆಚ್ಚಿನ ತಾಣವಾಗಿತ್ತು. ಕುರುಪೇಟೆ, ಮಾಧವ ನಗರ, ಜ್ಯೋತಿ ಕಾಲೊನಿ ನಿವಾಸಿಗಳು ಇಲ್ಲಿಗೆ ಹೆಚ್ಚಾಗಿ ಬರುತ್ತಿದ್ದರು. ಹಿರಿಯ ನಾಗರಿಕರು ಸಹ ಮಕ್ಕಳೊಂದಿಗೆ ಬಂದು ಸಮಯ ಕಳೆಯುತ್ತಿದ್ದರು.

2018ರಲ್ಲಿ ನೂತನ ತಾಲ್ಲೂಕು ಕಚೇರಿ ಕಟ್ಟಡಕ್ಕೆ ಈ ಕಚೇರಿಯನ್ನು ಸ್ಥಳಾಂತರಿಸಲಾಯಿತು. ಕಚೇರಿ ಹೋದ ಮೇಲೆ ಉದ್ಯಾನ ನಿರ್ವಹಣೆಗೆ ಗ್ರಹಣ ಹಿಡಿಯಿತು. ಹೇಳುವವರು ಮತ್ತು ಕೇಳುವವರು ಇಲ್ಲದಂತಾಯಿತು. ನಿರ್ವಹಣೆ ಕೊರತೆಯಿಂದಾಗಿ, ಉದ್ಯಾನದೊಳಗೆ ಗಿಡಗಂಟಿಗಳು ಬೆಳೆದವು. ಜನರು ಉದ್ಯಾನದತ್ತ ಹೋಗಲಾಗದಂತಹ ಸ್ಥಿತಿ ನಿರ್ಮಾಣವಾಗಿದೆ.

ಹೋಗಲು ಭಯವಾಗುತ್ತದೆ:  ‘ಗಿಡಗಂಟಿಗಳು ಬೆಳೆದು ಪಾಳು ಬಿದ್ದಿರುವ ಉದ್ಯಾನದೊಳಗೆ ಹೋಗಲು ಭಯವಾಗುತ್ತದೆ. ಅಲ್ಲಿ ಹಾವುಗಳು ಹೆಚ್ಚಾಗಿವೆ. ಕುರುಚಲು ಕಾಡಿನಂತಿರುವ ಉದ್ಯಾನವು ಸೊಳ್ಳೆಗಳ ಆವಾಸಸ್ಥಾನವೂ ಹೌದು. ಈ ಜಾಗಕ್ಕೆ ಜನ ಬರಲು ಭಯಪಡುತ್ತಾರೆ. ಹಿಂದೊಮ್ಮೆ ಜನರನ್ನು ಸೆಳೆಯುತ್ತಿದ್ದ ಉದ್ಯಾನ ಇದೀಗ, ನಿರ್ವಹಣೆಗೆ ಇಲ್ಲದೆ ದುಸ್ಥಿತಿ ತಲುಪಿರುವುದನ್ನು ನೋಡಿದರೆ ಬೇಸರವಾಗುತ್ತದೆ’ ಎಂದು ಸ್ಥಳೀಯ ನಿವಾಸಿ ಈರೇಗೌಡ ಅಸಮಾಧಾನ ವ್ಯಕ್ತಪಡಿಸಿದರು.

‘ಹಿಂದೆ ಇಲ್ಲಿ ತಾಲ್ಲೂಕು ಕಚೇರಿ ಇದ್ದಾಗ, ಜನರ ಅನುಕೂಲಕ್ಕಾಗಿ ಉದ್ಯಾನದೊಳಗೆ ಸುಸಜ್ಜಿತವಾದ ಶೌಚಾಲಯವನ್ನು ನಿರ್ಮಾಣ ಮಾಡಲಾಗಿತ್ತು. ಉದ್ಯಾನ ನಿರ್ವಹಣೆ ಯಾವಾಗ ಸ್ಥಗಿತಗೊಂಡಿತೊ, ಆಗ ಶೌಚಾಲಯಕ್ಕೆ ಅಧಿಕಾರಿಗಳು ಬೀಗ ಹಾಕಿದರು. ಅಂದಿನಿಂದ ಶೌಚಾಲಯ ಸಹ ಪಾಳು ಬಿದ್ದಿದೆ’ ಎಂದು ತಿಳಿಸಿದರು.

‘ಯಾವ ಉದ್ಯಾನವನ್ನು ಸಹ ಈ ರೀತಿ ಪಾಳು ಬಿಡಬಾರದು. ಈಗಲೂ ಕಾಲ ಮಿಂಚಿಲ್ಲ. ಸಂಬಂಧಪಟ್ಟವರು ಕೂಡಲೇ ಉದ್ಯಾನ ನಿರ್ವಹಣೆಗೆ ಕ್ರಮ ಕೈಗೊಳ್ಳಬೇಕು. ಇದರಿಂದ ಸ್ಥಳೀಯ ನಾಗರಿಕರಿಗೆ ಅನುಕೂಲವಾಗಲಿದೆ. ಜೊತೆಗೆ, ಪಟ್ಟಣದ ಸೌಂದರ್ಯವೂ ಹೆಚ್ಚಾಗಲಿದೆ’ ಎಂದು ಒತ್ತಾಯಿಸಿದರು.

ಸ್ಟುಡಿಯೋ ಚಂದ್ರು ನಗರಸಭೆ ಸದಸ್ಯ ಕನಕಪುರ
ಸ್ಟುಡಿಯೋ ಚಂದ್ರು ನಗರಸಭೆ ಸದಸ್ಯ ಕನಕಪುರ
ಗುರು ಗೌಡ ಸ್ಥಳೀಯ ನಿವಾಸಿ
ಗುರು ಗೌಡ ಸ್ಥಳೀಯ ನಿವಾಸಿ
ಶೇಖರ್‌ ಸ್ಥಳೀಯ ನಿವಾಸಿ
ಶೇಖರ್‌ ಸ್ಥಳೀಯ ನಿವಾಸಿ
ನಿರ್ವಹಣೆ ಇಲ್ಲದೆ ಪಾಳು ಬಿದ್ದಿರುವ ಕನಕಪುರದ ಕೆಪಿಟಿಸಿಎಲ್‌ ಮುಂಭಾಗ ಇರುವ ಉದ್ಯಾನ
ನಿರ್ವಹಣೆ ಇಲ್ಲದೆ ಪಾಳು ಬಿದ್ದಿರುವ ಕನಕಪುರದ ಕೆಪಿಟಿಸಿಎಲ್‌ ಮುಂಭಾಗ ಇರುವ ಉದ್ಯಾನ
ಉದ್ಯಾನದ ಮುಂಭಾಗ ಹಾಕಿರುವ ಟೈಲ್ಸ್‌ ಮೇಲೆ ಗಿಡಗಂಟಿ ಹಾಗೂ ಹುಲ್ಲು ಬೆಳೆದಿರುವುದು
ಉದ್ಯಾನದ ಮುಂಭಾಗ ಹಾಕಿರುವ ಟೈಲ್ಸ್‌ ಮೇಲೆ ಗಿಡಗಂಟಿ ಹಾಗೂ ಹುಲ್ಲು ಬೆಳೆದಿರುವುದು
ಉದ್ಯಾನದ ‌ಮುಂಭಾಗದಲ್ಲಿ ಕಸದ ರಾಶಿಗೆ ಬೆಂಕಿ ಹಾಕಿರುವುದು
ಉದ್ಯಾನದ ‌ಮುಂಭಾಗದಲ್ಲಿ ಕಸದ ರಾಶಿಗೆ ಬೆಂಕಿ ಹಾಕಿರುವುದು
ಉದ್ಯಾನವನಕ್ಕೆ ಹೊಂದಿಕೊಂಡಂತೆ ಇರುವ ಶೌಚಾಲಯಕ್ಕೆ ಬೀಗ ಹಾಕಿರುವುದರಿಂದ ಪಾಳು ಬಿದ್ದಿದೆ
ಉದ್ಯಾನವನಕ್ಕೆ ಹೊಂದಿಕೊಂಡಂತೆ ಇರುವ ಶೌಚಾಲಯಕ್ಕೆ ಬೀಗ ಹಾಕಿರುವುದರಿಂದ ಪಾಳು ಬಿದ್ದಿದೆ
ನಿರ್ವಹಣೆ ಇಲ್ಲದೆ ಸೊರಗಿರುವ ಉದ್ಯಾನ
ನಿರ್ವಹಣೆ ಇಲ್ಲದೆ ಸೊರಗಿರುವ ಉದ್ಯಾನ
ಕನಕಪುರ ಕುರುಪೇಟೆ ಕೆಪಿಟಿಸಿಎಲ್‌ ಕಚೇರಿ ಮುಂಭಾಗ ನಿರ್ಮಾಣ ಮಾಡಿರುವ ಕಟ್ಟೆಯಲ್ಲಿ ಗಿಡಗಂಟಿ ಬೆಳೆದಿರುವುದು
ಕನಕಪುರ ಕುರುಪೇಟೆ ಕೆಪಿಟಿಸಿಎಲ್‌ ಕಚೇರಿ ಮುಂಭಾಗ ನಿರ್ಮಾಣ ಮಾಡಿರುವ ಕಟ್ಟೆಯಲ್ಲಿ ಗಿಡಗಂಟಿ ಬೆಳೆದಿರುವುದು

ಸಾರ್ವಜನಿಕರ ಬಳಕೆಗಾಗಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಉದ್ಯಾನ ನಿರ್ಮಿಸಿ ಪಾಳು ಬಿಟ್ಟಿರುವುದು ಸರಿಯಲ್ಲ. ಕೂಡಲೇ ನಿರ್ವಹಣೆಗೆ ಕ್ರಮ ಕೈಗೊಳ್ಳಬೇಕು.

– ಚೆನ್ನಪ್ಪ ವಿದ್ಯುತ್ ಗುತ್ತಿಗೆದಾರ ಕುರುಪೇಟೆ

ತಾಲ್ಲೂಕು ಕಚೇರಿ ತಾತ್ಕಾಲಿಕವಾಗಿದ್ದರಿಂದ ಉದ್ಯಾನ ಅವಶ್ಯಕತೆ ಇರಲಿಲ್ಲ. ಆದರೂ ಮಾಡಿದರು. ಮಾಡಿದ ಮೇಲೆ ಜನರಿಗೆ ಅನುಕೂಲವಾಗುವಂತೆ ನಿರ್ವಹಣೆ ಮಾಡಬೇಕು

– ಸ್ಟುಡಿಯೋ ಚಂದ್ರು ನಗರಸಭೆ ಸದಸ್ಯ ಕನಕಪುರ

‘ನಿರ್ವಹಣೆಗೆ ಟೆಂಡರ್ ಕರೆಯುತ್ತೇವೆ’

‘ಸ್ಥಳದಲ್ಲಿ ತಾಲ್ಲೂಕು ಕಚೇರಿ ಇದ್ದಾಗ ಇಲ್ಲಿ ಬರುತ್ತಿದ್ದ ಜನರಿಗಾಗಿ ಕೆಪಿಟಿಸಿಎಲ್‌ನಿಂದ ಉದ್ಯಾನವನ ನಿರ್ಮಾಣ ಮಾಡಲಾಗಿತ್ತು. ಎಷ್ಟು ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿತ್ತು ಎಂಬುದು ನನಗೆ ಗೊತ್ತಿಲ್ಲ. ನಿರ್ಮಾಣದ ಜೊತೆಗೆ ನಿರ್ವಹಣೆಯನ್ನೂ ನಾವೇ ಮಾಡುತ್ತಿದ್ದೆವು. ನಂತರ ಹಣ ಇಲ್ಲದ ಕಾರಣದಿಂದಾಗಿ ನಿರ್ವಹಣೆ ಕಾರ್ಯ ಸ್ಥಗಿತವಾಗಿತ್ತು. ಇದೀಗ ಮತ್ತೆ ನಿರ್ವಹಣೆಗೆ ಹೊಸದಾಗಿ ಟೆಂಡರ್‌ ಕರೆಯಲಾಗುವುದು’ ಎಂದು ಕೆಪಿಟಿಸಿಎಲ್ ಎಇಇ ಅನಿಲ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು. ‘ಮುಂಚೆ ಪಾರ್ಕ್ ನಿರ್ವಹಣೆಯನ್ನು ಪರಿಸರ ಕ್ರಿಯೇಷನ್ ಎಂಬ ಸಂಸ್ಥೆಯುವರು ಟೆಂಡರ್ ಮೂಲಕ ಪಡೆದಿದ್ದರು. ಮಧ್ಯೆ ಒಂದೂವರೆ ವರ್ಷ ಯಾರಿಗೂ ಟೆಂಡರ್ ಕೊಟ್ಟಿರಲಿಲ್ಲ’ ಎಂದು ಕೆಪಿಟಿಸಿಎಲ್ ಜೆಇ ಅಫ್ತಾಬ್ ಪಾಷಾ ಹೇಳಿದರು.

‘ನಿರ್ಮಿಸಿ ಪ್ರಯೋಜನವೇನು?’

'‘ಯಾವುದೇ ಕೆಲಸ ಮಾಡಬೇಕಾದರೂ ಮುಂದೆ ಉಪಯೋಗವಾಗುವ ರೀತಿಯಲ್ಲಿ ಮಾಡಬೇಕು. ಮಾಡಿದ ಮೇಲೆ ಅದು ಸದ್ಬಳಕೆ ಆಗುವಂತೆ ನೋಡಿಕೊಳ್ಳಬೇಕು. ಕೆಪಿಟಿಸಿಎಲ್‌ನವರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಉದ್ಯಾನ ಮಾಡಿ ಇದೀಗ ಹಾಳು ಬಿಟ್ಟಿದ್ದಾರೆ. ಇದೀಗ ಉದ್ಯಾನ ಮತ್ತು ಶೌಚಾಲಯ ಎರಡು ಬಳಕೆಯಾಗುತ್ತಿಲ್ಲ. ಹೀಗಾರೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಏನು ಪ್ರಯೋಜನ ಬಂತು? ಈಗಲಾದರೂ ಇಲಾಖೆ ಅಧಿಕಾರಿಗಳು ಇದರ ಕಡೆ ಗಮನ ಹರಿಸಬೇಕು’ ಎಂದು ಸ್ಥಳೀಯ ನಿವಾಸಿ ಗುರು ಗೌಡ ಆಗ್ರಹಿಸಿದರು. ‘ಒಳ್ಳೆಯ ಕೆಲಸಕ್ಕೆ ನಿರ್ಲಕ್ಷ್ಯ ಬೇಡ’ ‘ಬ್ರಿಟಿಷರ ಕಾಲದಲ್ಲಿ ನಿರ್ಮಾಣ ಮಾಡಿದ್ದ ಕೆಇಬಿಯ ಪುರಾತನ ಕಟ್ಟಡಕ್ಕೆ ಮರುಜೀವ ಕೊಟ್ಟು ಮುಂದೆ ಉದ್ಯಾನವನ ಮಾಡಿ ತಾಲ್ಲೂಕು ಕಚೇರಿಗೆ ನೀಡಿದ್ದು ಒಳ್ಳೆಯ ನಿರ್ಧಾರ. ಆದರೆ ನಂತರದಲ್ಲಿ ಅದನ್ನು ಮತ್ತೊಂದು ಇಲಾಖೆಗೆ ಕೊಟ್ಟು ಸದ್ಬಳಕೆ ಆಗುವಂತೆ ಮಾಡಬೇಕಿತ್ತು. ಈಗ ನಿರ್ವಹಣೆ ಇಲ್ಲದೆ ಕಟ್ಟಡ ಮತ್ತು ಉದ್ಯಾನ ಸಹ ಹಾಳಾಗುತ್ತದೆ. ಇಲ್ಲಿಯವರೆಗೆ ಆಗಿದ್ದು ಬಿಟ್ಟು ಮುಂದೆ ನಿರ್ವಹಣೆಗೆ ಮುಂದಾಗಬೇಕು. ಒಳ್ಳೆಯ ಕೆಲಸವನ್ನು ನಿರ್ಲಕ್ಷ್ಯ ಮಾಡಬಾರದು’ ಎಂದು ಸ್ಥಳೀಯ ನಿವಾಸಿ ಶೇಖರ್ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT