ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ: ಎಫ್‌ಪಿಒಗಳ ಬಾಕಿ ಹಣ ಬಿಡುಗಡೆಗೆ ಆಗ್ರಹ

ಸರ್ಕಾರಕ್ಕೆ ಬಿಜೆಪಿ ಆಗ್ರಹ: ಉಪ ವಿಭಾಗಾಧಿಕಾರಿಗೆ ಮನವಿ
Published 25 ಮೇ 2024, 5:28 IST
Last Updated 25 ಮೇ 2024, 5:28 IST
ಅಕ್ಷರ ಗಾತ್ರ

ರಾಮನಗರ: ರೈತ ಉತ್ಪಾದಕರ ಸಂಸ್ಥೆಗಳ (ಎಫ್‌ಪಿಒ) ಬಾಕಿ ಹಣವನ್ನು ಸರ್ಕಾರ ತಕ್ಷಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಬಿಜೆಪಿ ರೈತ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಪಿ. ಪ್ರಕಾಶ್ ನೇತೃತ್ವದ ನಿಯೋಗವು, ಉಪ ವಿಭಾಗಾಧಿಕಾರಿ ಬಿನೋಯ್ ಅವರಿಗೆ ಗುರುವಾರ ಮನವಿ ಸಲ್ಲಿಸಿತು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಕಾಶ್, ‘ಪ್ರಧಾನಿ ಮೋದಿ ಅವರ ಮಾರ್ಗದರ್ಶನದಲ್ಲಿ 2015ರಲ್ಲಿ ರೈತರಿಂದ ರೈತರಿಗಾಗಿ ಎಫ್‌ಪಿಒಗಳು 2015ರಲ್ಲಿ ಆರಂಭಗೊಂಡಿವೆ. ಕಂಪನಿ ಕಾಯ್ದೆಯಡಿ ಕಾರ್ಪೊರೇಟ್ ಸಚಿವಾಲಯದಲ್ಲಿ ನೋಂದಣಿಯಾಗಿರುವ ಎಫ್‌ಪಿಒಗಳು ರೈತರನ್ನು ಒಗ್ಗೂಡಿಸಿ, ಕೃಷಿ ಕ್ಷೇತ್ರದಲ್ಲಿ ಉತ್ಪಾದನೆ ಹೆಚ್ಚಿಸುವ ಗುರಿ ಹೊಂದಿವೆ. ಸರ್ಕಾರ ಇವುಗಳ ಬಲವರ್ಧನೆಗೆ ಕ್ರಮ ಕೈಗೊಳ್ಳಬೇಕೇ ಹೊರತು, ಹಣ ಬಿಡುಗಡೆ ಮಾಡದೆ ಬಲಹೀನಗೊಳಿಸಬಾರದು’ ಎಂದರು.

‘ಸರ್ಕಾರ ಬಾಕಿ ಉಳಿಸಿಕೊಂಡಿರುವ ಅನುದಾನವನ್ನು ರೈತ ಉತ್ಪಾದಕರ ಸಂಸ್ಥೆಗಳಿಗೆ ಶೀಘ್ರವಾಗಿ ಬಿಡುಗಡೆ ಮಾಡಬೇಕು. ಸಂಸ್ಥೆಗಳ ಚಟುವಟಿಕೆಗಳು ನಿರಂತರವಾಗಿ ನಡೆಯುವಂತೆ ನೋಡಿಕೊಳ್ಳಬೇಕು. ತಪ್ಪಿದಲ್ಲಿ ಸರ್ಕಾರದ ರೈತ ವಿರೋಧಿ ನೀತಿಯ ವಿರುದ್ಧ ರಾಜ್ಯದಾದ್ಯಂತ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘ಕೃಷಿಗೆ ಸಂಬಂಧಿಸಿದ ಚಟುವಟಿಕೆಗಳಾದ ಸಂಸ್ಕರಣೆ, ಮೌಲ್ಯವರ್ಧನೆ, ಸಂಗ್ರಹಣೆ, ಮಾರಾಟ, ಹಣಕಾಸಿನ ಸೇವೆ, ಪರಿಕರಗಳ ಪೂರೈಕೆ, ಬಿತ್ತನೆ ಬೀಜ ಉತ್ಪಾದನೆ ಮುಂತಾದ ಚಟುವಟಿಕೆಗಳನ್ನು ಎಫ್‌ಪಿಒಗಳು ಮಾಡುತ್ತಿವೆ. ಮಧ್ಯವರ್ತಿ ಹಾವಳಿ ತಪ್ಪಿಸಿ, ಅವರ ಆದಾಯವನ್ನು ದ್ವಿಗುಣಗೊಳಿಸುವಲ್ಲಿ ಈ ಸಂಸ್ಥೆಗಳು ಮಹತ್ವದ ಪಾತ್ರ ವಹಿಸುತ್ತಾ ಬಂದಿವೆ’ ಎಂದು ಹೇಳಿದರು.

‘ರೈತರಿಗೆ ಕೃಷಿಗೆ ಸಂಬಂಧಿಸಿದ ತಾಂತ್ರಿಕ ಮಾಹಿತಿ ಮತ್ತು ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಮಾರ್ಗದರ್ಶನ, ಅವಶ್ಯವಿರುವ ಪರಿಕರಗಳನ್ನು ಸರಿಯಾದ ವೇಳೆಗೆ ಸ್ಪರ್ಧಾತ್ಮಕ ಬೆಲೆಯಲ್ಲಿ ಸರಬರಾಜು ಮಾಡುವುದು ಈ ಸಂಸ್ಥೆಗಳ ಗುರಿಯಾಗಿದೆ. ವಿವಿಧ ಇಲಾಖೆಗಳಲ್ಲಿ ಲಭ್ಯವಿರುವ ಸೌಲಭ್ಯಗಳನ್ನು ಸಂಸ್ಥೆಗಳ ಮುಖಾಂತರ ಪಡೆಯಲು ಹೆಚ್ಚಿನ ಅವಕಾಶ ಕಲ್ಪಿಸಲಾಗಿದೆ’ ಎಂದು ತಿಳಿಸಿದರು.

ನಿಯೋಗದಲ್ಲಿ ರೈತ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗಾನಂದ, ಖಜಾಂಚಿ ಕಾಂತರಾಜು, ನಗರ ಘಟಕದ ಅಧ್ಯಕ್ಷ ದರ್ಶನ್, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಮುರಳೀಧರ್, ಎಸ್.ಆರ್.ನಾಗರಾಜು, ಚಂದ್ರೇಗೌಡ, ನಾಗರಾಜು, ಶಿವಕುಮಾರ್, ಅನಿಲ್, ಬಿಜೆಪಿ ಮಂಜು, ಪ್ರದೀಪ್ ಕನಕಪುರ, ಎಸ್.ಜಯಣ್ಣ ಮತ್ತಿತರು ಇದ್ದರು.

‘10 ಲಕ್ಷರ ರೈತರಿಗೆ ತೊಂದರೆ’

‘ರಾಜ್ಯದಲ್ಲಿ 2021-22ರಿಂದ 2024-25ರವರೆಗೆ 490 ರೈತ ಉತ್ಪಾದಕರ ಸಂಸ್ಥೆಗಳು ರಚನೆಯಾಗಿವೆ. ಇವುಗಳಿಗೆ ಅಂದಾಜು ₹150 ಕೋಟಿ ಅನುದಾನ ನಿಗದಿಯಾಗಿದ್ದು ಇದುವರೆಗೆ ಶೇ 12ರಷ್ಟು ಮಾತ್ರ ಬಿಡುಗಡೆಯಾಗಿದ್ದು ಶೇ 82ರಷ್ಟು ಬಾಕಿ ಇದೆ. ಸಂಸ್ಥೆಗಳಿಗೆ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಣ ಬಿಡುಗಡೆಯಾಗಿತ್ತು. ವರ್ಷದ ಹಿಂದೆ ಅಸ್ತಿತ್ವಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಸಂಸ್ಥೆಗಳಿಗೆ ಹಣ ಬಿಡುಗಡೆ ಮಾಡದಿರುವುದು ಅವುಗಳ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ. ಇದರಿಂದಾಗಿ 10 ಲಕ್ಷ ರೈತರಿಗೆ ಮತ್ತು 12 ಸಾವಿರ ರೈತ ಉತ್ಪಾದಕ ಸಂಸ್ಥೆಗಳ ನಿರ್ದೇಶಕರಿಗೆ ತೊಂದರೆಗಳಾಗುತ್ತಿದೆ’ ಎಂದು ಬಿ.ಪಿ. ಪ್ರಕಾಶ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT