ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚುವರಿ ಆಟಗಾರ್ತಿಯ ರಾಷ್ಟ್ರಮಟ್ಟದ ಸಾಧನೆ!

Published 8 ಮೇ 2024, 4:46 IST
Last Updated 8 ಮೇ 2024, 4:46 IST
ಅಕ್ಷರ ಗಾತ್ರ

ರಾಮನಗರ: ಶಾಲೆಯ ವಿದ್ಯಾರ್ಥಿಗಳಿಗೆ ವಾಲಿಬಾಲ್ ತರಬೇತಿ ನೀಡುತ್ತಿದ್ದ ದೈಹಿಕ ಶಿಕ್ಷಣ ಶಿಕ್ಷಕ, ಯಾವುದಕ್ಕೂ ಇರಲಿ ಎಂದು ಶಾಲೆ ಸಮೀಪವೇ ಇದ್ದ ಆ ವಿದ್ಯಾರ್ಥಿನಿಯನ್ನು ಹೆಚ್ಚುವರಿ ಆಟಗಾರ್ತಿಯಾಗಿ ಸೇರಿಸಿಕೊಳ್ಳುತ್ತಿದ್ದರು. ಅಂಕಣದಾಚೆ ಹೋಗುತ್ತಿದ್ದ ಬಾಲ್ ತಂದುಕೊಡುವ ಜೊತೆಗೆ, ಅಪರೂಪಕ್ಕೆ ಅಂಕಣದೊಳಗೂ ಆಡುವ ಅವಕಾಶ ಪಡೆದ ಆ ವಿದ್ಯಾರ್ಥಿನಿ ಇಂದು ರಾಷ್ಟ್ರಮಟ್ಟದ ವಾಲಿಬಾಲ್ ಆಟಗಾರ್ತಿ.

ಕನಕಪುರ ತಾಲ್ಲೂಕಿನ ಸಾತನೂರು ಹೋಬಳಿಯ ಅಚ್ಚಲು ಗ್ರಾಮದ ವಾಲಿಬಾಲ್ ಪ್ರತಿಭೆ ಸೀಮಾ ಎ.ಎನ್. ಅವರ ಕ್ರೀಡಾ ಯಶೋಗಾಥೆ ಇದು. ನಾಗರಾಜು ಎ.ಎಂ. ಮತ್ತು ಜಯಶ್ರೀ ದಂಪತಿ ಪುತ್ರಿಯಾದ ಸೀಮಾ ಅಪರೂಪಕ್ಕೆ ಸಿಕ್ಕ ಅವಕಾಶವನ್ನೇ ಏಣಿಯಾಗಿ ಮಾಡಿಕೊಂಡು, ಶಾಲಾ–ಕಾಲೇಜುಗಳಲ್ಲಿ ಸತತ ಸಾಧನೆ ಮಾಡುತ್ತಾ ರಾಷ್ಟ್ರಮಟ್ಟದ ಪ್ರತಿಭೆಯಾಗಿ ಇಂದು ಬೆಳೆದಿದ್ದಾರೆ.

ಅಷ್ಟೇನೂ ಎತ್ತರವಿಲ್ಲದಿದ್ದರೂ ಶಾಲಾ–ಕಾಲೇಜು ಮಟ್ಟದಲ್ಲಿ ಅತ್ಯುತ್ತಮ ಆಟಗಾರ್ತಿಯಾಗಿ ರೂಪುಗೊಂಡ ಸೀಮಾ ಅವರು, 15 ವರ್ಷಗಳಿಂದ ವಾಲಿಬಾಲ್ ಸಖ್ಯದಲ್ಲಿದ್ದಾರೆ. ಇದೀಗ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ರಾಜ್ಯ ಮತ್ತು ವಿಶ್ವವಿದ್ಯಾಲಯ ಪ್ರತಿನಿಧಿಸುತ್ತಿರುವ ಅಪ್ಪಟ ದೇಸಿ ಪ್ರತಿಭೆ.

12ನೇ ವಯಸ್ಸಿನಿಂದ ಆಟ: ‘ಸುಮಾರು 12ನೇ ವಯಸ್ಸಿಗೆ ವಾಲಿಬಾಲ್‌ನತ್ತ ಆಸಕ್ತಿ ಹೊರಳಿತು. ಅದಕ್ಕೆ ನಮ್ಮೂರ ಸರ್ಕಾರಿ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ನಾಗರಾಜು ಸರ್ ಪ್ರೋತ್ಸಾಹ ಕಾರಣ. ವಾಲಿಬಾಲ್‌ಗೆ ನನ್ನ ಎತ್ತರ ಸಾಲದು ಎಂದೇ ಎಲ್ಲರೂ ಹೇಳುತ್ತಿದ್ದರು. ಆದರೂ, ನನ್ನಲ್ಲಿದ್ದ ಅಟ್ಯಾಕಿಂಗ್ ಮನೋಭಾವ ಅರಿತ ನಾಗರಾಜು ಸರ್, ನನ್ನ ಪ್ರತಿಭೆಗೆ ನೀರೆರೆದು ಬೆಳೆಸಿದರು’ ಎಂದು ಸೀಮಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಶಾಲಾ ಹಂತದಲ್ಲಿ ಪಠ್ಯ ಚಟುವಟಿಕೆಗಳಲ್ಲಿ ಹಿಂದುಳಿಯದಂತೆ ಕನ್ನಡ ಶಿಕ್ಷಕ ಅಮರೇಗೌಡ ಪಾಟೀಲ ಸರ್ ಮಾರ್ಗದರ್ಶನ ಮಾಡಿದರು. ತಂದೆ–ತಾಯಿ ಹಾಗೂ ಸಹೋದರರು ನನ್ನ ಬೆಂಬಲಕ್ಕೆ ಅಂದಿನಿಂದಲೂ ನಿಂತಿದ್ದರಿಂದ, ನನ್ನ ವಾಲಿಬಾಲ್ ಕ್ರೀಡೆಯ ಪಯಣ ಹೋಬಳಿ ಮಟ್ಟ ದಿಂದ ರಾಷ್ಟ್ರಮಟ್ಟದವರೆಗೆ ವಿಸ್ತರಿಸಲು ಸಾಧ್ಯವಾಯಿತು’ ಎಂದು ಹೇಳಿದರು.

ಪ್ರೌಢಶಾಲೆಯಲ್ಲೇ ರಾಷ್ಟ್ರಮಟ್ಟಕ್ಕೆ: ಶಾಲಾ–ಕಾಲೇಜು ಹಂತದ ಕ್ರೀಡಾಕೂಟಗಳಲ್ಲಿ ಹೋಬಳಿ, ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ತಮ್ಮ ತಂಡವನ್ನು ಸೀಮಾ ಸತತವಾಗಿ ಪ್ರತಿನಿಧಿಸಿದ್ದಾರೆ. 9ನೇ ತರಗತಿಯಲ್ಲಿದ್ದಾಗ ಆಂಧ್ರಪ್ರದೇಶದಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರ ಆಯೋಜಿಸಿದ್ದ ರಾಷ್ಟಮಟ್ಟದ 3ನೇ ರಾಷ್ಟ್ರೀಯ ಗ್ರಾಮೀಣ ಮಟ್ಟದ ವಾಲಿಬಾಲ್ ಟೂರ್ನಿಯಲ್ಲಿ ಭಾಗವಹಿಸಿದ ಹೆಗ್ಗಳಿಕೆ ಅವರದ್ದು.

ಜಿಲ್ಲಾ ಮಟ್ಟದ ಕಾಲೇಜು ಮತ್ತು ದಸರಾ ಕ್ರೀಡಾಟದಲ್ಲಿ ಸತತ ಗೆಲುವು ಸಾಧಿಸಿರುವ ಸೀಮಾ ತಂಡದಲ್ಲಿ ಅವರ ಕೊಡುಗೆ ಹೆಚ್ಚು. ಇದೇ ಕಾರಣಕ್ಕೆ ಅವರು ರಾಜ್ಯಮಟ್ಟದ ಹಲವು ಕ್ರೀಡಾಕೂಟಗಳನ್ನು ಪ್ರತಿನಿಧಿಸಿ ರಾಷ್ಟ್ರಮಟ್ಟಕ್ಕೆ ಜಿಗಿದರು.

‘ಷಟಲ್ ಬ್ಯಾಡ್ಮಿಂಟನ್‌ನಲ್ಲಿ ದಕ್ಷಿಣ ವಲಯ ಮಟ್ಟದಲ್ಲಿ ವಿ.ವಿ ಪ್ರತಿನಿಧಿಸಿ ಪದಕ ಪಡೆದಿದ್ದೇನೆ’ ಎಂದು ಸೀಮಾ ತಮ್ಮ ತಾವು ಸಾಗಿ ಬಂದ ಹಾದಿಯನ್ನು ಮೆಲುಕು ಹಾಕಿದರು.

ಓದಿನಲ್ಲೂ ಮುಂದಿರುವ ಸೀಮಾ ಅವರು ಎಸ್‌ಎಸ್‌ಎಲ್‌ಸಿಯಲ್ಲಿ ಸಾತನೂರು ಹೋಬಳಿಗೆ ಪ್ರಥಮ. ದ್ವಿತೀಯ ಪಿಯುಸಿಯಲ್ಲಿ ತಮ್ಮ ಕಾಲೇಜಿಗೆ ಪ್ರಥಮ. ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಎಂ.ಎಸ್ಸಿ ಮುಗಿಸಿರುವ ಅವರು, ಚಿನ್ನದ ಪದಕದೊಂದಿಗೆ ಪಿಎಚ್.ಡಿ ಮುಗಿಸಿದ್ದಾರೆ.

ಸೀಮಾ ಪ್ರತಿನಿಧಿಸಿದ ಕ್ರೀಡಾಕೂಟಗಳು

l2011: ಆಂಧ್ರಪ್ರದೇಶದಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರ ಆಯೋಜಿಸಿದ್ದ ರಾಷ್ಟಮಟ್ಟದ 3ನೇ ರಾಷ್ಟ್ರೀಯ ಗ್ರಾಮೀಣ ಮಟ್ಟದ ವಾಲಿಬಾಲ್ ಟೂರ್ನಿ

l2013: ಗೋವಾದಲ್ಲಿ ಜರುಗಿದ 32ನೇ ರಾಷ್ಟ್ರಮಟ್ಟದ ಶೂಟಿಂಗ್ ಬಾಲ್ ಚಾಂಪಿಯನ್‌ಶಿಫ್‌ನಲ್ಲಿ ತಂಡದ ನಾಯಕತ್ವ ವಹಿಸಿ 4ನೇ ಸ್ಥಾನ.

l2014: ಮಹಾರಾಷ್ಟ್ರದಲ್ಲಿ ನಡೆದ 33ನೇ ರಾಷ್ಟ್ರಮಟ್ಟದ ಶೂಟಿಂಗ್ ಬಾಲ್ ಚಾಂಪಿಯನ್‌ಶಿಫ್‌ನಲ್ಲಿ ತಂಡದ ನಾಯಕತ್ವ.

l2020: ಆಂಧ್ರಪ್ರದೇಶದ ಪಶುವೈದ್ಯ ವಿ.ವಿ.ಯಲ್ಲಿ ನಡೆದ 20ನೇ ಅಖಿಲ ಭಾರತ ಅಂತರ ಕೃಷಿ ವಿಶ್ವವಿದ್ಯಾಲಯ ಕ್ರೀಡಾಕೂಟದಲ್ಲಿ ಮೊದಲ ಸ್ಥಾನದೊಂದಿಗೆ ಚಿನ್ನದ ಪದಕ.

l2023: ಕೇರಳದಲ್ಲಿ ಜರುಗಿದ ದಕ್ಷಿಣ ವಲಯದ ಅಂತರ ವಿಶ್ವವಿದ್ಯಾಲಯ ಮತ್ತು ಅಖಿಲ ಭಾರತ ವಿಶ್ವವಿದ್ಯಾಲಯಗಳ (ಮಹಿಳಾ) ಮಟ್ಟದ ವಾಲಿಬಾಲ್ ಚಾಂಪಿಯನ್‌ಷಿಫ್‌. ಹರಿಯಾಣದ ಕೃಷಿ ವಿ.ವಿ.ಯಲ್ಲಿ ಜರುಗಿದ 21ನೇ ಅಖಿಲ ಭಾರತ ಅಂತರ ಕೃಷಿ ವಿ.ವಿ ಕ್ರೀಡಾಕೂಟದಲ್ಲಿ ವಾಲಿಬಾಲ್ ಮತ್ತು ಷಟಲ್ ಬ್ಯಾಡ್ಮಿಂಟನ್‌ ವಿಭಾಗದಲ್ಲಿ ಭಾಗಿ.

l2016–2023ರವರೆಗೆ ದೇಶದ ವಿವಿಧೆಡೆ ನಡೆದ ಅಖಿಲ ಭಾರತ ಅಂತರ ಕೃಷಿ ವಿಶ್ವವಿದ್ಯಾಲಯ ಕ್ರೀಡಾಕೂಟದಲ್ಲಿ ಸತತ ಪ್ರತಿನಿಧಿಸಿದ ಅನುಭವ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT