ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇ ಖಾತೆಗೆ ಹಣ ವಸೂಲಿ: ಆರೋಪ

ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸದಸ್ಯರ ಆಕ್ರೋಶ
Last Updated 11 ಸೆಪ್ಟೆಂಬರ್ 2018, 13:35 IST
ಅಕ್ಷರ ಗಾತ್ರ

ರಾಮನಗರ: ‘ಗ್ರಾಮ ಪಂಚಾಯಿತಿಗಳಲ್ಲಿ ಇ ಸ್ವತ್ತು ಮತ್ತು ಇ ಖಾತೆ ಮಾಡಿಕೊಡಲು ಜನರಿಂದ ಬೇಕಾಬಿಟ್ಟಿಯಾಗಿ ಹಣ ಪಡೆಯಲಾಗುತ್ತಿದೆ. ಇದಕ್ಕೆ ಮಾನದಂಡ ಇಲ್ಲವೇ’ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ಗಾಣಕಲ್ ನಟರಾಜ್ ಆಕ್ರೋಶ ವ್ಯಕ್ತಪಡಿಸಿದರು.

ಇಲ್ಲಿನ ಮಿನಿ ವಿಧಾನಸೌಧದಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು. ಹಣ ನೀಡಿದವರಿಗೆ ಖಾತೆ ಮಾಡಿಕೊಡಲಾಗುತ್ತಿದೆ. ಹಣ ಕೊಡದಿದ್ದರೆ ನೀವು ನೀಡಿರುವ ದಾಖಲೆಗಳು ಸರಿ ಇಲ್ಲ ಎಂದು ಜನರನ್ನು ಅಲೆಯುವಂತೆ ಮಾಡುತ್ತಾರೆ. ಖಾತೆಗಾಗಿ ಮೊದಲು ಅರ್ಜಿ ಸಲ್ಲಿಸಿದವರಿಗೆ ಖಾತೆ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

‘ನಿಯಮಾನುಸಾರ ಇದ್ದರೆ ಖಾತೆಗಳನ್ನು ಮಾಡಿಕೊಡಿ, ಆದರೆ ಅಧಿಕಾರಿಗಳು ಎಲ್ಲಾ ನಿಯಮಗಳು ಇರುವವರಿಗೆ ಹಣ ನೀಡುವುದಿಲ್ಲ ಎಂಬ ಕಾರಣಕ್ಕೆ ತೊಂದರೆ ನೀಡುತ್ತಿದ್ದೀರಿ, ದಾಖಲೆ ಸರಿ ಇಲ್ಲದ ಹಲವು ಖಾತೆಗಳನ್ನು ಹಣ ತೆಗೆದುಕೊಂಡು ಮಾಡಿಕೊಟ್ಟಿದ್ದೀರಿ’ ಎಂದು ಹರಿಹಾಯ್ದರು.

‘ಲೇ ಔಟ್‌ ಮಾಡುವವರ, ಶ್ರೀಮಂತರ ಹತ್ತಿರ ಹಣ ತೆಗೆದುಕೊಳ್ಳಿ, ಬಡವರ ಬಳಿ ಹಣ ಕೇಳಬೇಡಿ’ ಎಂದು ಮನವಿ ಮಾಡಿದರು.
ತಾಲ್ಲೂಕಿನಲ್ಲಿ 138 ಆರ್‌ಟಿಇ ಸೀಟುಗಳು ಖಾಲಿ ಉಳಿದಿವೆ. ಶಿಕ್ಷಣ ಇಲಾಖೆಯ ಅಧಿಕಾರಿಗಳು ಸೂಕ್ತ ನಿಯಮಗಳನ್ನು ತಿದ್ದುಪಡಿ ಮಾಡುವ ಮೂಲಕ ಸರ್ಕಾರದ ಯೋಜನೆಯನ್ನು ಸಬಲೀಕರಣಗೊಳಿಸಬೇಕು ಎಂದು ತಿಳಿಸಿದರು.

ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಕೆಟ್ಟು ಹೋಗಿವೆ. ಇವುಗಳನ್ನು ನಿರ್ವಹಣೆ ಮಾಡುವ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸಲಾಗುವುದು ಎಂದು ಅಧಿಕಾರಿಗಳು ಉತ್ತರ ನೀಡುತ್ತಿರಿ, ಆದರೆ ಇದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಮೊದಲು ನೀರಿನ ಘಟಕಗಳನ್ನು ದುರಸ್ತಿಗೊಳಿಸಿ ಎಂದರು.

ವೈದ್ಯರು ಬರುವುದಿಲ್ಲ: ತಾಲ್ಲೂಕಿನಲ್ಲಿರುವ ಹಿರಿಯ, ಕಿರಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ವೈದ್ಯರು ಬರುವುದೇ ಇಲ್ಲ. ಇದರಿಂದ ಗ್ರಾಮೀಣ ಪ್ರದೇಶದ ಜನರಿಗೆ ತೊಂದರೆಯಾಗುತ್ತಿದೆ. ಸಂಬಂಧಪಟ್ಟ ಇಲಾಖೆಯವರು ಇಂತಹ ಅಶಿಸ್ತಿನ ವೈದ್ಯರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಸದಸ್ಯರು ಒತ್ತಾಯಿಸಿದರು.

ಯೋಜನೆಗಳನ್ನು ಮೊದಲೇ ತಿಳಿಸಿ: ಸರ್ಕಾರದ ವತಿಯಿಂದ ಇಂತಹ ಯೋಜನೆಗಳು ಜಾರಿಯಾಗಿವೆ ಎಂದು ಸದಸ್ಯರಿಗೆ ಮೊದಲೇ ತಿಳಿಸಬೇಕು ಎಂದು ಪ್ರಭಾರ ಅಧ್ಯಕ್ಷೆ ಲಕ್ಷ್ಮಮ್ಮ ತಿಳಿಸಿದರು.

ಇಂತಹ ಸವಲತ್ತುಗಳನ್ನು ನೀಡುತ್ತಿದ್ದೇವೆ ಬನ್ನಿ ಎಂದು ಕಾರ್ಯಕ್ರಮಕ್ಕೆ ಕರೆಯುತ್ತಿರಿ, ಸೌಲಭ್ಯಗಳನ್ನು ಕೊಟ್ಟವರಿಗೆ ಕೊಡುತ್ತೀರಿ, ನಮಗೆ ಮೊದಲೆ ತಿಳಿಸಿದರೆ ಸರ್ಕಾರದ ಸವಲತ್ತುಗಳು ಅರ್ಹರಿಗೆ ಸಿಗುತ್ತವೆ ಎಂದು ತಿಳಿಸಿದರು.

ತಾಲ್ಲೂಕಿನ ಅಂಗನವಾಡಿಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಪಾಠ ಹೇಳಿ ಕೊಡಬೇಕಾದವರು ಮನೆಯಲ್ಲಿಯೇ ಇರುತ್ತಾರೆ. ಇಂತಹವರ ವಿರುದ್ಧ ಕ್ರಮಕೈಗೊಳ್ಳಿ ಎಂದು ಸೂಚಿಸಿದರು.

ಬಿಡದಿಯಲ್ಲಿರುವ ಮೀನು ಮರಿ ಸಾಕಾಣಿಕೆ ಕೇಂದ್ರವನ್ನು ವ್ಯವಸ್ಥಿತವಾಗಿ ನಡೆಸುತ್ತಿಲ್ಲ. ಇದರಿಂದ ಮೀನು ಸಾಕಾಣಿಕೆಗಾರರಿಗೆ ತೊಂದರೆಯಾಗುತ್ತಿದೆ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಕಾಶ್‌ ತಿಳಿಸಿದರು.

ಮಧ್ಯವರ್ತಿಗಳಿಂದ ಒತ್ತಡ
‘ಕಾನೂನು ಬಾಹಿರ ಖಾತೆಗಳನ್ನು ಮಾಡಿಕೊಡುವಂತೆ ಹಲವು ಮಧ್ಯವರ್ತಿಗಳು ನನ್ನ ಮೇಲೆ ಒತ್ತಡ ತರುತ್ತಿದ್ದಾರೆ. ಇದರಿಂದ ನನಗೆ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಬಾಬು ಸಭೆಯಲ್ಲಿ ಅಸಹಾಯಕತೆ ವ್ಯಕ್ತಪಡಿಸಿದರು.

‘ಎಲ್ಲರೂ ಇ ಖಾತೆ ಮಾಡಿಕೊಡಿ, ಹಕ್ಕುಪತ್ರ ನೀಡಿ ಎಂದು ಬರುತ್ತಾರೆಯೇ ವಿನಃ ಮೂಲ ಸೌಕರ್ಯಗಳ ಕೆಲಸ ಮಾಡಿಕೊಡಿ ಎಂದು ಯಾರೂ ಬರುತ್ತಿಲ್ಲ’ ಎಂದು ಹೇಳಿದರು.

‘ಮಧ್ಯವರ್ತಿಗಳಿಂದ ದೂರವಿದ್ದು, ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಮಧ್ಯವರ್ತಿಗಳು ಒತ್ತಡ ಹಾಕಿಸುತ್ತಿದ್ದಾರೆ ಎನ್ನುವುದು ಸರಿಯಾದ ಉತ್ತರವಲ್ಲ. ಇದು ತಾಲ್ಲೂಕು ಪಂಚಾಯಿತಿ ಕಚೇರಿಯ ಆಡಳಿತ ವೈಫಲ್ಯವನ್ನು ತೋರಿಸುತ್ತದೆ’ ಎಂದು ಸದಸ್ಯ ನಟರಾಜ್‌ ತಿಳಿಸಿದರು.

* ಇ ಖಾತೆ ಮಾಡಿಕೊಡಲು ಪಿಡಿಒಗಳು ಖಾತೆದಾರರ ಬಳಿ ಹಣ ಸುಲಿಗೆ ಮಾಡುತ್ತಿದ್ದಾರೆ. ಸರ್ಕಾರ ನಿಗದಿಪಡಿಸಿರುವ ಶುಲ್ಕದ ವಿವರಗಳನ್ನು ಸೂಚನಾ ಫಲಕದಲ್ಲಿ ಪ್ರಕಟಿಸಿ
-ಗಾಣಕಲ್‌ ನಟರಾಜು,ತಾ.ಪಂ. ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT