ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತ ಸಂಘದಿಂದ ಪಂಜಿನ ಮೆರವಣಿಗೆ

ರೈತರ ಹೋರಾಟ ಬೆಂಬಲಿಸಿ ಮೆರವಣಿಗೆ: ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ
Published 27 ಫೆಬ್ರುವರಿ 2024, 5:26 IST
Last Updated 27 ಫೆಬ್ರುವರಿ 2024, 5:26 IST
ಅಕ್ಷರ ಗಾತ್ರ

ರಾಮನಗರ: ದೆಹಲಿ ಚಲೋ ಹಮ್ಮಿಕೊಂಡಿರುವ ರೈತರಿಗೆ ರಾಜಧಾನಿ ಪ್ರವೇಶಿಸಲು ಅವಕಾಶ ನೀಡದೆ, ದೆಹಲಿಯ ಗಡಿ ಭಾಗದಲ್ಲಿ ಇರುವಂತೆ ಮಾಡಿರುವ ಕೇಂದ್ರ ಸರ್ಕಾರ ಹಾಗೂ ಪ್ರತಿಭಟನಾ ನಿರತರ ಮೇಲೆ ಆಶ್ರುವಾಯು ಸಿಡಿಸಿ ರೈತರೊಬ್ಬರ ಸಾವಿಗೆ ಕಾರಣರಾದ ಪೊಲೀಸರ ವಿರುದ್ಧ, ರೈತ ಸಂಘದಿಂದ ನಗರದಲ್ಲಿ ಸೋಮವಾರ ಪಂಜಿನ ಮೆರವಣಿಗೆ ನಡೆಯಿತು.

ನಗರದ ಐಜೂರು ವೃತ್ತದಿಂದ ಮೆರವಣಿಗೆ ಆರಂಭಿಸಿದ ಸಂಘದ ಮುಖಂಡರು, ಕೆಂಗಲ್ ಹನುಮಂತಯ್ಯ ವೃತ್ತ, ಮುಖ್ಯ ರಸ್ತೆ ಮಾರ್ಗವಾಗಿ ರೈಲು ನಿಲ್ದಾಣದವರೆಗೆ ಪಂಜಿನೊಂದಿಗೆ ಮೆರವಣಿಗೆ ನಡೆಸಿದರು. ಮಾರ್ಗದುದ್ದಕ್ಕೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ಮುಖಂಡರು, ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದರು.

ಈ ವೇಳೆ ಮಾತನಾಡಿದ ಸಂಘದ ವಿಭಾಗೀಯ ಅಧ್ಯಕ್ಷ ಕೆ. ಮಲ್ಲಯ್ಯ, ‘ದೇಶಕ್ಕೆ ಅನ್ನು ಹಾಕುವ ರೈತರು ದೆಹಲಿಯಲ್ಲಿ ಭಿಕ್ಷೆ ಬೇಡುತ್ತಿಲ್ಲ. ಬದಲಿಗೆ, ಸರ್ಕಾರವೇ ನಿಗದಿ ಮಾಡುವ ಬೆಂಬಲ ಬೆಲೆಯನ್ನು ಖಾತರಿಪಡಿಸುವ ಕಾನೂನು ಜಾರಿಗೆ ಆಗ್ರಹಿಸುತ್ತಿದ್ದಾರೆ. ಅಧಿಕಾರಕ್ಕೆ ಬರುವುದಕ್ಕೆ ಮುಂಚೆ ಬೆಂಬಲ ಬೆಲೆ ಭರವಸೆ ನೀಡಿದ್ದ ಬಿಜೆಪಿ, ಅಧಿಕಾರಕ್ಕೇರಿದ ಬಳಿಕ ಮಾತು ಮರೆತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ನ್ಯಾಯಯುತ ಬೇಡಿಕೆಗಾಗಿ ಹೋರಾಟ ಮಾಡುವ ರೈತರನ್ನು ರಸ್ತೆಯಲ್ಲೇ ಅಡ್ಡ ಹಾಕಿರುವ ಸರ್ಕಾರ, ಅವರ ಮೇಲೆ ಅಶ್ರುವಾಯು ಸಿಡಿಸಿ ರೈತರೊಬ್ಬರನ್ನು ಕೊಲೆ ಮಾಡಿದೆ. ದೇಶದ ಸಮಸ್ತ ರೈತರ ಪರವಾಗಿ ಹೋರಾಡುತ್ತಿರುವವರನ್ನು ಭಯೋತ್ಪಾದಕರು, ದೇಶದ್ರೋಹಿಗಳು, ಖಲಿಸ್ತಾನಿಗಳು ಎಂದು ಹೇಳಿ ಅವರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ. ಸರ್ಕಾರ ಮೊಂಡುತನ ಬಿಟ್ಟು ರೈತರ ಬೇಡಿಕೆ ಈಡೇರಿಸಬೇಕು’ ಎಂದು ಆಗ್ರಹಿಸಿದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಚೀಲೂರು ಮುನಿರಾಜು, ‘ಸರ್ಕಾರ ಸ್ವಾಮಿನಾಥನ್ ವರದಿ ಜಾರಿಗೊಳಿಸಿ, ವೈಜ್ಞಾನಿಕವಾಗಿ ಬೆಂಬಲ ಬೆಲೆ ನಿಗದಿಪಡಿಸುವ ಕಾನೂನು ಜಾರಿಗೆ ತರಬೇಕು. ಕಳೆದ ವರ್ಷ ದೆಹಲಿ ರೈತ ಹೋರಾಟದಲ್ಲಿ ಪ್ರಾಣ ತ್ಯಾಗ ಮಾಡಿದ ರೈತರ ಕುಟುಂಬಕ್ಕೆ ನೆರವು ನೀಡಬೇಕು. ಕುಟುಂಬದ ಒಬ್ಬರಿಗೆ ನೌಕರಿ ನೀಡಬೇಕು ಎಂಬ ಬೇಡಿಕೆಯನ್ನು ಸರ್ಕಾರದ ಮುಂಡಿಡಲಾಗಿದೆ. ಆದರೆ, ಕೇಂದ್ರ ಸರ್ಕಾರ ರೈತರ ಹೋರಾಟದ ದಿಕ್ಕು ತಪ್ಪಿಸಲು ವಾಮಮಾರ್ಗ ಬಳಸುತ್ತಿದೆ’ ಎಂದು ದೂರಿದರು.

ಜಯ ಕರ್ನಾಟಕ ಸಂಘಟನೆಯ ಕುಮಾರಸ್ವಾಮಿ, ‘ಸರ್ಕಾರ ಮಾತುಕತೆ ನೆಪದಲ್ಲಿ ವಿಳಂಬ ಧೋರಣೆ ಅನುಸರಿಸುವುದನ್ನು ಬಿಟ್ಟು ಸಮಸ್ಯೆ ಬಗೆಹರಿಸಲಿ. ಪಂಜಾಬ್, ಹರಿಯಾಣ, ಉತ್ತರಪ್ರದೇಶ, ರಾಜಸ್ಥಾನದ ಲಕ್ಷಾಂತರ ರೈತರು ಶಾಂತಿಯುತವಾಗಿ ದೆಹಲಿ ಚಲೋ ನಡೆಸುತ್ತಿದ್ದಾರೆ. ಸಮಸ್ಯೆ ಬಗೆಹರಿಯುವವರೆಗೂ ಚಳವಳಿಯಿಂದ ಹಿಂದೆ ಸರಿಯುವುದಿಲ್ಲ. ಸರ್ಕಾರ ಹೀಗೆಯೇ ವಿಳಂಬ ಮಾಡಿದರೆ, ಚುನಾವಣೆಯಲ್ಲಿ ರೈತರು ತಕ್ಕ ಪಾಠ ಕಲಿಸುತ್ತಾರೆ’ ಎಂದು ಎಚ್ಚರಿಕೆ ನೀಡಿದರು.

ಮೆರವಣಿಗೆಯಲ್ಲಿ ರೈತ ಸಂಘದ ಮುಖಂಡರಾದ ಎಂ. ಪುಟ್ಟಸ್ವಾಮಿ, ರಾಜು, ನಾಗರಾಜು, ರಾಮೇಗೌಡ, ರಾಮು, ತೇಜಸ್ವಿ ಹಾಗೂ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT