ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನಪಟ್ಟಣ | ತಗಚಗೆರೆ ಗ್ರಾ.ಪಂ. ಅಧ್ಯಕ್ಷೆ, ಪಿಡಿಒ ವಿರುದ್ಧ ಪ್ರತಿಭಟನೆ

Published 22 ಫೆಬ್ರುವರಿ 2024, 4:58 IST
Last Updated 22 ಫೆಬ್ರುವರಿ 2024, 4:58 IST
ಅಕ್ಷರ ಗಾತ್ರ

ಚನ್ನಪಟ್ಟಣ: ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳಲ್ಲಿ ಇರುವ ಹಲವು ಸಮಸ್ಯೆಗಳ ಬಗ್ಗೆ ಗ್ರಾ.ಪಂ. ಅಧ್ಯಕ್ಷೆ ಹಾಗೂ ಪಿಡಿಒ ಗಮನ ಹರಿಸುತ್ತಿಲ್ಲ ಎಂದು ಆರೋಪಿಸಿ ತಾಲ್ಲೂಕಿನ ತಗಚಗೆರೆ ಗ್ರಾ.ಪಂ. ವ್ಯಾಪ್ತಿಯ ಗ್ರಾ.ಪಂ. ಸದಸ್ಯರು, ರೈತರು ಸಾರ್ವಜನಿಕರು ಬುಧವಾರ ತಗಚಗೆರೆ ಗ್ರಾ.ಪಂ. ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳಲ್ಲಿ ಚರಂಡಿ ಸ್ವಚ್ಚತೆ, ನೀರಿನ ವ್ಯವಸ್ಥೆ, ಬೀದಿ ದೀಪಗಳ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡುತ್ತಿಲ್ಲ. ದನದ ಕೊಟ್ಟಿಗೆ ನಿರ್ಮಿಸಿಕೊಳ್ಳಲು ರೈತರಿಗೆ ನರೇಗಾ ಯೋಜನೆಯಲ್ಲಿ ಅವಕಾಶ ಕಲ್ಪಿಸುತ್ತಿಲ್ಲ, ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗುತ್ತಿದ್ದರೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಬೀದಿ ದೀಪಗಳ ನಿರ್ವಹಣೆಯನ್ನು ಸರಿಯಾಗಿ ಮಾಡುತ್ತಿಲ್ಲ. ಗ್ರಾ.ಪಂ. ಅಧ್ಯಕ್ಷರು ಹಾಗೂ ಪಿಡಿಒ ತಮಗಿಷ್ಟ ಬಂದಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.ಗ್ರಾಮಗಳಲ್ಲಿ ಚರಂಡಿಗಳು ಕೊಳಚೆಯಿಂದ ತುಂಬಿದ್ದರೂ ಅವುಗಳನ್ನು ಸ್ವಚ್ಛಗೊಳಿಸುತ್ತಿಲ್ಲ. ಅಮೃತ ಯೋಜನೆಯ ಅನುದಾನವನ್ನು ಸಾಕಷ್ಟು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಜಲಜೀವನ್ ಯೋಜನೆಯ ಕಾಮಗಾರಿಯನ್ನು ಬೇಕಾಬಿಟ್ಟಿಯಾಗಿ ನಿರ್ವಹಿಸಲಾಗಿದೆ. ಪೈಪ್ ಹಾಗೂ ನಲ್ಲಿಯನ್ನು ಅಳವಡಿಸಲು ರಸ್ತೆಗಳನ್ನು ಅಗೆಯಲಾಗಿದೆ. ಪಂಚಾಯಿತಿಯಲ್ಲಿ ಸಾಕಷ್ಟು ಅವ್ಯವಹಾರ ನಡೆಯುತ್ತಿದೆ. ಅಧ್ಯಕ್ಷ ಹಾಗೂ ಪಿಡಿಒ ಪಂಚಾಯಿತಿಯ ಸಮಗ್ರ ಅಭಿವೃದ್ಧಿಯನ್ನು ನಿರ್ಲಕ್ಷಿಸುತ್ತಿದ್ದಾರೆ. ಸಾರ್ವಜನಿಕರೊಂದಿಗೆ ಉದ್ದಟತನದಿಂದ ವರ್ತಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾ.ಪಂ. ಆವರಣದಲ್ಲಿರುವ ಹಳೇ ಕಟ್ಟಡವನ್ನು ಕೆಡವಿ ಅಲ್ಲಿ ಹೊಸ ಕಟ್ಟಡ ಕಟ್ಟಬೇಕು. ರೈತರಿಗೆ ದನದಕೊಟ್ಟಿಗೆ ನಿರ್ಮಾಣಕ್ಕೆ ಅವಕಾಶ ಕಲ್ಪಿಸಬೇಕು. ಬೀದಿ ದೀಪಗಳ ನಿರ್ವಹಣೆ ಮಾಡಬೇಕು. ಚಂರಂಡಿಗಳನ್ನು ಸ್ವಚ್ಛಗೊಳಿಸಿ, ಸ್ಥಗಿತಗೊಂಡಿರುವ ಅಮೃತ ಯೋಜನೆಯನ್ನು ಶೀಘ್ರವಾಗಿ ಕೈಗೆತ್ತಿಕೊಳ್ಳಬೇಕು. ಸರ್ಕಾರದ ಯೋಜನೆಗಳನ್ನು ಅರ್ಹರಿಗೆ ತಲುಪಿಸಬೇಕು. ಜಲಜೀವನ ಯೋಜನೆಯಿಂದ ಆಗಿರುವ ಸಮಸ್ಯೆಯನ್ನು ನಿವಾರಣೆ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಪ್ರತಿಭಟನೆ ವಿಷಯ ತಿಳಿದು ಗ್ರಾ.ಪಂ. ಅಧ್ಯಕ್ಷೆ ಗೀತಾ ಹಾಗೂ ಪಿಡಿಒ ಶ್ವೇತಾ ಸ್ಥಳಕ್ಕೆಬಂದು ಅಹವಾಲು ಆಲಿಸಲು ಮುಂದಾದಾಗ ಇದಕ್ಕೆ ಪ್ರತಿಭಟನಾಕಾರರು ಒಪ್ಪದೆ, ಹಿರಿಯ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸುವಂತೆ ಆಗ್ರಹಿಸಿದರು. ಆನಂತರ ಅಕ್ಷರ ದಾಸೋಹದ ಅಧಿಕಾರಿ ಸಿದ್ದರಾಜು ಸ್ಥಳಕ್ಕೆ ಬಂದು ತಾಪಂ ಇಒ ಶಿವಕುಮಾರ್ ಕನಕಪುರದಲ್ಲಿ ಇರುವ ಉಪಮುಖ್ಯಮಂತ್ರಿಗಳ ಜನತಾದರ್ಶನ ಕಾರ್ಯಕ್ರಮಕ್ಕೆ ಹೋಗಿರುವ ಕಾರಣ ಅವರ ಪರವಾಗಿ ನಾನು ಬಂದಿದ್ದೇನೆ. ಇಲ್ಲಿ ಕಂಡು ಬಂದಿರುವ ಸಮಸ್ಯೆಗಳ ಕುರಿತು ಇಒ ಗಮನಕ್ಕೆ ತರಲಾಗುವುದು. ಒಂದು ತಿಂಗಳ ಒಳಗೆ ಇಲ್ಲಿನ ಸಮಸ್ಯೆ ಪರಿಹರಿಸಲು ಆದ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ವಾಪಸ್ ಪಡೆದರು.
ಗ್ರಾ.ಪಂ. ಸದಸ್ಯರಾದ ಶಿವರಾಮು, ಭುವನೇಶ್ವರಿ, ಮಾಜಿ ಅಧ್ಯಕ್ಷ ಶಿವು, ಗ್ರಾಮದ ಮುಖಂಡರಾದ ಪ್ರಸನ್ನ, ಅಂದಾನಯ್ಯ, ವೆಂಕಟಸ್ವಾಮಿ, ಪವನ್ ಕುಮಾರ್, ನವೀನ್, ಯೋಗ, ಇತರರು ಭಾಗವಹಿಸಿದ್ದರು.

ಗ್ರಾ.ಪಂ. ಕಚೇರಿಗೆ ಹಸು ನುಗ್ಗಿಸಲು ಪ್ರಯತ್ನ

ಪ್ರತಿಭಟನೆ ನಡೆಯುತ್ತಿದ್ದ ಸಂದರ್ಭದಲ್ಲಿ ರೈತರೊಬ್ಬರು ತಮ್ಮ ಸೀಮೆಹಸುವನ್ನು ಗ್ರಾಮ ಪಂಚಾಯಿತಿ ಕಚೇರಿಗೆ ನುಗ್ಗಿಸಲು ಪ್ರಯತ್ನಿಸಿದ ಪ್ರಸಂಗ ನಡೆಯಿತು.

ದನದ ಕೊಟ್ಟಿಗೆ ನಿರ್ಮಾಣಕ್ಕೆ ಹತ್ತಾರು ಬಾರಿ ಅರ್ಜಿ ಸಲ್ಲಿಸಿದ್ದರೂ ಸಹ ಅವಕಾಶ ನೀಡುತ್ತಿಲ್ಲ. ಪಂಚಾಯಿತಿಯಿಂದ ಅನುದಾನ ದೊರೆಯುತ್ತಿಲ್ಲ. ಈ ಹಿನ್ನೆಲೆಯಲ್ಲಿ ಹಸುವನ್ನು ಗ್ರಾ.ಪಂ. ಕಚೇರಿಯಲ್ಲಿ ಕಟ್ಟಿಹಾಕುತ್ತೇನೆ. ಯಾರು ತಡೆಯುತ್ತಾರೆ ನೋಡುತ್ತೇನೆ ಎಂದು ಹಸುವನ್ನು ಪಂಚಾಯಿತಿ ಕಚೇರಿ ಒಳಗೆ ನುಗ್ಗಿಸಲು ಯತ್ನಿಸಿದರು.

ಈ ವೇಳೆ ಸ್ಥಳದಲ್ಲಿ ಹಾಜರಿದ್ದ ಪೊಲೀಸರು ರೈತನನ್ನು ತಡೆದು ಸಮಾಧಾನಪಡಿಸಿದರು.

ಗ್ರಾ.ಪಂ. ಕಚೇರಿ ಎದುರು ನಡೆದ ಪ್ರತಿಭಟನೆ ವೇಳೆ ರೈತರೊಬ್ಬರು ಗ್ರಾ.ಪಂ. ಕಚೇರಿಗೆ ಸೀಮೆಹಸು ನುಗ್ಗಿಲೆತ್ನಿಸಿದ ವೇಳೆ ಪೊಲೀಸರು ತಡೆದರು
ಗ್ರಾ.ಪಂ. ಕಚೇರಿ ಎದುರು ನಡೆದ ಪ್ರತಿಭಟನೆ ವೇಳೆ ರೈತರೊಬ್ಬರು ಗ್ರಾ.ಪಂ. ಕಚೇರಿಗೆ ಸೀಮೆಹಸು ನುಗ್ಗಿಲೆತ್ನಿಸಿದ ವೇಳೆ ಪೊಲೀಸರು ತಡೆದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT